- ಚಿತ್ತೂರು ಪ್ರಭಾಕರ ಆಚಾರ್ಯ
ಉಡುಪಿಮಿತ್ರ ಪತ್ರಿಕೆ ಸುದ್ಧಿ:
ಶ್ರೀ ಲಕ್ಷ್ಮಿ ವೆಂಕಟರಮಣ ಕೃಪಾಪೋಷಿತ ಯಕ್ಷಗಾನ ಕಲಾ ಸಂಘ(ರಿ.) ಶಂಕರಪ್ಪನ ಕೊಡ್ಲು- ಕೆಂಚನೂರು ದಶಮ ಸಂಭ್ರಮದಲ್ಲಿದ್ದು ನವೆಂಬರ್ ೧೪ರಂದು ದೇವಸ್ಥಾನದ ವಾರ್ಷಿಕ ದೀಪೋತ್ಸವ ನಡೆಯಲಿದ್ದು ಆ ದಿನ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಬೆಳಿಗ್ಗೆ ಹೂವಿನ ಕೋಲು, ನಂತರ ಯಕ್ಷಗಾನ ಪೂರ್ವ ರಂಗ, ತಾಳಮದ್ದಳೆ, ಸಂಘದ ಬಾಲ ಕಲಾವಿದರಿಂದ ಗುರುದಕ್ಷಿಣೆ, ಅಭಿಮನ್ಯು ಕಾಳಗ ಯಕ್ಷಗಾನ ಪ್ರದರ್ಶನ, ಅತಿಥಿ ಕಲಾವಿದರ ಕೊಡುವಿಕೆಯಲ್ಲಿ ಯಕ್ಷಗಾನ ಗಾನ ನಾಟ್ಯ ಹಾಸ್ಯ ವೈಭವ ನಡೆಯಲಿದೆ. ರಾತ್ರಿ 8ಗಂಟೆಗೆ ಹೆಜ್ಜೆ ಗೆಜ್ಜೆ ದಶಮ ಸಂಭ್ರಮದ ಸಮಾರೋಪ ಸಮಾರಂಭ ನಡೆಯಲಿದ್ದು ನಂತರ ಸಂಘದ ಕಲಾವಿದರಿಂದ ಮೈಂದ – ದ್ವಿವಿದ ನಂತರ ಅತಿಥಿ ಕಲಾವಿದರ ಕೂಡುವಿಕೆಯಲ್ಲಿ ಯಕ್ಷಗಾನ ಅಗ್ರಪೂಜೆ ಪ್ರದರ್ಶನಗೊಳ್ಳಲಿದೆ. ಈ ಕಾರ್ಯಕ್ರಮದ ನಂತರ ಶ್ರೀ ಲಕ್ಷ್ಮಿ ವೆಂಕಟರಮಣ ಕೃಪಾಪೋಷಿತ ಯಕ್ಷಗಾನ ಕಲಾ ಮಂಡಳಿ ಶ್ರೀ ಕ್ಷೇತ್ರ ಶಂಕ್ರಪ್ಪನಕೊಡ್ಲು ಇಲ್ಲಿನ ಹಳೆ ವಿದ್ಯಾರ್ಥಿಗಳು ಮತ್ತು ಪೋಷಕರಿಂದ ಪ್ರಚಂಡ ಸ್ಪರ್ಧೆಯ ಜೋಡಾಟ ಮೀನಾಕ್ಷಿ ಕಲ್ಯಾಣ ಪ್ರದರ್ಶನಗೊಳ್ಳಲಿದೆ.
