ವರದಿ : ಚಿತ್ತೂರು ಪ್ರಭಾಕರ ಆಚಾರ್ಯ
ಬ್ರಹ್ಮಾವರ, ಡಿ.೨೫ : ಯಾವುದೇ ಪಕ್ಷದ ಸರಕಾರವಿರಲಿ, ಆ ಸರಕಾರ ಶಿಕ್ಷಣ ಹಾಗೂ ಆರೋಗ್ಯಕ್ಕೆ ಹೆಚ್ಚು ಪ್ರೋತ್ಸಾಹ ಕೊಟ್ಟಿದ್ದರೆ ಇಂದು ಶಿಕ್ಷಣ ಖಾಸಗಿಯವರ ಪಾಲಾಗುತ್ತಿಲ್ಲ. ಸರಕಾರಗಳ ನಿರ್ಲಕ್ಷತನದಿಂದ ಖಾಸಗಿ ಶಿಕ್ಷಣ ಸಂಸ್ಥೆಗಳು ಹೆಚ್ಚು ಬೆಳೆದು ನಿಂತವು. ಸರಕಾರಿ ಶಿಕ್ಷಣ ಸಂಸ್ಥೆಗಳಿಗೆ ಸರಕಾರ ಮೂಲ ಸೌಕರ್ಯ್ಯ ಒದಗಿಸದೇ ಇದ್ದಾಗ ಹಳೆ

ವಿದ್ಯಾರ್ಥಿಗಳು ಸಂಘಟಿತರಾಗಿ ಆ ಕೆಲಸ ಮಾಡಿದರೆ ಸರಕಾರಿ ಶಾಲೆಗಳು ಖಂಡಿತವಾಗಿಯೂ ಅಭಿವೃದ್ಧಿ ಹೊಂದಲಿವೆ ಎಂದು ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಕಿರಣ್ ಕುಮಾರ್ ಕೊಡ್ಗಿ ನುಡಿದರು. ಅವರು ಮಂದಾರ್ತಿ ಶ್ರೀ ದುರ್ಗಾಪರಮೇಶ್ವರೀ ಪ್ರೌಢಶಾಲೆಯ ಸುವರ್ಣ ಹೆಜ್ಜೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸರಕಾರಿ ಶಾಲೆಯಲ್ಲಿ ಅತ್ಯುತ್ತಮ ಗುಣಮಟ್ಟದ ಶಿಕ್ಷಣ ದೊರೆತಲ್ಲಿ ಆ ಶಾಲೆಗಳಲ್ಲೂ ಮಕ್ಕಳ ಸಂಖ್ಯೆ ಹೆಚ್ಚಾಗಲಿದೆ ಎಂಬುದಕ್ಕೆ ಅಮಾಸೆಬೈಲು ಶಾಲೆ ಸಾಕ್ಷಿ. ಶಿಕ್ಷಕರು ಗುಣಮಟ್ಟದ ಶಿಕ್ಷಣ ನೀಡಲು ಪ್ರಯತ್ನಿಸಬೇಕು. ಹಳೆ ವಿದ್ಯಾರ್ಥಿಗಳು ಮೂಲ ಸೌಕರ್ಯ ಒದಗಿಸಿದಲ್ಲಿ ಶಾಲೆಯಲ್ಲಿ ಗತ ವೈಭವವನ್ನು ಮರುಸ್ಥಾಪಿಸಲು ಸಾಧ್ಯವಾಗಲಿದೆ. ಶಿಕ್ಷಕರು, ಹಳೆ ವಿದ್ಯಾರ್ಥಿಗಳು ಸೇರಿ ಪೋಷಕರಿಗೆ ವಿಶ್ವಾಸ ಬೆಳೆಯುವ ರೀತಿಯಲ್ಲಿ ಸಂಸ್ಥೆಯನ್ನು ಕಟ್ಟಿ ಬೆಳೆಸಿದರೆ ಖಂಡಿತವಾಗಿಯೂ ಸರಕಾರಿ ಶಾಲೆಗಳಲ್ಲೂ ಮಕ್ಕಳ ಸಂಖ್ಯೆ ಹೆಚ್ಚಾಗಲಿದೆ ಎಂದರು.

