ವರದಿ : ಚಿತ್ತೂರು ಭಾಕರ ಆಚಾರ್ಯ
ಉಡುಮಿತ್ರ ಪತ್ರಿಕೆ ಸುದ್ಧಿ :
ಬ್ರಹ್ಮಾವರ,ಸೆ.೧: ಆರೂರು ಗ್ರಾಮದ ಅಡ್ಜಿಲ್ ಎಂಬಲ್ಲಿ ಹಳೆಯ ಕೊಲೆ ಯತ್ನ ಪ್ರಕರಣಕ್ಕೆ ಸಂಬಂಧಿಸಿ ಗಂಡನನ್ನು ಪೊಲೀಸರು ಬಂಧಿಸಲು ವಾರಂಟ್ ಹಿಡಿದು ಬಂದಿರುವುದನ್ನು ಕಂಡು ಹೆದರಿ ಸುಶ್ಮಿತಾ (೨೩) ಎಂಬವರು ತನ್ನ ಒಂದೂವರೆ ವರ್ಷದ ಮಗುವನ್ನು ತಾನೇ ನೇಣು ಬಿಗಿದು ಕೊಂದು ಆಮೇಲೆ ತಾನೂ ಆತ್ಮಹತ್ಯೆ ಮಾಡಿಕೊಂಡ ಘಟನೆ ಜರುಗಿದೆ.
ಸುಶ್ಮಿತಾ ಎಂಬವರ ಗಂಡ ಸುಭಾಶ್ ವಿರುದ್ಧ ೨೦೦೯ರಲ್ಲಿ ಕೊಲೆ ಯತ್ನ ಪ್ರಕರಣ ದಾಖಲಾಗಿ ಶಿಕ್ಷೆ ಪ್ರಕಟವಾಗಿತ್ತು. ಶನಿವಾರ ಪೋಲೀಸರು ಸುಭಾಷ್‌ನನ್ನು ಹುಡುಕಿಕೊಂಡು ಮನೆಗೆ ಬಂದಿದ್ದರು. ಆದರೆ ಈ ಸಂದರ್ಭ ಸುಭಾಷ್ ವಿಮಾನ ನಿಲ್ದಾಣಕ್ಕೆ ವ್ಯಕ್ಯಿಯೊಬ್ಬರನ್ಬು ಬಿಡಲು ಹೋಗಿದ್ದು ಪೊಲೀಸರಿಗೆ ಸಿಕ್ಕಿಲ್ಲ. ಪೊಲೀಸರು ಸೆ.೧ ರಂದು ಬೆಳಿಗ್ಗೆ ಪುನಃ ಸುಭಾ಼ಷ್ನನ್ನು ಹುಡುಕಿಕೊಂಡು ಮನೆಗೆ ಬಂದಿದ್ದರು. ತಮ್ಮ ಮೇಲೆ ಶಿಕ್ಷೆ ಪ್ರಕಟಗೊಂಡ ಸುದ್ಧಿ ತಿಳಿದು ಮೇಲ್ಮನವಿ ಸಲ್ಲಿಸಲು ವಕೀಲರನ್ನು ಸಂಪರ್ಕಿಸಲು ಸುಭಾಷ್ ಬೆಂಗಳೂರಿಗೆ ಹೋಗಿದ್ದರು. ಇಂದು ಬೆಳಿಗ್ಗೆ ಪೋಲೀಸರು ಪುನಃ ಬಂದದ್ದರಿಂದ ಹೆದರಿದ ಸುಶ್ಮಿತಾ ನನ್ನ ಗಂಡನನ್ನು ಪೊಲೀಸರು ಬಂಧಿಸುತ್ತಾರೆ ಎಂದು ಹೆದರಿ ಮೊದಲು ಮಗುವನ್ನು ನೇಣಿಗೆ ಹಾಕಿ ನಂತರ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಪ್ರಕರಣದ ಹಿನ್ನೆಲೆ :
ಅಡ್ಜಿಲ್‌ನ ವಿನ್ಸೆಂಟ್ ಪಾಯಸ್ ಎಂಬವರು ಸುಭಾಷ್, ಸಂತೋಷ್, ಸುನಂದ, ಸುದರ್ಶನ ನಾಯರಿ, ನಳಿನಿ ಎಂಬವರ ವಿರುದ್ಧ ಕೊಲೆ ಯತ್ನ ಪ್ರಕರಣ ದಾಖಲಿಸಿದ್ದು ಈ ಪ್ರಕರಣದಲ್ಲಿ ಆರೋಪಿಗಳಿಗೆ ಶಿಕ್ಷೆ ಪ್ರಕಟವಾಗಿತ್ತು ತೀರ್ಪಿನ ವಿರುದ್ಧ ಹೈಕೋರ್ಟಿಗೆ ಮೇಲ್ಮನವಿ ಸಲ್ಲಿಸಿದ್ದರು. ಆದರೆ ವಕೀಲರ ಸಮಸ್ಯೆಯಿಂದ ಅಲ್ಲಿಯೂ ಶಿಕ್ಷೆ ಖಾಯಂ ಆಗಿತ್ತು. ಕೋರ್ಟ್‌ನಿಂದ ವಾರಂಟ್ ಜಾರಿಯಾಗಿದ್ದು ಪೊಲೀಸರು ವಾರಂಟ್ ಹಿಡಿದು ಶನಿವಾರ ಮನೆಗೆ ಬಂದಾಗ ಆರೋಪಿಗಳು ಸಿಕ್ಕಿರುವುದಿಲ್ಲ. ಪೊಲೀಸರು ಬಂದ ವಿಷಯ ತಿಳಿದು ತಕ್ಷಣ ಮೇಲ್ಮನವಿ ಸಲ್ಲಿಸಲು ವಕೀಲರನ್ನು ಸಂಪರ್ಕಿಸಲು ಆರೋಪಿಗಳೆಲ್ಲರು ಬೆಂಗಳೂರಿಗೆ ಹೋಗಿದ್ದರು.

ಸೆ.1ರಂದು ಸುಭಾಶ್ ಮನೆಯಲ್ಲಿ ಸುಶ್ಮಿತಾ, ಸುಶ್ಮಿತಾಳ ಮಗು, ಅಮಿತಾ ಎಂಬವರು ಇದ್ದರು. ಅಮಿತಾ ರಾಷ್ಟ್ರೋತ್ಥಾನ ಶಾಲೆಯಲ್ಲಿ ಕೆಲಸ ಮಾಡಿಕೊಂಡಿದ್ದು ಶಾಲೆಯ ಕೆಲಸಕ್ಕೆ ಹೋಗಿದ್ದರು. ಸೆ.1ರಂದು ಬೆಳಿಗ್ಗೆ ಪುನಃ ಪೊಲೀಸರು ಸುಭಾಶ್ ಹಾಗೂ ಉಳಿದವರನ್ನು ಹುಡುಕಿಕೊಂಡು ಬಂದಿದ್ದರು. ಈ ಸಂದರ್ಭ ಸುಶ್ಮಿತಾಳಿಗೆ ಅರೆಸ್ಟ್ ವಾರಂಟ್ ಇದೆ ಎಂಬುದು ಪೊಲೀಸರಿಂದ ತಿಳಿದು ಬಂತು. ಅರೆಸ್ಟ್ ವಾರಂಟ್ ಎಂದಿದ್ದರಿಂದ ಹೆದರಿದ ಸುಶ್ಮಿತಾ ಪೊಲೀಸರು ಹೋದ ನಂತರ ತನ್ನ ಸಂಬಂಧಿ ಕುಂದಾಪುರದಲ್ಲಿದ್ದ ಅನುಶ್ರೀಯವರಿಗೆ ಫೋನ್ ಮಾಡಿ ‘ಪೊಲೀಸರು ಬಂದು ನನ್ನ ಗಂಡನ ಮೇಲೆ ಅರೆಸ್ಟ್ ವಾರಂಟ್ ಇದೆ ಎಂದು ಹೇಳಿದ್ದಾರೆ. ನನಗೆ ಹೆದರಿಕೆ ಆಗುತ್ತಿದೆ” ಎಂದು ತಿಳಿಸಿದ್ದಳು. ಆಗ ಅನುಶ್ರೀ ಸುಶ್ಮಿತಾಳಿಗೆ ಧೈರ್ಯ ಹೇಳಿ ‘ಹೆದರಬೇಡ, ವಕೀಲರ ವ್ಯವಸ್ಥೆ ಹಾಗೂ ಹಣದ ವ್ಯವಸ್ಥೆ ಮಾಡಿದ್ದೇನೆ, ಮೇಲ್ಮನವಿಗೆ ಹೋಗಲಿದ್ದೇವೆ’ ಎಂದು ಹೇಳಿದ್ದರು. ಮಧ್ಯಾಹ್ನ ಪುನಃ ಸುಮಾರು 1.30 ಗಂಟೆಗೆ ಅನುಶ್ರೀ ಸುಶ್ಮಿತಾಳಿಗೆ ೬ ಬಾರಿ ಫೋನ್ ಮಾಡಿದರೂ ಸುಶ್ಮಿತಾ ಫೋನ್ ರಿಸಿವ್ ಮಾಡದೇ ಇರುವುದರಿಂದ ಬ್ರಹ್ಮಾವರದ ದೀಪ್ತಿ ಎಂಟರ್‌ಪ್ರೈಸಸ್‌ನಲ್ಲಿ ಕೆಲಸ ಮಾಡಿಕೊಂಡಿರುವ ಶರತ್ ಎಂಬವರಿಗೆ ಫೋನ್ ಮಾಡಿ ಸುಶ್ಮಿತಾಳ ಮನೆ ಸಮೀಪ ಹೋಗಿ ನೋಡಲು ಹೇಳಿದ್ದರು. ಶರತ್ ಸುಶ್ಮಿತಾಳ ಮನೆಗೆ ಹೋದಾಗ ಮನೆ ಬಾಗಿಲು ಹಾಕಿಕೊಂಡಿದ್ದು ಮನೆಯ ಹಿಂಬದಿಯ ಕಿಟಕಿಯಿಂದ ನೋಡಿದಾಗ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡು ಬಂದಿತ್ತು.
ಡೆತ್ ನೋಟ್ ಬರೆದಿಟ್ಟಿದ್ದು ‘ ರಿ ಸಾರಿ, ನಾನು ಏನು ತಪ್ಪು ಮಾಡಿದ್ದರೂ ಕ್ಷಮಿಸಿ, ನನ್ನ ಮಗುವನ್ನು ನಾನು ಇದ್ದಲ್ಲಿಗೆ ಕರೆದುಕೊಂಡು ಹೋಗುತ್ತಾ ಇದ್ದೇನೆ. ನನ್ನ ಸಾವಿಗೆ ನಾನೇ ಕಾರಣ’ ಎಂದು ಬರೆದಿದ್ದಳು ಎಂದು ದೂರು ನೀಡಿರುವ ಅನುಶ್ರೀ ಬಿ.ಶೆಟ್ಟಿ ತಿಳಿಸಿದ್ದಾರೆ.
ಪ್ರೀತಿಸಿ ಮದುವೆಯಾಗಿದ್ದರು.
ಸುಭಾಶ್ ಹಾಗೂ ಸುಶ್ಮಿತಾ ಪ್ರೀತಿಸಿ ಮದುವೆಯಾಗಿದ್ದು ಪ್ರತ್ಯೇಕ ವಾಸಿಸುತ್ತಿದ್ದರು. ಸುಶ್ಮಿತಾ ಮನೆಯವರಿಂದ ಅಂತರ ಕಾಯ್ದುಕೊಂಡಿದ್ದರು. ಗಂಡನನ್ನು ಪೊಲೀಸರು ಬಂಧಿಸಿದರೆ ನನಗೆ ನನ್ನ ಮನೆಯವರ ಸಹಕಾರವೂ ಸಿಗಲ್ಲ ಎಂದು ಭಾವಿಸಿರಬಹುದು. ಆಕೆಗೆ ಆರ್ಥಿಕ ಸಮಸ್ಯೆಯೂ ಇದ್ದು ‘ಮಗುವಿಗೆ ಹಾಲು ತಂದು ಕೊಡಲು ಕೂಡ ನನ್ನಲ್ಲಿ ಹಣ ಇಲ್ಲ ಎಂದು ಹೇಳಿಕೊಂಡಿದ್ದಳಂತೆ. ಹಣದ ಸಮಸ್ಯೆಯೂ ಸಾವಿಗೆ ಕಾರಣ ಇರಬಹುದು ಎನ್ನುತ್ತಾರೆ ಸ್ಥಳಿಯರು.

