ವರದಿ : ಚಿತ್ತೂರು ಪ್ರಭಾಕರ ಆಚಾರ್ಯ
ಈ ಶಿಲ್ಪಿಯ ವರ್ಕ್ಶಾಪ್ ಮುಂದೆ ನಿಂತು ಇಲ್ಲಿರುವ ಶಿಲೆಯಲ್ಲಿ ಕೆತ್ತಿರುವ ಮೂರ್ತಿಗಳನ್ನು, ಕಂಬಗಳನ್ನು ಕಂಡಾಗ ಶಹಬ್ಬಾಸ್, ವೆರಿಗುಡ್ ಅನ್ನುವ ಉದ್ಘಾರ ಬರಲಿದೆ. ಆಕಾರವೇ ಇಲ್ಲದ ಬಂಡೆಗಳಲ್ಲಿ ಮನಸ್ಸಲ್ಲಿ ಮೂಡಿದ ರಾಮ, ನಂದಿ, ಶಿವ, ಆಂಜನೇಯ, ಗಣಪತಿ, ದೇವಿ ಇನ್ನಿತರ ರೂಪಗಳು ನಿಮ್ಮನ್ನು ಆಕರ್ಷಿಸುತ್ತಿವೆ.ಬೈಂದೂರು ತಾಲೂಕು ಗೋಳಿಹೊಳೆ ಗ್ರಾಮದ ಯಾಲಕ್ಕಿ ಕೆರೆಕೊಡ್ಲು ಮನೆಯ ಪ್ರಶಾಂತ್ ಆಚಾರ್ಯ ಎಂಬ ಶಿಲ್ಪಿಯನ್ನು ನಿಮಗೆ ಇಲ್ಲಿ ಪರಿಚಯಿಸುತ್ತಿದ್ದೇನೆ.

ಯಾಲಕ್ಕಿ ಕೆರೆಕೊಡ್ಲು ಅಣ್ಣಪ್ಪ ಆಚಾರ್ಯ & ಚಂದ್ರಾವತಿ ಆಚಾರ್ಯ ದಂಪತಿ ಪುತ್ರರಾದ ಇವರು ೧೯೯೨ ಅಕ್ಟೋಬರ್ ೧೦ ರಂದು ಜನಿಸಿದ್ದಾರೆ. ಶಾಲೆಯಲ್ಲಿ ಓದುವಾಗಲೇ ಈ ಬಾಲಕನಿಗೆ ಚಿತ್ರ ಬಿಡಿಸುವ ಗೀಳು. ಶಾಲೆಯಲ್ಲಿ ಹಾಗೂ ಪ್ರತಿಭಾ ಕಾರಂಜಿಗಳಲ್ಲಿ ನೀಡುವ ಚಿತ್ರಕಲೆ, ಪ್ರಾಜೆಕ್ಟ್ ವರ್ಕ್ಗಳನ್ನು ಪ್ರಶಾಂತ್ ಹತ್ತಿ ಹಾಗೂ ಮಣ್ಣಿನಲ್ಲಿ ಮಾಡಿಕೊಂಡು ಹೋಗುತ್ತಿದ್ದರು. ಅಮದು ಈ ಬಾಲಕನ ಕಲಾಸಕ್ತಿ ಕಂಡು ಶಿಕ್ಷಕರೇ ಮೆಚ್ಚಿ ಬೆಂಬಲಿಸುತ್ತಿದ್ದರು. ಶಾಲೆ ಬಿಟ್ಟ ನಂತರ ಮರದ ಕೆಲಸ ಕಲಿಯಲು ಹೋದರೆ ಅಲ್ಲಿಯೂ ಮೂರ್ತಿಗಳನ್ನು ಕೆತ್ತುವ ಗೀಳು ಹೋಗಲೇ ಇಲ್ಲ. ಪ್ರಶಾಂತ್ಗೆ ಮರದ ತುಂಡೊಂದು ಸಿಕ್ಕರೆ ಅದರಲ್ಲೇ ಬೇರೆ ಬೇರೆ ದೇವರ ಮೂರ್ತಿಗಳನ್ನು ಕೆತ್ತುತ್ತಿದ್ದರು. ಅದೊಂದು ದಿನ ಶಿಲ್ಪಿಯೊಬ್ಬರ ವರ್ಕ್ಶಾಪ್ ಮುಂದೆ ನಿಂತಾಗ ನಾನು ಇಂತಹ ಶಿಲಾ ಶಿಲ್ಪಗಳನ್ನು ಕೆತ್ತಿ ಸಾಧನೆ ಮಾಡಬೇಕೆಂದು ಪ್ರಶಾಂತ್ ನಿರ್ಧರಿಸಿದರು. ಮುಂದೆ ಕಾರ್ಕಳ ಮಿಯ್ಯಾರಿನ ಸಿಇ ಕಾಮತ್ ಇನ್ಸಿಟಿಟ್ಯೂಟ್ನಲಿ, ಬೆಂಗಳೂರಿನಲ್ಲಿ, ಬಿಡದಿಯಲ್ಲಿ ತರಬೇತಿ ಪಡೆದರು. ಶಿಲ್ಪಾ ಕಲಾ ಅಕಾಡೆಮಿಯ ಶಿಬಿರಗಳಲ್ಲಿ ಭಾಗವಹಿಸಿ ಅಲ್ಲಿ ಕೆತ್ತನೆಯ ಪ್ರತಿಭೆಯನ್ನು ಪ್ರದರ್ಶಿಸಿದ್ದರು. ಕೆಂಗೇರಿ ಅಂಬೇಡ್ಕರ್ ಭವನ, ಕೋಲಾರ ಶಿವಗಂಗೆಯಲ್ಲಿ, ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರ ಹಾಗೂ ಚಿತ್ರಕಲಾ ಪರಿಷತ್ನಲ್ಲಿ ಹೀಗೆ ಬೇರೆ ಬೇರೆ ಕಡೆಗಳಲ್ಲಿ ತನ್ನ ಪ್ರತಿಭೆಯನ್ನು ಪ್ರದರ್ಶಿಸಿದ ನಂತರ ತನ್ನ ಊರಿನ ಸಮೀಪದ ಬೈಂದೂರು ವಸ್ರೆ ಎಂಬಲ್ಲಿ ವರ್ಕ್ಶಾಪ್ ತೆರೆದು ಕೆಲಸ ಆರಂಭಿಸಿದರು.

ಈ ಶಿಲ್ಪಿಯ ಕೆತ್ತನೆ ಕೆಲಸ ಕಂಡ ಅನೇಕ ವ್ಯಕ್ತಿಗಳು ಪ್ರಶಾಂತ್ ಮೊಬೈಲ್ ನಂಬರ್ ಕೊಂಡು ಹೋಗಿದ್ದರು. ಬೆಂಗಳೂರಿನ ರಾಜರಾಜೇಶ್ವರಿ ನಗರದ ಸತ್ಯರಾಜ್ ಎಂಬವರು ಪ್ರಶಾಂತ್ಗೆ ಫೋನ್ ಮಾಡಿ ಗಣಪತಿಯ ಮೂರ್ತಿಯೊಂದನ್ನು ಮಾಡಿಕೊಡಲು ಹೇಳಿದರು. ಪ್ರಶಾಂತರ ದುಡಿಮೆಯ ಜರ್ನಿ ಇಲ್ಲಿಂದಲೇ ಆರಂಭಗೊಂಡಿತು. ಅತ್ಯಂತ ಸುಂದರವಾಗಿ ಗಣಪತಿ ಮೂರ್ತಿಯನ್ನು ನಿರ್ಮಿಸಿಕೊಟ್ಟ ಪ್ರಶಾಂತ್ ಕೆಲಸ ಕಂಡು ಅಲ್ಲಿಂದಲೇ ನಾನಾ ಕಡೆಗಳಿಂದ ಅವಕಾಶಗಳು ದೊರಕುತ್ತಾ ಹೋದವು. ವಿಶೇಷವೆಂದರೆ ಈ ಯುವಕ ಇಂದು ತನ್ನ ವರ್ಕ್ಶಾಪ್ನಲ್ಲಿ ಸುಮಾರು ೧೫ ಮಂದಿ ಯುವಕರನ್ನು ನೇಮಿಸಿಕೊಂಡು ಕೆಲಸ ಮಾಡುತ್ತಿದ್ದಾರೆ. ಶಿಲಾ ಶಿಲ್ಪ ಕ್ಷೇತ್ರದಲ್ಲಿ ಚಿಕ್ಕ ವಯಸ್ಸಲ್ಲೇ ಅದ್ಭುತ ಸಾಧನೆ ಮಾಡುತ್ತಿದ್ದಾರೆ. .

