• April 1, 2026
  • Last Update April 1, 2026 5:59 pm
  • Brahmavara

ಎ.5ರಂದು ಬಾರ್ಕೂರಿನಲ್ಲಿ ಸುಜ್ಞಾನ ವಿದ್ಯಾರ್ಥಿವೇತನ ಪರೀಕ್ಷೆಗ್ರಾಮೀಣ ಪ್ರತಿಭೆಗಳಿಗೆ ಜಾಗತಿಕ ಗುಣಮಟ್ಟದ ಶಿಕ್ಷಣದ ಅವಕಾಶ

ಎ.5ರಂದು ಬಾರ್ಕೂರಿನಲ್ಲಿ ಸುಜ್ಞಾನ ವಿದ್ಯಾರ್ಥಿವೇತನ ಪರೀಕ್ಷೆಗ್ರಾಮೀಣ ಪ್ರತಿಭೆಗಳಿಗೆ ಜಾಗತಿಕ ಗುಣಮಟ್ಟದ ಶಿಕ್ಷಣದ ಅವಕಾಶ

ವರದಿ : ಚಿತ್ತೂರು ಪ್ರಭಾಕರ ಆಚಾರ್ಯ
ಉಡುಪಿಮಿತ್ರ ಪತ್ರಿಕೆ ಸುದ್ಧಿ :
ಬಾರ್ಕೂರು, ಏಪ್ರಿಲ್ ೧: 1946ರಲ್ಲಿ ಸ್ಥಾಪಿತವಾದ ಬಾರ್ಕೂರು ಎಜುಕೇಶನಲ್ ಸೊಸೈಟಿ ಗ್ರಾಮೀಣ ಶಿಕ್ಷಣ ಕ್ಷೇತ್ರದಲ್ಲಿ ವಿಶಿಷ್ಟ ಸೇವೆ ಸಲ್ಲಿಸುತ್ತಿದ್ದು, ಸಾವಿರಾರು ವಿದ್ಯಾರ್ಥಿಗಳನ್ನು ಉನ್ನತ ಹುದ್ದೆಗಳಿಗೆ ತಲುಪಿಸಿರುವ ಹೆಗ್ಗಳಿಕೆಯನ್ನು ಹೊಂದಿದೆ. ಸಮಾಜದ ಎಲ್ಲಾ ವರ್ಗದ ವಿದ್ಯಾರ್ಥಿಗಳಿಗೆ ಜಾಗತಿಕ ಗುಣಮಟ್ಟದ ಶಿಕ್ಷಣ ದೊರಕಬೇಕೆಂಬ ಉದ್ದೇಶದಲ್ಲಿ ಅಂದು ಬಾರ್ಕೂರು ಎಜುಕೇಶನಲ್ ಸೊಸೈಟಿಯನ್ನು ಸ್ಥಾಪಿಸಲಾಗಿದೆ. ಪ್ರಸ್ತುತ ವಿದ್ಯಾರ್ಥಿಗಳಿಗೆ ಇನ್ನಷ್ಟು ಗುಣಮಟ್ಟದ ಶಿಕ್ಷಣ ದೊರಕಲಿ ಎಂಬ ಉದ್ದೇಶದಿಂದ ಶಿಕ್ಷಣ ಕ್ಷೇತ್ರದಲ್ಲಿ ಮೂರು ದಶಕಕ್ಕೂ ಹೆಚ್ಚು ಅನುಭವ ಹೊಂದಿರುವ ಡಾ. ರಮೇಶ್ ಶೆಟ್ಟಿಯವರ ಮಾರ್ಗದರ್ಶನದ ಸುಜ್ಞಾನ ಎಜುಕೇಶನಲ್ ಟ್ರಸ್ಟ್ ಜೊತೆಯಲ್ಲಿ ಕೈ ಜೋಡಿಸಿ ಬಾರಕೂರು ಸುಜ್ಞಾನ ನ್ಯಾಷನಲ್ ಪಿಯು ಕಾಲೇಜನ್ನಾಗಿ ಪರಿವರ್ತಿಸಲಾಗಿದೆ ಎಂದು ಬಾರಕೂರು ಶಾಂತಾರಾಮ ಶೆಟ್ಟಿ ನುಡಿದರು. ಅವರು ಸುಜ್ಞಾನ ನ್ಯಾಷನಲ್ ಪಿಯು ಕಾಲೇಜು ಬಾರಕೂರು ಇಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದರು.