ಪೋಷಕರು ಮಾತೃಭಾಷೆ ಕಲಿಸಬೇಕು – ಜಯಪ್ರಕಾಶ್ ಹೆಗ್ಡೆ :
ಮಾಜಿ ಸಚಿವ ಜಯಪ್ರಕಾಶ್ ಹೆಗ್ಡೆ ಸಮಾರಂಭ ಉದ್ಘಾಟಿಸಿ ಮಾತನಾಡುತ್ತಾ ಪೋಷಕರು ಮೊದಲು ಮಾತೃ ಭಾಷೆಯನ್ನು ತಮ್ಮ ಮಕ್ಕಳಿಗೆ ಕಲಿಸಬೇಕು. ಊರನ್ನು ತೊರೆದವರು ಮನೆಯಲ್ಲಾದರೂ ಮಾತೃ ಭಾಷೆಯಲ್ಲಿ ಮಾತನಾಡಿದಾಗ ಮಕ್ಕಳು ಆ ಭಾಷೆಯನ್ನು ಕಲಿಯುತ್ತಾರೆ. ಮನೆಯಲ್ಲಿ ಉತ್ತಮ ಸಂಸ್ಕಾರ, ಶಾಲೆಯಲ್ಲಿ ಉತ್ತಮ ಶಿಕ್ಷಣ ಮಕ್ಕಳಿಗೆ ದೊರಕುವಂತಾಗಬೇಕು. ಕರಾವಳಿಯಲ್ಲಿ ಕನ್ನಡದ ಬಗ್ಗೆ ಹಿಡಿತ ಸಾಧಿಸಲು ಯಕ್ಷಗಾನ ಕಾರಣ. ಯಕ್ಷಗಾನದಲ್ಲಿ ಪ್ರಸಂಗ ಬಿಟ್ಟು ರಾಜಕೀಯ ಮಾತನಾಡಬಾರದು. ಕಲೆ ರಾಜಕಾರಣ ಆಗಬಾರದು. ರಾಜಕಾರಣ ಕಲೆಯಾಗಬಾರದು. ಉಡುಪಿ ಮಂಗಳೂರಿನ ಮಕ್ಕಳು ಎಲ್ಲವುದರಲ್ಲೂ ಮುಂದೆ ಹೋಗುತ್ತಾರೆ. ಆದರೆ ಸರಕಾರಿ ಉದ್ಯೋಗ ಹಿಡಿಯುವುದರಲ್ಲಿ ವಿಫಲರಾಗುತ್ತಿದ್ದಾರೆ. ಇಂತಹ ಮಕ್ಕಳಿಗೆ ಸರಕಾರ ಸ್ವ ಉದ್ಯೋಗದಲ್ಲಿ ತೊಡಗಿಸಿಕೊಳ್ಳಲು ವ್ಯವಸ್ಥೆ ಮಾಡಬೇಕು ಎಂದರು.
ಶ್ರೀಮತಿ ಅಮೃತವರ್ಷಿಣಿ ಉಮೇಶ್ ಸನ್ನು ಮಾತನಾಡಿದರು. ಮಂದಾರ್ತಿ ಗುರ್ಗಾಪರಮೇಶ್ವರೀ ದೇವಸ್ಥಾನದ ಆಡಳಿತ ಮೊಕ್ತೇಸರ ಧನಂಜಯ ಶೆಟ್ಟಿ, ಶೇಡಿಕೊಡ್ಲು ವಿಠಲ ಶೆಟ್ಟಿ, ಗ್ರಾಮ ಪಂಚಾಯತ್ ಅಧ್ಯಕ್ಷ ರಾಮಕೃಷ್ಣ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಉದಯಕುಮಾರ್ ಎಂ. ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಂಸ್ಥೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿರುವ ಬಾಳ್ಕುದ್ರು ಸುಧಾಕರ ಶೆಟ್ಟಿ, ಸುಧಾಕರರಾವ್ ಬಾರಕೂರು, ಕೆ.ಬಲರಾಮ ಕಲ್ಕೂರ, ಎ.ಸತೀಶ್ ಕಾರಂತ, ಎಂ.ಗಣೇಶ್ ಅಡಿಗ, ಉಮೇಶ್ ಹೆಗ್ಡೆ, ವಿಜಯಕುಮಾರ್ ಶೆಟ್ಟಿ, ರತ್ನಾಕರ, ಉದಯ ಭಾಸ್ಕರ್, ಬಿ.ರತ್ನಾಕರ ಶೆಟ್ಟಿ, ನಾರಾಯಣ ಮಣೂರು ಹಾಗೂ ಶಿಕ್ಷಕೇತರ ಸಿಬ್ಬಂದಿ ಜನಾರ್ಧನ ಉಪಾಧ್ಯರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದ ಯಶಸ್ಸಿಗೆ ಪ್ರಾಮಾಣಿಕ ಹೋರಾಟ ನೀಡಿದ್ದ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಉದಯಕುಮಾರ್ ಶೆಟ್ಟಿಯವರನ್ನು ಗೌರವಿಸಲಾಯಿತು. ಹಳೆ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷ ಚೋರಾಡಿ ಕೃಷ್ಣರಾಜ್ ಶೆಟ್ಟಿ ಉದಯಕುಮಾರ್ ಶೆಟ್ಟಿಯವರನ್ನು ಪರಿಚಯಿಸಿದರು. ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಗೌರವಧನ ವಿತರಿಸಲಾಯಿತು. ಪ್ರಶಾಂತ್ ಶೆಟ್ಟಿ ವಂಡಾರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸ್ಮರಣ ಸಂಚಿಕೆಯ ಸಂಚಾಲಕ ಪ್ರಮೋದ್ ಶೆಟ್ಟಿ ಮಂದಾರ್ತಿ ಸ್ವಾಗತಿಸಿದರು. ಮುಖ್ಯ ಶಿಕ್ಷಕ ಎಂ. ನಾರಾಯಣ ಮಣೂರು ವಂದಿಸಿದರು. ಅಜಿತ್ ಶೆಟ್ಟಿ ಉಳ್ತೂರು ನಿರೂಪಿಸಿದರು.



