• February 9, 2026
  • Last Update February 2, 2026 6:06 pm
  • Brahmavara

ಧರ್ಮಸ್ಥಳ ಅಪಪ್ರಚಾರ ಖಂಡಿಸಿ ಧರ್ಮ ಸಂರಕ್ಷಣಾ ಸಭೆ, ಜಾಥಾ

ಧರ್ಮಸ್ಥಳ ಅಪಪ್ರಚಾರ ಖಂಡಿಸಿ ಧರ್ಮ ಸಂರಕ್ಷಣಾ ಸಭೆ, ಜಾಥಾ

ವರದಿ : ಚಿತ್ತೂರು ಪ್ರಭಾಕರ ಆಚಾರ್ಯ,
ಉಡುಪಿಮಿತ್ರ ಪತ್ರಿಕೆ ಸುದ್ಧಿ : ಬ್ರಹ್ಮಾವರ, ಸೆ.೧೧:
ಶ್ರೀ ಕ್ಷೇತ್ರ ಧರ್ಮಸ್ಥಳ ಅಭಿಮಾನಿಗಳ ವೇದಿಕೆ ಬ್ರಹ್ಮಾವರ ತಾಲೂಕು ವತಿಯಿಂದ ಹಿಂದೂ ಧಾರ್ಮಿಕ ಕ್ಷೇತ್ರಗಳ ಮೇಲಿನ ವೈಚಾರಿಕ ದಾಳಿಯನ್ನು ಖಂಡಿಸಿ ಧರ್ಮ ಸಂರಕ್ಷಣಾ ಸಭೆ ಬ್ರಹ್ಮಾವರದ ಬಂಟರ ಭವನದಲ್ಲಿ ನಡೆಯಿತು.
ಅಪಪ್ರಚಾರಕ್ಕೆ ಶಿಕ್ಷೆಯಾಗಲಿ – ಆನಂದ ಕುಂದರ್ :
ಸಮಾರಂಭದ ಅಧ್ಯಕ್ಷತೆಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಅಭಿಮಾನಿಗಳ ವೇದಿಕೆ ಬ್ರಹ್ಮಾವರ ತಾಲೂಕು ಇದರ ಅಧ್ಯಕ್ಷ ಆನಂದ ಸಿ. ಕುಂದರ್ ವಹಿಸಿದ್ದು ಅವರು ಮಾತನಾಡಿ ಸರಕಾರ ಎಸ್.ಐ.ಟಿ ರಚಿಸಿದ ನಂತರ ಧರ್ಮಸ್ಥಳದ ಮೇಲಿನ ಅಪಚಾರ ಸಂಪೂರ್ಣ ಕಳೆದು ಹೋಗಿದೆ. ಧರ್ಮಸ್ಥಳ ನಮ್ಮ ಆರಾಧ್ಯ ನಂಬಿಕೆಯ ಕ್ಷೇತ್ರ. ನಮ್ಮ ಹಿರಿಯರ ಕಾಲದಿಂದ ನಂಬಿಕೊಂಡು ಬಂದ ನಂಬಿಕೆಗೆ ಅಪಪ್ರಚಾರ ಮಾಡಿವರಿಗೆ ದೇವರು ಶಿಕ್ಷೆ ನೀಡಬೇಕು. ಕೋಟ್ಯಾಂತರ ಜನರ ಭಾವನೆಗಳಿಗೆ ಧಕ್ಕೆ ತಂದು ಅಪಪ್ರಚಾರ ಮಾಡಿದವರಿಗೆ ಕಾನೂನು ಪ್ರಕಾರವೂ ತಕ್ಕ ಶಿಕ್ಷೆಯಾಗಲಿ ಎಂದರು.


