• April 4, 2026
  • Last Update April 4, 2026 9:29 am
  • Brahmavara

ನಾಗರಮಠ ಮರಳುಗಾರಿಕೆ; ಅಧಿಕೃತ ಮರಳುಗಾರಿಕೆಗೆ ಅನಧಿಕೃತರಿಂದ ತೊಂದರೆ

ನಾಗರಮಠ ಮರಳುಗಾರಿಕೆ; ಅಧಿಕೃತ ಮರಳುಗಾರಿಕೆಗೆ ಅನಧಿಕೃತರಿಂದ ತೊಂದರೆ

ವರದಿ : ಚಿತ್ತೂರು ಪ್ರಭಾಕರ ಆಚಾರ್ಯ
ಉಡುಪಿಮಿತ್ರ ಪತ್ರಿಕೆ ಸುದ್ಧಿ :

ಬ್ರಹ್ಮಾವರ, ಎ.. ೪: ಬ್ರಹ್ಮಾವರ ತಾಲೂಕು ಹೊಸಾಳ ಸಮೀಪದ ನಾಗರಮಠದಲ್ಲಿ ಜಿಲ್ಲಾಡಳಿತ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಮೂಲಕ ಬಿ.ಕುಶಕುಮಾರ್ ಎಂಬವರಿಗೆ ಮರಳು ಬ್ಲಾಕ್ ಸಂಖ್ಯೆ ಡಿಎಸ್‌ಬಿ.೫ ರಲ್ಲಿ ಮರಳುಗಾರಿಕೆಗೆ ಗುತ್ತಿಗೆ ನೀಡಿದ್ದು ಈ ಮರಳುಗಾರಿಕೆಯ ವಿರುದ್ಧ ಇಲ್ಲಿನ ಪರಿಸರದ ಕೆಲವು ಮಂದಿ ಪ್ರತಿಭಟನೆ ನಡೆಸಿದ್ದಾರೆ. ಇಲ್ಲಿನ

ಮರಳು ತೆಗೆದರೆ ತೊಂದರೆಯಾಗುತ್ತೆ ಎಂದು ಹೇಳುತ್ತಾರೆ. ಆದರೆ ಇಲ್ಲಿನ ನದಿಯಲ್ಲಿರುವ ಹೂಳು, ಮರಳು ದಿಬ್ಬ ತೆರವು ಮಾಡದೆ ಇದ್ದಲ್ಲಿ ತೆಕ್ಕಟ್ಟೆಯಿಂದ ಚಿತ್ರಪಾಡಿ, ಬೆಟ್ಲಕ್ಕಿ, ಬನ್ನಾಡಿ, ಗಿಳಿಯಾರು, ನಾಗರಮಠ ಪರಿಸರದ ಕೃಷಿಭೂಮಿಯಲ್ಲಿ ನೀರು ನಿಂತು ಕೃಷಿ ಭೂಮಿಗೆ ತೊಂದರೆಯಾಗಲಿದೆ ಎಂಬ ಅಭಿಪ್ರಾಯವೂ ಇದೆ. ಆದ್ದರಿಂದ ಮರಳು ದಿಬ್ಬ ಹಾಗೂ ಹೂಳನ್ನು ತೆರವು ಮಾಡಬೇಕಾದ ಅನಿವಾರ್ಯತೆ ಇಲ್ಲಿದೆ. ಸ್ಥಳಕ್ಕೆ ಭೇಟಿ ನೀಡಿ ಗಮನಿಸುವಾಗ ಹೊಳೆಯ ನಡುವಿನಲ್ಲೇ ಮರಳು ದಿಬ್ಬ ಏರ್ಪಟ್ಟು ಈ ದಿಬ್ಬದಲ್ಲಿ ಗಿಡ ಮರಗಳು ಬೆಳೆದು ಬಿಟ್ಟಿವೆ. ಮರಳು ದಿಬ್ಬ ಏರ್ಪಟ್ಟ ಹಿನ್ನೆಲೆಯಲ್ಲಿ ನದಿ ಇಬ್ಬಾಗವಾಗಿ ಹರಿಯುತ್ತಿದೆ. ನದಿ ಇಬ್ಬಾಗವಾಗುತ್ತಿರುವುದರಿಂ ನದಿ ದಂಡೆ ಕೊಚ್ಚಿಕೊಂಡು

