ವರದಿ : ಚಿತ್ತೂರು ಪ್ರಭಾಕರ ಆಚಾರ್ಯ
ಉಡುಪಿಮಿತ್ರ ಪತ್ರಿಕೆ ಸುದ್ಧಿ ;
ಬ್ರಹ್ಮಾವರ, ಫೆ.20:
ಪೃಕೃತಿ ಚೆನ್ನಾಗಿದ್ದರೆ ನಾವೆಲ್ಲ ಚೆನ್ನಾಗಿರುತ್ತೇವೆ. ಪೃಕೃತಿಯನ್ನು ಬಲಿಕೊಟ್ಟು ನಾವು ಬೆಳೆಯಬೇಕೆನ್ನುವುದು ಹುಚ್ಚುತನ. ಮುಂದಿನ ಪೀಳಿಗೆಯ ಉಳಿವಿಗೆ ಪೃಕೃತಿ ಮುಖ್ಯ. ಆ ಪೃಕೃತಿಯನ್ನು ಉಳಿಸುವ ಕೆಲಸವನ್ನು ಎಲ್ಲರೂ ಮಾಡಬೇಕು ಎಂದು ಮಹಾರಾಷ್ಟ್ರ ಕೊಲ್ಲಾಪುರ ಸಿದ್ದಗಿರಿ (ಕಾನೇರಿ) ಮಠದ ಪೂಜ್ಯ ಶ್ರೀ ಶ್ರೀ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ಆಶೀರ್ವಚನದಲ್ಲಿ ನುಡಿದರು. ಅವರು ಮುನಿಯಾಲು ಗೋಧಾಮಿನಲ್ಲಿ ನಡೆಯುತ್ತಿರುವ ಏಕ ಪವಿತ್ರ ನಾಗ ಮಂಡಲದ ಪೂರ್ವ ಭಾವಿಯಾಗಿ ಫೆ.೨೦ರಂದು ನಡೆದ ರೈತಪೀಠ ಪ್ರಶಸ್ತಿ ಪ್ರದಾನಿಸಿ ಮಾತನಾಡಿದರು.

ಭಾರತ ೩೩ ಕೋಟಿ ಟನ್ ಅನ್ನ ಬೆಳೆಯುತ್ತಿದೆ. ಬೆಳೆಯ ಕ್ವಾಂಟಿಟಿಯೇನೋ ನಮ್ಮಲ್ಲಿ ಹೆಚ್ಚಾಗಿದೆ. ಆದರೆ ಕ್ವಾಲಿಟಿ ಕಳೆದು ಹೋಗಿದೆ. ಕರಾವಳಿಯಲ್ಲಿ ೪೦೦ ಟಿಎಂಸಿ ನೀರು ಸಮುದ್ರಕ್ಕೆ ಹರಿದು ಹೋಗುತ್ತಿದೆ. ಭೂಮಿಯನ್ನು ಸೇರಿದ ರಸಾಯನಿಕಗಳು ಕೂಡ ನೀರನ್ನು ಸೇರುತ್ತಿದೆ. ಇದರಿಂದ ಪ್ರಾಣಿ ಪಕ್ಷಿಗಳ ಆರೋಗ್ಯವು ಹಾಳಾಗುತ್ತಿದೆ. ವಿದೇಶಿಗರು ಭಾರತದ ಅದೆಷ್ಟೋ ಗೋದಿ ಮತ್ತು ಅಕ್ಕಿಯನ್ನು ಹಿಂದಕ್ಕೆ ಕಳುಹಿಸುತ್ತಿದ್ದಾರೆ. ಕಾರಣ ಅದರಲ್ಲಿ ರಾಸಾಯನಿಕ ಅಂಶವಿದೆ ಎಂಬ ಉತ್ತರ ನೀಡುತ್ತಿದ್ದಾರೆ. ಅದೇ ಅಕ್ಕಿ, ಗೋದಿ ಉಚಿತ ಕೊಡುಗೆಯಾಗಿ ನಮ್ಮ ಮನೆ ಸೇರುತ್ತಿದೆ. ನಮ್ಮ ಆರೋಗ್ಯ ಮತ್ತು ಮಣ್ಣಿನ ಆರೋಗ್ಯ ಎರಡನ್ನೂ ನಾವು ಬಲಿ ಕೊಡುತ್ತಿದ್ದೇವೆ. ಇಂದು ಪ್ರತಿ ಮೂವರಲ್ಲಿ ಒಬ್ಬರು ಡಯಾಬಿಟಿಸ್ ಮತ್ತು ರಕ್ತದೊತ್ತಡದಲ್ಲಿದ್ದಾರೆ. ನಮಗೆ ಕ್ಯಾನ್ಸರ್ ನಮ್ಮ ಆಹಾರದಿಂದಲೇ ಬರುತ್ತಿದೆ. ನಾವು ಹೋಟೆಲ್‌ನಲ್ಲಿ ತಿಂದು ಆಸ್ಪತ್ರೆಯಲ್ಲಿ ಮಲಗುತ್ತಿದ್ದೇವೆ.