ಷಡ್ಯಂತರಕ್ಕೆ ತಕ್ಕ ಪಾಠ ಕಲಿಸಬೇಕಾಗಿದೆ – ಯಶಪಾಲ್ ಸುವರ್ಣ
ಮುಖ್ಯ ಅತಿಥಿಗಳಾಗಿ ಉಡುಪಿ ವಿಧಾನಸಭಾ ಕ್ಷೇತ್ರದ ಶಾಸಕ ಯಶಪಾಲ್ ಸುವರ್ಣ ಭಾವಹಿಸಿ ಮಾತನಾಡುತ್ತಾ ವಿಶ್ವದ ಒಂದೇ ಒಂದು ಹಿಂದೂರಾಷ್ಟ್ರವಾದ ಭಾರತದಲ್ಲಿರುವ ಹಿಂದುತ್ವದ ಭಾವನೆಯನ್ನು ಒಡೆಯುವ ಕೆಲಸ ಎಲ್ಲೆಡೆ ಮಾಡಲಾಗುತ್ತಿದೆ. ಭಕ್ತಿಯ ಭಾವನೆಗಳಿಗೆ ನಂಬಿಕೆಗಳಿಗೆ ವಿಷಬೀಜ ಬಿತ್ತಲಾಗುತ್ತಿದೆ. ಇದರ ವಿರುದ್ಧ ನಾವು ಜಾಗೃತರಾಗದೇ ಇದ್ದಲ್ಲಿ ಮುಂದಿನ ಜನಾಂಗಕ್ಕೆ ಅನ್ಯಾಯ ಮಾಡಿದಂತಾಗಲಿದೆ. ನಮ್ಮ ಶ್ರದ್ಧಾ ಕೇಂದ್ರಗಳ ವಿರುದ್ಧ ಷಡ್ಯಂತರ ಮಾಡುವವರಿಗೆ ತಕ್ಕ ಪಾಠ ಕಲಿಸಬೇಕಾಗಿದೆ ಎಂದರು.


ರಾಜಕೀಯ ರಹಿತವಾದ ಹೋರಾಟ : ಕಿರಣ್ ಕುಮಾರ್ ಕೊಡ್ಗಿ
ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಕಿರಣ್ ಕುಮಾರ್ ಕೊಡ್ಗಿ ಮಾತನಾಡಿ ವೀರೇಂದ್ರ ಹೆಗ್ಗಡೆಯವರು ಗ್ರಾಮೀಣ ಭಾಗದ ದೇವಾಲಯಗಳ ಅಭಿವೃದ್ಧಿಗೆ ಸಾಕಷ್ಟು ಆರ್ಥಿಕ ಸಹಕಾರ ನೀಡಿದ್ದಾರೆ. ಮಧ್ಯವರ್ಜನ ಶಿಬಿರದ ಮೂಲಕವೂ ಅನೇಕರನ್ನು ಸನ್ಮಾರ್ಗಕ್ಕೆ ತಂದಿದ್ದಾರೆ. ರುಡ್‌ಸೆಟ್ ಸಂಸ್ಥೆಯಿಂದ ಅನೇಕ ಉದ್ಯೋಕಾಂಕ್ಷಿಗಳಿಗೆ ಮಾರ್ಗ ತೋರಿಸಿದ್ದಾರೆ. ಗ್ರ್ರಾಮೀಣ ಭಾಗದ ಮಹಿಳೆಯರಿಗೆ ಶಕ್ತಿ ತುಂಬಲು ಅವರ ಯೋಜನೆಗಳು ಕಾರಣ. ಅವರು ಧಮಾಧಿಕಾರಿಗಿರುವ ಧರ್ಮಸ್ಥಳದ ವಿರುದ್ಧ ವೃತಾ ಅಪಪ್ರಚಾರ ಮಾಡಲಾಗಿದೆ. ಸಂಸ್ಕೃತಿ ಉಳಿಸಿಕೊಳ್ಳಲು, ಧರ್ಮ ಉಳಿಸಿಕೊಳ್ಳಲು ರಾಜಕೀಯ ರಹಿತವಾಗಿ ನಾವೆಲ್ಲರೂ ಇಂತವರ ವಿರುದ್ಧ ಹೋರಾಡಬೇಕು. ಕ್ಷೇತ್ರದ ವಿರುದ್ಧ ಅಪಪ್ರಚಾರ ನಿಲ್ಲಬೇಕು ಎಂದು ನುಡಿದರು.


