ವರದಿ : ಚಿತ್ತೂರು ಪ್ರಭಾಕರ ಆಚಾರ್ಯ
ಉಡುಪಿಮಿತ್ರ ಪತ್ರಿಕೆ ಸುದ್ಧಿ :
ಬ್ರಹ್ಮಾವರ ಎ.೨೮: ಬ್ರಹ್ಮಾವರ ತಾಲ್ಲೂಕಿನ ಚೇರ್ಕಾಡಿ ಗ್ರಾಮದ ರಾಣಿ ಅಬ್ಬಕ್ಕ ರಸ್ತೆಯಲ್ಲಿರುವ ಕೇಶವನಗರದ ಸುಮಾರು ೨೦ಎಕರೆ ವಿಸ್ತೀರ್ಣದಲ್ಲಿ ಇರುವ ರಾಷ್ಟ್ರೋತ್ಥಾನ ವಿದ್ಯಾಕೇಂದ್ರ ಮತ್ತು ರಾಷ್ಟ್ರೋತ್ಥಾನ ಪದವಿ ಪೂರ್ವ ಕಾಲೇಜುಗಳ ಕಟ್ಟಡದ ಲೋಕಾರ್ಪಣೆ ಕಾರ್ಯಕ್ರಮ ಎ. ೩೦ರಂದು ಸಂಜೆ ೪.೩೦ ಕಟ್ಟಡಗಳ ಲೋಕಾರ್ಪಣೆ ನಡೆಯಲಿದೆ ಎಂದು ರಾಷ್ಟ್ರೋತ್ಥಾನ ಪರಿಷತ್‌ನ ಪ್ರಧಾನ ಕಾರ್ಯದರ್ಶಿ ನಾ.ದಿನೇಶ ಹೆಗ್ಡೆ ತಿಳಿಸಿದರು.
ಬ್ರಹ್ಮಾವರ ಚೇರ್ಕಾಡಿಯಲ್ಲಿ ರಾಷ್ಟ್ರೋತ್ಥಾನ ವಿದ್ಯಾಕೇಂದ್ರದಲ್ಲಿ ಸೋಮವಾರ ಪತ್ರಿಕಾ ಗೋಷ್ಟಿಯಲ್ಲಿ ಮಾತನಾಡಿದ ಅವರು ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಸಾನ್ನಿಧ್ಯದಲ್ಲಿ, ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಕಾರ್ಯವಾಹರಾದ ದತ್ತಾತ್ರೇಯ ಹೊಸಬಾಳೆ ಹಾಗೂ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೋ) ನಿಕಟಪೂರ್ವ ಅಧ್ಯಕ್ಷ ಡಾ. ಎಸ್. ಸೋಮನಾಥ್ ಅವರ ಉಪಸ್ಥಿತಿಯಲ್ಲಿ ಕಟ್ಟಡಗಳ ಲೋಕಾರ್ಪಣಾ ಸಮಾರಂಭ ನಡೆಯಲಿದೆ. ಇದೇ ೨೯ರ ಸಂಜೆ ಉಡುಪಿಯ ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠ, ಪಡುಕತ್ಯಾರಿನ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮೀಜಿ ಸಾನ್ನಿಧ್ಯದಲ್ಲಿ ಕಟ್ಟಡಗಳ ವಾಸ್ತುಪೂಜೆ ಮತ್ತು ೩೦ರ ಬೆಳಿಗ್ಗೆ ಉಡುಪಿಯ ಅದಮಾರು ಮಠದ ವಿಶ್ವಪ್ರಿಯ ತೀರ್ಥ ಸ್ವಾಮೀಜಿ ಅವರ ಸಾನ್ನಿಧ್ಯದಲ್ಲಿ ಕಟ್ಟಡಗಳ ಗೃಹಪ್ರವೇಶ ಮತ್ತು ಉಳಿದ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು.