ಎ.5 ರಂದು ಸುಜ್ಞಾನ ವಿದ್ಯಾರ್ಥಿವೇತನ ಪರೀಕ್ಷೆ
ಸುಜ್ಞಾನ ಎಜುಕೇಶನಲ್ ಟ್ರಸ್ಟ್ (ರಿ.) ಅಧ್ಯಕ್ಷ ಡಾ. ರಮೇಶ್ ಶೆಟ್ಟಿ ಮಾತನಾಡಿ ಗ್ರಾಮೀಣ ಪ್ರದೇಶದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಕಡಿಮೆ ವೆಚ್ಚದಲ್ಲಿ ಗುಣಮಟ್ಟದ ಶಿಕ್ಷಣ ಒದಗಿಸುವ ಮಹತ್ವಾಕಾಂಕ್ಷಿ ಯೋಜನೆಯೊಂದನ್ನು ಬಾರ್ಕೂರಿನಲ್ಲಿ ಪ್ರಾರಂಭಿಸಲಾಗಿದೆ. ಬಾರ್ಕೂರು ಎಜುಕೇಶನಲ್ ಸೊಸೈಟಿ (ರಿ.) ಹಾಗೂ ಕುಂದಾಪುರದ ಸುಜ್ಞಾನ ಎಜುಕೇಶನಲ್ ಟ್ರಸ್ಟ್ ಸಂಯುಕ್ತವಾಗಿ ೧೦ನೇ ತರಗತಿ ಪರೀಕ್ಷೆ ಬರೆದ ವಿದ್ಯಾರ್ಥಿಗಳಿಗಾಗಿ ಬೃಹತ್ ವಿದ್ಯಾರ್ಥಿವೇತನ ಪರೀಕ್ಷೆಯನ್ನು ಆಯೋಜಿಸಲಾಗಿದೆ. ಈ ವಿದ್ಯಾರ್ಥಿವೇತನ ಪರೀಕ್ಷೆಯ ಮೂಲಕ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಕಾಲೇಜು ಶುಲ್ಕದಲ್ಲಿ ರಿಯಾಯಿತಿ ನೀಡಲಾಗುವುದು. ಜೊತೆಗೆ, ಆರ್ಥಿಕವಾಗಿ ಹಿಂದುಳಿದ ಅತ್ಯುತ್ತಮ ವಿದ್ಯಾರ್ಥಿಗಳಿಗೆ ಸಂಪೂರ್ಣ ಉಚಿತ ಶಿಕ್ಷಣ ನೀಡಲು ಟ್ರಸ್ಟ್ ನಿರ್ಧರಿಸಿದೆ. ಈ ಸೌಲಭ್ಯಗಳು ಬಾರ್ಕೂರಿನ ಸುಜ್ಞಾನ ನ್ಯಾಷನಲ್ ಪಿಯು ಕಾಲೇಜಿನಲ್ಲಿ ಪ್ರವೇಶ ಪಡೆಯುವವರಿಗೆ ಲಭ್ಯವಿರುತ್ತವೆ. ಎ.5ರಂದು ಸುಜ್ಞಾನ ನ್ಯಾಷನಲ್ ಪಿಯು ಕಾಲೇಜಿನಲ್ಲಿ ಬೆಳಿಗ್ಗೆ 9.30 ರಿಂದ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸಲಾಗುವುದು ಎಂದರು.


