• March 30, 2026
  • Last Update March 30, 2026 6:14 am
  • Brahmavara

ಕಲ್ಯಾಣಪುರ ಮೇಲ್ಸೆತುವೆ ಸಾರ್ವಜನಿಕ ಸೇವೆಗೆ

ಕಲ್ಯಾಣಪುರ ಮೇಲ್ಸೆತುವೆ ಸಾರ್ವಜನಿಕ ಸೇವೆಗೆ

ವರದಿ : ಚಿತ್ತೂರು ಪ್ರಭಾಕರ ಆಚಾರ್ಯ
ಉಡುಪಿ ಮಿತ್ರ ಪತ್ರಿಕೆ ಸುದ್ಧಿ

ಉಡುಪಿ, ಮಾ.೩೦: ಕಳೆದ ನಾಲ್ಕು ವರ್ಷಗಳ ಹಿಂದೆ ಆರಂಭವಾದ ಕಲ್ಯಾಣಪುರ ಮೇಲ್ಸೆತುವೆ ಕೊನೆಗೂ ಮಾ.೩೦ರಂದು ಸಾರ್ವಜನಿಕ ಸೇವೆಗೆ ಮುಕ್ತಗೊಂಡಿದೆ. ೨೦೨೨ರಲ್ಲಿ ಆರಂಭಗೊಂಡ ಅಂಡರ್‌ಪಾಸ್ ಹಾಗೂ ಮೇಲ್ಸೆತುವೆ ಕಾಮಗಾರಿ ಬರೋಬ್ಬರಿ ೪ ವರ್ಷಗಳ ನಂತರ ಸಾರ್ವಜನಿಕ ಸೇವೆಗೆ ಲಭಿಸಿದೆ. ಅಂಡರ್‌ಪಾಸ್ ರಸ್ತೆಯ ಕೆಲಸ ಆರಂಭವಾದ ನಂತರ ಉಡುಪಿಗೆ ಹೋಗುವಾಗ ಎಡಭಾಗದಲ್ಲಿ ಕಾಣಸಿಗುವ ಎಲ್ಲಾ ವ್ಯಾಪಾರಸ್ಥರು ವ್ಯವಹಾರವಿಲ್ಲದೆ ಆರ್ಥಿಕ ಸೋಲನ್ನು ಕಂಡರು. ಹಿಂದಿನ ಸಂಸದರು ಸೇರಿದಂತೆ

ಅಧಿಕಾರಿಗಳು, ಜನಪ್ರತಿನಿಧಿಗಳು ಕೆಲಸದ ವೇಗ ಹೆಚ್ಚಿಸಲು ಸಂಪೂರ್ಣ ವಿಫಲರಾದರು ಎಂಬ ಆರೋಪ ಸಾರ್ವಜನಿಕ ವಲಯದಲ್ಲಿ ಕೇಳಿಬಂದಿತ್ತು. ತಾಂತ್ರಿಕವಾಗಿ ಸಾಕಷ್ಟು ಮುಂದುವರಿದ ಈ ಕಾಲದಲ್ಲೂ ಬಂಡೆ ಬಂತು ಎನ್ನುವ ನೆಪದಲ್ಲಿ ಗುತ್ತಿಗೆದಾರರು ಕೆಲಸ ನಿಧಾನ ಮಾಡಲಾರಂಭಿಸಿದರು. ಬಂಡೆಯನ್ನು ಶೀಘ್ರವಾಗಿ ಒಡೆಯಲು ಮೆಶಿನರಿಗಳನ್ನು ಬಳಸಿಕೊಂಡು ಬೇಗನೆ ಬಿಟ್ಟು ಕೊಡುವ ಪ್ರಯತನ್ನ ಮಾಡಲೇ ಇಲ್ಲ.


ಕೆಲಸದ ವೇಗ ಹೆಚ್ಚಿಸಿದ ಸಂಸದ ಕೋಟ :
ಹಿಂದಿನ ಸಂಸದರು ಈ ಮೇಲ್ಸೆತುವೆ ಹಾಗೂ ಅಂಡರ್ ಪಾಸ್ ರಸ್ತೆಯ ಬಗ್ಗೆ ತಲೆ ಕೆಡಿಸಿಕೊಳ್ಳಲೇ ಇಲ್ಲ. ಆದರೆ ಕೋಟ ಶ್ರೀನಿವಾಸ ಪೂಜಾರಿಯವರು ಸಂಸದರಾದ ನಂತರ ಪದೇ ಪದೇ ಅಧಿಕಾರಿಗಳು ಹಾಗೂ ಗುತ್ತಿಗೆದಾರರ ಮೇಲೆ ಸತತ ಒತ್ತಡ ಹೇರಿ ಕೆಲಸಕ್ಕೆ ವೇಗ ಹೆಚ್ಚಿಸಿದರು. ಪೂಜಾರಿಯವರ ಪ್ರಯತ್ನದ ಫಲದಿಂದ ಕೊನೆಗೂ ರಸ್ತೆ ಹಾಗೂ ಮೇಲ್ಸೆತುವೆ ಸಂಚಾರಕ್ಕೆ ಮಾ.೩೦ರಂದು ಮುಕ್ತಗೊಂಡಿದೆ.