ಹೋಗಿರುವುದು ಕಂಡು ಬಂದಿದೆ. ಮರಳು ದಿಬ್ಬ ಸರ್ವೆ ಮಾಡಿರುವ ಜಿಲ್ಲಾಡಳಿತ (ಸರ್ವೆ ಸಂಖ್ಯೆ :೧೪೦/೧೧೧) ಈ ದಿಬ್ಬ ತೆರೆವುಗೊಳಿಸಬೇಕೆಂದು ಸ್ವತಃ ಜಿಲ್ಲಾಡಳಿತವೇ ಟೆಂಡರ್ ಕರೆದಿದೆ. ಟೆಂಡರ್‌ನಲ್ಲಿ ಬನ್ನಾಡಿಯ ಮಾಜಿ ಗ್ರಾಮ ಪಂಚಾಯತ್ ಸದಸ್ಯ ಕುಶ ಕುಮಾರ್ ಎಂಬವರು ಭಾಗವಹಿಸಿ ಗುತ್ತಿಗೆ ಪಡೆದಿದ್ದರು.


ಟೆಂಡರ್ ಪಡೆದವರು ಹೇಳುವುದೇನು?
ಟೆಂಡರ್ ಪಡೆದಿರುವ ಕುಶಕುಮಾರ್ ಬನ್ನಾಡಿ ಇವರು ಪತ್ರಿಕೆಯೊಂದಿಗೆ ಮಾತನಾಡಿ ಸರಕಾರ ಟೆಂಡರ್ ಕರೆದಾಗ ನಾನು ಭಾಗವಹಿಸಿ ಗುತ್ತಿಗೆ ಪಡೆದಿದ್ದೇನೆ. ನನಗೆ ಟೆಂಡರ್ ದೊರೆತ ೨ನೇ ದಿನವೇ ಈ ಹಿಂದೆ ಅನಧಿಕೃತವಾಗಿ ಮರಳುಗಾರಿಕೆ ಮಾಡುತ್ತಿದ್ದ ವ್ಯಕ್ತಿ ನನ್ನಲ್ಲಿಗೆ ಬಂದು ನಮ್ಮ ದೋಣಿಯನ್ನೇ ಕೊಡುತ್ತೇವೆ. ನನಗೆ ೮೦೦೦ ಕೊಡಬೇಕು ಎಂಬ ಬೇಡಿಕೆ ಇಟ್ಟಿದ್ದರು. ಅವರ ಡಿಮ್ಯಾಂಡ್‌ಗೆ ನಾನು ಒಪ್ಪಿಲ್ಲ. ಯಾವುದೇ ಕಾರಣಕ್ಕೂ ಕೊಡಲು ಸಾಧ್ಯವಿಲ್ಲ. ನಾವು ೨೦೦೦ ರಾಯಲ್ಟಿ ಕೊಡಬೇಕು. ಕೆಲಸಗಾರರ ಸಂಬಳ, ಜಾಗದ ಬಾಡಿಗೆ, ಧಕ್ಕೆ ಬಾಡಿಗೆ, ರೈಟರ್ ಸಂಬಳ, ವಾಹನ ಬಾಡಿಗೆ ಅಂತ ನಮಗೆ ಸಾಕಷ್ಟು ಖರ್ಚಿದೆ. ಅವರ ಡಿಮ್ಯಾಂಡ್‌ಗೆ ನಾವು ಒಪ್ಪದ ಕಾರಣ ಈ ರೀತಿ ಬೇರೆಯವರನ್ನು ಎತ್ತಿಕಟ್ಟಿ ಪ್ರತಿಭಟನೆ ಮಾಡುತ್ತಿದ್ದಾರೆ. ಅವರ ಡಿಮ್ಯಾಂಡ್‌ಗೆ ಒಪ್ಪ್ಪಿದ್ದರೆ ಈ ಪ್ರತಿಭಟನೆ ನಡೆಯುತ್ತಿಲ್ಲ. ಇಲ್ಲಿ ಪ್ರತಿಭಟನೆಗೆ ಕುಮ್ಮಕ್ಕು ನೀಡಿರುವ ವ್ಯಕ್ತಿ ರಾತ್ರಿ ಹೊತ್ತು ಮರಳು ತೆಗೆದು ಮಾರಾಟ ಮಾಡುತ್ತಿದ್ದರು. ಸ್ಥಳದಲ್ಲಿ ಸಿಸಿ ಕೆಮರಾ ಅಳವಡಿಸಲಾಗಿದೆ. ಈಗ ಅವರಿಗೆ ಮರಳು ತೆಗೆಯಲು ಸಾಧ್ಯವಾಗದೇ ಇರುವುದರಿಂದ ಈ ಪ್ರತಿಭಟನೆ ಮಾಡಿದ್ದಾರೆ. ನಿಜಕ್ಕೂ ಇಲ್ಲಿ ಈ ಮರಳುಗಾರಿಕೆಯಿಂದ ಯಾವುದೇ ತೊಂದರೆ ಇಲ್ಲ. ನಮಗೆ ತೊಂದರೆ ಮಾಡುತ್ತಿರುವುದರಿಂದ ಜಿಲ್ಲಾಡಳಿತದ ಗಮನಕ್ಕೆ ತಂದು ದೂರು ನೀಡಿದ್ದೇವೆ. ಅಧಿಕೃತ ಪರವಾನಗಿ ಇರುವುದರಿಂದಲೇ ಪೊಲೀಸ್ ರಕ್ಷಣೆ ಕೊಟ್ಟಿದ್ದಾರೆ. ಸುಮ್ಮನೆ ಪೊಲೀಸರ ಮೇಲೆ, ಜಿಲ್ಲಾಧಿಕಾರಿಯವರ ಮೇಲೆ ಹೇಳಿಕೆ ನೀಡುತ್ತಿರುವುದು ಸರಿಯಲ್ಲ ಎಂದು ಟೆಂಡರ್ ಪಡೆದವರು ಹೇಳುತ್ತಿದ್ದಾರೆ.