ಸುಮಾರು ೧೩ ವರ್ಷಗಳಲ್ಲಿ ಈ ಯುವಕ ನೂರಾರು ಶಿಲಾ ಶಿಲ್ಪಗಳನ್ನು ರಚಿಸಿದ್ದಾರೆ. ಅವುಗಳಲ್ಲಿ ಏಕಮುಖ, ದ್ವಿಮುಖ, ತ್ರಿಮುಖ, ಹಾಗೂ ಪಂಚಮುಖ ಶಿಲ್ಪಗಳನ್ನೂ ಕೆತ್ತಿದ್ದಾರೆ. ಶಿಲೆಯಲ್ಲೇ ಪೀಠ, ಪ್ರಭಾವಳಿಗಳನ್ನು ರಚಿಸಿದ್ದಾರೆ. ವಿಶೇಷವಾಗಿ ಇವರು ಬಿಡಿಸಿದ ಶಿಲ್ಪಗಳ ಮುಖದಲ್ಲಿ ಬಿಂಬಿಸುವ ನೈಜತೆ ಎದ್ದು ಕಾಣುತ್ತದೆ. ಒಂದೊಂದು ಶಿಲೆಗೆ ನೀಡಿದ ಲಕ್ಷಾಂತರ ಉಳಿ ಪೆಟ್ಟಿನ ನಡುವೆ ಅಂತಿಮವಾಗಿ ನುಣುಪುಗೊಳಿಸುವ ಕೈಚಳಕವು ಅದ್ಬುತ ಎನಿಸಿದೆ. ರಾಮಾಯಣದ ಕಥೆಯನ್ನು ನೆನಪಿಸುವ ವಿಭಿನ್ನ

ಚಿತ್ರಣಗಳು ಇವರ ಶಿಲಾ ಕಲಾಕೃತಿಯಲ್ಲಿ ಗೋಚರಿಸುತ್ತದೆ. ರಾಮ ಕಾಡಿಗೆ ಹೊರಡುವುದು, ಜಟಾಯು ಸನ್ನಿವೇಶ, ಶಬರಿಯನ್ನು ಹರಸುವುದು, ವಾಲಿ ಸುಗ್ರೀವರ ಕಾಳಗ, ವಾಲಿಮೋಕ್ಷ, ಆಂಜನೇಯನ ಸಮುದ್ರೋಲ್ಲಂಘನ, ರಾವಣನೊಂದಿಗಿನ ಯುದ್ಧ, ಪಟ್ಟಾಭಿಷೇಕದ ಚಿತ್ರಣಗಳನ್ನು ನಿರ್ಮಿಸಿದ್ದಾರೆ. ನಾಗಶಿಲಾ ಮೂರ್ತಿ, ನಂದಿ, ಗಣಪತಿ, ಶಿವ ಪರಿವಾರದ ಮೂರ್ತಿಗಳು, ಮಹಾಲಕ್ಷ್ಮಿ, ಕಾಳಿ, ದೇವಿಯ ನಾನಾ ರೂಪಗಳ ಮೂರ್ತಿ, ನಾನಾ ಚಿತ್ರಣಗಳ ಶಿಲಾ ಕಂಬಗಳ ರಚನೆ, ಜಯವಿಜಯರ ಮೂರ್ತಿಗಳನ್ನು ಇವರು ಕೆತ್ತಿದ್ದಾರೆ. ಇದಲ್ಲದೆ ಅನೇಕ ದೈವಸ್ಥಾನಗಳಿಗೆ ದೈವದ ಮೂರ್ತಿಗಳು, ೩೦೦ಕ್ಕೂ ಮಿಕ್ಕಿ ನಾಗಶಿಲಾ ಮೂರ್ತಿಗಳು, 25ಕ್ಕೂ ಮಿಕ್ಕಿ ನಾಗಪೀಠಗಳನ್ನು ಪ್ರಶಾಂತ್ ನಿರ್ಮಿಸಿದ್ದಾರೆ.

