ಉಡುಪಿ ಮಿತ್ರ ಪತ್ರಿಕೆ ಸುದ್ಧಿ: ಬ್ರಹ್ಮಾವರ,ಜೂ.30: ಬ್ರಹ್ಮಾವರ ತಾಲೂಕು ಕುಂಜಾಲಿನಲ್ಲಿ ಗೋವಿನ ತಲೆ ಕಡಿದು ಎಸೆದು ಹೋದ ಆರೋಪಿಗಳನ್ನು ಶೀಘ್ರ ಬಂಧಿಸಿದ ಪೊಲೀಸರಿಗೆ ಬ್ರಹ್ಮಾವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಘವೇಂದ್ರ ಶೆಟ್ಟಿ ಕರ್ಜೆ ಅಭಿನಂದನೆ ಸಲ್ಲಿಸಿದ್ದಾರೆ.
“ಈ ಘಟನೆ ಕೋಮು ಸೌಹಾರ್ದ ಕೆಡಿಸುವಂತಹ ಘಟನೆಯಾಗಿರುವುದರಿಂದ ತಕ್ಷಣ ಆರೋಪಿಗಳನ್ನು ಬಂಧಿಸುವಂತೆ ಆಗ್ರಹಿಸಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಪೊಲೀಸರಿಗೆ ದೂರು ನೀಡಿದ್ದೆವು. ಅಲ್ಲದೆ ನಮ್ಮ ಪಕ್ಷದ ಮುಖಂಡರು ಹಿರಿಯ ಅಧಿಕಾರಿಗಳಿಗೂ ತಕ್ಷಣ ಆರೋಪಿಗಳನ್ನು ಬಂಧಿಸುವಂತೆ ಸೂಚಿಸಿದ್ದರು. ಬ್ರಹ್ಮಾವರ ಪರಿಸರದಲ್ಲಿ ಕೋಮು ಸೌಹಾರ್ದತೆ ಇದ್ದು ಈ ಸಂದರ್ಭದಲ್ಲಿ ಶಾಂತಿ ಕಾಪಾಡಿಕೊಂಡ ಪ್ರತಿಯೊಬ್ಬರಿಗೂ ಬ್ಲಾಕ್ ಕಾಂಗ್ರೆಸ್ ಕೃತಜ್ಞತೆ ಸಲ್ಲಿಸಿಕೊಳ್ಳುತ್ತದೆ. ಅಂತೆಯೇ ಶೀಘ್ರ ಆರೋಪಿಗಳನ್ನು ಬಂಧಿಸಿದ ಬ್ರಹ್ಮಾವರ ಪೊಲೀಸರಿಗೂ, ಮಾರ್ಗದರ್ಶನ ನೀಡಿದ ಜಿಲ್ಲೆಯ ಎಲ್ಲಾ ಹಿರಿಯ ಪೊಲೀಸ್ ಅಧಿಕಾರಿಗಳಿಗೂ ಕೃತಜ್ಞತೆ ಸಲ್ಲಿಸಿಕೊಳ್ಳುತ್ತೇವೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಘವೇಂದ್ರ ಶೆಟ್ಟಿ ಕರ್ಜೆ ತಿಳಿಸಿದ್ದಾರೆ.
