• March 26, 2026
  • Last Update March 24, 2026 3:28 pm
  • Brahmavara

ರಾಷ್ಟ್ರೀಯ ಹೆದ್ದಾರಿ ಉಳಿಸಿ ಹೋರಾಟ ಸಮಿತಿಯ ಪ್ರತಿಭಟನೆ ಮುಂದೂಡಿಕೆ

ರಾಷ್ಟ್ರೀಯ ಹೆದ್ದಾರಿ ಉಳಿಸಿ ಹೋರಾಟ ಸಮಿತಿಯ ಪ್ರತಿಭಟನೆ ಮುಂದೂಡಿಕೆ

ವರದಿ : ಚಿತ್ತೂರು ಭಾಕರ ಆಚಾರ್ಯ, ಉಡುಮಿತ್ರ ಪತ್ರಿಕೆ ಸುದ್ಧಿ :
ಬ್ರಹ್ಮಾವರ, ಸೆ.2: ಜಿಲ್ಲಾಧಿಕಾರಿಯವರ ಕಚೇರಿಯಲ್ಲಿ ಸಂಸದ ಕೋಟ ಶ್ರೀನಿವಾಸ ಪೂಜಾರಿಯವರು ನಡೆಸಿದ ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳು ಹಾಗೂ ರಾಷ್ಟ್ರೀಯ ಹೆದ್ದಾರಿ ಉಳಿಸಿ -66 ಸಮಿತಿ ಸಭೆಯಲ್ಲಿ ನೀಡಿದ ಭರವಸೆಯ ಆಧಾರದಲ್ಲಿ ಸೆ.4ರಂದು ನಡೆಸಲುದ್ದೇಶಿಸಿದ್ದ ಪ್ರತಿಭಟನಾ ಸಭೆಯನ್ನು ಮುಂದೂಡಲಾಗಿದೆ ಎಂದು ರಾಷ್ಟ್ರೀಯ ಹೆದ್ದಾರಿ ಉಳಿಸಿ ಹೋರಾಟ ಸಮಿತಿಯ ಸಂಚಾಲಕ ಬಿ.ಗೋವಿಂದರಾಜ್ ಹೆಗ್ಡೆ ತಿಳಿಸಿದರು.


