• February 9, 2026
  • Last Update February 2, 2026 6:06 pm
  • Brahmavara

ಮಾಬುಕಳದಲ್ಲಿ ಜನಸೇವಾ ಟ್ರಸ್ಟ್ ವತಿಯಿಂದ ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆ

ಮಾಬುಕಳದಲ್ಲಿ ಜನಸೇವಾ ಟ್ರಸ್ಟ್ ವತಿಯಿಂದ ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆ

ವರದಿ : ಚಿತ್ತೂರು ಪ್ರಭಾಕರ ಆಚಾರ್ಯ
ಉಡುಪಿಮಿತ್ರ ಪತ್ರಿಕೆ ಸುದ್ಧಿ :
ಬ್ರಹ್ಮಾವರ, ಜು.24: ನಮ್ಮ ಜೀವನಾಡಿ ನೀರನ್ನು ಪ್ರತಿಯೊಬ್ಬರು ಗೌರವಿಸಬೇಕು. ಬಹಳ ಹಿಂದಿನಿಂದಲೂ ನೀರು ತುಂಬಿ ಬಂದಾಗ ಪೂಜಿಸುವ ಕ್ರಮ ಇದೆ. ನಮ್ಮ ಹಿರಿಯರು ಗಂಗೆಗೆ ಬಾಗಿನ ಅರ್ಪಿಸುತ್ತಾ ಬಂದಿದ್ದಾರೆ. ಹೀಗೆ ನೀರು ತುಂಬಿ ಬಂದಾಗ ಭಕ್ತಿಯಿಂದ ಪೂಜಿಸುವ ಕ್ರಮಕ್ಕೆ ‘ಗಂಗಾಬನಿ’ ಅಂತ ಕರೆಯುತ್ತಾರೆ ಎಂದು ಕೃಷಿಕ ಶ್ರೀನಿವಾಸ ಉಡುಪ ನುಡಿದರು. ಅವರು ಮಾಬುಕಳ ಕುಮ್ರಗೋಡು ಸಿದ್ಧಿವಿನಾಯಕ ಸನ್ನಿಧಿಯಲ್ಲಿ ಜನಸೇವಾ ಟ್ರಸ್ಟ್ ವತಿಯಿಂದ ನಡೆದ ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆ ಅಂಗವಾಗಿ ನಡೆದ ‘ಗಂಗಾಬನಿ’ ಕಾರ್ಯಕ್ರಮದಲ್ಲಿ ಬಾಗಿನ ಅರ್ಪಿಸಿ ಮಾತನಾಡಿದರು.


