• March 26, 2026
  • Last Update March 24, 2026 3:28 pm
  • Brahmavara

ಬ್ರಹ್ಮಾವರ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಬೆಂಗಳೂರು ಘಟಕ ರಚನೆಗೆ ಸಭೆ

ಬ್ರಹ್ಮಾವರ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಬೆಂಗಳೂರು ಘಟಕ ರಚನೆಗೆ ಸಭೆ

ವರದಿ : ಚಿತ್ತೂರು ಪ್ರಭಾಕರ ಆಚಾರ್ಯ
ಉಡುಪಿಮಿತ್ರ ಪತ್ರಿಕೆ ಸುದ್ಧಿ :

ಬೆಂಗಳೂರು, ಸೆ.7:
ಬ್ರಹ್ಮಾವರ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಘಟಕ ರಚನೆ ಸೆ.7ರಂದು ಬೆಂಗಳೂರಿನ ಶೇಷಾದ್ರಿಪುರಂನಲ್ಲಿರುವ ಹೋಟೆಲ್ ಸಾಮ್ರಾಟ್ ಸಭಾಂಗಣದಲ್ಲಿ ನಡೆಯಿತು.
ಈ ಸಂದರ್ಭ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಗೋವಿಂದರಾಜ್ ಹೆಗ್ಡೆಯವರು ಮಾತನಾಡಿ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಈಗಾಗಲೆ ಅಷ್ಟಮಂಗಲ ಪ್ರಶ್ನೆ ನಡೆಸಲಾಗಿದೆ. ಪ್ರಶ್ನೆಯಲ್ಲಿ ಕಂಡು ಬಂದಿರುವ ದೋಷ ಪರಿಹಾರಕ್ಕಾಗಿ 2 ಬಾರಿ ಪ್ರಾಯಶ್ಚಿತ್ತ ಕಾರ್ಯಕ್ರಮ ಮುಗಿಸಲಾಗಿದೆ. ದೇವಸ್ಥಾನ ಪುನಾರಚನೆಗೆ ಮುಜರಾಯಿ ಇಲಾಖೆಯ ಅನುಮತಿ ದೊರಕಿರುತ್ತದೆ. ನೂತನ ದೇವಾಲಯದ ನಕ್ಷೆಯನ್ನು ತಯಾರಿಸಲಾಗಿದೆ. ಈಗಾಗಲೆ ಬ್ರಹ್ಮಾವರ ಮಾಗಣೆಯ ಚಾಂತಾರು, ಮಟಪಾಡಿ, ವಾರಂಬಳ್ಳಿ, ಹಾರಾಡಿ, ಬೈಕಾಡಿ, ಹೇರೂರು, ಹಂದಾಡಿ ಹಾಗೂ ಕುಮ್ರಗೋಡು ಗ್ರಾಮಗಳಲ್ಲಿ ಪ್ರತಿ ಮನೆಯಿಂದಲೂ ಒಂದು ತೆಂಗಿನ ಕಾಯಿ ಹಾಗೂ ಜೀಣೋದ್ಧಾರ ಸಂಕಲ್ಪ ಕಾಣಿಕೆಯನ್ನು ಸಂಗ್ರಹಿಸಲಾಗುತ್ತಿದೆ. ಒಟ್ಟು 2832 ಮನೆಗಳಿಂದ ಈವರೆಗೆ ಕಾಣಿಕೆ ಸಂಗ್ರಹವಾಗಿದ್ದು ಉಳಿದ ಮನೆಗಳಿಂದಲೂ ಕಾಣಿಕೆ ಬರುತ್ತಿದೆ. ದೇವಸ್ಥಾನದ ಜೀರ್ಣೋದ್ಧಾರಕ್ಕೆ ಹೊರಗಡೆಯ ಭಕ್ತಾಧಿಗಳಿಂದಲೂ ದೇಣಿಗೆ ಸಂಗ್ರಹಿಸುತ್ತಿದ್ದು ಬೆಂಗಳೂರಿನಲ್ಲಿ ಜೀರ್ಣೊದ್ಧಾರ ಘಟಕ ರಚಿಸಿದ್ದು ಘಟಕದ ಎಲ್ಲಾ ಸದಸ್ಯರು ಜೀರ್ಣೊದ್ಧಾರಕ್ಕೆ ಪೂರ್ಣ ಸಹಕಾರ ನೀಡಬೇಕೆಂದು ವಿನಂತಿಸಿದರು.


