• April 13, 2026
  • Last Update April 13, 2026 6:06 am
  • Brahmavara

ಬಿರ್ತಿ ಶ್ರೀ ವೇಣುಗೋಪಾಲಕೃಷ್ಣ ದೇವರ ಪುನರ್ ಪ್ರತಿಷ್ಠೆ, ಬ್ರಹ್ಮಕಲಶ ಮಹೋತ್ಸವ

ಬಿರ್ತಿ ಶ್ರೀ ವೇಣುಗೋಪಾಲಕೃಷ್ಣ ದೇವರ ಪುನರ್ ಪ್ರತಿಷ್ಠೆ, ಬ್ರಹ್ಮಕಲಶ ಮಹೋತ್ಸವ

ವರದಿ : ಚಿತ್ತೂರು ಪ್ರಭಾಕರ ಆಚಾರ್ಯ
ಉಡುಪಿಮಿತ್ರ ಪತ್ರಿಕೆ ಸುದ್ದಿ :

ಬ್ರಹ್ಮಾವರ, ಎ.೧೨: ಭಗವಂತನ ಸನ್ನಿಧಾನವನ್ನು ಪೂರ್ಣವಾಗಿ ತುಂಬುವಂತಹ ಧಾರ್ಮಿಕ ಪ್ರಕ್ರಿಯೆಯನ್ನು ಬ್ರಹ್ಮಕಲಶ ಎನ್ನುತ್ತಾರೆ. ೧೨ ವರ್ಷಗಳಿಗೊಮ್ಮೆ ದೇವಾಲಯಗಳಲ್ಲಿ ಬ್ರಹ್ಮಕಲಶ ಆಚರಿಸುವ ಶಾಸ್ತ್ರೀಯ ಸಂಪ್ರದಾಯವಿದೆ. ಯಾಕೆಂದರೆ ಗರ್ಭಗುಡಿ ದೇಹವಿದ್ದಂತೆ. ನಮ್ಮ ದೇಹದಲ್ಲಿ ಚೈತನ್ಯ ಹೇಗೆ ಸನ್ನಿಹಿತವಾಗಿದೆಯೋ ಅದೇ ರೀತಿಯಲ್ಲಿ ಗರ್ಭಗುಡಿಯೊಳಗೆ ಭಗವಂತನ ಚೈತನ್ಯವಿರುತ್ತದೆ. ನಮ್ಮ ದೇಹದೊಳಗಿನ ಚೈತನ್ಯ (ಜೀವ) ದೇಹದಲ್ಲಿ ಬಹಳ ಕಾಲ ಇರಬೇಕಾದಲ್ಲಿ ದೇಹ ಸರಿ ಇರಬೇಕು. ದೇಹಕ್ಕೆ ಸರಿಯಾದ ರೀತಿಯಲ್ಲಿ ನಾವು ಸಂಸ್ಕಾರ ಕೊಡಬೇಕು. ಗರ್ಭಗುಡಿಯೊಳಗಿನ ಚೈತನ್ಯ ಸರಿ ಇರಬೇಕಾದರೆ ಗರ್ಭಗುಡಿ ಸರಿ ಇರಬೇಕೆಂದು ಉಡುಪಿ ಕಾಣಿಯೂರು ಮಠದ ವಿದ್ಯಾವಲ್ಲಭ ತೀರ್ಥ ಸ್ವಾಮೀಜಿ ಆಶೀರ್ವಚನದಲ್ಲಿ ನುಡಿದರು. ಅವರು ವಾರಂಬಳ್ಳಿ ಬಿರ್ತಿ ಶ್ರೀ ವೇಣುಗೋಪಾಲಕೃಷ್ಣ ದೇವರ ಪುನರ್ ಪ್ರತಿಷ್ಠೆ ಹಾಗೂ ಬ್ರಹ್ಮಕಲಶ ಮಹೋತ್ಸವದ ಧಾರ್ಮಿಕ ಸಭೆಯನ್ನುದ್ದೇಶಿಸಿ ಮಾತನಾಡಿದರು.


ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದ ಕೋಟ ಶ್ರೀನಿವಾಸ ಪೂಜಾರಿ ಭಾಗವಹಿಸಿ iತನಾಡಿ ಬಿರ್ತಿಯಲ್ಲಿ ಗೊಲ್ಲ ಸಮುದಾಯದ ಒಗ್ಗಟ್ಟಿನ ಸಂಕೇತವಾಗಿ ದೇವಸ್ಥಾನ ಸುಂದರವಾಗಿ ನಿರ್ಮಾಣಗೊಂಡಿದೆ ಎಂದರು.