ಅವರು ಬ್ರ್ರಹ್ಮಾವರ ಆಶ್ರಯ ಹೋಟೆಲ್ ಸಭಾಂಗಣದಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾಹಿತಿ ನೀಡಿದರು.
ಹೆದ್ದಾರಿಗೆ ಸಂಬಂಧಪಟ್ಟಂತೆ ಭದ್ರಗಿರಿಯಿಂದ ಮಾಬುಕಳದವರೆಗೆ ಎರಡೂ ಕಡೆಗಳ ಸರ್ವಿಸ್ ರಸ್ತೆ ನಿರ್ಮಾಣ, ಪ್ಲೈಓವರ್ ನಿರ್ಮಾಣದ ಕುರಿತು ಸಂಬಂಧಪಟ್ಟವರಿಗೆಲ್ಲ ಮನವಿ ನೀಡಿ ಸೆ.4ರಂದು ಪ್ರತಿಭಟನೆ ನಡೆಸುವುದೆಂದು ನಿರ್ಧರಿಸಲಾಗಿತ್ತು. ಆದರೆ ಇಂದು ಸಂಸದರ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಟಾಧಿಕಾರಿ, ಶಾಸಕರುಗಳ ಸಭೆಯಲ್ಲಿ ಸಂಸದರು ಮುಂದಿನ ತಿಂಗಳಿನ ಒಳಗೆ ಈಗಿರುವ ಕೌಪಾಸ್ ತೆಗೆಯಲು ವಿವರವಾದ ಯೋಜನ ವರದಿಯನ್ನು (ಡಿ.ಪಿ.ಆರ್) ಸಿದ್ದಪಡಿಸುವ ಭರವಸೆ ನೀಡಿದ್ದಾರೆ. ಸರ್ವಿಸ್ ರಸ್ತೆ ಹಾಗೂ ಪ್ಲೈಓವರ್ ನಿರ್ಮಾಣದ ಬಗೆಗೂ ಭರವಸೆ ನೀಡಿದ್ದಾರೆ. ಮೀಡಿಯನ್ ಓಪನ್ ಬಗ್ಗೆ ಜಿಲ್ಲಾಧಿಕಾರಿಯವರು ಹಾಗೂ ಪೊಲೀಸ್ ಇಲಾಖಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು. ಮುಂದಿನ ಯೋಜನೆಗಳಿಗೆ ಡಿ.ಪಿ.ಆರ್. ಮಾಡುವಾಗಲೂ ಸಮಿತಿಯವರನ್ನು ಕರೆದು ಸಲಹೆ ಪಡೆದುಕೊಳ್ಳುವುದಾಗಿ ತಿಳಿಸಿದ್ದು ಮುಂದಿನ ತಿಂಗಳು ನಡೆಯುವ ಸಭೆಗೆ ಸಮಿತಿಯನ್ನು ಆಹ್ವಾನಿಸುವ ಭರವಸೆ ನೀಡಿದ್ದಾರೆ. ಸಂಸದರು ಹಾಗೂ ಜಿಲ್ಲಾಧಿಕಾರಿಯವರು ನೀಡಿದ ಆಶ್ವಾಸನೆಯಂತೆ ನಮ್ಮ ಬೇಡಿಕೆಗೆ ಹಮ್ಮಿಕೊಂಡಿದ್ದ ಪ್ರತಿಭಟನೆಯನ್ನು ಸದ್ಯಕ್ಕೆ ಮುಂದೂಡಲಾಗಿದೆ ಒಂದು ವೇಳೆ ಆ ಸಭೆಯಲ್ಲಿ ನಮ್ಮ ಬೇಡಿಕೆ ಈಡೇರುವ ಸೂಚನೆ ಕಂಡು ಬಾರದೇ ಇದ್ದಲ್ಲಿ ಅದೇ ದಿನ ಅಥವಾ ಮರುದಿನ ನಮ್ಮ ಮುಂದಿನ ಹೋರಾಟದ ದಿನಾಂಕವನ್ನು ಘೋಷಣೆ ಮಾಡುತ್ತೇವೆ. ಬ್ರಹ್ಮಾವರ ಬಂದ್ ಮತ್ತು ರಸ್ತೆ ರಚನೆ ಮಾಡುವುದಲ್ಲದೆ ಒಂದು ವಾರ ಕಳೆದು ಬೆಂಗಳೂರಿನಲ್ಲಿರುವ ರಾಷ್ಟ್ರೀಯ ಹೆದ್ದಾರಿ ಪ್ರಾದೇಶಿಕ ಕಚೇರಿಯ ಎದುರು ಬ್ರಹ್ಮಾವರದ ಒಂದಷ್ಟು ಜನತೆಯೊಂದಿಗೆ ತೆರಳಿ ಪ್ರತಿಭಟನೆ ನಡೆಸಲಿದ್ದೇವೆ. ಎಂದು ತಿಳಿಸಿದರು. ಪತ್ರಿಕಾಗೋಷ್ಟಿಯಲ್ಲಿ ಬ್ರಹ್ಮಾವರ ಸಕ್ಕರೆ ಕಾರ್ಖಾನೆಯ ನಿರ್ದೇಶಕ ಭುಜಂಗ ಶೆಟ್ಟಿ, ಹೋಟೆಲ್ ಆಶ್ರಯದ ಮಾಲಕ ರಾಜಾರಾಮ ಶೆಟ್ಟಿ, ಹೋರಾಟ ಸಮಿತಿಯ ದಯಾನಂದ ಶೆಟ್ಟಿ ಹಾರಾಡಿ, ಬಾಲಕೃಷ್ಣ ಶೆಟ್ಟಿ, ಸುಭಾಶ್ಚಂದ್ರ ನಾಯ್ಕ್, ಅಲ್ಬರ್ಟ್ ಡಿ’ಸಿಲ್ವಾ, ಗಣೇಶ್ ಶ್ರೀಯಾನ್, ಸಂತೋಷ್ ಪೂಜಾರಿ, ಸೀತಾರಾಮ ಪೂಜಾರಿ, ರಿಕ್ಷಾ ಚಾಲಕ ಮಾಲಕರ ಸಂಘದ ರಾಜು ಪೂಜಾರಿ, ಬ್ರಹ್ಮಾವರ ಅಭಿವೃದ್ಧಿ ಸಮಿತಿಯ ಪ್ರತೀತ್ ಹೆಗ್ಡೆ ಹಾಗೂ ಪ್ರತಾಪ್ ಪೂಜಾರಿ ಉಪಸ್ಥಿತರಿದ್ದರು.

administrator

Related Articles

Leave a Reply

Your email address will not be published. Required fields are marked *

You cannot copy content of this page