• February 9, 2026
  • Last Update February 2, 2026 6:06 pm
  • Brahmavara

ಎಚ್ .ಎಸ್. ಶೆಟ್ಟರ ಉದಾರ ಕೊಡುಗೆ; ಕೊರಗ ಕುಟುಂಬಗಳಿಗೆ ಮತ್ತೆ 14 ಮನೆಗಳ ನಿರ್ಮಾಣ; ಡಿ.24ರಂದು ಲೋಕಾರ್ಪಣೆ

ಎಚ್ .ಎಸ್. ಶೆಟ್ಟರ ಉದಾರ ಕೊಡುಗೆ; ಕೊರಗ ಕುಟುಂಬಗಳಿಗೆ ಮತ್ತೆ 14 ಮನೆಗಳ ನಿರ್ಮಾಣ; ಡಿ.24ರಂದು ಲೋಕಾರ್ಪಣೆ

ವರದಿ : ಚಿತ್ತೂರು ಪ್ರಭಾಕರ ಆಚಾರ್ಯ
ಉಡುಪಿಮಿತ್ರ ಪತ್ರಿಕೆ ಸುದ್ದಿ :
ಉಡುಪಿ, ಡಿ.23 : ಹೆಗ್ಗುಂಜೆ ರಾಜೀವ ಶೆಟ್ಟಿ ಚಾರಿಟೇಬಲ್ ಟ್ರಸ್ಟ್(ರಿ) ಪ್ರವರ್ತಕ, ಉದ್ಯಮಿ, ಸಮಾಜಸೇವಕ ಡಾ.ಎಚ್.ಎಸ್.ಶೆಟ್ಟಿ ಅವರು ತಮ್ಮ ಹೆಗ್ಗುಂಜೆ ರಾಜೀವ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಕುಂದಾಪುರ ತಾಲೂಕಿನ ಉಳ್ಳೂರು 74 ಗ್ರಾಮದ ಕೊರಗರ ಕಾಲೋನಿಯಲ್ಲಿ 2.5ಕೋಟಿ ರೂಪಾಯಿ ವೆಚ್ಚದಲ್ಲಿ ೧೪ಸುಂದರ ಮನೆಗಳನ್ನು ನಿರ್ಮಿಸಿಕೊಟ್ಟಿದ್ದು ಈ ಮನೆಗಳ ಗೃಹಪೂಜೆ ಮತ್ತು ಲೋಕಾರ್ಪಣೆ ಕಾರ್ಯಕ್ರಮವು 25 ಡಿಸೆಂಬರ್ 2025ರ ಬೆಳಿಗ್ಗೆ 10.30ಕ್ಕೆ ನಡೆಯಲಿದೆ.