ಹರಿದ್ವಾರದ ಶಿಲಾಮಯ ದೇವಸ್ಥಾನದಲ್ಲಿ ೧೦೦ ಶಿಲ್ಪಮೂರ್ತಿಗಳ ಕೆತ್ತನೆಯನ್ನು ಮಾಡಿರುವ ಹಿರಿಮೆ ಇವರಿಗೆ ಸಲ್ಲುತ್ತದೆ. ಹೊರ ರಾಜ್ಯ ತಮಿಳುನಾಡು, ಕೇರಳ, ಗೋವಾ, ಹೈದರಾಬಾದ್ನ ದೇವಸ್ಥಾನಗಳಿಗೂ ಪ್ರಶಾಂತ್ ಶಿಲಾ ಶಿಲ್ಪ ಮೂರ್ತಿಗಳನ್ನು ಮಾಡಿಕೊಟ್ಟಿದ್ದಾರೆ. ಚಿಕ್ಕಮಗಳೂರು, ಹಾಸನ, ಬೆಂಗಳೂರು, ರಾಯಚೂರು, ಹುಬ್ಬಳ್ಳಿ, ಮಡಿಕೇರಿ ಹಾಗೆಯೇ ಇನ್ನು ಹಲವು ಜಿಲ್ಲೆಗಳಲ್ಲಿ ಆಯಾಯ ದೇವಾಲಯಗಳ ಆಡಳಿತ ಮಂಡಳಿ ಸೂಚಿಸುವ ದೇವಾಲಯಗಳಿಗೆ ಸಂಬಂಧಿಸಿದ ಮೂರ್ತಿಗಳನ್ನು ಕೆತ್ತಿಕೊಟ್ಟಿದ್ದಾರೆ. ಚಿಕ್ಕಮಗಳೂರಿನ ಅಜ್ಜಂಪುರ ದೇವಾಲಯಕ್ಕೆ ಸುಮಾರು 25 ಶಿಲಾ ಮೂರ್ತಿಗಳನ್ನು, ಜಿಗಣಿ ಸಂಸದ ಕುಪೇಂದ್ರ ರೆಡ್ಡಿಯವರ ಶಿಲಾಮಯ ದೇವಸ್ಥಾನಕ್ಕೆ 6 ಅಡಿ ಎತ್ತರದ ಎಲ್ಲಮ್ಮ ದೇವಿಯ ಶಿಲಾಮೂರ್ತಿಯನ್ನು, ಹೊಳೆ ನರಸಿಪುರದ ಆಂಜನೇಯ ದೇವಸ್ಥಾನಕ್ಕೆ ೩ ಅಡಿ ಎತ್ತರದ ಆಂಜನೇಯನ ಮೂರ್ತಿ, ರಾಣೆಬೆನ್ನೂರು

ಮಹಿಷಮರ್ಧಿನಿ ದೇವಸ್ಥಾನಕ್ಕೆ ಮಹಿಷಾಸುರ ಮರ್ಧಿನಿ ಹಾಗೂ ನವದುರ್ಗೆಯರ ಶಿಲಾಮೂರ್ತಿಗಳನ್ನು ಹಾಗೂ ಹಳೆ ಬೀಡಿನ ಸಾಣೇನಹಳ್ಳಿ ಶಿಲಾಮಯ ದೇವಸ್ಥಾನಕ್ಕೆ 30 ಶಿಲಾ ಮೂರ್ತಿಗಳನ್ನು ಕೆತ್ತಿಕೊಟ್ಟಿರುತ್ತಾರೆ. ಶಿವಮೊಗ್ಗ, ಹಾವೇರಿ, ಬೆಳಗಾವಿ ಭಾಗದ ದೇವಾಲಯಗಳಿಗೂ ಶಿಲಾ ಮೂರ್ತಿಗಳನ್ನು