ವರದಿ : ಚಿತ್ತೂರು ಪ್ರಭಾಕರ ಆಚಾರ್ಯ
ಉಡುಪಿಮಿತ್ರ ಪತ್ರಿಕೆ ಸುದ್ಧಿ :
ಬ್ರಹ್ಮಾವರ, ಎ.೮ : ಪಾಲ್ಕೆ ಬಾಬುರಾಯ ಆಚಾರ್ಯರು ಸಮಾಜದ ಬಗ್ಗೆ ವಿಶೇಷ ಕಾಳಜಿಯಿಂದ ಶಾಲೆ ಹಾಗೂ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ ಸಮಾಜಕ್ಕೆ ಒಳಿತನ್ನು ಮಾಡಿದ್ದಾರೆ. ನನಗೆ ಹಸಿವಾದದ್ದು ಗೊತ್ತಾದರೆ ನಾನು ಬದುಕಿದ್ದೇನೆ ಎಂದರ್ಥ. ಇನ್ನೊಬ್ಬನ ಹಸಿವು ಗೊತ್ತಾದರೆ ನಾವು ಮನುಷ್ಯರು ಎಂದರ್ಥ. ಸಂತೋಷದ ಸಂದರ್ಭ ಕೈ ತಟ್ಟುವ ನೂರಾರು ಕೈಗಳಿಗಿಂತ ದುಃಖದ ಸಂದರ್ಭದ ಕಣ್ಣೀರು ಒರೆಸುವ ಒಂದು ಬೆರಳೇ ಶ್ರೇಷ್ಟ ಎಂದು ಆನೆಗುಂದಿ ಮಹಾಸಂಸ್ಥಾನದ ವಿಶ್ವಕರ್ಮ ಜಗದ್ಗುರು ಪೂಜ್ಯ ಶ್ರೀ ಶ್ರೀ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮೀಜಿಯವರು ತಮ್ಮ ಆಶೀರ್ವಚನದಲ್ಲಿ ನುಡಿದರು.

ಅವರು ಎಸ್.ಕೆ.ಗೋಲ್ಡ್ ಸ್ಮಿತ್ಸ್ ಇಂಡಸ್ಟ್ರಿಯಲ್ ಕೋ ಆಪರೇಟಿವ್ ಸೊಸೈಟಿ ಲಿ. ಮಂಗಳೂರು ಇದರ ಬೆಳ್ಳಂಪಳ್ಳಿ ಶಾಖೆಯು ಹವಾನಿಯಂತ್ರಿತವಾಗಿ ನವೀಕೃತಗೊಂಡಿದ್ದು ಎ.೮ರಂದು ನಡೆದ ಇದರ ಉದ್ಘಾಟನಾ ಸಮಾರಂಭದಲ್ಲಿ ಆಶೀರ್ವಚನ ನೀಡಿದರು.
ಹಾಸನ ಅರಕಲಗೂಡು ಅರೆಮಾದನಹಳ್ಳಿ ಶ್ರೀ ವಿಶ್ವಬ್ರಾಹ್ಮಣ ಮಹಾಸಂಸ್ಥಾನ ಮಠದ ಅನಂತಶ್ರೀ ವಿಭೂಷಿತ ಶಿವ ಸುಜ್ಞಾನ ತೀರ್ಥ ಮಹಾಸ್ವಾಮೀಜೀ ಆಶೀರ್ವನ ನೀಡಿದ್ದು ನಿಷ್ಟೆ, ದೃಢ ಸಂಕಲ್ಪದಿಂದ ಭಗವಂತನ ಸ್ಮರಣೆಯೊಂದಿಗೆ ಯಾವುದೇ ಕೆಲಸ ಮಾಡಿದರೂ ಯಶಸ್ಸು ಕಾಣಬಹುದಾಗಿದೆ ಎಂದರು.

ಎಸ್.ಕೆ.ಗೋಲ್ಡ್ ಸ್ಮಿತ್ಸ್ ಇಂಡಸ್ಟ್ರಿಯಲ್ ಕೋ- ಆಪರೇಟಿವ್ ಸೊಸೈಟಿ ಲಿ. ಅಧ್ಯಕ್ಷ ಪಿ.ಉಪೇಂದ್ರ ಆಚಾರ್ಯ ಅಧ್ಯಕ್ಷತೆ ವಹಿಸಿದ್ದು ಅವರು ಮಾತನಾಡಿ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಾದ್ಯಂತ ಒಟ್ಟು 18 ಶಾಖೆಗಳು ಗ್ರಾಹಕರ ಸೇವೆಯಲ್ಲಿ ನಿರತವಾಗಿದ್ದು ಮತ್ತೆರಡು ಶಾಖೆಗಳನ್ನು ಸದ್ಯದಲ್ಲೇ ತೆರೆಯಲಾಗುವುದು. ಸಂಸ್ಥೆ 40 ವರ್ಷಗಳಿಂದ ನಿರಂತರ ಲಾಭ ಗಳಿಸುತ್ತಾ ಬಂದಿದೆ. ಸದಸ್ಯರಿಗೆ ಕಳೆದ 34 ವರ್ಷಗಳಿಂದ ಶೇ.18 ಡಿವಿಡೆಂಡ್ ನೀಡುತ್ತಿದ್ದು ವಜ್ರಮಹೋತ್ಸವದ ಅಂಗವಾಗಿ 2025-26ನೇ ಸಾಲಿನಲ್ಲಿ ವರ್ಷ ಶೆ.20ಡಿವಿಡೆಂಡ್ ನೀಡಲಾಗಿದೆ. ಸೊಸೈಟಿಯಲ್ಲಿ 23,529 ಸದಸ್ಯರಿದ್ದು, 7.33 ಕೋಟಿ ಪಾಲು ಬಂಡವಾಳ, 29.82ಕೋಟಿ ನಿಧಿಗಳು, 317.01ಕೋಟಿ ಠೇವಣಿ ಹೊಂದಿದ್ದು, 65.56ಕೋಟಿ ಹೂಡಿಕೆ ಇದ್ದು 288.86 ಕೋಟಿ ಸಾಲ ನೀಡಲಾಗಿದೆ. ೨೦೨೫-೨೬ನೇ ಸಾಲಿನಲ್ಲಿ ರೂ.8.06 ಕೋಟಿ ನಿವ್ವಳ ಲಾಭ ಗಳಿಸಿದೆ ಎಂದರು.

ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಇಂದ್ರಾಳಿ ಬಿ. ಜಯಕರ ಶೆಟ್ಚಿ ಮಾತನಾಡಿ ಕೇಂದ್ರ ಹಾಗೂ ರಾಜ್ಯ ಸರಕಾರ ಸಹಕಾರಿ ಸಂಸ್ಥೆಗಳಲ್ಲಿ ಸಾಕಷ್ಟು ಬದಲಾವಣೆ ಮಾಡುತ್ತಿದ್ದಾರೆ ಎಂದರು.
ದುರ್ಗಾಪರಮೇಶ್ವರೀ ದೇವಸ್ಥಾನದ ಅಧ್ಯಕ್ಷ ಅಶೋಕ ಕುಮಾರ್ ಶೆಟ್ಟಿ ಮಾತನಾಡಿ ಬಾಬುರಾಯ ಆಚಾರ್ಯರು ಸ್ಥಾಪಿಸಿದ ಶಾಲೆ ಇಂದು ಮುಚ್ಚಿ ಹೋಗಿದೆ. ಐದೂವರೆ ಎಕ್ರೆ ಜಾಗ ಇಲ್ಲಿದೆ. ಪುನಃ ಶಾಲೆಯನ್ನು ಸ್ಥಾಪಿಸುವ ಕೆಲಸ ಆಗಬೇಕಾಗಿದೆ ಎಂದರು.
ಅತಿಥಿಗಳಾಗಿ ನಿವೃತ್ತ ಮುಖ್ಯ ಶಿಕ್ಷಕ ಸೀತಾರಾಮ ಶೆಟ್ಟಿಗಾರ್, ಹಾವಂಜೆ-ಬೆಳ್ಳಂಪಳ್ಳಿ- ಕುಕ್ಕೆಹಳ್ಳಿ ಶ್ರೀ ವಿಶ್ವಕರ್ಮ ಸಮಾಜೋದ್ಧಾರಕ ಸಂಘ(ರಿ.)ಇದರ ಅಧ್ಯಕ್ಷ ಅಚ್ಚುತ ಆಚಾರ್ಯ, ಕಟ್ಟಡ ಮಾಲಕ ಪ್ರಸನ್ನ ಪ್ರಭು ಭಾಗವಹಿಸಿದ್ದರು.
ವೇದಿಕೆಯಲ್ಲಿ ಆಡಳಿತ ಮಂಡಳಿ ನಿರ್ದೇಶಕರಾದ ಯಜ್ಞೇಶ್ವರ ಆಚಾರ್ಯ, ವೈ.ವಿ.ವಿಶ್ವಜ್ಞಮೂರ್ತಿ, ಕೆ.ಶಶಿಕಾಂತ ಆಚಾರ್ಯ, ಶ್ರೀಮತಿ ರೋಹಿಣಿ ಎಂ.ಪಿ., ರಮೇಶ್ ರಾವ್ ಯು, ಕೆ. ಪ್ರಕಾಶ್ ಆಚಾರ್ಯ, ಮಂಜುನಾಥ ಆಚಾರ್ಯ, ಇದ್ದರು.
ಕಬ್ಬಿಣ ಕೆಲಸಗಾರ ಮಂಜಯ್ಯ ಆಚಾರ್ಯ, ಮರ-ಕಬ್ಬಿಣ – ಸೆಂಟ್ರಿಂಗ್ ಕೆಲಸಗಾರ ರಾಮು ಆಚಾರ್ಯ, ಪೋಸ್ಟ್ ಮ್ಯಾನ್ ಸುಧಾಕರ ಶೇರೆಗಾರ್, ಕೃಷಿಕ ರತ್ನಾಕರ ಶೆಟ್ಟಿ, ಕೃಷಿಕ ಅಪ್ರಾಯ ಪ್ರಭು, ನಿವೃತ್ತ ಶಾಖಾ ವ್ಯವಸ್ಥಾಪಕ ಗೋವಿಂದರಾಜ ಹೆಗ್ಡೆ ಹಾಗೂ ಇಂಜೀನಿಯರ್ ಪ್ರಸಾದ್ ಆಚಾರ್ಯ, ಗಣೇಶ್ ಆಚಾರ್ಯ ಇವರನ್ನು ಗೌರವಿಸಲಾಯಿತು.

ಸಂಸ್ಥೆಯ ಪ್ರಧಾನ ವ್ಯವಸ್ಥಾಪಕ ಯಜ್ಞೇಶ್ವರ ಆಚಾರ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪಾಧ್ಯಕ್ಷ ಆನಂದ ಆಚಾರ್ಯ ಸ್ವಾಗತಿಸಿದರು. ಬೆಳ್ಳಂಪಳ್ಳಿ ಶಾಖೆಯ ವ್ಯವಸ್ಥಾಪಕ ಮೋಹನದಾಸ್ ಆಚಾರ್ಯ ವಂದಿಸಿದರು. ಉಡುಪಿ ಶಾಖಾ ವ್ಯವಸ್ಥಾಪಕ ಶ್ರೀಕಾಂತ್ ನಿರೂಪಿಸಿದರು.



