ಉಡುಪಿ ಮಿತ್ರ ಪತ್ರಿಕೆ ಸುದ್ಧಿ :
ಕರ್ನಾಟಕ ಪಬ್ಲಿಕ್ ಸ್ಕೂಲ್ ನೆಂಪು ಇಲ್ಲಿನ ಪ್ರೌಢಶಾಲಾ ಕನ್ನಡ ಭಾಷಾ ಅಧ್ಯಾಪಕ ಚಿತ್ತೂರು ರವಿರಾಜ್ ಶೆಟ್ಟಿಯವರನ್ನು ರಾಜ್ಯಮಟ್ಟದ ಜ್ಞಾನಸಿಂಧು ಪ್ರಶಸ್ತಿಗೆ ಉಡುಪಿ ಜಿಲ್ಲೆಯಿಂದ ಆಯ್ಕೆ ಮಾಡಲಾಗಿದೆ. ಶಿಕ್ಷಣ ಜ್ಞಾನ ಪ್ರತಿಷ್ಠಾನ ಬೆಂಗಳೂರು ಇವರು ಪ್ರತಿ ವರ್ಷ ಪ್ರೌಢಶಾಲಾ ವಿಭಾಗದ ಶಿಕ್ಷಕರಿಗೆ ಈ ಪ್ರಶಸ್ತಿ ನೀಡುತ್ತಾ ಬಂದಿದ್ದು ೨೦೨೫ರ ಪ್ರಶಸ್ತಿಗೆ ಚಿತ್ತೂರು ರವಿರಾಜ್ ಶೆಟ್ಟಿಯವರನ್ನು ಆಯ್ಕೆ ಮಾಡಿದ್ದು ಹಾಸನದಲ್ಲಿ ಡಿ.೨೧ರಂದು ನಡೆಯುವ ರಾಜ್ಯಮಟ್ಟದ ಶೈಕ್ಷಣಿಕ ಸಮಾವೇಶದಲ್ಲಿ ಅವರು ಪ್ರಶಸ್ತಿ ಸ್ವೀಕರಿಸಲಿದ್ದಾರೆ.

೩೩ ವರ್ಷ ಸೇವಾ ಅನುಭವ ಹೊಂದಿರುವ ರವಿರಾಜ್ ಶೆಟ್ಟಿಯವರು ಪ್ರಾಥಮಿಕ ಶಾಲಾ ಶಿಕ್ಷಕರಾಗಿ, ಸಮೂಹ ಸಂಪನ್ಮೂಲ ವ್ಯಕ್ತಿಯಾಗಿ (ಸಿಆರ್ಪಿ), ಕ್ಷೇತ್ರ ಸಂಪನ್ಮೂಲ ವ್ಯಕ್ತಿಯಾಗಿ (ಬಿಆರ್ಪಿ), ಶಿಕ್ಷಣ ಸಂಯೋಜಕರಾಗಿ ಹಲವಾರು ವರ್ಷಗಳಿಂದ ತರಬೇತಿ- ಕಾರ್ಯಾಗಾರಗಳಲ್ಲಿ ಭಾಗವಹಿಸುತ್ತಾ ಬಂದಿದ್ದಾರೆ. ಜಿಲ್ಲಾ, ತಾಲೂಕು ಮಟ್ಟದ ಸಂಪನ್ಮೂಲ ವ್ಯಕ್ತಿಯಾಗಿ ಬೈಂದೂರು ವಲಯದ ಶೈಕ್ಷಣಿಕ ಪ್ರಗತಿಗೆ ತನ್ನದೇ ಆದ ಕೊಡುಗೆಯನ್ನು ನೀಡುತ್ತಾ ಬಂದಿದ್ದಾರೆ.
ಪ್ರಸ್ತುತ ವಂಡ್ಸೆ ಕರ್ನಾಟಕ ಪಬ್ಲಿಕ್ ಸ್ಕೂಲ್ನ ಪ್ರೌಢಶಾಲಾ ವಿಭಾಗದಲ್ಲಿ ಕನ್ನಡ ಅಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿರುವ ಇವರು ಈ ಶಾಲೆಯ ಹಳೆ ವಿದ್ಯಾರ್ಥಿಯಾಗಿದ್ದು ಇಲ್ಲಿನ ಹಳೆ ವಿದ್ಯಾರ್ಥಿಗಳ ಸಂಘದ ಕ್ರಿಯಾಶೀಲ ಕಾರ್ಯದರ್ಶಿಯಾಗಿ ಶಾಲೆಯ ಸರ್ವತೋಮುಖ ಉನ್ನತಿಗೆ ಶ್ರಮಿಸಿದ್ದಾರೆ. ಎಲ್ಲೆಲ್ಲೋ ಇರುವ ಹಳೆ ವಿದ್ಯಾರ್ಥಿಗಳನ್ನು ಸಂಪರ್ಕಿಸಿ ಸುಮಾರು ಒಂದುವರೆ ಕೋಟಿಯಷ್ಟು ಮೊತ್ತದ ಕೊಡುಗೆಯನ್ನು ಹಳೆ ವಿದ್ಯಾರ್ಥಿಗಳಿಂದ ಶಾಲೆಗೆ ಕೊಡಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ. ನಾಟಕ, ಯಕ್ಷಗಾನ ಇವರ ಆಸಕ್ತಿಯ ವಿಷಯವಾಗಿದ್ದು ಯಕ್ಷಗಾನದ ಹವ್ಯಾಸಿ ಕಲಾವಿದರಾಗಿ ಭೀಷ್ಮ, ಅರ್ಜುನ, ಕಂಸ, ಉಗ್ರಸೇನ ಮೊದಲಾದ ೫೦ಕ್ಕೂ ಹೆಚ್ಚು ಪಾತ್ರಗಳನ್ನು ನಿಭಾಯಿಸಿದ್ದಾರೆ. ವಿದ್ಯಾರ್ಥಿಗಳಲ್ಲಿ ಶಿಸ್ತು ಹಾಗೂ ಶೈಕ್ಷಣಿಕ ಚಟುವಟಿಕೆಗಳಲ್ಲಿ ಸದಾ ತೊಡಗಿಸಿಕೊಳ್ಳಲು ಪ್ರೇರೇಪಿಸುತ್ತಾ ಬಂದಿದ್ದು ಈ ಬಹುಮುಖ ಪ್ರತಿಭೆಯ ಶಿಕ್ಷಕರನ್ನು ಜ್ಞಾನ ಸಿಂಧು ಪ್ರಶಸ್ತಿಗೆ ಆಯ್ಕೆ ಮಾಡಿರುವುದು ಅರ್ಹತೆಗೆ ಹಾಗೂ ಸೇವೆಗೆ ಸಂದ ಗೌರವವಾಗಿದೆ.



