ವರದಿ : ಚಿತ್ತೂರು ಪ್ರಭಾಕರ ಆಚಾರ್ಯ
ಉಡುಪಿತ್ರ ಪತ್ರಿಕೆ ಸುದ್ಧಿ:
ಬ್ರಹ್ಮಾವರ, ಜು.೨೬:
ಬ್ರಹ್ಮಾವರದ ಮಹೇಶ್ ಆಸ್ಪತ್ರೆಯಿಂದ ಎಸ್.ಎಮ್.ಎಸ್. ವರೆಗೆ ಎರಡೂ ಕಡೆಗಳಲ್ಲಿ ಮಳೆಗಾಲದಲ್ಲಿ ಸರ್ವಿಸ್ ರಸ್ತೆಯನ್ನು ಅರೆಬರೆಯಾಗಿ ನಿರ್ಮಿಸಿದ್ದು ಸಾರ್ವಜನಿಕರಿಗೆ ಸಾಕಷ್ಟು ತೊಂದರೆಯಾಗಿದೆ. ರಾಷ್ಟ್ರೀಯ ಹೆದ್ದಾರಿ -66 ಉಳಿಸಿ ಹೋರಾಟ ಸಮಿತಿ ಈ ಕಾಮಗಾರಿ ಪೂರ್ಣಗೊಳಿಸದೇ ಇರುವ ಕುರಿತು ಹಾಗೂ ಈ ಹಿಂದೆ ಆಗ್ರಹಿಸುತ್ತಾ ಬಂದಿರುವ ಮಾಬುಕಳದಿಂದ ಭದ್ರಗಿರಿಯವರೆಗೆ ಎರಡು ಕಡೆಗಳಲ್ಲಿ ತುರ್ತಾಗಿ ಸರ್ವಿಸ್ ರಸ್ತೆ, ಪ್ಲೈಓವರ್ ನಿರ್ಮಿಸಲು ಆಗ್ರಸುವ ಕುರಿತು ಚರ್ಚಿಸಲು ಜು.26ರಂದು ಬ್ರಹ್ಮಾವರ ಆಶ್ರಯ ಸಭಾಂಗಣದಲ್ಲಿ ಸಮಿತಿ ಅಧ್ಯಕ್ಷ ಗೋವಿಂದರಾಜ್ ಹೆಗ್ಡೆಯವರ ಅಧsಕ್ಷತೆಯಲ್ಲಿ ಸಭೆ ನಡೆಸಿ ಸೆಪ್ಟಂಬರ್ 4 ರಂದು ಬ್ರಹ್ಮಾವರ ಬಂದ್ ಮಾಡುವ ನಿರ್ಧಾರ ಕೈಗೊಂಡಿದೆ.
ಸೆಪ್ಟಂಬರ್ 4 ರಂದು ಬ್ರಹ್ಮಾವರ ಬಂದ್ ಮಾಡಲಿದ್ದೇವೆ – ಗೋವಿಂದರಾಜ್ ಹೆಗ್ಡೆ
ಬ್ರಹ್ಮಾವರದಲ್ಲಿ ಮಾಬುಕಳದಿಂದ ಭದ್ರಗಿರಿಯವರೆಗೆ ಎರಡು ಕಡೆಗಳಲ್ಲಿ ತುರ್ತಾಗಿ ಸರ್ವಿಸ್ ರಸ್ತೆ ನಿರ್ಮಿಸಬೇಕು. ಬ್ರಹ್ಮಾವರದಲ್ಲಿ 7 ಪಿಲ್ಲರ್ ಪ್ಲೈಓವರ್‌ಗಳನ್ನು ಮಾಡಬೇಕು. ಮೂರು ಕಡೆಗಳಲ್ಲಿ ಮಿಡಿಯನ್ ಓಪನ್ ಮಾಡಬೇಕು. ಇದಕ್ಕೆ ಅಗಸ್ಟ್ ಅಂತ್ಯದವರೆಗೆ ನಾವು ಕಾಯಲಿದ್ದು ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ, ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ಪತ್ರ ಬರೆಯಲಿದ್ದೇವೆ. ಒಂದು ವೇಳೆ ಅವರು ಅಗಸ್ಟ್ ಅಂತ್ಯದೊಳಗೆ ಕಾಮಗಾರಿಯನ್ನು ಮಾಡದೇ ಇದ್ದಲ್ಲಿ ಸೆಪ್ಟಂಬರ್ ೪ ರಂದು ಬ್ರಹ್ಮಾವರ ಬಂದ್ ಮಾಡಲಿದ್ದೇವೆ. ಅಂದು8 ಗ್ರಾಮದ ಜನರನ್ನು ಹಾಗೂ ಸಂಘ ಸಂಸ್ಥೆಯವರನ್ನು ಸೇರಿಸಿಕೊಂಡು ಫಾರ್ಚುನ್ ಪ್ಲಾಜಾ ಹೋಟೆಲ್‌ನಿಂದ ಧರ್ಮಾವರ ಅಡಿಟೋರಿಯಂವರೆಗೆ ಸರ್ವಿಸ್ ರಸ್ತೆಯನ್ನು ನಿರ್ಮಿಸಲಿದ್ದೇವೆ. ಇದಕ್ಕೆ ಬೇಕಾದ ಜೆಸಿಬಿ, ಟಿಪ್ಪರ್‌ಗಳನ್ನು ಎನ್.ಎಚ್.ಎ.ಐ.ಯವರಿಂದ ಜಿಲ್ಲಾಧಿಕಾರಿಯವರು ಕೊಡಿಸಬೇಕೆಂದು ರಾಷ್ಟ್ರೀಯ ಹೆದ್ದಾರಿ -66 ಉಳಿಸಿ ಹೋರಾಟ ಸಮಿತಿ ಅಧ್ಯಕ್ಷ ಗೋವಿಂದರಾಜ್ ಹೆಗ್ಡೆ ತಿಳಿಸಿದರು. ಅವರು ಬ್ರಹ್ಮಾವರ ಆಶ್ರಯ ಸಭಾಂಗಣದಲ್ಲಿ ನಡೆಸಿದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದರು.

