• February 9, 2026
  • Last Update February 2, 2026 6:06 pm
  • Brahmavara

ಸೆ.14ರಂದು ಕೂಟ ಮಹಾಜಗತ್ತು ಸಾಲಿಗ್ರಾಮ (ರಿ.) ಮಹಾಧಿವೇಶನ

ಸೆ.14ರಂದು ಕೂಟ ಮಹಾಜಗತ್ತು ಸಾಲಿಗ್ರಾಮ (ರಿ.) ಮಹಾಧಿವೇಶನ

ವರದಿ : ಚಿತ್ತೂರು ಪ್ರಭಾಕರ ಆಚಾರ್ಯ,
ಉಡುಪಿಮಿತ್ರ ಪತ್ರಿಕೆ ಸುದ್ಧಿ :
ಸಾಲಿಗ್ರಾಮ, ಸೆ,11:
ಕೂಟ ಮಹಾಜಗತ್ತು ಸಾಲಿಗ್ರಾಮ (ರಿ.) ಇದರ ವಾರ್ಷಿಕ ಮಹಾಸಭೆಯ ಸಂದರ್ಭ ಸೆಪ್ಟೆಂಬರ್ 14 ಭಾನುವಾರದಂದು ಸಾಲಿಗ್ರಾಮ ಗುರುನರಸಿಂಹ ಸಭಾಭವನದಲ್ಲ್ಲಿ ಮಹಾಧಿವೇಶನ ಅದ್ಧೂರಿಯಾಗಿ ನಡೆಯಲಿದೆ ಎಂದು ಕೂಟ ಮಹಾಜಗತ್ತು ಕೇಂದ್ರಾಧ್ಯಕ್ಷರಾದ ಎಚ್.ಸತೀಶ್‌ಹಂದೆ ತಿಳಿಸಿದರು. ಅವರು ಸಾಲಿಗ್ರಾಮ ಮಂಟಪ ಹೋಟೆಲ್‌ನಲ್ಲಿ ನಡೆಸಿದ ಪತ್ರಿಕಾಗೋಷ್ಟಿಯಲ್ಲಿ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಸುಮಾರು 3000 ಕೂಟ ಬಂಧುಗಳು ಭಾಗವಹಿಸಲಿದ್ದು ಕರ್ನಾಟಕ ಬ್ಯಾಂಕ್ ಮಹಾಧಿವೇಶನದ ಪ್ರಧಾನ ಪ್ರಾಯೋಜಕತ್ವ ವಹಿಸಿಕೊಳ್ಳಲಿದೆ. ಮಹಾಧಿವೇಶನವನ್ನು ಬೆಂಗಳೂರಿನ ಸೋನ ಸಮೂಹ ಸಂಸ್ಥೆಯ ಸಿಇಓ ಶ್ರೀ ಕಮ್ಮಾಜಿ ಯಜ್ಞನಾರಾಯಣ ಹೇರ್ಳೆ ಉದ್ಘಾಟಿಸಲಿದ್ದು, ದೇವಳದ ಆಡಳಿತ ಮಂಡಳಿಯ ಅಧ್ಯಕ್ಷ ಡಾ.ಕೆ.ಎಸ್. ಕಾರಂತರು ಶುಭ ಸಂದೇಶ ನೀಡಲಿದ್ದಾರೆ. ಕವಿ ಶ್ರೀ ಹರಿನರಸಿಂಹ ಉಪಾಧ್ಯಾಯ. ಕರ್ಣಾಟಕ ಬ್ಯಾಂಕ್ ಕೇಂದ್ರ ಕಛೇರಿಯ ಮುಖ್ಯ ವ್ಯವಹಾರ ಅಧಿಕಾರಿ ಚಂದ್ರಶೇಖರ ಮಯ್ಯ, ಮಂಗಳೂರಿನ ಖ್ಯಾತ ಉದ್ಯಮಿ ಬಿ. ರಘುನಾಥ ಸೋಮಯಾಜಿ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ ಎಂದರು.
ಕೇಂದ್ರದ ಪ್ರಧಾನ ಕಾರ್ಯದರ್ಶಿ ಸಿ.ಸುರೇಶ್ ತುಂಗ ಮಾತನಾಡಿ ಪೂರ್ವಾಹ್ನ 6.30ಕ್ಕೆ ಶ್ರೀ ಗುರುನರಸಿಂಹ ದೇವಸ್ಥಾನದಲ್ಲಿ ನರಸಿಂಹ ಹೋಮದೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದೇವೆ. ಫಲ ಸಮರ್ಪಣೆಯ ನಂತರ ಬೆ.8.15ಕ್ಕೆ ಶೋಭಾಯಾತ್ರೆ ನಡೆಯಲಿದೆ. ಈ ಶೋಭಾಯಾತ್ರೆ ಶ್ರೀ ಗುರು ನರಸಿಂಹ ದೇವಸ್ಥಾನದಿಂದ ಹೊರಟು ಸಾಲಿಗ್ರಾಮದ ಪ್ರಮುಖ ಮಾರ್ಗಗಳಲ್ಲಿ ಸಾಗಿ ಸಭಾಭವನ ತಲುಪಲಿದೆ. 9.45ಕ್ಕೆ ಸಮಯಕ್ಕೆ ಸರಿಯಾಗಿ ಸಭಾ ಕಾರ್ಯಕ್ರಮ ಆರಂಭಗೊಳ್ಳಲಿದೆ. ಇದೇ ಸಂದರ್ಭದಲ್ಲಿ ಸಮಾಜದ ಏಳು ಸಾಧಕರನ್ನು ಗುರುತಿಸಿ ಅವರಿಗೆ ಗೌರಾವಾರ್ಪಣೆ ನೀಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದರು.


