• March 26, 2026
  • Last Update March 24, 2026 3:28 pm
  • Brahmavara

ಬ್ರಹ್ಮಾವರ ಬ್ಲಾಕ್ ಕಾಂಗ್ರೆಸ್ ಕಚೇರಿ ಉದ್ಘಾಟನೆ

ಬ್ರಹ್ಮಾವರ ಬ್ಲಾಕ್ ಕಾಂಗ್ರೆಸ್ ಕಚೇರಿ ಉದ್ಘಾಟನೆ

ವರದಿ : ಚಿತ್ತೂರು ಪ್ರಭಾಕರ ಆಚಾರ್ಯ
ಉಡುಪಿಮಿತ್ರ ಪತ್ರಿಕೆ ಸುದ್ಧಿ :
ಬ್ರಹ್ಮಾವರ, ಜೂನ್೧: ಪೊಲೀಸ್ ಅಧಿಕಾರಿಗಳು ಕೋಮು ಸಂಘರ್ಷದ ಯಾವುದೇ ಸುಳಿವು ಸಿಕ್ಕಿದರೂ ಅದರ ವಿರುದ್ಧ ಆರಂಭದಲ್ಲೇ ಕಠಿಣ ಕ್ರಮ ಜರುಗಿಸಬೇಕು. ಯಾರು ಕ್ರಿಮಿನಲ್ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುತ್ತಾರೋ ಅವರ ಮೇಲೆ ನಿರ್ಧಾಕ್ಷಣ್ಯ ಕ್ರಮ ಕೈಗೊಳ್ಳಬೇಕು. ಯಾವುದೇ ಧರ್ಮದವ ತಪ್ಪು ಮಾಡಿದರೂ ಅದು ತಪ್ಪೇ. ಕಾನೂನಿನ ದೃಷ್ಟಿಯಲ್ಲಿ ಎಲ್ಲರೂ ಸಮಾನರು. ದೇಶದ ೧೪೦ ಕೋಟಿ ಜನರನ್ನು ಒಟ್ಟು ಸೇರಿಸುವ ಶಕ್ತಿ ಸಂವಿಧಾನಕ್ಕೆ ಇದೆ. ಈ ದೇಶದಲ್ಲಿ ಎಲ್ಲರೂ ಸಮಾನತೆಯಲ್ಲಿ ಬದುಕಬೇಕೆಂದು ಮಾಜಿ ಸಚಿವ, ಕೆ.ಪಿ.ಸಿ.ಸಿ. ರಾಜ್ಯ ಪ್ರಚಾರ ಸಮಿತಿ ಅಧ್ಯಕ್ಷ ವಿನಯಕುಮಾರ ಸೊರಕೆ ನುಡಿದರು. ಅವರು ಬ್ರಹ್ಮಾವರದ ರುಚಿರ ಕಾಂಪ್ಲೆಕ್ಸ್‌ನಲ್ಲಿ ನೂತನವಾಗಿ ಆರಂಭಗೊಂಡ ಬ್ಲಾಕ್ ಕಾಂಗ್ರೆಸ್ ಕಚೇರಿಯನ್ನು ಉದ್ಘಾಟಿಸಿ ಮಾತನಾಡಿದರು.


ಮಾಜಿ ಸಚಿವ ಜಯಪ್ರಕಾಶ್ ಹೆಗ್ಡೆ ಮಾತನಾಡಿ ಕಾರ್ಯಕರ್ತರು ಕೆಲಸ ಮಾಡಿದರೆ ನಾಯಕರಿಗೆ ಸ್ಥಾನ. ಕಾರ್ಯಕರ್ತರು ಬೂತ್ ಮಟ್ಟದಲ್ಲಿ ಕೆಲಸ ಮಾಡಬೇಕು. ಜಿಲ್ಲಾ ಪಂಚಾಯತ್ , ತಾಲೂಕು ಪಂಚಾಯತ್ ಚುನಾವಣೆಯಲ್ಲಿ ಗೆದ್ದರೆ ಮಾತ್ರ ನಾಯಕರಿಗೆ ಗೆಲುವು ದೊರಕಲಿದೆ. ಅಕ್ಟೋಬರ್, ನವಂಬರ್ ಸಂದರ್ಭ ತಾಲೂಕು ಪಂಚಾಯತ್, ಜಿಲ್ಲಾ ಪಂಚಾಯತ್ ಚುನಾವಣೆ ನಡೆಯಲಿದ್ದು ಗೆಲುವಿಗಾಗಿ ಈಗಲೆ ಸರ್ವ ಸಿದ್ದತೆ ಆರಂಭಿಸಬೇಕೆಂದು ನುಡಿದರು.


