ವರದಿ : ಚಿತ್ತೂರು ಪ್ರಭಾಕರ ಆಚಾರ್ಯ
ಉಡುಪಿಮಿತ್ರ ಪತ್ರಿಕೆ ಸುದ್ಧಿ :
ಬ್ರಹ್ಮಾವರ, ಜ.೧೮: ಧರ್ಮ ಅಂದರೆ ಒಳ್ಳೆಯ ನಡೆ. ಬೆಳಕು, ಚೇತನ, ಪ್ರೀತಿ ಎಂಬುದನ್ನು ಎಲ್ಲರೂ ಅರ್ಥೈಸಿಕೊಳ್ಳಬೇಕು. ಯಾವುದೇ ಧರ್ಮವನ್ನು ಕೀಳಾಗಿ ಕಾಣಲು ಯಾವ ಧರ್ಮದಲ್ಲೂ ಹೇಳಿಲ್ಲ. ಧರ್ಮದ ಗೊಂದಲಗಳನ್ನು ಸೃಷ್ಟಿ ಮಾಡುವುದು ಸರಿಯಲ್ಲ. ಪ್ರತಿಯೊಬ್ಬರಲ್ಲೂ ಸದ್ಧರ್ಮದ ನಡೆ ಮುಖ್ಯ ಎಂದು ಚಿತ್ರದುರ್ಗದ ಆದಿ ಜಾಂಬವ ಸಂಸ್ಥಾನಮಠ ಷಡಕ್ಷರಿಮುನಿ ದೇಶಿಕೇಂದ್ರ ಸ್ವಾಮೀಜಿ ಆಶೀರ್ವಚನದಲ್ಲಿ ನುಡಿದರು. ಅವರು ಶ್ರೀ ಕಚ್ಚೂರು ಮಾಲ್ತಿದೇವಿ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.
ದೈವದ ನಂಬಿಕೆ ಚಿರನೂತನ ಚಿರಸ್ಥಾಯಿ. ಜಾತ್ರೆ ಅಂದರೆ ಸಂಭ್ರಮ, ಸಡಗರ, ಅದು ಭಾವೈಕ್ಯತೆಯ ವೇದಿಕೆ. ಸಮುದಾಯದ ನಾಯಕನಾದವನಿಗೆ ದೂರದೃಷ್ಟಿ ಹಾಗೂ ಒಟ್ಟಿಗೆ ಕರೆದುಕೊಂಡು ಹೋಗುವ ಗುಣ ಇದ್ದಾಗ ಆ ಸಮುದಾಯ ಅಭಿವೃದ್ಧಿಯಾಗುತ್ತದೆ. ದೈವ ಸಾಕ್ಷಾತ್ಕಾರ ಅಗಬೇಕಾದಲ್ಲಿ ದೈವದ ಹಾದಿಯಲ್ಲಿ ನಾವಿರಬೇಕು. ದೈವ, ದೇವರುಗಳ ಆಧಾರದಲ್ಲಿ ಸಮಾಜ ನಿಂತಿದೆ. ಧಾರ್ಮಿಕ ವಿಧಿವಿಧಾನಗಳಲ್ಲಿ ನಂಬಿಕೆ ಹೆಚ್ಚಿಸಿಕೊಳ್ಳಲು ಉತ್ಸವಗಳು ಕಾರಣವಾಗುತ್ತದೆ. ಮೂರ್ತಿ ಸ್ವರೂಪ ಪೂಜೆ, ಭಕ್ತಿ ಹಾಗೂ ಭಾವನೆಗೆ ಪೂರಕವಾಗಿದೆ. ದೈವ ದೇವರುಗಳ ಮೂಲಕ ರಾಷ್ಟ್ರ ಕಟ್ಟಬೇಕು ಎಂದರು.

ಆಡಳಿತ ಮಂಡಳಿ ಅಧ್ಯಕ್ಷ ಶಿವಪ್ಪ ನಂತೂರು ಅಧ್ಯಕ್ಷತೆ ವಹಿಸಿದ್ದರು.