ಶತಶತಮಾನದಿಂದಲೂ ಕೃಷಿಯನ್ನು ನಂಬಿ ಬಂದಿರುವ ಜನರು ಕೃಷಿಯನ್ನು ಮರೆಯುವುದು ಸರಿಯಲ್ಲ ಎಂದರು.
ಬ್ರಹ್ಮಾವರ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಬಿರ್ತಿ ರಾಜೇಶ್ ಶೆಟ್ಟಿ ಮಾತನಾಡಿ ಕುಂದಾಪ್ರ ಕನ್ನಡ ‘ಭಾಷೆಯಲ್ಲ ಬದುಕು’ ಅಂತ ನಾವು ಭಾವಿಸಿದ್ದೇವೆ. ಆದರೆ ಎಲ್ಲೆಲ್ಲೋ ಹೋಗಿ ದುಡಿದು ಬದುಕು ಕಟ್ಟಿಕೊಳ್ಳವ ಸಂದರ್ಭ ಹುಟ್ಟಿ ಬೆಳೆದು ಸ್ಥಾನಮಾನ ನೀಡಿ ಬೆಳೆಸಿರುವ ಊರಿನ ಭಾಷೆಯನ್ನು ಮರೆಯುತ್ತಿದ್ದ್‌ಆರೆ. ಇದು ಸರಿಯಲ್ಲ. ನಮ್ಮ ಮಕ್ಕಳಿಗೆ ನಮ್ಮ ಭಾಷೆಯನ್ನು ಕಲಿಸಿಕೊಡಲು ಹೋಗುತ್ತಿಲ್ಲ. ಇಂದು ಮಕ್ಕಳು, ಮೊಮ್ಮಕ್ಕಳು ಊರಿಗೆ ಬಂದು ಇಂಗ್ಲೀಷ್ ಮಾತನಾಡುತ್ತಾರೆ. ಇಲ್ಲಿರುವ ಅಜ್ಜ ಅಜ್ಜಿಯಂದಿರೆ ಇಂಗ್ಲಿಷ್ ಕಲಿಯುವ ಸ್ಥಿತಿ ಬಂದಿದೆ. ಬದುಕಿಗಾಗಿ ಬೇರೆ ಕಡೆ ಹೋದರೂ ಆ ಬದುಕಿನೊಂದಿಗೆ ನಮ್ಮ ಭಾಷೆಯನ್ನು ಬೆಳೆಸಬೇಕು ಎಂದರು. ನ್ಯಾಯವಾದಿ ಬೈಕಾಡಿ ಸುಪ್ರಸಾದ್ ಶೆಟ್ಟಿ ಮಾತನಾಡಿ ಜಗತ್ತಿಗೆ ಕುಂದಾಪ್ರ ಕನ್ನಡ ಪರಿಚಯಿಸಿದ ಕೀರ್ತಿ ‘ಟೀಮ್ ಅಭಿಮತ’ಕ್ಕೆ ಸಲ್ಲುತ್ತದೆ. ನಾವು ಎಲ್ಲಿಯೇ ವಾಸಿಸಲಿ ನಮ್ಮ ನೆಲದ ಭಾಷೆಯ ಬಗ್ಗೆ ಅಭಿಮಾನ ಹೊಂದಿ ಮಾತನಾಡುತ್ತಾ ಹೋದಲ್ಲಿ ನಮ್ಮ ಭಾಷೆಯೂ ಬೆಳೆಯಲಿದೆ ಎಂದರು.


ಕುಂದಾಪ್ರ ಕನ್ನಡಕ್ಕೆ ಅಧ್ಯಯನ ಪೀಠ ಆರಂಭಗೊಂಡಿದೆ ಎಂದ ಮೇಲೆ ಆ ಭಾಷೆ ಚಿಕ್ಕದು ಎಂದು ಹೇಳಲು ಸಾಧ್ಯವೇ ಇಲ್ಲ. ನಮ್ಮ ಭಾಷೆ ಉಳಿಯಬೇಕಾದಲ್ಲಿ ಈ ನೆಲದ ಪ್ರತಿಯೊಬ್ಬರು ಈ ಭಾಷೆಯನ್ನು ಅಭಿಮಾನದಿಂದ ಮಾತನಾಡಿದಾಗ ಈ ಭಾಷೆ ಉಳಿಯಲಿದೆ ಎಂದು ಮನು ಹಂದಾಡಿ ನುಡಿದರು.


ವೇದಿಕೆಯಲ್ಲಿ ಹಂದಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಶಾರದಾ ಪೂಜಾರಿ, ನಟ ಪ್ರಭಾಕರ ಕುಂದರ್ ಮಾಬುಕಳ ಉಪಸ್ಥಿತರಿದ್ದು ಶುಭ ಹಾರೈಸಿದರು.
ಜನಸೇವಾ ಟ್ರಸ್ಟ್‌ನ ವಸಂತ್ ಗಿಳಿಯಾರ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸುರೇಶ್ ಕುಮಾರ್ ಕುಮ್ರಗೋಡು ಸ್ವಾಗತಿಸಿದ್ದು ಸುನಿಲ್ ಪಾಂಡೇಶ್ವರ ವಂದಿಸಿದರು. ರಾಘವೇಂದ್ರರಾಜ್ ಸಾಸ್ತಾನ ನಿರೂಪಿಸಿದರು. ನಂತರ ಮಾಬುಕಳ ಹೊಳೆಯಲ್ಲಿ ಬಾಗಿನ ಅರ್ಪಿಸಲಾಯಿತು.

administrator

Related Articles