ಸ್ಥಳಿಯ ಗ್ರಾಮ ಪಂಚಾಯತ್ ನಿಕಟಪೂರ್ವ ಸದಸ್ಯ ಪ್ರವೀಣ್ ನಾಗರಮಠ ಮಾತನಾಡಿ ಇಲ್ಲಿ ಮರಳು ಹೋರಾಟ ಮಾಡಿಸುತ್ತಿರುವ ವ್ಯಕ್ತಿ ಇಲ್ಲಿ ಹೊಳೆಯಲ್ಲಿ ಮರಳು ಕಳ್ಳತನ ಮಾಡುತ್ತಿದ್ದರು. ಇಲ್ಲಿ ಹೊಳೆಯ ಸಮೀಪ ಇರುವ ೭೦೦ ಎಕ್ರೆ ಕೃಷಿಭೂಮಿಯನ್ನು ಇಲ್ಲಿನ ಕೃಷಿಕರು ಕಂಪೆನಿಯೊಂದಕ್ಕೆ ಮಾರಾಟ ಮಾಡಿದ್ದಾರೆ. ಹೊಳೆಗೆ ತಾಗಿಕೊಂಡಿರುವ ಆ ೭೦೦ ಎಕ್ರೆ ಕೃಷಿ ಭೂಮಿಯಲ್ಲಿ ಕೃಷಿ ಕೂಡ ಮಾಡಲ್ಲ. ಪ್ರತಿಭಟನೆ ಮಾಡಿದವರು ಸ್ವಾರ್ಥಕ್ಕಾಗಿ ಹೋರಾಟ ಮಾಡಿದ್ದಾರೆ. ಏನು ಗೊತ್ತಿಲ್ಲದ ಹೆಂಗಸರು ಮಕ್ಕಳಿಗೆ ಸುಳ್ಳು ಹೇಳಿ ಅವರನ್ನು ಕರೆದುಕೊಂಡು ಬಂದು ಹೇಳಿಕೆ ಕೊಡಿಸುತ್ತಿದ್ದಾರೆ. ನಿಜಕ್ಕೂ ಇಲ್ಲಿನ ಮರಳುಗಾರಿಕೆಯಿಂದ ಯಾವ ಕೃಷಿಕರಿಗೂ ತೊಂದರೆ ಇಲ್ಲ. ಹೊಯ್ಗೆ ದಿಬ್ಬ ತೆರವು ಆದಲ್ಲಿ ಕೃಷಿ ಭೂಮಿಗೆ ನೆರೆ ಬಂದು ನೀರು ನುಗ್ಗಿ ಕೃಷಿ ಹಾಳಾಗುವುದು ತಪ್ಪಲಿದೆ. ನದಿಯ ಮಧ್ಯೆ ಹೊಯ್ಗೆ ದಿಬ್ಬ ಏರ್ಪಟ್ಟು ನದಿ ಇಬ್ಬಾಗವಾಗಿ ನದಿಯ ಪಥವೇ ಬದಲಿಸುತ್ತಿದೆ. ಹೊಳೆ ದಂಡೆ ಕೊಚ್ಚಿಕೊಂಡು ಹೋಗುತ್ತಿದೆ. ದಿಬ್ಬ ತೆರವಿನಿಂದ ಸಿಹಿ ನೀರಿನ ಶೇಖರಣೆಯೂ ಹೆಚ್ಚಲಿದೆ. ನಿಜಕ್ಕೂ ಇಲ್ಲಿ ಸರಕಾರ ಮರಳಿನ ದಿಬ್ಬ ತೆರವು ಮಾಡುತ್ತಿರುವುದು ಸರಿಯಾದ ಕ್ರಮ ಎಂದು ಪ್ರವೀಣ್ ಹೇಳುತ್ತಾರೆ.