ಮುನಿಯಾಲು ಗೋದಾಮಿನ ಡಾ.ರಾಮಕೃಷ್ಣ ಆಚಾರ್ ಮಾದರಿ ಕೆಲಸ ಮಾಡಿದ್ದಾರೆ. ರೈತಪೀಠ ಪ್ರಶಸ್ತಿ ನೀಡಿ ಕೃಷಿಕರ ಗೌರವ ಹೆಚ್ಚಿಸಿದ್ದಾರೆ. ರೈತರ ಬಗ್ಗೆ, ಪೃಕೃತಿಯ ಬಗ್ಗೆ, ಕೃಷಿಯ ಬಗ್ಗೆ ಅವರು ತೋರಿಸುತ್ತಿರುವ ಕಾಳಜಿ ಮುಂದಿನ ಪೀಳಿಗೆಗೆ ಮಾದರಿಯಾಗಿದೆ ಎಂದರು.

ಬೆಳಗಾವಿ ನಿಡಸೋಸಿ ಶ್ರೀ ದುರದುಂಡೀಶ್ವರ ಸಿದ್ಧ ಸಂಸ್ಥಾನ ಮಠದ ಶ್ರೀ ಶ್ರೀ ನಿಜಲಿಂಗೇಶ್ವರ ಸ್ವಾಮೀಜಿ ಮಾತನಾಡಿ ಡಾ.ರಾಮಕೃಷ್ಣ ಆಚಾರ್ಯರು ಗುರಿ ಹಾಗೂ ಆದರ್ಶಗಳನ್ನಿರಿಸಿಕೊಂಡು ಸಾಧಕರಾಗಿ ಹೊರಹೊಮ್ಮಿದ್ದಾರೆ ಎಂದರು.
ಸಭಾಧ್ಯಕ್ಷತೆಯನ್ನು ಮೂಡಬಿದಿರೆಯ ಆಳ್ವಾಸ್ ಎಜುಕೇಶನ್ ಫೌಂಡೇಶನ್ (ರಿ.) ಅಧ್ಯಕ್ಷ ಡಾ.ಎಂ.ಮೋಹನ್ ಆಳ್ವಾ ವಹಿಸಿದ್ದು ಅವರು ಮಾತನಾಡುತ್ತಾ ರಾಮಕೃಷ್ಣ ಆಚಾರ್ ಹೋರಾಟದ ಪಥದಲ್ಲಿ ಬಂದವರು. ಅವರು ನಾಗ ಮಂಡಲವನ್ನು ಧಾರ್ಮಿಕ ಹಿನ್ನೆಲೆ ಹಾಗೂ ಕೃಷಿಗೆ ಪೂರಕವಾಗಿ ಹಮ್ಮಿಕೊಂಡಿದ್ದಾರೆ. ಕೃಷಿಯನ್ನು ಮುಂದಿನ ಜನಾಂಗಕ್ಕೆ ಆದರ್ಶವಾಗುವಂತೆ ತೋರಿಸಿದ್ದಾರೆ. ಅವರ ಗೋಧಾಮ ಬಹುಜನರನ್ನು ಆಕರ್ಷಿಸುವ ತಾಣವಾಗಿ ಬೆಳೆದಿದೆ ಎಂದರು.