ಅನುದಾನ ಒದಗಿಸಲು ಪ್ರಯತ್ನ ಮಾಡುತ್ತೇನೆ – ಸಂಸದ ಕೋಟ
ಉಡುಪಿ ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಮಾತನಾಡುತ್ತಾ ಸ್ವಾಮೀಜಿಗಳು, ಸಮಾಜದ ನಾಯಕರು ಎಲ್ಲಾ ಸಮಾಜವನ್ನು ಜೋಡಿಸುವ ಕೆಲಸ ಮಾಡಬೇಕು. ಕಚ್ಚೂರು ಮಾಲ್ತಿದೇವಿ ದೇವಸ್ಥಾನದ ಧರ್ಮದರ್ಶಿ ಗೋಕುಲದಾಸ್ ಮತ್ತು ತಂಡ ಸಂಸ್ಕಾರಯುತ ನಾಗರಿಕ ಸಮಾಜ ಕಟ್ಟುವ ಕೆಲಸ ಮಾಡುತ್ತಿದ್ದಾರೆ. ಮುಂಡಾಳ ಸಮಾಜಕ್ಕೆ ಶಕ್ತಿ ತುಂಬುವ ಕೆಲಸ ಮಾಡಬೇಕು ಎಂಬ ಉದ್ದೇಶದಲ್ಲಿ ಈ ಕ್ಷೇತ್ರಕ್ಕೆ ಸರಕಾರದಿಂದ ಅನುದಾನ ಒದಗಿಸಲು ಖಂಡಿತಾ ಪ್ರಯತ್ನ ಮಾಡುತ್ತೇನೆ ಎಂದರು.

ಅನುದಾನ ಬಿಡುಗಡೆಗೆ ಪ್ರಯತ್ನಿಸಲಿದ್ದೇವೆ – ಶಾಸಕ ಕಿರಣ್ ಕುಮಾರ್ ಕೊಡ್ಗಿ
ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ ಮಾತನಾಡಿ ಕಚ್ಚೂರು ಕ್ಷೇತ್ರದ ಅಭಿವೃದ್ಧಿಗೆ ಸಂಸದರ ಜೊತೆ ಸೇರಿ ಅನುದಾನ ಬಿಡುಗಡೆಗೆ ಪ್ರಯತ್ನಿಸಲಿದ್ದೇವೆ ಎಂದರು.
ಮುಖ್ಯ ಅತಿಥಿಯಾಗಿ ಉಡುಪಿ ಶಾಸಕ ಯಶಪಾಲ್ ಸುವರ್ಣ, ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ವಿಧಾನ ಪರಿಷತ್ ಸದಸ್ಯ ಐವನ್ ಡಿ,ಸೋಜ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನಕರ ಶುಭ ಹಾರೈಸಿದರು.

ಕಚ್ಚೂರು ಕ್ಷೇತ್ರದ ಮಾಜಿ ಅಧ್ಯಕ್ಷ ಪಿ.ಬಾಬು ಮಲ್ಲಾರ್, ಉಡುಪಿ ಜಿಲ್ಲಾ ಮುಂಡಾಲ ಮಹಾಸಭಾ ರಿ.ಇದರ ಅಧ್ಯಕ್ಷ ಶಂಕರ್ ಪದಕಣ್ಣಾಯ, ಕಟಪಾಡಿ ಪೇಟೆಬೆಟ್ಟು ಶ್ರೀ ಕೊರಗಜ್ಜ ಕ್ಷೇತ್ರದ ಗುರಿಕಾರ ಹರೀಶ್ಚಂದ್ರ, ಉದ್ಯಮಿ ಹರೀಶ್ ಜೆ.ಕೊಲಕಾಡಿ, ವೈ.ಜಿ.ಸುರೇಶ್, ಅಖಿಲ ಭಾರತ ಮುಂಡಾಲ ಯುವ ವೇದಿಕೆ (ರಿ.) ಅಧ್ಯಕ್ಷ ರಘುವೀರ್ ಬಾಬುಗುಡ್ಡ ಮಂಗಳೂರು, ಹೊಸನಗರ ವಕೀಲರ ಸಂಘದ ಅಧ್ಯಕ್ಷ ನ್ಯಾಯವಾದಿ ಚಂದ್ರಪ್ಪ ಎಚ್., ಶಿವಮೊಗ್ಗ ಡಿ.