ಉಡುಪಿ ಪೇಜಾವರ ಮಠಾಧೀಶ ಶ್ರೀಶ್ರೀಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಯವರು ಗೃಹಪೂಜೆ ಮತ್ತು ಆಶೀರ್ವಚನ ನೆರವೇರಿಸಲಿರುವರು. ಈ ಮನೆಗಳ ಲೋಕಾರ್ಪಣೆ ಮತ್ತು ಆಶಯ ಭಾಷಣವನ್ನು ಚಿತ್ರದುರ್ಗದ ಮಾದಾರ ಚೆನ್ನಯ್ಯ ಗುರುಪೀಠದ ಶ್ರೀಶ್ರೀಶ್ರೀ ಡಾ.ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿಯವರು ನೀಡಲಿದ್ದಾರೆ. ಬಿಜೆಪಿಯ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್‌ಜಿ ಸಮಾರಂಭದ ಉದ್ಘಾಟನೆಯನ್ನು ನೆರವೇರಿಸಿ ಮನೆಗಳ ಹಸ್ತಾಂತರಮಾಡಲಿದ್ದಾರೆ. ಸಮಾರಂಭದ ಅಧ್ಯಕ್ಷತೆಯನ್ನು ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ ಅವರು ವಹಿಸಲಿದ್ದಾರೆ. ಅತಿಥೇಯ ಭಾಷಣವನ್ನು ಬೈಂದೂರು ಶಾಸಕರಾದ ಶ್ರೀ ಗುರುರಾಜ ಶೆಟ್ಟಿ ಮಾಡಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಉಡುಪಿ-ಚಿಕ್ಕಮಗಳೂರು ಸಂಸದರಾದ ಕೋಟ ಶ್ರೀನಿವಾಸ ಪೂಜಾರಿ, ಮಂಗಳೂರು ನಗರ ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಡಾ.ವೈ.ಭರತ್ ಶೆಟ್ಟಿ, ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಕಿರಣ್ ಕುಮಾರ್ ಕೊಡ್ಗಿ ಭಾಗವಹಿಸಲಿದ್ದಾರೆ. ಪ್ರಾಸ್ತಾವಿಕ ಭಾಷಣವನ್ನು ಕಾರವಾರದ ಪಹರೆ ವೇದಿಕೆಯ ಅಧ್ಯಕ್ಷರಾದ ನ್ಯಾಯವಾದಿ ನಾಗರಾಜ ನಾಯಕ್ ಮಾಡಲಿದ್ದಾರೆ. ಉಡುಪಿ ಯಕ್ಷಗಾನ ಕಲಾರಂಗದ ಕಾರ್ಯದರ್ಶಿ ಮುರಳಿ ಕಡೆಕಾರ್, ಕರ್ನಾಟಕ ಮತ್ತು ಕೇರಳದ ಕೊರಗ ಸಂಘಗಳ ಒಕ್ಕೂಟ(ರಿ)ದ ಅಧ್ಯಕ್ಷರಾದ ಶ್ರೀಮತಿ ಸುಶೀಲ ನಾಡ, ಉಳ್ಳೂರು ಗ್ರಾ.ಪಂ.ಅಧ್ಯಕ್ಷರಾದ ಶ್ರೀಮತಿ ಕುಸುಮಾ ಶೆಟ್ಟಿ, ಉಳ್ಳೂರು ಶ್ರೀ ಬನಶಂಕರಿ ದೇವಾಲಯದ ಮೊಕ್ತೇಸರರಾದ ಶ್ರೀ ಸಂಜೀವ ಶೆಟ್ಟಿ, ಸಂಪಿಗೇಡಿ ಅವರು ಉಪಸ್ಥಿತರಿರಲಿದ್ದಾರೆ.
100 ಮನೆಗಳ ನಿರ್ಮಾಣದ ಗುರಿ :
ಉಡುಪಿಯ ಪ್ರೆಸ್ ಕ್ಲಬ್‌ನಲ್ಲಿ ಪತ್ರಿಕಾಗೋಷ್ಟಿ ನಡೆಸಿದ ಉದ್ಯಮಿ ಎಚ್.ಎಸ್.