ಎಸ್ಪಿ ಭೇಟಿ :
ಘಟನಾ ಸ್ಥಳಕ್ಕೆ ಎಸ್ಪಿ ಹರಿರಾಮ ಶಂಕರ್, ಡಿವೈಎಸ್‌ಪಿ ಪ್ರಭು ಡಿ. ಟಿ, ಸರ್ಕಲ್ ಇನ್ಸ್‌ಪೆಕ್ಟರ್ ಗೋಪಿಕೃಷ್ಣ, ಬ್ರಹ್ಮಾವರ ಪಿ.ಎಸ್.ಐ ಅಶೋಕ್ ಮಾಳಬಾಗಿ ಭೇಟಿ ನೀಡಿ ತನಿಖೆ ಕೈಗೊಂಡಿದ್ದರು. ವಿಧಿ ವಿಜ್ಞಾನ ಪರಿಣಿತ ತಂಡ ಆಗಮಿಸಿ ಸಾಕ್ಷ್ಯ ಸಂಗ್ರಹಿಸಿದೆ.
ಎಸ್.ಪಿ. ಹೀಗೆಂದರು :
ಇಂದು ಮಧ್ಯಾಹ್ನ1.00ಗಂಟೆಯ ನಂತರ ಬ್ರಹ್ಮಾವರ ಆರೂರು ಗ್ರಾಮದಲ್ಲಿ ಸುಶ್ಮಿತಾ ಎಂಬವರು ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಅವರೊಂದಿಗೆ ಅವರು ಮಗು ಕೂಡ ನೇಣು ಹಾಕಿದ ಸ್ಥಿತಿಯಲ್ಲಿ ಕಂಡು ಬಂದಿದೆ. ಪ್ರಾಥಮಿಕ ತನಿಖೆಯಲ್ಲಿ ಅವರು ಆತ್ಮಹತ್ಯೆ ಮಾಡಿಕೊಳ್ಳುವ ಮೊದಲು ಮಗುವನ್ನು ನೇಣಿಗೆ ಹಾಕಿದ ನಂತರ ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡು ಬಂದಿದೆ. ಘಟನಾ ಸ್ಥಳದಲ್ಲಿ ಡೆತ್‌ನೋಟ್ ಕೂಡ ಸಿಕ್ಕಿದ್ದು ಈ ಘಟನೆಗೆ ನಾನೇ ಹೊಣೆಗಾರಳು ಎಂದು ಬರೆದಿದ್ದರು. ಅವರ ಗಂಡ ಹಾಗೂ ಕುಟುಂಬದವರ ಮೇಲೆ ೨೦೦೯ರಲ್ಲಿ ೩೦೭ ಕೇಸು ಇದ್ದು ಶಿಕ್ಷೆ ಪ್ರಕಟಗೊಂಡಿದೆ. ಅದು ಮೊನ್ನೆಯಷ್ಟೇ ಹೈಕೋರ್ಟ್‌ನಲ್ಲೂ ಶಿಕ್ಷೆ ಕನ್ಫರ್ಮ್ ಆಗಿದೆ. ಆ ವಿಷಯದಲ್ಲಿ ನೊಂದು ಮಾಡಿಕೊಂಡಿರಬಹುದು ಎಂಬ ಮಾಹಿತಿ ದೊರಕಿದೆ. ಹೆಚ್ಚಿನ ವಿಚಾರ ಇದ್ದಲ್ಲಿ ತನಿಖೆಯಲ್ಲಿ ಗೊತ್ತಾಗಲಿದೆ ಎಂದು ತಿಳಿಸಿದ್ದಾರೆ.




