• February 9, 2026
  • Last Update February 2, 2026 6:06 pm
  • Brahmavara

ಮುಂದಿನ ವರ್ಷದಿಂದ ಮಾರಣಕಟ್ಟೆ ಮೇಳದಲ್ಲಿ 3೦ ವರ್ಷ ಸೇವೆಸಲ್ಲಿಸಿದ ಕಲಾವಿದರಿಗೆ ರೂ.1 ಲಕ್ಷ ಮೊತ್ತದೊಂದಿಗೆ ಗೌರವಾರ್ಪಣೆ

ಮುಂದಿನ ವರ್ಷದಿಂದ ಮಾರಣಕಟ್ಟೆ ಮೇಳದಲ್ಲಿ 3೦ ವರ್ಷ ಸೇವೆಸಲ್ಲಿಸಿದ ಕಲಾವಿದರಿಗೆ ರೂ.1 ಲಕ್ಷ ಮೊತ್ತದೊಂದಿಗೆ ಗೌರವಾರ್ಪಣೆ

ವರದಿ : ಚಿತ್ತೂರು ಪ್ರಭಾಕರ ಆಚಾರ್ಯ,
ಉಡುಪಿಮಿತ್ರ ಪತ್ರಿಕೆ ಸುದ್ದಿ:

ಚಿತ್ತೂರು, ಜೂ.12: ಮಾರಣಕಟ್ಟೆ ಕ್ಷೇತ್ರದಲ್ಲಿ ಬೆಳಕಿನ ಸೇವೆಯಾಗಿ ಸಾಕಷ್ಟು ಯಕ್ಷಗಾನ ನೊಂದಾವಣೆಯಾಗುತ್ತಿರುವುದರಿಂದ ಮಳೆಗಾಲದಲ್ಲೂ ಒಂದು ಮೇಳದ ಆಟವನ್ನು ಖಾಯಂ ಆಗಿ ಆಡಿಸುವುದು ಸೂಕ್ತ ಎಂದು ಸೌಕೂರು ಶ್ರೀ ದುರ್ಗಾಪರಮೇಶ್ವರಿ ದೇಗುಲದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಪಳ್ಳಿ ಕಿಶನ್ ಹೆಗ್ಡೆ ನುಡಿದರು. ಅವರು ಜೂನ್11ರಂದು ಮಾರಣಕಟ್ಟೆಯಲ್ಲಿ ನಡೆದ ಶ್ರೀ ಬ್ರಹ್ಮಲಿಂಗೇಶ್ವರ ಯಕ್ಷಗಾನ ಮೇಳಗಳ ಕೊನೆಯ ಸೇವೆ ಆಟದ ರಂಗಸ್ಥದಲ್ಲಿ ನಡೆದ ನಿವೃತ್ತ ಕಲಾವಿದರ ಸನ್ಮಾನ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.
ನಿವೃತ್ತ ಕಲಾವಿದರು ತಾವು ಕಲಿತ ಕಲೆಯನ್ನು ಆಸಕ್ತ ಹೊಸ ಯುವ ಕಲಾವಿದರಿಗೆ ಹೇಳಿಕೊಡುವುದರ ಮೂಲಕ ಹೊಸ ಕಲಾವಿದರನ್ನು ಸೃಷ್ಟಿಸಿ ಮೇಳಕ್ಕೆ ಕಲಾವಿದರನ್ನು ಒದಗಿಸಬೇಕು. ಇದು ದೇವಸ್ಥಾನದ ಮೇಳಗಳಿಗೆ ಬಹುದೊಡ್ಡ ಕೊಡುಗೆಯಾಗಲಿದೆ ಎಂದರು.
ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕ್ಷೇತ್ರದ ಆನುವಂಶೀಯ ಆಡಳಿತ ಮೊಕ್ತಸರ ಸಿ. ಸದಾಶಿವ ಶೆಟ್ಟಿ ವಹಿಸಿದ್ದರು.
30 ವರ್ಷ ಸೇವೆ ಸಲ್ಲಿಸಿದವರಿಗೆ ರೂ.1 ಲಕ್ಷ:
