ವರದಿ : ಚಿತ್ತೂರು ಪ್ರಭಾಕರ ಆಚಾರ್ಯ
ಉಡುಪಿ ಮಿತ್ರ ಪತ್ರಿಕೆ ಸುದ್ಧಿ:
ಬ್ರಹ್ಮಾವರ, ಅ.೨೬:
ಬ್ರಹ್ಮಾವರ ವ್ಯವಸಾಯ ಸೇವಾ ಸಹಕಾರಿ ಸಂಘ ಇದರ ಶತಮಾನೋತ್ತರ ದಶಮಾನೋತ್ಸವದ ಅಂಗವಾಗಿ ಅಕ್ಟೋಬರ್ ೨೬ ಆದಿತ್ಯವಾರದಂದು ಬ್ರಹ್ಮಾವರ ರುಡ್‌ಸೆಟ್ ಹತ್ತಿರದ ದೇವಕಿ ಕನ್ವೆನ್ಷನ್ ಸೆಂಟರ್ ಉನ್ನತಿ ವೈಭವ ೨೦೨೫ ಕಾರ್ಯಕ್ರಮ ಬಹು ಸಂಭ್ರಮದಲ್ಲಿ ಜರುಗಿತು. ಸಮಾರಂಭದಲ್ಲಿ ಸಂಘದ ೧೧ ಗ್ರಾಮ ಪಂಚಾಯತ್ ವ್ಯಾಪ್ತಿಯ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಜನಪದ ಕಲಾಸ್ಪರ್ಧೆ ಹಾಗೂ ವಿದ್ಯಾಥಿಗಳಿಗೆ ವಿದ್ಯಾರ್ಥಿ ವೇತನ ವಿತರಣೆ, ಶೈಕ್ಷಣಿಕ ಕಾರ್ಯಗಾರ ನಡೆಯಿತು. ಇದೇ ಸಂದರ್ಭ ಕೃಷಿಕರನ್ನು, ಹೈನುಗಾರರನ್ನು, ಪಿಗ್ಮಿ ಸಂಗ್ರಾಹಕರನ್ನು, ಕಾವಲುಗಾgರನ್ನು, ಚಿನ್ನ ಪರಿಶೀಲಿಸುವವರನ್ನು ಸನ್ಮಾನಿಸಲಾಯಿತು.