ಮೂಡಬಿದರೆ ಎಸ್‌ಕೆಎಫ್ ಸಮೂಹ ಸಂಸ್ಥೆಯ ಸಂಸ್ಥಾಪಕ ಡಾ.ಜಿ.ರಾಮಕೃಷ್ಣ ಆಚಾರ್ ಪ್ರಾಸ್ತಾವಿಕವಾಗಿ ಮಾತನಾಡುತ್ತಾ ತಮ್ಮ ಬದುಕನ್ನೇ ಕೃಷಿ ಕಾಯಕಕ್ಕೆ ಅರ್ಪಿಸಿರುವ ರೈತರ ತ್ಯಾಗ, ಪರಿಶ್ರಮ ಮತ್ತು ರೈತರ ಮಹತ್ವವನ್ನು ಗುರುತಿಸುವ ಮಹತ್ವದ ಉದ್ದೇಶದಿಂದ ರೈತಪೀಠ ಎಂಬ ಗೌರವ ಪ್ರಶಸ್ತಿಯನ್ನು ಸ್ಥಾಪಿಸಿದ್ದೇವೆ. ರೈತರನ್ನು ಗೌರವಿಸುವುದು ನಮ್ಮ ಮುಖ್ಯ ಉದ್ದೇಶ. ನಮ್ಮ ಯುವ ಸಮುದಾಯ ಕೃಷಿಯತ್ತ ಆಕರ್ಷಿತರಾಗಬೇಕು, ಕೃಷಿಯನ್ನೂ ಕೂಡ ಕಾರ್ಪೋರೇಟ್ ವ್ಯವಸ್ಥೆಯ ಹಂತಕ್ಕೆ ಬೆಳೆಸಬೇಕು. ಪ್ರಕೃತಿಯಿಂದ ಪ್ರಕೃತಿಗೆ ಎಂಬ ವಿನೂತನ ಪರಿಕಲ್ಪನೆಯಲ್ಲಿ ಶ್ರೀಮನ್ನಾಗಮಂಡಲದಲ್ಲಿ ರೈತಪೀಠ ಪ್ರಶಸ್ತಿ ಪ್ರದಾನ ಮಾಡಿದ್ದೇವೆ ಎಂದರು.

ಉದ್ಯಮಿ ಮುನಿಯಾಲು ಉದಯಕುಮಾರ್ ಶೆಟ್ಟಿ ಮಾತನಾಡಿ ರಾಮಕೃಷ್ಣ ಆಚಾರ್ಯರು ಬರಡು ಭೂಮಿಯನ್ನು ಸುಂದರ ಕೃಷಿ ಭೂಮಿಯನ್ನಾಗಿ ಪರಿವರ್ತಿಸಿದ್ದಾರೆ. ರಾಮಕೃಷ್ಣ ಆಚಾರ್‌ರವರನ್ನು ದೇವರು ನಮ್ಮ ಊರಿಗೆ ಕೊಟ್ಟಿದ್ದಾನೆ ಎಂದು ಭಾವಿಸಿದ್ದೇನೆ. ಉದ್ಯಮಿಯಾಗಿ ಕೋಟಗಟ್ಟಲೆ ಸಂಪಾದನೆ ಮಾಡುವವರು ಸಾಕಷ್ಟು ಮಂದಿ ಇರಬಹುದು. ಆದರೆ ರಾಮಕೃಷ್ಣ ಆಚಾರ್ ರವರು ಯುವ ಜನತೆಗೆ ಮಾದರಿಯಾಗಿ ಕೆಲಸ ಮಾಡಿ ತೋರಿಸಿದ್ದಾರೆ. ಮುನಿಯಾಲಿನ ಗೋಧಾಮ ಪ್ರೇಕ್ಷಣೀಯ ಸ್ಥಳವಾಗಿ ಹೊರ ಹೊಮ್ಮಿದೆ ಎಂದರು.