ನಿರ್ಮಿಸಿಕೊಟ್ಟಿರುತ್ತಾರೆ. ಗಂಗಾವತಿ ದೇವಸ್ಥಾನಕ್ಕೆ ದತ್ತಾತ್ರೆಯರ ತ್ರಿಮುಖ ಮೂರ್ತಿಯನ್ನು, ಪಂಚ ಮುಖ ವಿಶ್ವಕರ್ಮಮೂರ್ತಿಯನ್ನು, ಸಖರಾಯಪಟ್ಟಣಕ್ಕೆ, ಪಂಚಮುಖಿ ಆಂಜನೇಯನ ಮೂರ್ತಿಯನ್ನು ರಾಣೆಬೆನ್ನೂರಿಗೆ ಕೆತ್ತಿ ಕೊಟ್ಟಿದ್ದಾರೆ. ಪ್ರಸ್ತುತ ಚಿಕ್ಕಮಗಳೂರಿಗೆ ೧೩ ಅಡಿ ಉದ್ದದ ಮಲಗಿರುವ ರಂಗನಾಥನ ಮೂರ್ತಿಯ ಕೆಲಸ ಆರಂಭಿಸಿದ್ದಾರೆ. 21 ಅಡಿಯ ಆಂಜನೇಯ, 9 ಅಡಿಯ ಗಣೇಶ, 5 ಅಡಿ ಎತ್ತರದ ರಾಮ ಲಕ್ಷ್ಮಣ ಸೀತೆ ಹಾಗೂ ಪರಿವಾರ ದೇವರ ಮೂರ್ತಿಗಳ ಕೆತ್ತನೆಯಲ್ಲಿ ತೊಡಗಿಸಿಕೊಂಡಿದ್ದಾರೆ.

ಮೃತ ಗಣ್ಯ ವ್ಯಕ್ತಿಗಳ ಮೂರ್ತಿ ರಚನೆ :
ಬೈಂದೂರಿನ ಬಂಟರಯಾನೆ ನಾಡವರ ಸಂಘಕ್ಕೆ ಕರ್ನಾಟಕ ಸರಕಾರದ ನಿವೃತ್ತ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಬಂಡಾಡಿ ಜಗನ್ನಾಥ ಶೆಟ್ಟಿಯವರ ಶಿಲಾ ಮೂರ್ತಿಯನ್ನು, ನೆಂಪು ಪದವಿಪೂರ್ವ ಕಾಲೇಜಿಗೆ ಯಡ್ತರೆ ಮಂಜಯ್ಯ ಶೆಟ್ಟಿಯವರ ಮೂರ್ತಿಯನ್ನು, ಬೆಂಗಳೂರಿನ ರಾಜರಾಜೇಶ್ವರಿ ನಗರದ ಶಾಂತಮ್ಮ ಎಂಬವರ

ಸಂಸ್ಥೆಗೆ ಮೃತ ಶಾಂತಮ್ಮರವರ ಮೂರ್ತಿಯನ್ನು, ಉಪ್ಪುಂದಕ್ಕೆ ಸ್ವಾತಂತ್ರ್ಯ ಹೋರಾಟಗಾರ ಗೋವಿಂದ ಖಾರ್ವಿಯವರ ಮೂರ್ತಿಯನ್ನು ಹೀಗೆ ಮೃತರಾದ ನಾನ ಪ್ರಸಿದ್ಧ ವ್ಯಕ್ತಿಗಳ ಮೂರ್ತಿಯನ್ನು ಅವರಂತೆಯೇ ಕೆತ್ತಿಕೊಟ್ಟಿರುವುದು ಇವರ ವಿಶೇಷತೆಯಾಗಿದೆ.