ಶೆಟ್ಟಿಯವರು ಮಾತನಾಡಿ ನಮ್ಮ ದುಡಿಮೆಯ ಒಂದು ಭಾಗವನ್ನು ಸಮಾಜ ಸೇವೆಗೆ ಮೀಸಲಿಟ್ಟು ಕಳೆದ ೧೮ ವರ್ಷಗಳಿಂದ ಒಂದಷ್ಟು ಸೇವಾ ಕೆಲಸಗಳನ್ನು ಮಾಡುತ್ತಾ ಬಂದಿದ್ದೇವೆ. ಶಾಲಾ ಮಕ್ಕಳಿಗೆ ಸ್ಕಾಲರ್‌ಶಿಪ್, ಸಮವಸ್ತ್ರ, ಶೌಚಾಲಯಗಳನ್ನು ನಿರ್ಮಿಸಿ ಕೊಟ್ಟಿದ್ದೇವೆ. ಕಳೆದ ೨ ವರ್ಷಗಳಿಂದ ಕೊರಗರಿಗೆ ಮನೆ ಕಟ್ಟಿಕೊಡುವ ಕೆಲಸ ಮಾಡುತ್ತಾ ಬಂದಿದ್ದೇವೆ. ವಿಶ್ವಪ್ರಸನ್ನ ತಿರ್ಥ ಸ್ವಾಮೀಜಿಯವರ ಪ್ರೇರಣೆಯಲ್ಲಿ ನಾವು ಮನೆಕಟ್ಟಿಕೊಡಲು ಆರಂಭಿಸಿದ್ದೇವೆ. ಈಗಾಗಲೆ ನಾವು ಜನ್ಯಾಡಿಯಲ್ಲಿ ೧೪ ಮನೆಗಳನ್ನು ನಿರ್ಮಿಸಿ ಹಸ್ತಾಂತರಿಸಿದ್ದೇವೆ. ಇದೀಗ 74 ಉಳ್ಳೂರಿನಲ್ಲಿ 14 ಮನೆಗಳನ್ನು ನಿರ್ಮಿಸಿದ್ದು ಮುಂದೆ ಅಮಾಸೆಬೈಲಿನಲ್ಲಿ ಹಾಗೂ ಮಂದಾರ್ತಿಯಲ್ಲೂ ಕೊರಗರಿಗೆ ಮನೆಗಳನ್ನು ನಿರ್ಮಿಸಿಕೊಡಲಿದ್ದೇವೆ. ಈಗ 74ಉಳ್ಳೂರಿನಲ್ಲಿ ನಿರ್ಮಿಸಿರುವ ಮನೆಗಳ ಉದ್ಘಾಟನೆಗೆ ಊರವರು ಜಾತಿ ಬೇಧ ಮರೆತು ಸಂಪೂರ್ಣ ಬೆಂಬಲ ನೀಡುತ್ತಿದ್ದಾರೆ. ಅಂದು ಮಧ್ಯಾಹ್ನ ಭೋಜನ ವ್ಯವಸ್ಥೆ ಮಾಡಲಾಗಿದೆ ಎಂದರು. ಪತ್ರಿಕಾಗೋಷ್ಟಿಯಲ್ಲಿ ಟ್ರಸ್ಟಿನ ಉಪಾಧ್ಯಕ್ಷ ಹಾಲಾಡಿ ನಾಗರಾಜ ಶೆಟ್ಟಿ, ಟ್ರಸ್ಟ್ ಸಂಚಾಲಕ ಪ್ರಮೋದ್, ಗ್ರಾಮ ಪಂಚಾಯತ್ ಉಪಾಧ್ಯಕ್ಷ ಪ್ರಸಾದ್ ಶೆಟ್ಟಿ, ಕೃಷ್ಣ ಪೂಜಾರಿ, ಶ್ರೀನಿವಾಸ್, ದಿಲೀಪ್ ಶೆಟ್ಟಿ ಉಪಸ್ಥಿತರಿದ್ದರು.
ಮನೆಗಳಿಗೆ ಕೃಷ್ಣನ ಹೆಸರು :
ಈ ಹಿಂದೆ ಜನ್ಯಾಡಿಯಲ್ಲಿ ಮನೆ ನಿರ್ಮಿಸಿದಾಗ 14 ಮನೆಗಳಿಗೆ ರಾಮನಿಗೆ ಸಂಬಂಧಿಸಿದ ಹೆಸರುಗಳನ್ನು ಎಚ್.ಎಸ್.ಶೆಟ್ಟರು ಇರಿಸಿದ್ದರು. ಈ ಬಾರಿ ಅವರು ಕೃಷ್ಣನಿಗೆ ಸಂಬಂಧಿಸಿದ ಹೆಸರುಗಳನ್ನು ಇರಿಸಿದ್ದಾರೆ. ಈ ಬಾರಿ ಬಸವ, ಉದ್ದೇಶ, ಶ್ರೀಮತಿ ಗುಲಾಬಿ, ಪಾಂಡು, ರಾಮ, ಬಡಿಯ, ಮರಿಯ, ಐತು, ಚಂದ್ರ, ಶ್ರೀಮತಿ ರುಕ್ಕು, ಶ್ರೀಮತಿ ಕಾವೇರಿ, ಯೋಗೇಂದ್ರ, ಶ್ರೀಮತಿ ಜಲಜ, ಮುತ್ತ ಅವರಿಗೆ ಮನೆಗಳನ್ನು ನಿರ್ಮಿಸಿದ್ದು ಮನೆಗಳಿಗೆ ಕ್ರಮವಾಗಿ ಕೃಷ್ಣ, ಕೇಶವ, ಮಾಧವ, ಗೋವಿಂದ, ಮಧುಸೂದನ, ಜನಾರ್ದನ, ಗೋವರ್ಧನ, ಗೋಪಾಲ, ಶ್ಯಾಮ, ಗಿರಿಧರ, ಅಚ್ಚುತ, ಮುಕುಂದ, ದಾಮೋದರ ಹಾಗೂ ನಾರಾಯಣ ಎಂಬ ಹೆಸರುಗಳನ್ನು ಇರಿಸಿದ್ದಾರೆ.
ಎಚ್.ಎಸ್.ಶೆಟ್ಟರು ಎಲ್ಲಾ ಮನೆಗಳನ್ನು ಅತ್ಯಂತ ಸುಸಜ್ಜಿತವಾಗಿ ಸ್ಲ್ಯಾಬ್ ಹಾಕಿ ಎರಡು ಬೆಡ್‌ರೂಂಗಳ ಮನೆಗಳನ್ನೇ ಕಟ್ಟಿ ಕೊಟ್ಟಿದ್ದು ಅವರ ಈ ಸೇವಾ ಕೈಂಕರ್ಯಕ್ಕೆ ಪ್ರಶಂಸೆ ವ್ಯಕ್ತವಾಗಿದೆ.

administrator

Related Articles

Leave a Reply

Your email address will not be published. Required fields are marked *