ಸಾಲಿಗ್ರಾಮ ಅಂಗಸಂಸ್ಥೆಯ ಅಧ್ಯಕ್ಷ ಪಿ.ಚಂದ್ರಶೇಖರ ಹೊಳ್ಳ ಮಾತನಾಡಿ ಸಾಲಿಗ್ರಾಮದ ಶ್ರೀ ಗುರುನರಸಿಂಹ ದೇವಸ್ಥಾನದ ಆಡಳಿತ ಮಂಡಳಿ ಮತ್ತು ಕೇಂದ್ರ ಸಂಸ್ಥೆಯ ಸಹಕಾರದಿಂದ ಈ ಮಹಾಧಿವೇಶನವನ್ನು ನಡೆಸಲಾಗುತ್ತಿದ್ದು ಮಹಾಧಿವೇಶನಕ್ಕೆ ಕೇಂದ್ರ ಸಂಸ್ಥೆಯ ಪದಾಧಿಕಾರಿಗಳು, ಸದಸ್ಯರು, ಮಹಿಳಾ ವಿಭಾಗ ಹಾಗೂ ಯುವ ವಿಭಾಗ ಸೇರಿದಂತೆ ಎಲ್ಲರೂ ಶ್ರಮಿಸುತ್ತಿದ್ದು ಈ ಕಾರ್ಯಕ್ರಮದಲ್ಲಿ ಎಲ್ಲಾ ಬಂಧುಗಳು ತಪ್ಪದೆ ಹಾಜರಾಗಿ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸುವಂತೆ ಕೋರಿದರು.
ಮಂಜುನಾಥ ಉಪಾಧ್ಯ ಮಾತನಾಡಿ ಡಾ. ಕೋಟ ಶಿವರಾಮ ಕಾರಂತ ಮುಖ್ಯ ವೇದಿಕೆಯಲ್ಲಿ ೯.೪೫ ರಿಂದ ಮಧ್ಯಾಹ್ನ 1 ಗಂಟೆಯ ವರೆಗೆ ಸಭಾ ಕಾರ್ಯಕ್ರಮ, 1.30ರಿಂದ ಅಂಗಸಂಸ್ಥೆಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ವೈವಿದ್ಯ ನಡೆಯಲಿದೆ. ಕೂಟ ಬಂಧು ಭವನದಲ್ಲಿ ಮಧ್ಯಾಹ್ನ 2.30ರಿಂದ ಮಹಾಸಭೆ ಜರಗಲಿದೆ ಎಂದರು.
ಮಹಿಳಾ ಬಳಗದ ಅಧ್ಯಕ್ಷೆ ಪಿ.ಯಶೋಧಾ ಹೊಳ್ಳ ಮಾತನಾಡಿ ೧೯ ಅಂಗ ಸಂಸ್ಥೆಗಳಿಂದ ವಿಭಿನ್ನ ಸಾಂಸ್ಕೃತಿಕ ಕಾರ್ಯಕ್ರಮ ನೀಡಲಿದ್ದೇವೆ ಎಂದರು.
ವಲಯ1ರ ಸಂಘಟನಾಧಿಕಾರಿ ಶ್ರೀಪತಿ ಅಧಿಕಾರಿ ಮಾತನಾಡಿ ಪುರಮೆರವಣಿಗೆಯಲ್ಲಿ ವೇದಘೋಷ, ಮಂತ್ರಘೋಷ ನಡೆಯಲಿದೆ.ಮಹಿಳೆಯರು ಪೂರ್ಣಕುಂಭ ಸ್ವಾಗತ ನೀಡಲಿದ್ದಾರೆ. ಸಮಾರಂಭದ ಮೂಲಕ ಸಹಬಾಳ್ವೆ, ಸೌಹಾರ್ದತೆಯನ್ನು ಬೆಳೆಸುವ ಗುರಿ ಇರಿಸಿಕೊಂಡಿದ್ದು ಈ ಕಾರ್ಯಕ್ರಮದಲ್ಲಿ ಕರ್ನಾಟಕದಾದ್ಯಂತ ಇರುವ ಎಲ್ಲಾ ಬ್ರಾಹ್ಮಣರು ಭಾಗವಹಿಸಲು ಕೋರಿಕೊಂಡರು.
ಪತ್ರಿಕಾಗೋಷ್ಟಿಯಲ್ಲಿ ಯುವ ವೇದಿಕೆಯ ಗೌರವಾಧ್ಯಕ್ಷ ಕೃಷ್ಣಪ್ರಸಾದ್ ಹೇರ್ಳೆ, ಮಾಜಿ ಕಾರ್ಯದರ್ಶಿ ಶ್ರೀ ಮಂಜುನಾಥ ಉಪಾಧ್ಯ , ಜಿ.ಮಹಾಬಲ ಹೇರ್ಳೆ, ಸಾಲಿಗ್ರಾಮ ಅಂಗ ಸಂಸ್ಥೆಯ ಕೋಶಾಧಿಕಾರಿ ನಾಗರಾಜ ಉಪಾದ್ಯ ಇದ್ದರು. ಕೇಂದ್ರದ ಪ್ರಧಾನ ಕಾರ್ಯದರ್ಶಿ ಸಿ. ಸುರೇಶ ತುಂಗ ಸ್ವಾಗತಿಸಿದ್ದು ಸಾಲಿಗ್ರಾಮ ಅಂಗಸಂಸ್ಥೆಯ ಅಧ್ಯಕ್ಷ ಶ್ರೀ ಪಿ. ಸಿ. ಹೊಳ್ಳ ವಂದಿಸಿದರು.

administrator

Related Articles

Leave a Reply

Your email address will not be published. Required fields are marked *