ರಾಷ್ಟೋತ್ಥಾನ ಶಾಲೆಗಳಲ್ಲಿ ಶಿಕ್ಷಣ
ಈಗಾಗಲೇ ೬೦ ಸಂವತ್ಸರಗಳನ್ನು ಪೂರೈಸಿದ ರಾಷ್ಟ್ರೋತ್ಥಾನ ಭಾರತದ ಪರಂಪರೆ, ಸಂಸ್ಕೃತಿ, ಮಣ್ಣಿನ ಸೊಗಡನ್ನು ಮಕ್ಕಳನ್ನು ತಿಳಿಸುವ ಪ್ರಯತ್ನ ಈ ಶಾಲೆಯಿಂದ ಆಗುತ್ತಿದೆ. ಶಿಕ್ಷಣದಲ್ಲಿ ಭಾರತೀಯತೆ ಇರಬೇಕು, ಆಧುನಿಕದೊಂದಿಗೆ ಭಾರತೀಯ ಜ್ಞಾನಪರಂಪರೆಯ ಶಿಕ್ಷಣವೂ ಬೇಕು, ಜೀವನ ಕೌಶಲ್ಯದೊಂದಿಗೆ ರಾಷ್ಟ್ರಭಕ್ತಿಯೂ ಬೆಳೆಯಬೇಕು. ನೆಲದ ಮಣ್ಣಿನ ಸೊಗಡನ್ನು ಮೈಗೂಡಿಸಿಕೊಳ್ಳುವ ಶಿಕ್ಷಣ ಮಕ್ಕಳಿಗೆ ಕೊಡಮಾಡಬೇಕು ಎನ್ನುವುದು ರಾಷ್ಟ್ರೋತ್ಥಾನದ ಉದ್ದೇಶವಾಗಿದೆ ಎಂದು ತಿಳಿಸಿದರು.
ದೈಹಿಕ, ಮಾನಸಿಕ, ಭಾವನಾತ್ಮಕ, ಬೌದ್ಧಿಕ, ಆಧ್ಯಾತ್ಮಿಕ, ಈ ಐದೂ ಆಯಾಮಗಳಲ್ಲಿ ಮಕ್ಕಳ ಸಮಗ್ರ ವಿಕಾಸಕ್ಕಾಗಿ ಪಂಚಮುಖಿ ಶಿಕ್ಷಣ ನೀಡುತ್ತಿದೆ. ಮುಂದಿನ ದಿನಗಳಲ್ಲಿ ರಾಜ್ಯದ ಎಲ್ಲ ಜಿಲ್ಲಾಕೇಂದ್ರಗಳಲ್ಲೂ ಶಾಲೆಯನ್ನು ಆರಂಭಿಸುವ ಗುರಿ ಹೊಂದಲಾಗಿದೆ ಎಂದರು.
ಈ ಶೈಕ್ಷಣಿಕ ವರ್ಷದಲ್ಲಿ ಪ್ರೀ-ಕೇಜಿಯಿಂದ ೮ನೇ ತರಗತಿ ಹಾಗೂ ಪ್ರಥಮ ಪಿಯುಸಿ (ಪಿಸಿಎಂಬಿ, ಪಿಸಿಎಂಸಿಎಸ್, ಕಾಮರ್ಸ್) ಆರಂಭಿಸಲಾಗುವುದು. ಜೆಇಇ. ನೀಟ್, ಕೆಸಿಇಟಿ, ಸಿಎ, ಸಿಎಸ್ ಹಾಗೂ ಕ್ಲಾಟ್ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ವಿಶೇಷ ತರಬೇತಿಯೊಂದಿಗೆ ಅರ್ಹ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ , ವಿಶೇಷ ರಿಯಾಯಿತಿ ನೀಡಲಾಗುವುದು. ಹುಡುಗ ಹುಡುಗಿಯರಿಗೆ ಪ್ರತ್ಯೇಕ ಹಾಸ್ಟೆಲ್ ವ್ಯವಸ್ಥೆ ಇರಲಿದೆ. ಪ್ರವೇಶ ಪ್ರಕ್ರಿಯೆ ನಡೆಯುತ್ತಿದೆ. ಈ ಬಾರಿ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಶೇ.೯೫ ಮೇಲ್ಪಟ್ಟು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ನಮ್ಮಲ್ಲಿ ಪಿಯುಸಿ ಸೇರುವುದಾದರೆ ಅವರಿಗೆ ಎಲ್ಲವೂ ಉಚಿತವಾಗಿ ನೀಡಲಾಗುವುದು ಎಂದು ತಿಳಿಸಿದರು.
ಈ ಸಂದರ್ಭ ರಾಷ್ಟ್ರೋತ್ಥಾನದ ಪರಿಷತ್‌ನ ಪ್ರಮುಖರಾದ ಸಾಧು ಸಾಲಿಯಾನ್, ಋಷಿರಾಜ್, ವಸಂತ ಕುಮಾರ್, ಭಾಗ್ಯಶ್ರೀ ಐತಾಳ, ಪೂರ್ಣಿಮಾ, ಸುರೇಶ ಶೆಣೈ ಇದ್ದರು. ಭಾರತೀಶ್ ಸ್ವಾಗತಿಸಿ ವಂದಿಸಿದರು