ಉದ್ಘಾಟನಾ ಸಮಾರಂಭ :
ಜನಪದ ಕಲಾ ಸ್ಪರ್ಧಾ ಕಾರ್ಯಕ್ರಮವನ್ನು ಪೂರ್ವಾಹ್ನ ೯.೩೦ಕ್ಕೆ ಚಾಂತಾರು ಗ್ರಾಮ ಪಂಚಾಯತ್ ಅಧ್ಯಕ್ಷೆ ಪ್ರೇಮಾ ಶೆಟ್ಟಿ ಉದ್ಘಾಟಿಸಿದರು. ಅವರು ಮಾತನಾಡಿ ಬ್ರಹ್ಮಾವರ ಸೊಸೈಟಿ ಗ್ರಾಹಕರಿಗೆ ಉತ್ತಮ ಸೇವೆ ನೀಡುತ್ತಿದ್ದು ೧೧೦ ವರ್ಷಗಳ ಸವಿನೆನಪಿಗಾಗಿ ಸಂಘ ಉತ್ತಮ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದರು.
ಸಂಘದ ಅಧ್ಯಕ್ಷ ಬಿರ್ತಿ ರಾಜೇಶ್ ಶೆಟ್ಟಿ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದು ಅವರು ಮಾತನಾಡಿ ೧೧೦ ವರ್ಷಗಳ ಕಾಲ ಯಶಸ್ವಿಯಾಗಿ ಈ ಸಂಸ್ಥೆ ಯಾವುದೇ ಕಪ್ಪು ಚುಕ್ಕೆ ಇಲ್ಲದೆ ನಡೆದು ಬಂದಿದೆ. ೧೧೦ ವರ್ಷಗಳ ಸವಿ ನೆನಪಿನ ಸಂದರ್ಭ ಮಕ್ಕಳಿಗೆ ರಾಷ್ಟ್ರದ ಮೇಲಿನ ಭಕ್ತಿ ಮೂಡಿಸುವ ಕೆಲಸ ಮಾಡುವ ಉದ್ದೇಶದಲ್ಲಿ, ಸಂಸ್ಥೆಯ ಅಭಿವೃದ್ಧಿಗೆ ಕಾರಣರಾದವರಿಗೆ ಕೃತಜ್ಞತೆ ಹಾಗೂ ಗೌರವ ಸಲ್ಲಿಸಲು ಈ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಸಂಘದ ವ್ಯಾಪ್ತಿಯ ವಿದ್ಯಾರ್ಥಿಗಳಿಗೆ ಪ್ರತೀ ವರ್ಷ ೭ಲಕ್ಷ ರೂ ವಿದ್ಯಾರ್ಥಿ ವೇತನ ನೀಡಿದೆ. ಸಹಕಾರಿ ಸಂಸ್ಥೆ ಮನೆಕಟ್ಟಲು, ಅನಾರೋಗ್ಯಕ್ಕೊಳಗಾದವರ ಚಿಕಿತ್ಸೆಗೆ, ಮದುವೆಗೆ, ಇನ್ನಿತರ ಆರ್ಥಿಕ ಬೇಡಿಕೆಗೆ ತುರ್ತು ಸೇವೆ ನೀಡುತ್ತಾ ಬಂದಿದೆ ಎಂದರು. ಈ ಸಂದರ್ಭದಲ್ಲಿ ಸಂಘದ ಮಾಜಿ ಅಧ್ಯಕ್ಷ ರಾಮಣ್ಣ ಅಡಿಗ, ಸಂಘದ ಹಿರಿಯ ಸದಸ್ಯ ಭಾಸ್ಕರ ರೈ, ಉಪಾಧ್ಯಕ್ಷ ಗಣೇಶ್ ಪ್ರಸಾದ್ ಶೆಟ್ಟಿ, ದೇವಕಿ ಕನ್ವೆಷನ್ ಸಭಾಂಗಣದ ಮಾಲಕ ಭರತ್ ಕುಮಾರ್ ಶೆಟ್ಟಿ ಹಾಗೂ ಸಂಘದ ಎಲ್ಲಾ ನಿರ್ದೇಶಕರು ಉಪಸ್ಥಿತರಿದ್ದರು.
ಸುಬ್ರಹ್ಮಣ್ಯ ಗಾಣಿಗ ಪ್ರಾರ್ಥಿಸಿ, ಸಂಘದ ಕಾರ್ಯನಿರ್ವಹಣಾಕಾರಿ ಎಚ್.ಸುಭಾಶ್ಚಂದ್ರ ಶೆಟ್ಟಿ ಸ್ವಾಗತಿಸಿದರು. ಆರ್.ಜೆ.ಪ್ರಸನ್ನ ನಿರೂಪಿಸಿ, ವಂದಿಸಿದರು. ನಂತರ ಪ್ರೌಢಶಾಲಾ ವಿದ್ಯಾರ್ಥಿಗಳಿಂದ ಸ್ಪರ್ಧಾ ಕಾರ್ಯಕ್ರಮ ನಡೆಯಿತು. ಸ್ಪರ್ಧಾ ಕಾರ್ಯಕ್ರಮದ ತೀರ್ಪುಗಾರರಾಗಿ ಅದಿತಿ ಪ್ರೀತಮ್ ಭಟ್, ಅಭಿಜಿತ್ ಪಾಂಡೇಶ್ವರ, ರಾಜೇಶ್ವರಿ ಪ್ರಕಾಶ್ ಭಾಗವಹಿಸಿದ್ದರು.
ಮಧ್ಯಾಹ್ನ ಊಟದ ನಂತರ ರಾಷ್ಟ್ರಮಟ್ಟದ ವಿಕಾಸನ ತರಬೇತುದಾರ ರಾಜೇಂದ್ರ ಭಟ್ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಮಾಹಿತಿ ನೀಡಿದರು.

ಸಮಾರೋಪ ಸಮಾರಂಭ :
ಸಮಾರೋಪ ಸಮಾರಂಭ ಮಧ್ಯಾಹ್ನ ೩.೩೦ಕ್ಕೆ ನಡೆಯಿತು. ಉಡುಪಿ ಶಾಸಕ ಯಶಪಾಲ್ ಸುವರ್ಣ ಸಮಾರೋಪ ಉದ್ಘಾಟಿಸಿ ಬ್ರಹ್ಮಾವರ ವ್ಯವಸಾಯ ಸೇವಾ ಸಹಕಾರಿ ಸಂಘ ಸ್ವಾತಂತ್ರ್ಯ ಪೂರ್ವದಲ್ಲಿ ಆರಂಭಗೊಂಡು ಕರಾವಳಿ ಕರ್ನಾಟಕದ ಪ್ರತಿಷ್ಟಿತ ಸಹಕಾರಿ ಸಂಘವಾಗಿ ಬೆಳೆದು ಬಂದಿದೆ. ಆಡಳಿತ ಮಂಡಳಿ ಸಿಬ್ಬಂದಿಗಳು ಒಗ್ಗಟ್ಟಾಗಿ ಕೆಲಸ ಮಾಡಿದಾಗ ಯಾವುದೇ ಸಹಕಾರಿ ಸಂಘದ ಅಭಿವೃದ್ಧಿ ಸಾಧ್ಯ ಎಂಬುದಕ್ಕೆ ಈ ಸಹಕಾರಿ ಸಂಘ ಸಾಕ್ಷಿಯಾಗಿದೆ ಎಂದರು.

ಸಮಾರಂಭದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಬಿರ್ತಿ ರಾಜೇಶ್ ಶೆಟ್ಟಿ ವಹಿಸಿದ್ದು ಅವರು ಮಾತನಾಡಿ ಸಂಘ ೧೦೦೦ ಕೋಟಿ ವ್ಯವಹಾರ ಮಾಡುತ್ತಿದ್ದು ೫ ಕೋಟಿಗೂ ಮಿಕ್ಕಿ ಲಾಭವನ್ನು ಪ್ರತಿ ವರ್ಷ ಗಳಿಸುತ್ತಾ ಬಂದಿದೆ. ದಿ.ಇರ್ಮಾಡಿ ತಿಮ್ಮಪ್ಪ ಹೆಗ್ಡೆಯವರು ಹಾಗೂ ಮಾಜಿ ಅಧ್ಯಕ್ಷ ವೆಂಕಟ್ರಾಯ ನಾಯಕ್ ಜೋಡೆತ್ತಿನ ರೀತಿಯಲ್ಲಿ ಈ ಸಂಸ್ಥೆಯನ್ನು ಕಟ್ಟಿ ಬೆಳೆಸಿದ್ದರು ಎಂದರು.

ಮುಖ್ಯ ಅತಿಥಿಗಳಾಗಿ ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನಕರ ಹೇರೂರು, ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಇಂದ್ರಾಳಿ ಜಯಕರ ಶೆಟ್ಟಿ, ಮಾಜಿ ಅಧ್ಯಕ್ಷ ಸುಂಕೇರಿ ವೆಂಕಟ್ರಾಯ ನಾಯಕ್ ಭಾಗವಹಿಸಿದ್ದರು.
ವೇದಿಕೆಯಲ್ಲಿ ಉಪಾಧ್ಯಕ್ಷ ಗಣೇಶ್ ಪ್ರಸಾದ್ ಶೆಟ್ಟಿ, ನಿರ್ದೇಶಕರಾದ ರಾಜೇಶ್ ಮರಕಾಲ, ಉಲ್ಲಾಸ್ ನಾಯಕ್, ಶ್ರೀಮತಿ ನಾಗವೇಣಿ ಪಂಡರೀನಾಥ, ಎಸ್.ದಯಾನಂದ ನಾಯಕ್, ಶ್ರೀನಿವಾಸ ಶೆಟ್ಟಿ, ಸಂತೋಷ್ ಜತ್ತನ್, ಎಸ್.ನಾರಾಯಣ, ನಿತ್ಯಾನಂದ ನಾಯ್ಕ್ ಹಾಗೂ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹೆಚ್.ಸುಭಾಶ್ಚಂದ್ರ ಶೆಟ್ಟಿ ಉಪಸ್ಥಿತರಿದ್ದರು.

ಈ ಸಂದರ್ಭ ಕೃಷಿಕರಾದ ಶಂಕರ ಪೂಜಾರಿ, ಭಾಸ್ಕರ ಶೆಟ್ಟಿ ಚೇರ್ಕಾಡಿ, ಕೃಷ್ಣ ಆರ್. ಶೆಟ್ಟಿ, ಪ್ರಭಾಕರ ನಾಯಕ್, ಐತ ಪೂಜಾರಿ, ಸುಕ್ರ ಪೂಜಾರಿ, ರಾಮ ಪೂಜಾರಿ ಹಾಗೂ ಹೈನುಗಾರರಾದ ಶ್ರೀಮತಿ ಸರೋಜಿನಿ, ಶ್ರೀಮತಿ ಸುಜಾತ ಆರೂರು, ಪ್ರಭಾವತಿ ಶೆಟ್ಟಿ ಅಗ್ರಹಾರ, ಶ್ರೀಮತಿ ಗಿರಿಜಾ ಶೆಟ್ಟಿ, ಶ್ರೀಮತಿ ಸುಲೋಚನ ಅಗ್ರಹಾರ, ಶ್ರೀಮತಿ ದಿವ್ಯಾ ಅಲ್ಮೇಡ, ಶ್ರೀಮತಿ ಲಕ್ಷ್ಮೀ ನಾಯ್ಕ್, ಪಿಗ್ಮಿ ಏಜೆಂಟರಾದ ಶಿವರಾಮ ಅಡಿಗ, ಸುಜಾತ ಶೆಟ್ಟಿ, ಚಿನ್ನ ಪರಿಶೀಲಿಸುವ ಪ್ರಕಾಶ್ ಆಚಾರ್ಯ ಹಾರಾಡಿ, ರಮೇಶ್ ಆಚಾರ್ಯ, ರವಿ ಆಚಾರ್ಯ ಕಾವಲುಗಾರರಾದ ರಾಜೇಂದ್ರ ಸೇರಿಗಾರ, ರಂಗ ದೇವಾಡಿಗ, ಪಾಂಡುರಂಗ, ಪ್ರಭಾಕರ ಶೆಟ್ಟಿಗಾರ್, ಸುರೇಶ್ ಪೂಜಾರಿ, ಜಯ ಕೋಟ್ಯಾನ್‌ರನ್ನು ಗೌರವಿಸಲಾಯಿತು.