ಕಾಂಗ್ರೆಸ್ ಮುಖಂಡ ಪ್ರಸಾದ್ ರಾಜ್ ಕಾಂಚನ್ ಮಾತನಾಡಿ ಅನೇಕ ವರ್ಷಗಳಿಂದ ಉಡುಪಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ ಗೆಲ್ಲಲು ಸಾಧ್ಯವಾಗಿಲ್ಲ. ಮುಂದಿನ ಗೆಲುವು ನಮ್ಮದಾಗಬೇಕು. ಅದಕ್ಕಾಗಿ ಬ್ರಹ್ಮಾವರ ಬ್ಲಾಕ್ ಕಾಂಗ್ರೆಸ್‌ನಲ್ಲಿ ಉತ್ತಮ ತಂಡ ರಚಿಸಲಿದ್ದೇವೆ. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಕಚೇರಿಯ ಸ್ವಂತ ಕಟ್ಟಡವನ್ನು ತೆರೆಯಲಿದ್ದೇವೆ ಎಂದರು.
ಬ್ರಹ್ಮಾವರ ಬ್ಲಾಕ್ ಕಾಂಗ್ರೆಸ್ ನೂತನ ಅಧ್ಯಕ್ಷ ರಾಘವೇಂದ್ರ ಶೆಟ್ಟಿ ಕರ್ಜೆ ಅಧ್ಯಕ್ಷತೆ ವಹಿಸಿದ್ದು ಅವರು ಮಾತನಾಡಿ ಬ್ರಹ್ಮಾವರ ಬ್ಲಾಕ್ ವ್ಯಾಪ್ತಿಯಲ್ಲಿ ೧೫ ಪಂಚಾಯತ್‌ಗಳಲ್ಲಿ ಬಲಾಡ್ಯವಾಗಿ ಯುವ ಪಡೆ ಕಟ್ಟದೇ ಹೋದಲ್ಲಿ, ಯುವಕರನ್ನು ಸಂಘಟಿಸದೇ ಹೋದಲ್ಲಿ ಯಾವತ್ತೂ ನಮಗೆ ಅಧಿಕಾರ ಪಡೆಯಲು ಸಾಧ್ಯವೇ ಇಲ್ಲ ಎಂದರು.
ಕಾಂಗ್ರೆಸ್‌ನ ಉಡುಪಿ ಜಿಲ್ಲಾ ಕಾರ್ಯಾಧ್ಯಕ್ಷ ಕಿಶನ್ ಹೆಗ್ಡೆ ಕೊಳ್ಕೆಬೈಲು, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಜ್ಯೋತಿ ಹೆಬ್ಬಾರ್, ಅಶೋಕ್ ಕುಮಾರ್ ಶೆಟ್ಟಿ ಮೈರ್ಮಾಡಿ, ಉಪ್ಪೂರು ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ರಮೇಶ್ ಶೆಟ್ಟಿ ಹಾವಂಜೆ, ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಭುಜಂಗ ಶೆಟ್ಟಿ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಸುಧಾಕರ ಶೆಟ್ಟಿ, ಬ್ರಹ್ಮಾವರ ಬ್ಲಾಕ್ ಕಾಂಗ್ರೆಸ್ ಉಸ್ತುವಾರಿ ಪ್ರಖ್ಯಾತ್ ಶೆಟ್ಟಿ, ಉಡುಪಿ ವಿಧಾನ ಸಭಾಕ್ಷೇತ್ರ ಯುವ ಕಾಂಗ್ರೆಸ್ ಅಧ್ಯಕ್ಷ ಸುದೇಶ್ ಶೆಟ್ಟಿ, ಜಿಲ್ಲಾ ಯುವ ಕಾಂಗ್ರೆಸ್ ಉಪಾಧ್ಯಕ್ಷ ಅರ್ಜುನ್ ನಾಯರಿ, ಗ್ಯಾರೆಂಟಿ ಯೋಜನೆಯ ಅನುಷ್ಟಾನ ಸಮಿತಿ ಅಧ್ಯಕ್ಷೆ ಡಾ.ಸುನಿತಾ ಶೆಟ್ಟಿ, ಉಡುಪಿ ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಅಧ್ಯಕ್ಷ ಸುದೇಶ್ ಶೆಟ್ಟಿ, ಬ್ರಹ್ಮಾವರ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ರಾಯ್‌ಸ್ಟನ್ ಹಾಗೂ ಬ್ಲಾಕ್ ಕಾಂಗ್ರೆಸ್‌ನ ವಿವಿಧ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಜ್ಯೋತಿ ಹೆಬ್ಬಾರ್‌ರನ್ನು ಸನ್ಮಾನಿಸಲಾಯಿತು. ಸಭೆಯಲ್ಲಿ ಹಾರಾಡಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಕುಮಾರ್ ಹಾಗೂ ವಿಜಯ ನಾಯರಿ ಬ್ರಹ್ಮಾವರ ತಮ್ಮ ಅಭಿಪ್ರಾಯ ಮಂಡಿಸಿದರು. ತಾಲೂಕು ಪಂಚಾಯತ್ ಮಾಜಿ ಸದಸ್ಯ ನಿತ್ಯಾನಂದ ಶೆಟ್ಟಿ ಹಾರಾಡಿ ಪ್ರಾಸ್ತಾವಿಕ ಮಾತುಗಳನ್ನಾಡಿ ಕಾರ್ಯಕ್ರಮ ನಿರೂಪಿಸಿದರು. ಕು.ಪ್ರಥ್ವಿ ಪ್ರಾರ್ಥಿಸಿದರು.

administrator

Related Articles

Leave a Reply

Your email address will not be published. Required fields are marked *

You cannot copy content of this page