ಜಿಲ್ಲಾಧಿಕಾರಿಯವರು ಕರೆದ ಹಲವಾರು ಸಭೆಗಳಲ್ಲಿ ಭಾಗವಹಿಸಿ ಬ್ರಹ್ಮಾವರದ ಬೇಡಿಕೆಯ ಬಗ್ಗೆ ಸಮಿತಿ ವತಿಯಿಂದ ಪ್ರತಿಪಾದನೆ ಮಾಡಿದ್ದೇವೆ. 28.03.2023ಕ್ಕೆ ಬ್ರಹ್ಮಾವರದಲ್ಲಿ ಸಾವಿರಾರು ಜನರು, ನೂರಾರು ವಾಹನ ಚಾಲಕ ಮಾಲಕರನ್ನು ಸೇರಿಕೊಂಡು ಪ್ರತಿಭಟನೆ ಮಾಡಿದ್ದೇವೆ. ಅದಾದ ನಂತರ 31..೦3.2023ರಂದು ಎ.ಸಿ.ಯವರ ಅಧ್ಯಕ್ಷತೆಯಲ್ಲಿ ಸಭೆ ನಡೆದಿದ್ದು ಆ ಸಭೆಯಲ್ಲೂ ಪ್ಲೈ ಓವರ್ ಹಾಗೂ ಸರ್ವಿಸ್ ರಸ್ತೆ ಆಗಬೇಕೆಂದು ಆಗ್ರಹಿಸಿದ್ದೇವೆ. ನಂತರ 22.02.2024ರಂದು ರೂ. 89 ಕೋಟಿ ವೆಚ್ಚದ ಟೆಂಡರ್ ಆಗಿದ್ದು ಈ ಟೆಂಡರ್‌ನಲ್ಲೂ ನಮ್ಮ ಬೇಡಿಕೆಯ ಕೆಲಸವನ್ನು ಸೇರಿಸಿಲ್ಲ. ಕುಂದಾಪುರದಿಂದ ಸುರತ್ಕಲ್‌ವರೆಗೆ ನಂತೂರಿನಿಂದ ತಲಪಾಡಿಯವರೆಗೆ ಸರ್ವಿಸ್ ರಸ್ತೆ, ಅಂಬಲಪಾಡಿಯಲ್ಲಿ ಓವರ್ ಪಾಸ್ ಹಾಗೂ 6 ಕಡೆಗಳಲ್ಲಿ ಫೂಟ್‌ಓವರ್ ಬ್ರಿಡ್ಜ್‌ಗಳನ್ನು ಮಾಡಲು ಅದರಲ್ಲಿ ನಿರ್ಧಾರ ತೆಗೆದುಕೊಂಡಿದ್ದಾರೆ. ಈ ಆದೇಶದಲ್ಲಿ 13.13 ಕಿ.ಮೀಟರ್ ಸರ್ವಿಸ್ ರಸ್ತೆ ಅಂತ ಇದೆ. ಇದು ಎರಡು ಕಡೆಯೋ ಅಥವಾ ಒಂದು ಕಡೆಯೋ ಎಂಬುದು ಗೊತ್ತಿಲ್ಲ. ಬ್ರಹ್ಮಾವರದಲ್ಲಿ ಅಪಘಾತವೊಂದು ನಡೆದ ನಂತರ ಎಪ್ರಿಲ್8 ರಂದು ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಂಸದರ ಅಧ್ಯಕ್ಷತೆಯಲ್ಲಿ ಸಭೆ ನಡೆಸಿದ್ದು ಆ ಸಭೆಯಲ್ಲಿ ಭದ್ರಗಿರಿಯಿಂದ ಉಪ್ಪಿನಕೋಟೆಯವರೆಗೆ ಎರಡೂ ಕಡೆ 2ವರೆ ಕಿ.ಮೀ. ಸರ್ವಿಸ್ ರಸ್ತೆ ನಿರ್ಮಿಸಬೇಕೆಂದು ಸಂಸದರು ಸೂಚನೆ ಕೊಟ್ಟಿದ್ದರು. ಆದರೆ ತುರ್ತಾಗಿ ಅವಶ್ಯವಿರುವ ಕಡೆಗಳಲ್ಲಿ ಸರ್ವಿಸ್ ರಸ್ತೆ ಮಾಡುವುದಾಗಿ ಎನ್.ಎಚ್.