ಸಂತೋಷ್‌ರಾವ್ ಬ್ರೈನ್‌ಮ್ಯಾಪಿಂಗ್ ಆಗಬೇಕು – ವಸಂತ್ ಗಿಳಿಯಾರ್
ಈಗ ಎಲ್ಲರಿಗೂ ಸತ್ಯದ ಅರಿವಾಗುತ್ತಿದೆ. ಹುಟ್ಟದ ಅನನ್ಯ ಭಟ್ ಹುಟ್ಟಿದ್ದಾಳೆಂದು ಸುಳ್ಳು ಹೇಳಿ ಸುಜಾತ ಭಟ್ ಎಂಬವಳು ಮೋಸ ಮಾಡಿ ಈಗ ನನ್ನಿಂದ ತಪ್ಪಾಗಿದೆ ನನ್ನನ್ನು ಬಿಟ್ಟುಬಿಡಿ ಎನ್ನುತ್ತಿದ್ದಾಳೆ. ಚಿನ್ನಯ್ಯ ನನಗೆ ೫ ವರೆ ಲಕ್ಷ ಹಣ ಕೊಟ್ಟು ಸುಳ್ಳು ಹೇಳಿಸಿದರು ಅಂತ ಹೇಳಿದ್ದಾನೆ. ಚಿನ್ನಯ್ಯನ ಹೆಂಡತಿ ನನ್ನ ಗಂಡನನ್ನು ವಾಪಾಸು ಕೊಡಿ, ಮನೆಗೆ ಬಂದು ಸುಳ್ಳು ಹೇಳಿ ಕರೆದುಕೊಂಡು ಹೋದರು ಅನ್ನುತ್ತಿದ್ದಾಳೆ. ಸುಳ್ಳಿನ ಮೂಲಕ ಭಾವನೆಗಳನ್ನು ಕೆರಳಿಸಿ ನಮ್ಮ ಧಾರ್ಮಿಕ ಶ್ರದ್ಧಾ ಕೇಂದ್ರದ ವಿರುದ್ಧ ಅಪಪ್ರಚಾರ ಮಾಡಿದರು. ೧೨ ವರ್ಷಗಳಲ್ಲಿ ಅದೆಷ್ಟು ಸುಳ್ಳು ಹೇಳಿರಬಹುದು ಎಂಬುದನ್ನು ಜನರು ಅರ್ಥಮಾಡಿಕೊಳ್ಳಬೇಕು. ಧರ್ಮಸ್ಥಳಕ್ಕೆ ಬುಲ್ಡೋಜರ್ ನುಗ್ಗಿಸಬೇಕು, ಧರ್ಮಸ್ಥಳದಲ್ಲಿ ಮಂಜುನಾಥ, ಅಣ್ಣಪ್ಪಸ್ವಾಮಿ ಇರೋದೇ ಸುಳ್ಳು ಅಂದಾಗಲೂ ನಾವು ಸುಮ್ಮನುಳಿದೆವು. ವೀರೇಂದ್ರ ಹೆಗ್ಗಡೆಯವರು ಸಮಾಜದಲ್ಲಿ ಅನೇಕ ಒಳ್ಳೆಯ ಕೆಲಸ ಮಾಡಿದ್ದಾರೆ. ಅನೇಕ ಕುಟುಂಬಗಳಿಗೆ ಬೆಳಕನ್ನು ನೀಡಿದವರು. ಮದ್ಯವರ್ಜನ ಶಿಬಿರದ ಮೂಲಕ ಅನೇಕರನ್ನು ಸರಿದಾರಿಗೆ ತಂದರು. ಮಗಳ ಮದುವೆಗೆ, ಮಕ್ಕಳನ್ನು ಓದಿಸಲು, ಚಿನ್ನಾಭರಣ ಖರೀಧಿಸಲು ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಸಾಲ ಪಡೆದು ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಲು ವೀರೇಂದ್ರ ಹೆಗ್ಗಡೆಯವರು ಕಾರಣರು. ಹೆಗ್ಗಡೆಯವರ ರುಡ್‌ಸೆಟ್ ಸಂಸ್ಥೆಯಿಂದ ಅನೇಕ ಯುವಕರು ಬದುಕನ್ನು ಕಟ್ಟಿಕೊಂಡಿದ್ದಾರೆ. ಅಂತಹ ವೀರೇಂದ್ರ ಹೆಗ್ಗಡೆಯವರ ವಿರುದ್ಧ ಅತಿ ಕ್ಷುಲ್ಲಕ ಮಾತುಗಳನ್ನಾಡಿದ್ದನ್ನು ಕೂಡ ಕೇಳಿ ಸುಮ್ಮನಾದೆವು. ಅಂದು ಸೌಜನ್ಯ ಅತ್ಯಾಚಾರ ಮಾಡಿ ಕೊಂದವನಿಗೆ ಮೂರು ಬಾರಿ ಜಾಮೀನು ಅರ್ಜಿಸಲ್ಲಿಸಿದ್ದರೂ ಆತನಿಗೆ ಜಾಮೀನು ಸಿಕ್ಕಿಲ್ಲ. ಆದರೆ ಕೋರ್ಟ್‌ಲ್ಲಿ ಕೇಸಿನ ವಿಚಾರಣೆ ಹಂತಕ್ಕೆ ಬಂದಾಗ ಸೌಜನ್ಯಳ ಕುಟುಂಬದವರೇ ಆತನನ್ನು ನಿರಪರಾಧಿ ಎಂದು ಹೇಳಿದ್ದರಿಂದ ಜಾಮೀನು ದೊರಕಿತು. ಸೌಜನ್ಯ ಕೊಲೆ ಆರೋಪಿಯನ್ನು ಹೊರತಂದು ಆ ಪ್ರಕರಣವನ್ನು ಧರ್ಮಾಧಿಕಾರಿಗಳ ಕುಟುಂಬದ ಮೇಲೆ ಹಾಕುವ ಷಡ್ಯಂತರ ನಡೆಯಿತು. ಸಂತೋಷ್‌ರಾವ್ ವಿರುದ್ಧ ಸರಿಯಾದ ಸಾಕ್ಷಿಗಳನ್ನು ಒದಗಿಸದೇ ಇರುವುದರಿಂದ ಆತ ಹೊರಬರುವಂತಾಯಿತು. ಸಂತೋಷರಾವ್‌ಬ್ರೈನ್‌ಮ್ಯಾಪಿಂಗ್ ಆದಲ್ಲಿ ನಿಜವಾದ ಆರೋಪಿ ಆತನೆಂಬ ಸತ್ಯ ಹೊರಬರಲಿದೆ. ಬ್ರೈನ್ ಮ್ಯಾಪಿಂಗ್ ನಂತರವೂ ಆತ ಅತ್ಯಾಚಾರ ಮಾಡಿಲ್ಲ ಎಂದಾದರೆ ನಾನು ಆತನ ಪಾದ ಪೂಜೆ ಮಾಡಲಿದ್ದೇನೆ ಎಂದು ಗಿಳಿಯಾರ್ ನುಡಿದರು.