ಜೀರ್ಣೋದ್ಧಾರ ಕೆಲಸಕ್ಕೆ ನಾವು ವೇಗ ಹೆಚ್ಚಿಸಲಿದ್ದು ಬೆಂಗಳೂರಿನಲ್ಲಿ ವಾಸವಾಗಿರುವ ಭಕ್ತಾದಿಗಳು ದೊಡ್ಡಮಟ್ಟದಲ್ಲಿ ಸಹಕಾರ ಕೊಡಬೇಕಾಗಿದೆ. ಮಹಾಲಿಂಗೇಶ್ವರ ದೇವಸ್ಥಾನ ಜೀರ್ಣೋದ್ಧಾರಗೊಂಡು ಇಲ್ಲಿಗೆ ಬರುವ ಭಕಾದಿಗಳ ಸಂಖ್ಯೆ ಮತ್ತಷ್ಟು ಹೆಚ್ಚಳವಾದಲ್ಲಿ ಬ್ರಹ್ಮಾವರ ಸಮಗ್ರ ಅಭಿವೃದ್ಧಿಯಾಗಲಿದೆ. ಬೆಂಗಳೂರು ಘಟಕದ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಉದಯ ಹೆಗ್ಡೆಯವರು ಈ ಹಿಂದೆ ರಥ ನಿರ್ಮಾಣ ಸಂದರ್ಭ ಮರವನ್ನು ಒದಗಿಸುವಲ್ಲಿ ಸಹಕಾರ ನೀಡಿದ್ದಾರೆ. ಮುಂದೆಯೂ ಸಹಕಾರ ನೀಡುವಂತೆ ಅವರು ವಿನಂತಿಸಿದರು.


ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ನಿತ್ಯಾನಂದ ಶೆಟ್ಟಿ ಹಾರಾಡಿ ಮಾತನಾಡಿ ಆಧ್ಯಾತ್ಮಿಕವಾಗಿ ತೊಡಗಿಸಿಕೊಂಡಲ್ಲಿ ಖಂಡಿತವಾಗಿಯೂ ಎಲ್ಲರಿಗೂ ನೆಮ್ಮದಿ ಸಿಗಲಿದೆ. ಆದ್ದರಿಂದ ನಾವೆಲ್ಲರೂ ಧಾರ್ಮಿಕ ಚಟುವಟಿಕೆಗಳಲ್ಲಿ ಹೆಚ್ಚು ತೊಡಗಿಸಿಕೊಳ್ಳಬೇಕು. ದೇವರ ಸೇವೆಗೆ ನೀಡಿದ ಸಮಯಕ್ಕೆ ಹಾಗೂ ದೇವಾಲಯಗಳ ಅಭಿವೃದ್ಧಿಗೆ ನೀಡಿದ ಕೊಡುಗೆಗೆ ಭಗವಂತ ನಮಗೆ ಉತ್ತಮ ಪ್ರತಿಫಲ ಕೊಡುತ್ತಾನೆ. ಸಾವಿರಾರು ವರ್ಷಗಳಿಗೂ ಮಿಕ್ಕಿ ಇತಿಹಾಸ ಹೊಂದಿರುವ ಬ್ರಹ್ಮಾವರ ದೇವಸ್ಥಾನ ಜೀರ್ಣೋದ್ಧಾರದ ಹೊಸ್ತಿಲಲ್ಲಿದ್ದು ಎಲ್ಲಾ ಭಕ್ತಾದಿಗಳು ಸಹಕಾರ ನೀಡುವಂತೆ ಕೋರಿಕೊಂಡರು.
ಬೆಂಗಳೂರು ಘಟಕದ ಅಧ್ಯಕ್ಷ ಉದಯಕುಮಾರ್ ಹೆಗ್ಡೆ ಮಾತನಾಡಿ ಬೆಂಗಳೂರಿನಲ್ಲಿರುವ ಎಲ್ಲಾ ಭಕ್ತಾದಿಗಳು ಮನಸ್ಸು ಮಾಡಿ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಅತಿ ಹೆಚ್ಚಿನ ದೇಣಿಗೆ ನೀಡುವಂತೆ ಸೂಚಿಸಿದರು.