ಎ.ಐ ಯವರು ಭರವಸೆ ನೀಡಿದ್ದರು. ಆಗಲೇ ಇವರು ತಕ್ಷಣ ಗುತ್ತಿಗೆದಾರರಿಗೆ ಪತ್ರ ಬರೆದು ಕೆಲಸ ಆರಂಭಿಸಬೇಕಿತ್ತು. ಹಾಗೆ ಮಾಡಿದ್ದರೆ ಮೇ.1ರೊಳಗೆ ಕೆಲಸ ಮುಗಿಸಬಹುದಿತ್ತು. ಆದರೆ ಇವರು ಎ.24ಕ್ಕೆ ಪುನಃ ಸಂಸದರು ಸ್ಥಳಕ್ಕೆ ಬಂದ ಮೇಲೆ ಕಾಮಗಾರಿಯನ್ನು ಪ್ರಾರಂಭಿಸಿದ್ದಾರೆ. ಮಳೆ ಬರುವಾಗ ಕಾಮಗಾರಿ ಪ್ರ್ರಾರಂಭಿಸಿದ್ದರಿಂದ ನಿಂತು ಹೋಗಿ ಸಾರ್ವಜನಿಕರಿಗೆ ಮತ್ತಷ್ಟು ತೊಂದರೆ ಆಗಿದೆ. ಎನ್.ಎಚ್.ಎ.ಐ.ಯವರ ಯಾವುದೇ ಮಾತಿನ ಭರವಸೆ ನಂಬುವ ಸ್ಥಿತಿಯಲ್ಲಿ ನಾವಿಲ್ಲ. ಲಿಖಿತ ಭರವಸೆ ಕೊಟ್ಟಲ್ಲಿ ಪ್ರತಿಭಟನೆ ಹಿಂಪಡೆಯಬಹುದು. ಇಲ್ಲವಾದಲ್ಲಿ ಸೆ.4ರಂದು ಬ್ರಹ್ಮಾವರ ಬಂದ್ ಮಾಡಲಾಗುವುದು ಎಂದು ಗೋವಿಂದರಾಜ್ ಹೆಗ್ಡೆ ತಿಳಿಸಿದರು.

ಪತ್ರಿಕಾಗೋಷ್ಟಿಯಲ್ಲಿ ಬಿ ಭುಜಂಗ ಶೆಟ್ಟಿ, ಟ್ಯಾಕ್ಸಿ ಮಾಲಕರ ಸಂಘದ ಅಧ್ಯಕ್ಷ ರಮೇಶ ನಾಯ್ಕ, ರಿಕ್ಷಾ ಚಾಲಕ ಮಾಲಕರ ಗೌರವ ಅಧ್ಯಕ್ಷ ರಾಜು ಪೂಜಾರಿ, ಸಿ.ಐ.ಟಿ.ಯು ಉಡುಪಿ ಜಿಲ್ಲಾ ಉಪಾಧ್ಯಕ್ಷ ಬಾಲಕೃಷ್ಣ ಶೆಟ್ಟಿ, ಎಸ್.ಎಮ್.ಎಸ್. ಸಂಸ್ಥೆಯ ಆಲ್ವಾರಿಸ್ ಡಿಸಿಲ್ವ, ದಯಾನಂದ ಶೆಟ್ಟಿ ಹಾರಾಡಿ, ಪ್ರತೀತ್ ಹೆಗ್ಡೆ, ಟೆಂಪೋ ಮಾಲಕರ ಸಂಘದ ಗೌರವ ಅಧ್ಯಕ್ಷ ವಿಶ್ವನಾಥ ಶೆಟ್ಟಿ, ರಾಜರಾಮ್ ಶೆಟ್ಟಿ ಆಶ್ರಯ, ಬ್ರಹ್ಮಾವರ ಸ್ಪೋರ್ಟ್ಸ್ ಕ್ಲಬ್‌ನ ಚಂದ್ರಶೇಖರ ಹೆಗ್ಡೆ, ಕಟ್ಟಡ ಕಾರ್ಮಿಕರ ಸಂಘದ ಪದಾಧಿಕಾರಿಗಳು, ಉಡುಪಿ ಜಿಲ್ಲಾ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ಹೋರಾಟ ವೇದಿಕೆ ಸದಸ್ಯರು, ಬ್ರಹ್ಮಾವರ ಗೂಡ್ಸ್ ವಾಹನ ಚಾಲಕ ಮಾಲಕರ ಸಂಘದ ಸದಸ್ಯರು ಭಾಗವಹಿಸಿದ್ದರು.