ಎನ್‌ಐ.ಎ. ಅಥವಾ ಸಿ.ಬಿ.ಐ.ಗೆ ವಹಿಸಬೇಕು – ರಘುಪತಿ ಭಟ್
ಮಾಜಿ ಶಾಸಕ ರಘುಪತಿ ಭಟ್ ಮಾತನಾಡಿ ವಿದೇಶಿ ಹಾಗೂ ದೇಶದ ಕೆಲವು ಭಾಗಗಳಿಂದಲೂ ಈ ಷಡ್ಯಂತರಕ್ಕೆ ಬೆಂಬಲದ ಸಂದೇಹ ವ್ಯಕ್ತವಾಗುತ್ತಿರುವುದರಿಂದ ಪ್ರಕರಣವನ್ನು ಎನ್‌ಐ.ಎ. ಅಥವಾ ಸಿ.ಬಿ.ಐ.ಗೆ ವಹಿಸಬೇಕು. ಧರ್ಮಸ್ಥಳದಲ್ಲಿ ಇಂದು ಸತ್ಯ ಹೊರಬರುತ್ತಿರುವುದಕ್ಕೆ ತುಳುನಾಡಿನಲ್ಲಿ ದೈವ ದೇವರುಗಳ ಪ್ರಭಾವ ಇದೆ ಎನ್ನುವುದಕ್ಕೆ ಸಾಕ್ಷಿ ನೀಡಿದಂತಾಗಿದೆ. ಬುರುಡೆ ಪ್ರಕರಣ, ಸುಜಾತ ಭಟ್ ಪ್ರಕರಣದ ಮೂಲಕ ಷಡ್ಯಂತರಕ್ಕೆ ಹೆಚ್ಚು ಪುಷ್ಟಿ ದೊರಕಿದೆ. ಧರ್ಮಸ್ಥಳದ ಅಣ್ಣಪ್ಪನ ಪ್ರಭಾವದಿಂದ ಎಲ್ಲಾ ಸತ್ಯ ಹೊರಬರಲಾರಂಭಿಸಿದೆ ಎಂದು ನುಡಿದರು.