ಮೇಲ್ಸೆತುವೆ ಸಂಚಾರಕ್ಕೆ ಸಂಸದರಿಂದ ತುರ್ತು ಚಾಲನೆ :
ಮೇಲ್ಸೆತುವೆಯ ಅಧಿಕೃತ ಉದ್ಘಾಟನೆ ಮತ್ತೆ ನಡೆಯಲಿದ್ದು ಮಾರ್ಚ್ ೩೦ರಂದು ಪೂರ್ವಾಹ್ನ ೯.೩೦ಕ್ಕೆ ಸಂಸದ ಕೋಟ ಶ್ರೀನಿವಾಸ ಪೂಜಾರಿ ಸಾರ್ವಜನಿಕರ ಸಂಚಾರಕ್ಕೆ ತುರ್ತು ಅವಕಾಶ ಕಲ್ಪಿಸಿದರು. ಈ ಸಂದರ್ಭ ಅವರು ಮಾತನಾಡಿ ಕಲ್ಯಾಣಪುರ ಮೇಲ್ಸೆತುವೆ, ಅಂಡರ್‌ಪಾಸ್ ಸಾಕಷ್ಟು ವಿಳಂಬವಾಗಿತ್ತು ಎನ್ನುವ ದೂರು ಇದ್ದದ್ದು ಸತ್ಯ. ೨೦೨೨ರ ಆರಂಭದಲ್ಲಿ ಆರಂಭಗೊಂಡಿರುವ ಕಾಮಗಾರಿಗೆ ಸುಮಾರು ೪ ವರ್ಷಗಳ ಕಾಲ ತೆಗೆದುಕೊಂಡಿದೆ. ಬೇರೆ ಬೇರೆ ಕಾರಣಗಳಿಂದ ಹಾಗೂ ಬಂಡೆ ಬಂದ ಹಿನ್ನೆಲೆಯಲ್ಲಿ ಅಕ್ಕಪಕ್ಕದವರು ಆ ಬಂಡೆ ಒಡೆದರೆ ನಮ್ಮ ಕಟ್ಟಡಕ್ಕೆ ತೊಂದರೆಯಾಗಲಿದೆ ಎಂದು ನ್ಯಾಯಾಲಯಕ್ಕೆ ಹೋದ ಪ್ರಕರಣವೂ ಸೇರಿದಂತೆ ಹಲವಾರು ವಿಚಾರಗಳಿಂದಾಗಿ ವಿಳಂಬವಾಗಿದೆ. ಮತ್ತೆ ರಾಷ್ಟ್ರೀಯ ಹೆದ್ದಾರಿಯವರನ್ನು ಹಾಗೂ ಅಧಿಕಾರಿಗಳ ಮೇಲೆ ಒತ್ತಡ ಹೇರಿ ಕಾಮಗಾರಿಯನ್ನು ಬಹುತೇಕ ಮುಗಿಸಲಾಗಿದೆ. ಸಣ್ಣಪುಟ್ಟ ಕಾಮಗಾರಿ ಬಾಕಿ ಉಳಿದಿದೆ. ಆದರೆ ಮಳೆಗಾಲ ಬರುತ್ತಿರುವುದರಿಂದ ಮೇಲ್ಸೆತುವೆಯನ್ನು ಇಂದು ತುರ್ತು ಸಾರ್ವಜನಿಕೆ ಸೇವೆಗೆ ಬಿಡುಗಡೆ ಮಾಡುತ್ತಿದ್ದೇವೆ. ಅಧಿಕೃತ ಉದ್ಘಾಟನೆಯನ್ನು ಶಾಸಕ ಯಶಪಾಲ್ ಸುವರ್ಣ ಹಾಗೂ ಇನ್ನಿತರರ ಜೊತೆಗೂಡಿ ಮತ್ತೆ ಮಾಡಲಿದ್ದೇವೆ. ವಾಹನದಟ್ಟಣೆ ನಿವಾರಣೆಗಾಗಿ ಈ ಮೇಲ್ಸೆತುವೆಯನ್ನು ಬಿಡುಗಡೆ ಮಾಡುತ್ತಿದ್ದು ಸಹಕರಿಸಿದ ಕೇಂದ್ರ ಸಚಿವ ಗಡ್ಗರಿಯವರಿಗೆ, ಎಲ್ಲಾ ಅಧಿಕಾರಿಗಳಿಗೆ, ಸಾರ್ವಜನಿಕರಿಗೆ, ಜನಪ್ರತಿನಿಧಿಗಳಿಗೆ, ಅನುಭವ ಹಂಚಿಕೊಂಡವರಿಗೂ ಕೃತಜ್ಞತೆ ಅರ್ಪಿಸಿಕೊಳ್ಳುತ್ತೇವೆ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.

administrator

Related Articles

Leave a Reply

Your email address will not be published. Required fields are marked *

You cannot copy content of this page