ರಾಸಾಯನಿಕ ರಹಿತ ಕೃಷಿ ಮಾಡಬೇಕು – ದೇವರಾಯ ಮಿತ್ತ ಬಾಗಿಲು
ನನಗೆ ೮೧ ವರ್ಷ ಪ್ರಾಯ. ನಾನು ಪಿಯುಸಿ ಮುಗಿಸಿದ ತಕ್ಷಣ ಕೃಷಿ ಮಾಡಲು ಹೊರಟವನು. ೨೦ ಎಕ್ರೆ ಸಾಗುವಳಿ ಮಾಡುತ್ತಿದ್ದೆ. ೭ ಜೋಡಿ ಎತ್ತುಗಳನ್ನು ಕಟ್ಟುತ್ತಿದ್ದೆ. ನಾನು ಕೃಷಿಗೆ ಸ್ವಲ್ಪ ಸಮಯ ರಾಸಯನಿಕ ಗೊಬ್ಬರ ಬಳಸಿದ್ದೆ. ಆದರೆ ಅದು ಒಳಿತಲ್ಲ, ಭೂಮಿ ಹಾಳಾಗುತ್ತೆ ಎಂಬ ಸತ್ಯ ಗೊತ್ತಾಗಿ ಹಟ್ಟಿಗೊಬ್ಬರವನ್ನೇ ಬಳಸಿ ಕೃಷಿ ಮುಂದುವರಿಸಿದೆ. ಈಗ ಯಾವುದೇ ರಾಸಾಯನಿಕ ಗೊಬ್ಬರ ಬಳಸುತ್ತಿಲ್ಲ. ಎಲ್ಲರೂ ರಾಸಾಯನಿಕ ರಹಿತ ಕೃಷಿ ಮಾಡಬೇಕೆಂದು ರೈತ ಪೀಠ ಪ್ರಶಸ್ತಿ ಸ್ವೀಕರಿಸಿದ ದೇವರಾಯ ಮಿತ್ತಬಾಗಿಲು ನುಡಿದರು.

ವೇದಿಕೆಯಲ್ಲಿ ಮಂಗಳೂರು ವಿಶ್ವಕರ್ಮ ಸಹಕಾರಿ ಬ್ಯಾಂಕ್ ಅಧ್ಯಕ್ಷ ಡಾ.ಹರೀಶ್ ಆಚಾರ್ಯ ಜಲಕದಕಟ್ಟೆ, ಮಂಗಳೂರು ಎಸ್.ಕೆ.ಜಿ.ಐ.ಕೋ-ಆಪರೇಟಿವ್ ಸೊಸೈಟಿಯ ಅಧ್ಯಕ್ಷ ಪಿ.ಉಪೇಂದ್ರ ಆಚಾರ್ಯ, ಶ್ರೀಮತಿ ಸವಿತಾ ರಾಮಕೃಷ್ಣ ಆಚಾರ್, ಪ್ರಜ್ವಲ್ ಆರ್. ಆಚಾರ್ ಮೂಡಬಿದ್ರೆ ಉಪಸ್ಥಿತರಿದ್ದರು.
ಸಮಾರಂಭದಲ್ಲಿ 240ಕ್ಕೂ ಅಧಿಕ ಭಾರತೀಯ ಭತ್ತದ ತಳಿಗಳನ್ನು ಸಂರಕ್ಷಣೆ ಮಾಡಿದ ಅಪರೂಪದ ಕೃಷಿ ಋಷಿ ಪದ್ಮಶ್ರೀ ಬಿ.ಕೆ.ದೇವರಾಯ ಮಿತ್ತಬಾಗಿಲು ಇವರಿಗೆ ರೈತಪೀಠ ಪ್ರಶಸ್ತಿ ಪ್ರದಾನಿಸಲಾಯಿತು.
ನಿವೃತ್ತ ಪ್ರಾಧ್ಯಾಪಕ ಡಾ.ನರೇಂದ್ರ ರೈ ದೇರ್ಲ ಕೃಷಿ ಪೀಠ ಪುಸ್ತಕವನ್ನು ಪರಿಚಯಿಸಿದರು.
ದೇವಿ ಪ್ರಸಾದ ಶೆಟ್ಟಿ ಸಾಣೂರುಗುತ್ತು ಸ್ವಾಗತಿಸಿದರು. ಬಾರ್ಕೂರು ದಾಮೋಧರ ಶರ್ಮ ನಿರೂಪಿಸಿದರು.