ಬೋಳಂಬಳ್ಳಿಗೆ 21 ಅಡಿಯ ರಾಮನಮೂರ್ತಿ :
ಉಡುಪಿ ಜಿಲ್ಲೆಯಲ್ಲೇ ಪ್ರಥಮ ಎಂಬಂತೆ ಬೋಳಂಬಳ್ಳಿ ಪದ್ಮಾವತಿ ದೇವಸ್ಥಾನಕ್ಕೆ ಧರ್ಮರಾಜ್ ಜೈನ್ರವರ ಕೋರಿಕೆಯಂತೆ ೨೧ ಅಡಿ ಎತ್ತರ, ೬ ಅಡಿ ಅಗಲ, ೫ ಅಡಿ ದಪ್ಪದ ಕಾಡಿಗೆ ಹೋದ ರಾಮನ ಮೂರ್ತಿಯನ್ನು ಏಕಶಿಲೆಯಲ್ಲಿ ಅತಿ ಸುಂದರವಾಗಿ ನಿರ್ಮಿಸಿಕೊಟ್ಟಿದ್ದಾರೆ. ಈ ಮೂರ್ತಿಯನ್ನು ಲೋಕಾರ್ಪಣೆ ಮಾಡಿದ ಡಾ.ಡಿ.ವೀರೇಂದ್ರ ಹೆಗ್ಡೆಯವರು ಮೂರ್ತಿಯನ್ನು ಕಂಡು ಮೆಚ್ಚುಗೆ ವ್ಯಕ್ತಪಡಿಸಿ ಅಭಿನಂದಿಸಿದ್ದರು.

ಇವರ ಶಿಲ್ಪಕಲಾ ಕೆತ್ತನೆಯನ್ನು ಗುರುತಿಸಿ ಶಿಲ್ಪಕಲಾ ಅಕಾಡೆಮಿ, ಅನೇಕ ದೇವಾಲಯಗಳು, ಸಂಘಸಂಸ್ಥೆಗಳು ಪ್ರಶಸ್ತಿಯೊಂದಿಗೆ ಗೌರವಿಸಿವೆ. ಸುವರ್ಣ ಕರ್ನಾಟಕ ಕಾರ್ಮಿಕರ ಸಂಘಟನೆಯ ರಾಜ್ಯ ವಿಭೂಷಣ ಪ್ರಶಸ್ತಿ, ವಿಶ್ವಗುರು ಬಸವಣ್ಣ ಸದ್ಭಾವನ ಪ್ರಶಸ್ತಿ, ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಅಮರ ಶಿಲ್ಪಿ ಜಕಣಾಚಾರ್ಯ ಸಂಸ್ಮರಣಾ ದಿನದಂದು ಬೈಂದೂರು ತಾಲೂಕು ಆಡಳಿತ ಕಚೇರಿ ವತಿಯಿಂದಲೂ ಸನ್ಮಾನ ಸಂದಿವೆ. ಉಳಿದಂತೆ ಕೆತ್ತನೆ ಕೆಲಸ ಮಾಡಿದ ಎಲ್ಲೆಡೆಯೂ ಗೌರವಿಸಲ್ಪಟ್ಟಿದ್ದು ಇವರು ಈ ಕ್ಷೇತ್ರದಲ್ಲಿ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಎಂಬುದು ಪತ್ರಿಕೆಯ ಶುಭ ಹಾರೈಕೆಯಾಗಿದೆ.