ಸ್ಥಳಿಯರಾದ ವಿನಯ ಶೆಟ್ಟಿ ಮಾತನಾಡಿ ಇಲ್ಲಿ ಪ್ರತಿಭಟನೆ ಮಾಡಿದ ಯಾವುದೇ ವ್ಯಕ್ತಿಗಳ ಭೂಮಿಯೂ ಇಲ್ಲಿ ಇಲ್ಲ. ಯಾರದ್ದಾದರೂ ಆರ್‌ಟಿಸಿ ಇದ್ದರೆ ತೋರಿಸಲಿ. ಇದೆಲ್ಲ ಹಿಂದೆ ಅನಧಿಕೃತವಾಗಿ ಮರಳು ತೆಗೆಯುತ್ತಿದ್ದವರ ಕುತಂತ್ರ. . ಅವರ ಪ್ರೇರಣೆಯಿಂದ ಈ ಪ್ರತಿಭಟನೆ ನಡೆದಿದೆ. ಮರಳು ದಿಬ್ಬದಿಂದ ಇಲ್ಲಿ ಕೃಷಿ ಭೂಮಿಗೆ ನೀರು ನುಗ್ಗಿ ಕೃಷಿ ಹಾಳಾಗುತ್ತಿದೆ. ಜಿಲ್ಲಾಡಳಿತ ಮರಳು ತೆಗೆಯುತ್ತಿರುವುದರಿಂದ ಯಾವುದೇ ತೊಂದರೆ ಇಲ್ಲ ಎಂದು ವಿನಯ ಶೆಟ್ಟಿ ನುಡಿಯುತ್ತಾರೆ.
ಉಡುಪಿ ಜಿಲ್ಲೆಯಲ್ಲಿ ಹಿಂದೆ ಮರಳು ಸಿಗದೆ ಸಾಕಷ್ಟು ತೊಂದರೆ ಅನುಭವಿಸಲಾಗಿದೆ. ಜಿಲ್ಲೆಯ ಆರ್ಥಿಕತೆ ಮೇಲೂ ಹೊಡೆತ ಬಿದ್ದಿದೆ. ಅದೆಷ್ಟೋ ಗುತ್ತಿಗೆದಾರರರಿಗೆ, ಕಾರ್ಮಿಕರಿಗೆ, ಮರಳು ಸಾಗಿಸುವ ವಾಹನ ಮಾಲಕರಿಗೆ, ಚಾಲಕರಿಗೆ, ಹಾರ್ಡ್‌ವೇರ್ ವ್ಯಾಪಾರಸ್ಥರಿಗೆ ಮರಳಿನ ಕೊರೆತೆಯಿಮದ ಸಮಸ್ಯೆಯಾಗಿದೆ. ಆದ್ದರಿಂದ ಮರಳಿನ ಅಗತ್ಯವಿದೆ. ಆದ್ದರಿಂದಲೇ ಜಿಲ್ಲಾಡಳಿತ ೩ ಪೋಲೀಸ್ ವಾಹನ ಸ್ಥಳದಲ್ಲೇ ಇರಿಸಿ ಒಂದಷ್ಟು ಪೊಲೀಸರನ್ನು ಭದ್ರತೆಗೆ ನಿಯೋಜಿಸಿ ಮರಳು ತೆಗೆಸುತ್ತಿದೆ. ಮಳೆಗಾಲವೂ ಸಮೀಪಿಸುತ್ತಿದ್ದು ಇನ್ನು ಸ್ವಲ್ಪ ಸಮಯ ಮಾತ್ರ ಮರಳು ತೆಗೆಯಬಹುದಾಗಿದೆ. ನಂತರ ಮತ್ತೆ ಮರಳಿನ ಕೊರತೆ ಉದ್ಭವವಾಗಲಿದೆ. ಜಿಲ್ಲಾಡಳಿತ ಅಧಿಕೃತವಾಗಿ ಟೆಂಡರ್ ನೀಡಿದ ಸ್ಥಳದಲ್ಲಿ ಕಾನೂನುಬದ್ಧವಾಗಿ ಮರಳು ತೆಗೆಯಲು ಬಿಡದಿದ್ದರೆ ಹೇಗೆ ಎಂಬ ಪ್ರಶ್ನೆ ಉದ್ಭವವಾಗಿದೆ.

administrator

Related Articles

Leave a Reply

Your email address will not be published. Required fields are marked *

You cannot copy content of this page