ವಿ.ಎಸ್. ಸಂಯುಕ್ತ ಪ.ಪೂ. ಕಾಲೇಜಿನ ಉಪಪ್ರಾಂಶುಪಾಲ ಲಕ್ಷ್ಮಣ ಪಿ., ಗಂಗೊಳ್ಳಿ ಅಂಬೇಡ್ಕರ್ ಯುವಕ ಮಂಡಲ ಸ್ಥಾಪಕಾಧ್ಯಕ್ಷ ಭಾಸ್ಕರ ಎಚ್.ಗಂಗೊಳ್ಳಿ, ಮುಂಡಾಳ ಯುವ ವೇದಿಕೆ ಅಧ್ಯಕ್ಷ ಮಂಜುನಾಥ ಕರ್ಕೇರ, ಭಾಸ್ಕರ ಗುರಿಕಾರ ನಿಟ್ಟೂರು, ಚನ್ನಕೇಶವ ಎಂ.ಜಿ. ಮೂಡಿಗೇರಿ, ಮಂಜುನಾಥ ಕೆ. ಎಲೆಮಡಲು ಶೃಂಗೇರಿ., ಎ. ಚಂದ್ರ ಕುಮಾರ್, ನಿರಂಜನ ಕುಮಾರ್ ಗುರಿಕಾರ ಸುರತ್ಕಲ್, ದಿನೇಶ್ ಗುರಿಕಾರ ಮೂಡುಪಲಿಮಾರು, ಹರೀಶ್ ಗುರಿಕಾರ ಬಂಟಕಲ್ಲು, ಉತ್ಸವ ಸಮಿತಿ ಅಧ್ಯಕ್ಷ ರವಿರಾಜ್ ಹೆಜಮಾಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ತುಳು ಸಾಹಿತಿಮೋಹನ್ ಕಣ್ಣೂರು ಹಾಗೂ ಪ್ರಸಂಗಕರ್ತ, ಹಿರಿಯ ಸಾಹಿತಿ ಕೆ.ಕೆ.ಕಾಳವರ್ಕರ್‌ರವರನ್ನು ಸನ್ಮಾನಿಸಲಾಯಿತು. ಇದೇ ಸಂದರ್ಭ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನದೊಂದಿಗೆ ಗುರುತಿಸಿ ಗೌರವಿಸಲಾಯಿತು.

ಧರ್ಮದರ್ಶಿ ಗೋಕುಲದಾಸ್ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡುತ್ತಾ ಕಚ್ಚೂರು ಕ್ಷೇತ್ರಕ್ಕೆ ಹತ್ತಾರು ವರ್ಷಗಳಿಂದ ಯಾವುದೇ ಅನುದಾನ ಸಿಕ್ಕಿಲ್ಲ. ನಮ್ಮಲ್ಲಿ ನಿವೇಶನ ಇದೆ. ವಿದ್ಯಾರ್ಥಿಗಳಿಗೆ ಉನ್ನತ ವ್ಯಾಸಂಗಕ್ಕೆ ಹಾಗೂ ತರಬೇತಿಗೆ ಒಂದು ಕಟ್ಟಡದ ಅಗತ್ಯತೆ ಇದೆ. ಸರಕಾರದಿಂದ ಅನುದಾನ ದೊರಕಿಸಿ ಕೊಡಬೇಕು ಹಾಗೂ ಬಬ್ಬುಸ್ವಾಮಿ ಸೇವಕರಿಗೆ ಸರಕಾರದಿಂದ ಮಾಶಾಸನ ನೀಡುವಂತೆ ಮನವಿ ಮಾಡಿದರು.
ಸಂತೋಷ್ ಪಡುಬಿದ್ರೆ ವಂದಿಸಿದ್ದು ಪ್ರಧಾನ ಕಾರ್ಯದರ್ಶಿ ಪ್ರೇಮಾನಂದ ಬಾರಕೂರು ನಿರೂಪಿಸಿದರು.