ಉಡುಪಿ ವಿಧಾನಸಭಾ ಕ್ಷೇತ್ರದ ಶಾಸಕ ಯಶಪಾಲ್ ಎ.ಸುವರ್ಣ ಮಾತನಾಡಿ ದೇವರನ್ನು ನಂಬುವ ಹಾಗೂ ಧಾರ್ಮಿಕವಾಗಿ ತೊಡಗಿಸಿಕೊಳ್ಳುವ ಏಕೈಕ ಹಿಂದೂ ರಾಷ್ಟ್ರವೆಂದರೆ ಅದು ಭಾರತ. ಇಲ್ಲಿನ ಸಂಸ್ಕೃತಿ, ಧಾರ್ಮಿಕ ಚಟುವಟಿಕೆಗಳನ್ನು ಬೇರೆ ಯಾವುದೇ ದೇಶದಲ್ಲೂ ಕಾಣಲು ಸಾಧ್ಯವಿಲ್ಲ ಎಂದರು.
ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಪ್ರಕಾಶ್ ಗೊಲ್ಲ ಅಧ್ಯಕ್ಷತೆ ವಹಿಸಿದ್ದರು.


ಅತಿಥಿಗಳಾಗಿ ಸಂಸ್ಕೃತಿ ವಿಶ್ವಪ್ರತಿಷ್ಠಾನ ಉಡುಪಿ ಇದರ ಶ್ರೀ ವಿಶ್ವನಾಥ ಶೆಣೈ, ಬ್ರಹ್ಮಾವರ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಬಿರ್ತಿ ರಾಜೇಶ್ ಶೆಟ್ಟಿ, ನ್ಯಾಯವಾದಿ ಬೈಕಾಡಿ ಸುಪ್ರಸಾದ್ ಶೆಟ್ಟಿ, ಬ್ರಹ್ಮಾವರ ವ್ಯವಸಾಯ ಸೇವಾ ಸಹಕಾರಿ ಸಂಘದ ನಿರ್ದೇಶಕ ಎಸ್ ನಾರಾಯಣ, ವಾರಂಬಳ್ಳಿ ಗ್ರಾಮ ಪಂಚಾಯತ್ ನಿಕಟಪೂರ್ವ ಅಧ್ಯಕ್ಷ ನಿತ್ಯಾನಂದ ಬಿ.ಆರ್., ಉಡುಪಿ ಜಿಲ್ಲಾ ಗೊಲ್ಲ (ಯಾದವ) ಸಮಾಜದ ಅಧ್ಯಕ್ಷ ದಯಾನಂದ ಬಿ.ಆರ್ ಭಾಗವಹಿಸಿದ್ದರು.


ಸಭಾ ಕಾರ್ಯಕ್ರಮದಲ್ಲಿ ಕರುಣಾಕರ ಗೊಲ್ಲ, ಗಣೇಶ ಬಸ್ರೂರು (ಶಿಲ್ಪಿ), ಶಂಕರ ಗೊಲ್ಲ, ಶ್ರೀಮತಿ ಸರಸ್ವತಿ ಟೀಚರ್, ಲಕ್ಷ್ಮೀನಾರಾಯಣ ಅಡಿಗ, ಬಿ.ರಾಜರಾಮ ಸೋಮಯಾಜಿ, ಶ್ರೀಮತಿ ಶೈಲಾ ಮತ್ತು ಸತೀಶ ಯಾದವ್, ವಾಸ್ತು ಶಿಲ್ಪಿ ಗಣೇಶ್ ಹಿರಿಯಡಕ, ಪ್ರವರ್ಧನ ಬಿ.ಆರ್. ಶ್ರೀಧರ ಗೊಲ್ಲ ಬಿರ್ತಿ, ಬ್ರಹ್ಮಕಲಶ ಧಾರ್ಮಿಕ ವಿಧಿ ನೆರವೇರಿಸಿದ ಲಕ್ಷ್ಮೀನಾರಾಯಣ ಅಡಿಗ, ರಾಜಾರಾಮ ಸೋಮಯಾಜಿ, ಸ್ಳಳದಾನ ನೀಡಿದ ರಾಮ ಗೊಲ್ಲ ಹಾಗೂ ದೇವಸ್ಥಾನ ನಿರ್ಮಾಣಕ್ಕೆ ಆರ್ಥಿಕ ಸಹಕಾರ ನೀಡಿದ ಪೋಷಕರನ್ನು ಗೌರವಿಸಲಾಯಿತು.


ರತ್ನಾಕರ ಯಾದವ ಸನ್ಮಾನಿತರ ವಿವರ ನೀಡಿದ್ದು, ಶಿವ ಶಂಕರ್ ಯು. ಸ್ವಾಗತಿಸಿದರು. ಆರ್ ಜೆ.ಪ್ರಸನ್ನ ನಿರೂಪಿಸಿ ವಂದಿಸಿದರು.
ಪೂರ್ವಾಹ್ನ ಬ್ರಹ್ಮಕಲಶ, ಅಭಿಷೇಕ ಸಹಿತ ಧಾರ್ಮಿಕ ಪ್ರಕ್ರಿಯೆಗಳು ನಡೆದವು.

administrator

Related Articles

Leave a Reply

Your email address will not be published. Required fields are marked *

You cannot copy content of this page