ಸುಜ್ಞಾನ ಎಜುಕೇಶನಲ್ ಟ್ರಸ್ಟ್ (ರಿ.) ಇದರ ಖಜಾಂಚಿ ಭರತ್ ಶೆಟ್ಟಿ ಮಾತನಾಡಿ ಇಲ್ಲಿಯವರೆಗೆ CET, NEET, JEE ಮತ್ತು CA ಮುಂತಾದ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿಗಾಗಿ ವಿದ್ಯಾರ್ಥಿಗಳು ನಗರಗಳಿಗೆ ತೆರಳಬೇಕಾಗಿತ್ತು. ಆದರೆ ಇದೀಗ ಅದೇ ಮಟ್ಟದ ತರಬೇತಿಯನ್ನು ಬಾರ್ಕೂರಿನಲ್ಲಿಯೇ ನೀಡಲಾಗುವುದು. ಗ್ರಾಮೀಣ ವಿದ್ಯಾರ್ಥಿಗಳಿಗೆ ಇದು ದೊಡ್ಡ ಅನುಕೂಲವಾಗಿದೆ. ಈ ಯೋಜನೆಗೆ ಶಿಕ್ಷಣ ಕ್ಷೇತ್ರದಲ್ಲಿ ಅಪಾರ ಅನುಭವ ಹೊಂದಿರುವ, ಭೌತಶಾಸ್ತ್ರದಲ್ಲಿ ಪಿ.ಎಚ್.ಡಿ ಪಡೆದಿರುವ ಡಾ. ರಮೇಶ್ ಶೆಟ್ಟಿ ಅವರ ಮಾರ್ಗದರ್ಶನವಿದೆ. ಎ.5ರಂದು ಸುಜ್ಞಾನ ವಿದ್ಯಾರ್ಥಿವೇತನ ಪರೀಕ್ಷೆ ಏರ್ಪಡಿಸಿದ್ದು ಪ್ರಸಕ್ತ ಸಾಲಿನಲ್ಲಿ ಎಸ್.ಎಸ್.ಎಲ್.ಸಿ.ಪರೀಕ್ಷೆ ಬರೆದ ಕನ್ನಡ ಹಾಗೂ ಇಂಗ್ಲಿಷ್ ಮಾಧ್ಯಮದ ವಿದ್ಯಾರ್ಥಿಗಳು, ಹಾಗು CBSE/ICSE ಪಠ್ಯಕ್ರಮದ ವಿದ್ಯಾರ್ಥಿಗಳು ಕೂಡ ಈ ಪರೀಕ್ಷೆಗೆ ಹಾಜರಾಗಬಹುದು. ಪರೀಕ್ಷೆಗೆ ಬರುವಾಗ ಆಧಾರ್ ಕಾರ್ಡ್, ಪೆನ್, ಪೆನ್ಸಿಲ್ ಮತ್ತು ಎಕ್ಸಾಮ್ ಪ್ಯಾಡ್ ತರಬೇಕು. ಪ್ರಶ್ನಾಪತ್ರಿಕೆ SSLC ಪಠ್ಯಕ್ರಮ ಆಧಾರಿತವಾಗಿರುತ್ತದೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಮತ್ತು ಪೋಷಕರು ಈ ಅವಕಾಶವನ್ನು ಬಳಸಿಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ ಬಾರ್ಕೂರು ಎಜುಕೇಶನಲ್ ಸೊಸೈಟಿ ಹಾಗೂ ಸುಜ್ಞಾನ ಎಜುಕೇಶನಲ್ ಟ್ರಸ್ಟ್ ಅನ್ನು ಸಂಪರ್ಕಿಸಬಹುದು ಎಂದು ಭರತ್ ಶೆಟ್ಟಿ ತಿಳಿಸಿದರು.


ಪತ್ರಿಕಾಗೋಷ್ಟಿಯಲ್ಲಿ ಬಾರ್ಕೂರು ಎಜುಕೇಶನಲ್ ಸೊಸೈಟಿ(ರಿ.)ಯ ಉಪಾಧ್ಯಕ್ಷ ಶೇಡಿಕೊಡ್ಲು ವಿಠಲ ಶೆಟ್ಟಿ, ಎಸ್.ವಿ.ವಿ.ಎನ್ ಆಂಗ್ಲ ಮಾದ್ಯಮ ಶಾಲೆಯ ಸಂಚಾಲಕ ರಾಜಾರಾಮ ಶೆಟ್ಟಿ ಆಶ್ರಯ ಬ್ರಹ್ಮಾವರ, ಆಡಳಿತ ಮಂಡಳಿಯ ಸದಸ್ಯರಾದ ಎಸ್. ಜಯರಾಮ ಶೆಟ್ಟಿ, ನ್ಯಾಶನಲ್ ಐಟಿಐ ಸಂಚಾಲಕ ಬಿ.ರಾಮಚಂದ್ರ ಕಾಮತ್, ನೇಷನಲ್ ಪದವಿಪೂರ್ವ ಕಾಲೇಜಿನ ಸಂಚಾಲಕ ರಾಜ್ ಗೊಫಾಲ ನಂಬಿಯಾರ್ ಉಪಸ್ಥಿತರಿದ್ದರು. ಬಾರ್ಕೂರು ಎಜುಕೇಶನಲ್ ಸೊಸೈಟಿಯ ಕಾರ್ಯದರ್ಶಿ ಅಶೋಕ್‌ಕುಮಾರ್ ಶೆಟ್ಟಿ ಮಟಪಾಡಿ ಸ್ವಾಗತಿಸಿ ವಂದಿಸಿದರು.

administrator

Related Articles

Leave a Reply

Your email address will not be published. Required fields are marked *

You cannot copy content of this page