ಅಪಚಾರ ತೊಡೆದು ಹೋಗಿದೆ – ನೀರೆ ಕೃಷ್ಣ ಶೆಟ್ಟಿ
ಉಡುಪಿ ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷ ನೀರೆ ಕೃಷ್ಣ ಶೆಟ್ಟಿ ಮಾತನಾಡಿ ಧರ್ಮಸ್ಥಳ ಕ್ಷೇತ್ರದ ವಿಚಾರದಲ್ಲಿ ಯಾರೂ ರಾಜಕೀಯ ತರಬೇಡಿ. ಯಾರಾದರೂ ರಾಜಕೀಯ ಲಾಭ ದೊರಕುತ್ತದೆ ಎಂದು ಭಾವಿಸಿದರೆ ಮಂಜುನಾಥ ಸ್ವಾಮಿ ಖಂಡಿತಾ ಅನುಗ್ರಹ ಮಾಡಲ್ಲ. ಈಗಲೂ ಕೆಲವರು ಸೌಜನ್ಯಳ ಮನೆಗೆ ಹೋಗಿ ಸೌಜನ್ಯತೆ ತೋರಿಸಲು ಹೋಗುತ್ತಾರೆ. ನಾನು ಅದನ್ನು ನಂಬಲ್ಲ. ಆಗುವುದೆಲ್ಲ ಆಗಿ ಹೋಗಿದೆ. ಧರ್ಮಸ್ಥಳ ನಮ್ಮ ಹಿರಿಯರು ನಂಬಿಕೊಂಡು ಬಂದ ಬಹಳ ದೊಡ್ಡ ಕ್ಷೇತ್ರ. ಅನೇಕ ದೈವ ಪುರುಷರಿಗೆ ದೈವತ್ವ ನೀಡಿದ ಕ್ಷೇತ್ರ. ಅಲ್ಲಿ ಸಂಪೂರ್ಣ ದೇವರ ಅನುಗ್ರಹವಿರುವ ಕೇಂದ್ರ. ಅಲ್ಲಿ ಭಕ್ತಿಯ ಸಾಗರವಿದೆ. ಅದಕ್ಕೆ ಕೈ ಹಾಕಲು ಯಾರಿಂದಲೂ ಸಾಧ್ಯವಿಲ್ಲ. ೫೮ ವರ್ಷಗಳ ಕಾಲ ಓರ್ವ ವ್ಯಕ್ತಿ ಧರ್ಮದರ್ಶಿಯಾಗಿ ಆ ಕ್ಷೇತ್ರದಲ್ಲಿ ದುಡಿಯಬೇಕಾದಲ್ಲಿ ದೈವಿಕ ಶಕ್ತಿ ಹಾಗೂ ಅಣ್ಣಪ್ಪನ ಅನುಗ್ರಹ ಇದ್ದಲ್ಲಿ ಮಾತ್ರ ಸಾಧ್ಯ. ಎಸ್.ಐ.ಟಿ ರಚನೆಯಿಂದ ಸಂಪೂರ್ಣ ಅಪಚಾರ ತೊಡೆದು ಹೋಗಿದೆ ಎಂದರು.


ಮಂದಾರ್ತಿ ದುರ್ಗಾಪರಮೇಶ್ವರಿ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಧನಂಜಯ್ ಶೆಟ್ಟಿ, ಧರ್ಮಸ್ಥಳ ಅಭಿಮಾನಿಗಳ ವೇದಿಕೆಯ ಗೌರವಾಧ್ಯಕ್ಷ ಶೇಡಿಕೊಡ್ಲು ವಿಠಲಶೆಟ್ಟಿ, ಬಾರಕೂರು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ ಶಾಂತರಾಮ್ ಶೆಟ್ಟಿ ಬಾರ್ಕೂರು, ಕಚ್ಚೂರು ಶ್ರೀ ಬ್ರಹ್ಮಲಿಂಗ ವೀರಭದ್ರ ದೇವಸ್ಥಾನದ ಆಡಳಿತ ಮೊಕ್ತೇಸರ ಶ್ರೀನಿವಾಸ ಶೆಟ್ಟಿಗಾರ್, ಬಾರಕೂರು ಮಾಲ್ತಿದೇವಿ ಮತ್ತು ಬಬ್ಬುಸ್ವಾಮಿ ಮೂಲ ಕ್ಷೇತ್ರದ ಧರ್ಮದರ್ಶಿ ಗೋಕುಲದಾಸ್ ಬಾರ್ಕೂರು, ಶ್ರೀ ಕ್ಷೇತ್ರ ಧರ್ಮಸ್ಥಳ ಅಭಿಮಾನಿಗಳ ವೇದಿಕೆ ಗೌರವಾಧ್ಯಕ್ಷ ಶ್ರೀನಿವಾಸ್ ಉಡುಪ ಕೂಡ್ಲಿ, ಶ್ರೀ ನಾರಾಯಣಗುರು ಸೇವಾಸಂಘದ ಅಧ್ಯಕ್ಷ ಬಿ.ಎನ್.ಶಂಕರ ಪೂಜಾರಿ, ಕಾಜರಳ್ಳಿ ವನದುರ್ಗಾ ಪರಮೇಶ್ವರೀ ದೇವಸ್ಥಾನದ ಅಧ್ಯಕ್ಷ ಅಲ್ತಾರು ನಿರಂಜನ ಶೆಟ್ಟಿ,ವಾರಂಬಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷ ನಿತ್ಯಾನಂದ ಬಿ.ಆರ್. ಹಂದಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಶಾರದಾ ಪೂಜಾರಿ, ಶ್ರೀ ಕ್ಷೇತ್ರ ಧರ್ಮಸ್ಥಳ ಅಭಿಮಾನಿಗಳು ವೇದಿಕೆ ಬ್ರಹ್ಮಾವರ ಇದರ ಕಾರ್ಯಾಧ್ಯಕ್ಷ ಬಿರ್ತಿ ರಾಜೇಶ್ ಶೆಟ್ಟಿ ನ್ಯಾಯವಾದಿ ಸುಪ್ರಸಾದ್ ಶೆಟ್ಟಿ, ಬ್ರಹ್ಮಾವರ ತಾಲೂಕು ಜನಜಾಗೃತಿ ವೇದಿಕೆ ಪ್ರಕಾಶ್ ಶೆಟ್ಟಿ , ಶ್ರೀಮತಿ ನಳಿನಿ ಪ್ರದೀಪ್‌ರಾವ್, ರಾಮಯ್ಯ ಜೋಗಿ ಯಡ್ತಾಡಿ, ಭಜನಾ ಪರಿಷತ್ ಅಧ್ಯಕ್ಷ ಪ್ರಸನ್ನ ಕುಮಾರ್, ಶಶಿಧರ ಶೆಟ್ಟಿ ಮಡಾಮಕ್ಕಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.