ಇರ್ಮಾಡಿ ಸಂಸ್ಮರಣೆ :
೩೫ ವರ್ಷಗಳ ಕಾಲ ಅಧ್ಯಕ್ಷರಾಗಿ ಉತ್ತಮ ಸೇವೆ ಸಲ್ಲಿಸಿ ನಿಧನರಾಗಿರುವ ಇರ್ಮಾಡಿ ತಿಮ್ಮಪ್ಪ ಹೆಗ್ಡೆಯವರನ್ನು ಹಿರಿಯ ನಿರ್ದೇಶಕ ಜ್ಞಾನ ವಸಂತ ಶೆಟ್ಟಿ ಸ್ಮರಿಸಿ ಮಾತನಾಡುತ್ತಾ ತಿಮ್ಮಪ್ಪ ಹೆಗ್ಡೆಯವರು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಸಂಘವನ್ನು ಕಟ್ಟಿ ಬೆಳೆಸಲು ಕಾರಣರಾಗಿದ್ದರು. ಅವರು ಎಲ್ಲರಿಗೂ ಪ್ರೇರಣೆಯಾಗಿದ್ದರು. ಅವರ ಸ್ಫೂರ್ತಿ, ಮಾರ್ಗದರ್ಶನ ಅಮೂಲ್ಯವಾದದ್ದು ಎಂದರು.

ಜನಪದಾ ಕಲಾಸ್ಪರ್ಧೆಯಲ್ಲಿ ಜಿ.ಎಮ್.ವಿದ್ಯಾನಿಕೇತನ ಪಬ್ಲಿಕ್ ಸ್ಕೂಲಿನ ವಿದ್ಯಾರ್ಥಿಗಳಿಗೆ ಪ್ರಥಮ, ಎಸ್.ಎಮ್.ಎಸ್.ಸಿ.ಬಿ.ಎಸ್.ಸಿ. ಸ್ಕೂಲಿಗೆ ದ್ವಿತೀಯ ಬಹುಮಾನ ಹಾಗೂ ಬೋರ್ಡ್ ಹೈಸ್ಕೂಲಿನ ವಿದ್ಯಾರ್ಥಿಗಳಿಗೆ ತೃತೀಯ ಬಹುಮಾನ ದೊರಕಿದ್ದು ಶಾಸಕ ಯಶಪಾಲ ಸುವರ್ಣ ಬಹುಮಾನ ವಿತರಿಸಿದರು.
ಸಂಘದ ಸಿಬ್ಬಂದಿ ವಾಸುದೇವ ನಕ್ಷತ್ರಿ ವಿದ್ಯಾರ್ಥಿ ವೇತನ ಪಡೆದ ವಿದ್ಯಾರ್ಥಿಗಳ ವಿವರ ನೀಡಿದರು. ನಿರ್ದೇಶಕ ಕಮಲಾಕ್ಷ ಹೆಬ್ಬಾರ್ ಸ್ವಾಗತಿಸಿದರು. ಮ್ಯಾನೇಜರ್ ಪ್ರಕಾಶ್ ಸನ್ಮಾನಿತರ ವಿವರ ನೀಡಿದ್ದು ರಘುರಾಮ ಬೈಕಾಡಿ ಪ್ರಾರ್ಥಿಸಿದರು. ನಿರ್ದೇಶಕರಾದ ಶ್ರೀಮತಿ ನಳಿನಿ ಪ್ರದೀಪ್ ರಾವ್ ವಂದಿಸಿದರು. ಆರ್.ಜೆ. ಪ್ರಸನ್ನ ಕಾರ್ಯಕ್ರಮ ನಿರೂಪಿಸಿದರು. ಸಂಘದ ಸಿಬ್ಬಂದಿಗಳು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.
ಕೊನೆಯಲ್ಲಿ ಅತಿಥಿ ಕಲಾವಿದರ ಕೂಡುವಿಕೆಯಲ್ಲಿ ಮಾರುತಿ ಪ್ರತಾಪ ಯಕ್ಷಗಾನ ಪ್ರದರ್ಶನಗೊಂಡಿತು.