150ಕ್ಕೂ ಹೆಚ್ಚು ಮಕ್ಕಳಿಗೆ ಹೆಜ್ಜೆ ತರಬೇತಿ :
2015ರ ನವಂಬರ್ 5ರಂದು ದೇವಸ್ಥಾನದ ವಾರ್ಷಿಕ ದೀಪೋತ್ಸವದೊಂದು ಶ್ರೀ ಸುಬ್ರಹ್ಮಣ್ಯ ಧಾರೇಶ್ವರ ಹಾಗೂ ದೇವಸ್ಥಾನದ ಅರ್ಚಕರಾದ ಶ್ರೀ ಸುಬ್ರಹ್ಮಣ್ಯ ಭಟ್‌ರವರು ಅಂದು ಈ ಸಂಘವನ್ನು ಉದ್ಘಾಟಿಸಿದ್ದರು. ಕೇವಲ ಎಂಟು ಜನ ವಿದ್ಯಾರ್ಥಿಗಳೊಂದಿಗೆ ಆರಂಭಗೊಂಡಿರುವ ಸಂಘ ಇಂದು ಸುಮಾರು ೧೫೦ಕ್ಕೂ ಮಿಕ್ಕಿ ವಿದ್ಯಾರ್ಥಿಗಳಿಗೆ ಯಕ್ಷಗಾನದ ಹೆಜ್ಜೆ ತರಗತಿಯನ್ನು ನೀಡಿದೆ. ನಿರಂತರ ಹತ್ತು ವರ್ಷಗಳ ಕಾಲ ನವೀನ್ ಕೋಟ ಇವರು ಗುರು ಆಗಿ ವಿದ್ಯಾರ್ಥಿಗಳಿಗೆ ತರಬೇತಿ ನೀಡುತ್ತಾ ಬಂದಿರುತ್ತಾರೆ. ದೇವಸ್ಥಾನದ ವತಿಯಿಂದ ತರಬೇತಿಯನ್ನು ಉಚಿತವಾಗಿ ನೀಡಲಾಗಿದೆ. ಇಲ್ಲಿ ಕಲಿತ ವಿದ್ಯಾರ್ಥಿಗಳು ಇಂದು ವೃತ್ತಿಪರ ಮೇಳಕ್ಕೆ ಸೇರ್ಪಡೆಗೊಂಡಿರುವುದು ಹೆಮ್ಮೆಯ ಸಂಗತಿ. ಸಂಘದ ಬೆಳವಣಿಗೆಗೆ ದಿ.ಸುಬ್ರಹ್ಮಣ್ಯ ಧಾರೇಶ್ವರ, ಭಾಗವತ ರಾಘವೇಂದ್ರ ಮಯ್ಯ ಸದಾ ಬೆನ್ನಲುಬಾಗಿ ನಿಂತಿದ್ದಾರೆ. ಹತ್ತು ವರ್ಷಗಳಲ್ಲಿ ಸುಮಾರು ೬೦ಕ್ಕೂ ಹೆಚ್ಚು ಪ್ರದರ್ಶನವನ್ನು ಇಲ್ಲಿಯ ವಿದ್ಯಾರ್ಥಿಗಳು ನೀಡಿದ್ದಾರೆ. ಉಡುಪಿಯ ರಾಜಾಂಗಣ, ಇಡಗುಂಜಿ ಮಹಾಗಣಪತಿ ದೇವಸ್ಥಾನದಲ್ಲೂ ಯಕ್ಷಗಾನ ಪ್ರದರ್ಶನ ನೀಡಿರುತ್ತಾರೆ. ಸ್ಥಳೀಯವಾಗಿ ಅನೇಕ ದೇವಾಲಯಗಳು ಸಂಘ-ಸಂಸ್ಥೆಗಳ ವಾರ್ಷಿಕೋತ್ಸವದಲ್ಲಿ ಇಲ್ಲಿನ ವಿದ್ಯಾರ್ಥಿಗಳು ಯಕ್ಷಗಾನ ಪ್ರದರ್ಶನವನ್ನು ನೀಡಿರುತ್ತಾರೆ. ಪೌರಾಣಿಕ ಹಾಗೂ ಸಾಮಾಜಿಕ ಎರಡು ಪ್ರದರ್ಶನಗಳನ್ನು ಈ ವಿದ್ಯಾರ್ಥಿಗಳು ಪ್ರದರ್ಶನ ನೀಡುತ್ತಾ ಬಂದಿದ್ದಾರೆ. ಕಂಸ ದಿಗ್ವಿಜಯ, ಅಭಿಮನ್ಯು ಕಾಳಗ, ಯೋಗಿನಿ ಕಲ್ಯಾಣ, ಜಾಂಬವತಿ ಕಲ್ಯಾಣ, ಸುಧನ್ವ, ದೇವಿ ಮಹಾತ್ಮೆ, ಶ್ರೀದೇವಿ ಲಲಿತೋಪಖ್ಯಾನ, ವಧುವೈಶಾಲಿನಿ, ಪ್ರಭಾವತಿ ಪರಿಣಯ, ಹಂಸವತಿ ಕಲ್ಯಾಣ, ನವಾಕ್ಷರಿ, ಸುದರ್ಶನ ವಿಜಯ, ದ್ರೌಪತಿ ಪ್ರತಾಪ, ಹಿರಣ್ಯಾಕ್ಷ, ಪುರುಷಾಮೃತ, ತ್ರಿಪುರ ಮಥನ, ದಶಮುಖ ದಿಗ್ವಿಜಯ, ಕೃಷ್ಣ ಪಾರಿಜಾತ, ಮೀನಾಕ್ಷಿ ಕಲ್ಯಾಣ, ಗಜೇಂದ್ರ ಮೋಕ್ಷ, ವದು ವೈಶಾಲಿ ಇನ್ನೂ ಹಲವು ಪೌರಾಣಿಕ ಪ್ರಸಂಗಗಳನ್ನು ಹಾಗೂ ಸಾಮಾಜಿಕ ಪ್ರಸಂಗಗಳಾದ ಚಂದಮಾಮ, ಆತ್ಮಾಂತರಂಗ ಪ್ರಸಂಗಗಳನ್ನು ಪ್ರದರ್ಶಿಸಿದ್ದಾರೆ.