ನ್ಯಾಯವಾದಿ ಬೈಕಾಡಿ ಸುಪ್ರಸಾದ್ ಶೆಟ್ಟಿ ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು. ಶ್ರೀ ಕ್ಷೇತ್ರ ಧರ್ಮಸ್ಥಳ ಅಭಿಮಾನಿಗಳ ವೇದಿಕೆಯ ಕಾರ್ಯಾಧ್ಯಕ್ಷ ಬಿರ್ತಿ ರಾಜೇಶ್ ಶೆಟ್ಟಿ ನಿರ್ಣಯ ಓದಿದರು. ಅಕ್ಷಯ ಹೆಗ್ಡೆ ಮೊಳಹಳ್ಳಿ ನಿರೂಪಿಸಿದರು.
ನಂತರ ಧರ್ಮಸಂರಕ್ಷಣಾ ಜಾಥಾ ಮೂಲಕ ತಹಶೀಲ್ದಾರ್ ಕಚೇರಿಗೆ ತೆರಳಿ ತಹಶೀಲ್ದಾರ್‌ರವರಿಗೆ ಮನವಿ ಅರ್ಪಿಸಲಾಯಿತು.
ಬಿಜೆಪಿ ಮುಖಂಡ ರಾಜೀವ ಕುಲಾಲ್ ಆರೂರು, ಪ್ರಥ್ವಿರಾಜ್ ಶೆಟ್ಟಿ ಬಿಲ್ಲಾಡಿ, ಹರೀಶ್ ಶೆಟ್ಟಿ ಚೇರ್ಕಾಡಿ, ಪ್ರವೀಣ್ ಯಕ್ಷಿಮಠ, ಶ್ರೀಧರ ಭಂಡಾರಿ, ಪ್ರಮೋದ್ ಶೆಟ್ಟಿ ಮಂದಾರ್ತಿ, ರವೀಂದ್ರ ಹೇರೂರು, ಸುದೇಶ್ ಶೆಟ್ಟಿ ಬ್ರಹ್ಮಾವರ, ದಿನೇಶ್ ಶೆಟ್ಟಿ ಬೇಳೂರು, ಉಮೇಶ್ ಶೆಟ್ಟಿ ಬೇಳೂರು, ಮಧುಸೂದನ ಕಚ್ಚೂರು, ಪ್ರಕಾಶ್ ಕುಕ್ಕೆಹಳ್ಳಿ, ಅಶೋಕ್ ಪ್ರಭು ಸಾಹೇಬರಕಟ್ಟೆ, ಹರೀಶ್ ಶ್ಯಾನುಭೋಗ್ ಇನ್ನಿತರರು ಸಹಕರಿಸಿದರು.

administrator

Related Articles

Leave a Reply

Your email address will not be published. Required fields are marked *