ದೇವಸ್ಥಾನದ ಸಿ. ರಘುರಾಮ ಶೆಟ್ಟಿಯವರು ಪ್ರಾಸ್ತಾವಿಕವಾಗಿ ಮಾತನಾಡಿ ನಮ್ಮ ಮೇಳದಲ್ಲಿ ಸುದೀರ್ಘವಾಗಿ ಸೇವೆ ಸಲ್ಲಿಸಿದ ಸಹಾಯಕ ಸಿಬ್ಬಂದಿಗಳು, ಹಿಮ್ಮೇಳ, ಮುಮ್ಮೇಳ ಕಲಾವಿದರನ್ನು ಗುರುತಿಸಿ ಕಳೆದ 12 ವರ್ಷಗಳಿಂದ ಕೊನೆಯ ಸೇವೆ ಆಟದಂದು ಗೌರವಿಸುತ್ತಾ ಬಂದಿದ್ದೇವೆ. ಮುಂದಿನ ವರ್ಷದಿಂದ ಮಾರಣಕಟ್ಟೆ ಮೇಳದಲ್ಲಿ ನಿರಂತರವಾಗಿ 30 ವರ್ಷ ಸೇವೆ ಸಲ್ಲಿಸಿದ ಕಲಾವಿದರಿಗೆ ರೂ.1 ಲಕ್ಷ ಮೊತ್ತವನ್ನು ದೇವಸ್ಥಾನದಿಂದ ನೀಡಿ ಗೌರವಿಸುವ ನಿರ್ಧಾರಕ್ಕೆ ಬಂದಿದ್ದೇವೆ. ಈ ಮೊತ್ತವನ್ನು ಕಾಯ್ದಿರಿಸಿಕೊಳ್ಳುವ ಬಗ್ಗೆ ದೇವಳದ ಬಜೆಟ್‌ನಲ್ಲಿ ಈಗಾಗಲೇ ಸಿದ್ದತೆ ಮಾಡಿಕೊಂಡಿದ್ದೇವೆ ಎಂದರು.
ವೇದಿಕೆಯಲ್ಲಿ ಬಣ್ಣದ ಸಕ್ಕಟ್ಟು ಶ್ರೀ ಲಕ್ಷ್ಮೀನಾರಾಯಣಯ್ಯ ಪ್ರತಿಷ್ಠಾನ ಸೌಕೂರು ಇದರ ಅಧ್ಯಕ್ಷ ಮಂಜುನಾಥಯ್ಯ ಎನ್.ಸಕ್ಕಟ್ಟು, ಮಾರಣಕಟ್ಟೆ ಕ್ಷೇತ್ರದ ಮಾಜಿ ಧರ್ಮದರ್ಶಿ ಸಿ. ಮಂಜಯ್ಯ ಶೆಟ್ಟಿ ಉಪಸ್ಥಿತರಿದ್ದು ಸನ್ಮಾನಿತರಿಗೆ ಶುಭ ಹಾರೈಸಿದರು.
ನಿವೃತ್ತ ಭಾಗವತ ವಿಷ್ಣುಸುಬ್ರಾಯ ಹೆಗಡೆ, ನಿವೃತ್ತ ಕಲಾವಿದ ಭಾಸ್ಕರ್ ಹೆಬ್ಬಾರ್, ನಿವೃತ್ತ ಸಹಾಯಕ ಸಿಬಂದಿ ರಾಮ ಮಡಿವಾಳ ಅವರನ್ನು ಸಮ್ಮಾನಿಸಲಾಯಿತು.
ಈ ಸಂದರ್ಭ ನಿತ್ಯಾನಂದ ಶೆಟ್ಟಿ, ಮಂಜಯ್ಯ ಶೆಟ್ಟಿ, ಆದರ್ಶ ಶೆಟ್ಟಿ, ನಾರಾಯಣ ಶೆಟ್ಟಿ ಅರ್ಚಕರು, ಪಾತ್ರಿಗಳು, ಸಿಬಂದಿಗಳು, ಗ್ರಾಮಸ್ಥರು ಉಪಸ್ಥಿತರಿದ್ದರು.
ಸಿ. ರಘುರಾಮ ಶೆಟ್ಟಿ ಸ್ವಾಗತಿಸಿದರು. ನ್ಯಾಯವಾದಿ ಕುಸುಮಾಕರ ಶೆಟ್ಟಿ ನಿರೂಪಿಸಿದರು.

administrator

Related Articles

Leave a Reply

Your email address will not be published. Required fields are marked *