ಎಂಟು ಮಕ್ಕಳೊಂದಿಗೆ ಆರಂಭವಾದ ಸಂಘದಲ್ಲಿ ವರ್ಷದಿಂದ ವರ್ಷಕ್ಕೆ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚುತ್ತಾ ಹೋಗಿದ್ದು ದಶಮ ಸಂಭ್ರಮದ ಹೊತ್ತಲ್ಲಿ 130 ಮಕ್ಕಳು ಹೆಜ್ಜೆ ಕಲಿಯುತ್ತಿದ್ದಾರೆ. ಪ್ರಸ್ತುತ ಹಳೆ ವಿದ್ಯಾರ್ಥಿಗಳು ಹಾಗೂ ಹೊಸ ವಿದ್ಯಾರ್ಥಿಗಳು ಸೇರಿದಂತೆ 150ಕ್ಕೂ ಹೆಚ್ಚು ಮಕ್ಕಳು ಈ ಸಂಘದಿಂದ ಹೆಜ್ಜೆ ಕಲಿತಿಯುತ್ತಿದ್ದಾರೆ ಮಕ್ಕಳಿಗೆ ೧೦ ವರ್ಷಗಳಿಂದ ಹೆಜ್ಜೆ ತರಬೇತಿಯೊಂದಿಗೆ ಮುಖ ವರ್ಣಿಕೆ, ವೇಷಭೂಷಣ ತರಗತಿಯನ್ನು ಸಹ ಇಲ್ಲಿ ನೀಡಲಾಗುತ್ತಿದೆ. ದಶಮಾನೋತ್ಸವದ ಅಂಗವಾಗಿ ೧೦ ಕಾರ್ಯಕ್ರಮಗಳನ್ನು ಉಚಿತವಾಗಿ ಅನಾಥಾಶ್ರಮ ವೃದ್ಧಾಶ್ರಮ ವಿಶೇಷ ಚೇತನರ ಕೇಂದ್ರಗಳಲ್ಲಿ ನೀಡಲಾಗಿದೆ. ಶ್ರೀ ಲಕ್ಷ್ಮಿ ವೆಂಕಟರಮಣ ಅನುಗ್ರಹ ದೊಂದಿಗೆ ದೇವಸ್ಥಾನದ ಪ್ರಧಾನ ಅರ್ಚಕರಾದ ಸುಬ್ರಹ್ಮಣ್ಯ ಭಟ್ ಇವರ ಆಶೀರ್ವಾದದೊಂದಿಗೆ ನಾಗರಾಜ್ ಭಟ್, ಗುರುರಾಜ್ ಭಟ್, ವಿಘ್ನರಾಜ್‌ಭಟ್ (ರಾಜ್ ಬ್ರದರ‍್ಸ್) ರವರು ಸಂಘದ ಬೆಳವಣಿಗೆಗೆ ಸಹಕಾರ ನೀಡುತ್ತಾ ಬಂದಿರುತ್ತಾರೆ.
ವಿದ್ಯಾರ್ಥಿಗಳಿಗೆ ಯಕ್ಷ ಗುರು ನವೀನ್ ಕೋಟ ಇವರು ತರಬೇತಿ ನೀಡಿದ್ದು ಪ್ರವೀಣ್ ಬಾಳಿಕೆರೆ ಇವರ ಮೇಲ್ವಿಚಾರಣೆಯಲ್ಲಿ ಸಂಘ ವ್ಯವಸ್ಥಿತವಾಗಿ ಮುನ್ನಡೆಯುತ್ತಾ ಬಂದಿದೆ. ಮದ್ದಳೆಯಲ್ಲಿ ಗಣೇಶ್ ಶೆಣೈ ಶಿವಪುರ, ಚಂಡೆಯಲ್ಲಿ ಭಾಸ್ಕರ ಆಚಾರ್ಯ ಕನ್ಯಾನ ಇವರು ಸಹಕರಿಸುತ್ತಿದ್ದಾರೆ ಎಂದು ಗುರುರಾಜ್ ಭಟ್ ತಿಳಿಸಿದ್ದಾರೆ.



