ಉಡುಪಿಮಿತ್ರ ಪತ್ರಿಕೆ ಸುದ್ಧಿ: ಉಡುಪಿ ಜೂ.೩೦: ಕುಂಜಾಲು ಸರ್ಕಲ್‌ನಲ್ಲಿ ರಸ್ತೆಯ ಮೇಲೆ ಗೋವಿನ ರುಂಡ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ೬ ಮಂದಿಯನ್ನು ಬಂಧಿಸಿರುವ ಕುರಿತು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ ಶಂಕರ್ ಮಾಹಿತಿ ನೀಡಿದ್ದಾರೆ.
ಬಂಧಿತರನ್ನು ಕೇಶವ, ರಾಮಣ್ಣ, ಪ್ರಸಾದ್, ನವೀನ್, ಸಂದೇಶ, ರಾಜೇಶ್ ಎಂದು ಗುರುತಿಸಲಾಗಿದೆ. ಎಸ್ಪಿಯವರು ನೀಡಿರುವ ಮಾಹಿತಿಯ ಪ್ರಕಾರ ಕೇಶವ ತನ್ನ ಮನೆಯಲ್ಲಿದ್ದ ದನವನ್ನು ರಾಮಣ್ಣನಿಗೆ ಮಾಂಸ ಮಾಡಲು ನೀಡಿದ್ದು ಅದರಂತೆ ಆರೋಪಿಗಳು ಮಾಂಸ ಮಾಡಿ ತ್ಯಾಜ್ಯವನ್ನು ಎಸೆಯಲು ಸ್ಕೂಟರಿನಲ್ಲಿ ರಾತ್ರಿ ತೆರಳುತ್ತಿದ್ದಾಗ ತ್ಯಾಜ್ಯ ರಸ್ತೆಗೆ ಬಿದ್ದಿದೆ. ಆರೋಪಿಗಳಲ್ಲಿ ಪ್ರಸಾದ್, ರಾಮಣ್ಣ, ರಾಜೇಶ್ ಹಾಗೂ ನವೀನ್‌ನನ್ನು ಬಂಧಿಸಲಾಗಿದೆ. ಒಬ್ಬ ಆರೋಪಿ ತಲೆ ಮರೆಸಿಕೊಂಡಿದ್ದಾನೆ. ಈ ಕೃತ್ಯಕ್ಕೆ ಬಳಸಿರುವ ಸ್ಕೂಟಿ, ಹಾಗೂ ಕಾರನ್ನು ವಶಕ್ಕೆ ಪಡೆಯಲಾಗಿದೆ.
ದನದ ರುಂಡ ಪತ್ತೆಯಾದ ವಿಷಯಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ ನಾನಾ ರೀತಿಯ ಪೋಸ್ಟ್‌ಗಳನ್ನು ಹಾಕಿದ್ದಾರೆ. ಪೊಲೀಸರು ಸರಿಯಾಗಿ ಕೆಲಸ ಮಾಡುವಾಗ ಈ ರೀತಿಯಲ್ಲಿ ಕೋಮುಧ್ವೇಷ ಉಂಟು ಮಾಡುವ ಪೋಸ್ಟ್‌ಗಳನ್ನು ಹಾಕುವುದು ಸರಿಯಲ್ಲ. ಹಾಗೆ ಮಾಡಿದಲ್ಲಿ ಕಾನೂನು ರೀತ್ಯಾ ಕ್ರಮ ಕೈಗೊಳ್ಳಬೇಕಾಗುತ್ತದೆ. ಉಡುಪಿ ಜಿಲ್ಲೆಯಲ್ಲಿರುವ ಕೋಮು ಸೌಹಾರ್ದತೆಯನ್ನು ಉಳಿಸಿಕೊಂಡು ಹೋಗಲು ಎಲ್ಲರೂ ಸಹಕರಿಸಬೇಕು ಎಂದು ಎಸ್.ಪಿ. ತಿಳಿಸಿದ್ದಾರೆ.
ಆರೋಪಿಗಳ ಬಂಧನದಿಂದ ಕೋಮು ಸಂಘರ್ಷ ಏರ್ಪಡುವುದು ತಪ್ಪಿದಂತಾಗಿದೆ. ರುಂಡ ಕುಂಜಾಲಿನ ಸರ್ಕಲ್‌ನಲ್ಲಿ ಭಗವಧ್ವಜವಿರುವ ಸ್ಥಳದಲ್ಲಿಯೇ ಪತ್ತೆಯಾದುದರಿಂದ ಸಹಜವಾಗಿ ಹಿಂದೂಗಳು ಆಕ್ರೋಷ ವ್ಯಕ್ತಪಡಿಸಿದ್ದರು. ಪೊಲೀಸರಿಗೆ ರಾತ್ರಿ ಸ್ಥಳಿಯರಿಂದ ಮಾಹಿತಿ ಸಿಗುತ್ತಿದ್ದಂತೆ ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ರುಂಡವನ್ನು ತೆಗೆದು ಮಹಜರು ನಡೆಸಿ ಕೃತ್ಯ ಎಸಗಿದವರ ಪತ್ತೆಗೆ ಕಾರ್‍ಯಾಚರಣೆ ಆರಂಭಿಸಿದ್ದರು. ಪೊಲೀಸ್ ತಂಡಗಳು ಸ್ಥಳಿಯ ಎಲ್ಲಾ ಸಿಸಿ ಕೆಮರಾಗಳನ್ನು ಪರಿಶೀಲಿಸಿದ್ದರು. ಆದರೆ ರಸ್ತೆಗೆ ಸರಿಯಾದ ಸಿಸಿ ಕೆಮರಾ ಇಲ್ಲದೇ ಇರುವುದರಿಂದ ಸ್ಪಷ್ಟ ಮಾಹಿತಿ ಸಿಕ್ಕಿರುವುದಿಲ್ಲ. ಒಂದು ಸಿಸಿ ಕೆಮರಾದಲ್ಲಿ ಕಂಡು ಬಂದ ಕಾರೊಂದರ ಮೇಲೆ ಸಂದೇಹ ಬಂದು ತನಿಖೆಯನ್ನು ಮುಂದುವರಿಸಿ ಕೃತ್ಯ ನಡೆಸಿದವರನ್ನು ಪೊಲೀಸರು ಬಂಧಿಸಿದ್ದಾರೆ.