ಡಾ. ಜಗದೀಶ್ ಶೆಟ್ಟಿಯವರು ಮಾತನಾಡಿ ಬ್ರಹ್ಮಾವರ ಅತ್ಯಂತ ವೇಗವಾಗಿ ಬೆಳೆಯುತ್ತಿದೆ. ಹೀಗೆ ಬೆಳೆಯುತ್ತಿರುವ ಈ ಊರಲ್ಲಿ ಈ ದೇವಸ್ಥಾನವನ್ನು ಜೀರ್ಣೋದ್ಧಾರ ಮಾಡದೆ ಇಟ್ಟುಕೊಂಡಲ್ಲಿ ಊರಿಗೆ ಶುಭ ತರಲ್ಲ. ದೇವಸ್ಥಾನದ ಪ್ರತಿಯೊಬ್ಬ ಭಕ್ತರು ಇದು ನಮ್ಮ ದೇವಸ್ಥಾನವಾಗಿದ್ದು ಇದರ ಜೀರ್ಣೋದ್ಧಾರ ನಮ್ಮ ಜವಾಬ್ದಾರಿ ಎಂಬುದನ್ನು ಅರಿತು ಜೀಣೋದ್ಧಾರಕ್ಕೆ ಸಹಕಾರ ನೀಡಬೇಕೆಂದು ನುಡಿದರು.


ಬೆಂಗಳೂರು ಘಟಕದ ಪ್ರಧಾನ ಕಾರ್ಯದರ್ಶಿ ಸಂತೋಷ ಕುಮಾರ್ ಶೆಟ್ಟಿಯವರು ಮಾತನಾಡಿ ಕರಾವಳಿ ಭಾಗದ ಅನೇಕ ದೇವಾಲಯಗಳ ಜೀರ್ಣೋದ್ಧಾರ ಆಗಿದ್ದು ಬ್ರಹ್ಮಾವರದ ಮಹಾಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಬಾಕಿ ಉಳಿದಿದ್ದು ಎಲ್ಲರೂ ಸಹಕಾರ ನೀಡಿದಲ್ಲಿ ಸುಂದರ ದೇವಾಲಯ ನಿರ್ಮಿಸಲು ಸಾಧ್ಯ ಎಂದರು.
ವೇದಿಕೆಯಲ್ಲಿ ಸಂತೋಷ್ ಬಿರ್ತಿ, ದಿನೇಶ್ ಹೆಗ್ಡೆ ಹಾರಾಡಿ, ಶೈಲಾಶ್ರೀ ನಾಯರಿ, ದಿನೇಶ್ ವಾರಂಬಳ್ಳಿ, ರತ್ನಾಕರ ಹೆಗ್ಡೆ ಹಾರಾಡಿ, ಅಶೋಕ್ ಶೆಟ್ಟಿ ಹಾರಾಡಿ, ಮಧುಸೂದನ ನಾಯರಿ ಮಟಪಾಡಿ, ಜಯವರ್ಧನ ಬಿರ್ತಿ ಇನ್ನಿತರರಿದ್ದರು.


ಜೀರ್ಣೋದ್ಧಾರ ಸಮಿತಿ ಪ್ರಧಾನ ಕಾರ್ಯದರ್ಶಿ ವಿಶ್ವನಾಥ ಶೆಟ್ಟಿ ಪ್ರಾಸ್ತಾವಿಕ ಮಾತುಗಳನ್ನಾದ್ದು ಇನ್ನೋರ್ವ ಪ್ರಧಾನ ಕಾರ್ಯದರ್ಶಿ ಸೂರ್ಯನಾರಾಯಣ ಗಾಣಿಗ ಮಟಪಾಡಿ ಸ್ವಾಗತಿಸಿದರು. ಹರೀಶ್ ವಂದಿಸಿದ್ದು ಪತ್ರಕರ್ತ ಚಿತ್ತೂರು ಪ್ರಭಾಕರ ಆಚಾರ್ಯ ನಿರೂಪಿಸಿದರು.

administrator

Related Articles

Leave a Reply

Your email address will not be published. Required fields are marked *

You cannot copy content of this page