ವರದಿ: ಚಿತ್ತೂರು ಪ್ರಭಾಕರ ಆಚಾರ್ಯ,
ಉಡುಪಿಮಿತ್ರ ಪತ್ರಿಕೆ ಸುದ್ಧಿ :
ವಂಡ್ಸೆ, ಜು.೨೬: ದೇವರ ಪ್ರೀತ್ಯರ್ಥವಾದಂತಹ ಯಕ್ಷಗಾನ ನಿಂತ ನೀರಾಗಬಾರದು ಅದು ಸದಾ ಹರಿಯುತ್ತಾ ಎಲ್ಲರಿಗೂ ಸಂತೋಷವನ್ನು ನೀಡುತ್ತಾ ಮತ್ತಷ್ಟು ಬೆಳೆಯಬೇಕು ಬೆಳಗಬೇಕು. ಆ ನಿಟ್ಟಿನಲ್ಲಿ ಈ ಯಕ್ಷಗಾನ ಸಂಘ ಸತತ ೧೦ ವರ್ಷಗಳಿಂದ ಉಚಿತವಾಗಿ ಮಕ್ಕಳಿಗೆ ಯಕ್ಷಗಾನ ತರಬೇತಿಯನ್ನು ನೀಡಿ ವೇದಿಕೆಯನ್ನು ಕಲ್ಪಿಸಿ ಅವರ ಪ್ರತಿಭೆಗೆ ಪ್ರೋತ್ಸಾಹ ನೀಡುತ್ತಿರುವುದು ಶ್ಲಾಘನೀಯ. ದಶಮಾನೋತ್ಸವದ ಪ್ರಯುಕ್ತ ವೃದ್ಧರಿಗೆ ವಿಕಲಚೇತನರಿಗೆ ಕಲೆಯ ರಸದೌತಣವನ್ನು ಉಣಬಡಿಸಲು ಹೊರಟ ಈ ಸಂಘಕ್ಕೆ ಶುಭವಾಗಲಿ ಎಂದು ಜ್ಯೋತಿಷಿ ವೇದಮೂರ್ತಿ ಶಾರ್ಕೆ ರಾಮಕೃಷ್ಣ ಭಟ್ ನುಡಿದರು. ಅವರು ಕೆಂಚನೂರು ಶ್ರೀ ಕ್ಷೇತ್ರ ಶಂಕರಪ್ಪನಕೊಡ್ಲು ಇಲ್ಲಿನ ಶ್ರೀ ಲಕ್ಷ್ಮಿ ವೆಂಕಟರಮಣ ಕೃಪಾಪೋಷಿತ ಯಕ್ಷಗಾನ ಕಲಾಸಂಗ ಇದರ ದಶಮಾನೋತ್ಸವದ ಅಂಗವಾಗಿ ಜು. ೨೬ರಂದು ‘ಹೆಜ್ಜೆ ಗೆಜ್ಜೆ’ ಶೀರ್ಷಿಕೆ ಅಡಿಯಲ್ಲಿ ವಿನೂತನವಾಗಿ ದಶಮಾನೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದ ಪ್ರಧಾನ ಅರ್ಚಕರಾದ ಶ್ರೀ ಸುಬ್ರಮಣ್ಯ ಭಟ್ ಕಾರ್ಯಕ್ರಮಕ್ಕೆ ಶುಭಕೋರಿದರು. ಸಂಘದ ವ್ಯವಸ್ಥಾಪಕ ಶ್ರೀ.ಗುರುರಾಜ್ ಭಟ್ ಮಾತನಾಡಿ ಮಕ್ಕಳಲ್ಲಿ ಯಕ್ಷಗಾನ ಕಲೆಯ ಅಭಿರುಚಿ ಹೆಚ್ಚಿಸುವ ಉದ್ದೇಶದಲ್ಲಿ ಆರಂಭಿಸಿದ ಈ ಸಂಘ ದಶಮಾನೋತ್ಸವದ ಸಂಭ್ರಮದಲ್ಲಿದೆ. ದಶಮಾನೋತ್ಸವದ ಅಂಗವಾಗಿ ಎಲ್ಲಾ ಅನಾಥಾಶ್ರಮದ ವಾಸಿಗಳು ಯಕ್ಷಗಾನ ವೀಕ್ಷಿಸಲಿ ಎಂಬ ಉದ್ದೇಶದಲ್ಲಿ ಅವರಿರುವ ಅನಾಥಾಶ್ರಮಕ್ಕೆ ತೆರಳಿ ಪ್ರದರ್ಶನ ನೀಡಲಿದ್ದೇವೆ ಎಂದರು.
ಈ ಸಂದರ್ಭದಲ್ಲಿ ಸಂಘದ ಗುರುಗಳಾದ ಶ್ರೀ ನವೀನ್ ಕೋಟ, ಕಾರ್ಯದರ್ಶಿ ಪ್ರವೀಣ್ ಎಂ ಬಾಳಿಕೆರೆ, ಹಿಮ್ಮೇಳವಾದಕರಾದ ಭಾಸ್ಕರ್ ಆಚಾರ್ಯ ಕನ್ಯಾನ, ಗಣೇಶ್ ಶೆಣೈ ಶಿವಪುರ, ಶ್ರೀಮತಿ ನಿರ್ಮಲ ನವೀನ ಕೋಟ ಉಪಸ್ಥಿತರಿದ್ದರು.
ಶ್ರೀ.ನಾಗರಾಜ ಭಟ್ ಸ್ವಾಗತಿಸಿ ಶ್ರೀ. ವಿಘ್ನರಾಜ ಭಟ್ ವಂದಿಸಿದರು. ಗುರುರಾಜ್ ಭಟ್ ನಿರೂಪಿಸಿದರು. ಸಭೆಯ ನಂತರ ಸಂಘದ ಹಾಗೂ ಅತಿಥಿಕಲಾವಿದರಿಂದ ‘ಶ್ರೀ ಹರಿ ಕಾರುಣ್ಯ ಎಂಬ ಯಕ್ಷಗಾನ ಪ್ರದರ್ಶನಗೊಂಡಿತು.