ರುಂಡ ಪತ್ತೆಯಾದಾಗ ಉದ್ದೇಶದಲ್ಲಿ ಹೊರಗಿನಿಂದ ಯಾರಾದರೂ ಬಂದು ಎಸೆದಿರಬಹುದೇ ಎಂಬ ಚರ್ಚೆಗಳು ನಡೆದಿದ್ದವು. . ಇಲ್ಲಿರುವ ಇನ್ನೊಂದು ಕೋಮಿನವರು ಎಲ್ಲರೊಂದಿಗೂ ಉತ್ತಮ ಬಾಂಧವ್ಯ ಹೊಂದಿದವರು. ಕುಂಜಾಲು ನೀಲಾವರ ಕ್ರಾಸ್ ಸಮೀಪದಲ್ಲಿ ವಾಸಿಸುವ ಇವರೆಲ್ಲರ ಬಗ್ಗೆ ಇಲ್ಲಿನ ಹಿಂದೂಗಳು ಸದಭಿಪ್ರಾಯ ಹೊಂದಿದ್ದರು.
ಆದ್ದರಿಂದ ಹೊರಗಿನವರು ಬಂದು ಈ ಕೃತ್ಯ ನಡೆಸಿರಬಹುದು ಎಂಬ ಸಂದೇಹ ವ್ಯಕ್ತಪಡಿಸಿದ್ದರು. ಬಂಧಿತ ಆರೋಪಿಗಳಲ್ಲಿ ಸಂದೇಶ ಪೂಜಾರಿ ಕರುವನ್ನು ಸ್ವಿಫ್ಟ್ ಕಾರಿನಲ್ಲಿ ತುಂಬಿಸಿಕೊಂಡು ಬಂದಿದ್ದ ಎಂದು ಹೇಳಲಾಗಿದೆ.
24 ಗಂಟೆಯೊಳಗೆ ಬಂಧಿಸುವಂತೆ ಶಾಸಕರ ಆಗ್ರಹ :
ಕುಂಜಾಲು ರಾಮ ಮಂದಿರದಲ್ಲಿ ಭಾನುವಾರ ಸಂಜೆ ಹಿಂದೂ ಸಂಘಟನೆ ಹಾಗೂ ಬಿಜೆಪಿ ಕಾರ್ಯಕರ್ತರು ಸಭೆ ನಡೆಸಿದ್ದಾರೆ. ಸಭೆಯಲ್ಲಿ ಭಾಗವಹಿಸಿದ್ದ ಉಡುಪಿ ಶಾಸಕ ಯಶಪಾಲ್ ಸುವರ್ಣ ಅಮಾನುಷ ಕೃತ್ಯ ನಡೆಸಿದ ವ್ಯಕ್ತಿಗಳನ್ನು ೨೪ ಗಂಟೆಯೊಳಗೆ ಬಂಧಿಸುವಂತೆ ಆಗ್ರಹಿಸಿದ್ದರು. ಶಾಸಕರು ಮಾತನಾಡಿ ಈ ಘಟನೆಯ ಮೂಲಕ ಹಿಂದೂ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗಿದ್ದು, ಪೊಲೀಸ್ ಇಲಾಖೆ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ತಕ್ಷಣ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಬೇಕು. ಜಿಲ್ಲೆಯಲ್ಲಿ ಅವ್ಯಾಹತವಾಗಿರುವ ಗೋ ಕಳ್ಳತನ ಜಾಲವನ್ನು ತಕ್ಷಣ ಪತ್ತೆಹಚ್ಚಿ ಮಟ್ಟ ಹಾಕುವ ಕೆಲಸ ಮಾಡಬೇಕು ಎಂದು ಆಗ್ರಹಿಸಿದ್ದರು. ೨೪ ಗಂಟೆಯೊಳಗೆ ಆರೋಪಿಗಳನ್ನು ಬಂಧಿಸದೇ ಇದ್ದಲ್ಲಿ ಮುಂದೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಅವರು ಎಚ್ಚರಿಸಿದ್ದರು.
ಬ್ಲಾಕ್ ಕಾಂಗ್ರೆಸ್ ವತಿಯಿಂದ ಪೊಲೀಸರಿಗೆ ದೂರು :
ಘಟನೆಯ ಬಗ್ಗೆ ಕಾಂಗ್ರೆಸ್ ಅಧ್ಯಕ್ಷ ರಾಘವೇಂದ್ರ ಶೆಟ್ಟಿಯವರ ನೇತೃತ್ವದಲ್ಲಿ ಬ್ರಹ್ಮಾವರ ಠಾಣೆಯಲ್ಲಿ ದೂರು ನೀಡಿ ತಕ್ಷಣ ಬಂಧಿಸುವಂತೆ ಆಗ್ರಹಿಸಿದ್ದರು. ಇದೀಗ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದರಿಂದ ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರು ಪೊಲೀಸರನ್ನು ಅಭಿನಂದಿಸಿದ್ದಾರೆ.
