ವರದಿ : ಚಿತ್ತೂರು ಪ್ರಭಾಕರ ಆಚಾರ್ಯ
ಉಡುಪಿಮಿತ್ರ ಪತ್ರಿಕೆ ಸುದ್ಧಿ ;
ಬ್ರಹ್ಮಾವರ, ಫೆ.೨: ಜಾತಿ, ಪಂಗಡ ಎಂಬುದನ್ನು ಬಿಟ್ಟು ನಾವೆಲ್ಲರೂ ಹಿಂದು, ನಾವೆಲ್ಲರೂ ಬಂಧು ಎಂಬ ನೆಲೆಯಲ್ಲಿ ಕಾಶ್ಮೀರದಿಂದ ಕನ್ಯಾ ಕುಮಾರಿ ತನಕ ದೇಶಾದ್ಯಂತ ೭೦,೦೦೦ ಕಡೆಗಳಲ್ಲಿ ಕೋಟ್ಯಾಂತರ ಜನ ಹಿಂದೂಗಳು ಹಿಂದುತ್ವದ ಭಾವದಲ್ಲಿ ಒಂದಾಗುತ್ತಿದ್ದಾರೆ. ದೇಶದಲ್ಲಿ ದೊಡ್ಡದಾದ ವಿದ್ಯುತ್ ಸಂಚಾರವಾಗುತ್ತಿದೆ. ಸಂಘವು ಹಿಂದುತ್ವದ ಪದ್ಧತಿ, ಜೀವನಸಾರವನ್ನು ಪ್ರಪಂಚದಾದ್ಯಂತ ನೆಲೆಗೊಳಿಸುವಂತೆ ಮಾಡಿದೆ. ಹಿಂದುತ್ವ ಎನ್ನುವಂತದ್ದು ಒಂದು ಜೀವನ ಪದ್ಧತಿ. ಜನನಿ ಜನ್ಮಭೂಮಿಯ ಸಂಬಂಧದಿಂದ ನಮಗೆ ಹಿಂದುತ್ವ ಮೈಗೂಡಿದೆ. ಆದ್ದರಿಂದ ಹಿಂದೂಸ್ಥಾನದಲ್ಲಿ ಹುಟ್ಟಿದ ಪ್ರತಿಯೊಬ್ಬರೂ ನಾನು ಹಿಂದೂ ಎಂದು ಎದೆಯುಬ್ಬಿಸಿ ಹೇಳಬೇಕು. ಧರ್ಮದ ವಿರುದ್ಧ ದಾಳಿಗಳು ನಡೆಯುತ್ತಿರುವ ಈ ಸಂದರ್ಭದಲ್ಲಿ ಹಿಂದುಗಳು ಒಂದಾಗ ಬೇಕಾದ ಅನಿವಾರ್ಯತೆ ಇದೆ ಎಂದು ಪತ್ರಕರ್ತ ಪಿ.ಎಸ್. ಪ್ರಕಾಶ್ ನುಡಿದರು. ಅವರು ಫೆ.೧ರಂದು ಹಿಂದೂ ಸಂಗಮ ಆಯೋಜನಾ ಸಮಿತಿ ಸಾಲಿಗ್ರಾಮ ತಾಲೂಕು ಶಿರಿಯಾರ ಮಂಡಲ ವತಿಯಿಂದ ಶಿರಿಯಾರ ಪೇಟೆಯ ಲಕ್ಷಿರಾ ವಿವೇಶ್ ಫಾಮ್ರ್ನಲ್ಲಿ ನಡೆದ ಹಿಂದೂ ಸಂಗಮ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.

ವೈದ್ಯೆ ಪ್ರತಿಮಾ ನಾಗೇಶ್ ಮಾತನಾಡಿ, ಹಿಂದೂ ಧರ್ಮ-ಧರ್ಮಗ್ರಂಥಗಳು ತಾರತಮ್ಯ ರಹಿತವಾಗಿ ಎಲ್ಲರೂ ಒಂದೇ ಎನ್ನುವ ಸಾರವನ್ನು ಸಾರಿದೆ. ಆದರೆ ಆದರ ವ್ಯಾಖ್ಯಾನ ತಪ್ಪಾಗಿ ಅರ್ಥೈಸಲಾಗುತ್ತದೆ. ಮಕ್ಕಳಿಗೆ ಸಂಸ್ಕೃತಿ ಸಂಪ್ರದಾಯಗಳನ್ನು ನೀಡಿ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ವಿದ್ವಾನ್ ಗುರುಮೂರ್ತಿ ಅಡಿಗ ಹೆದ್ದಾರಿಮಠ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ ಭಾರತದಲ್ಲಿ ಹುಟ್ಟಬೇಕಾದರೆ ಸಾವಿರ ಜನ್ಮದ ಪುಣ್ಯ ಬೇಕು. ಜಾತಿಯನ್ನು ಕೆಲಸದ ಆಧಾರದಲ್ಲಿ ಅಂದು ಮಾಡಿಕೊಂಡಿರಬಹುದು. ಆದರೆ ನಾವೆಲ್ಲರೂ ಹಿಂದು. ನಾವೆಲ್ಲರೂ ಒಂದೇ ಎಂಬುದನ್ನು ಯಾರೂ ಮರೆಯಬಾರದು ಎಂದರು.

ನಿವೃತ್ತ ಶಿಕ್ಷಕ ರಾಮಕೃಷ್ಣ ಅಡಿಗ, ಕಲ್ಲುಗಣಪತಿ ಹಾಗೂ ಶ್ರೀಮತಿ ಪ್ರಮಿಳಾ ವೇದಿಕೆಯಲ್ಲಿ ಇದ್ದರು.
ರಾಷ್ಟ್ರೀಯ ಸ್ವಯಂ ಸೇವಾಸಂಘದ ಪ್ರಮುಖರಾದ ಕಲ್ಲಡ್ಕ ಪ್ರಭಾಕರ ಭಟ್ ಪುರ ಮೆರವಣಿಗೆಗೆ
ಚಾಲನೆ ನೀಡಿದರು.

ಕಾರ್ಯಕ್ರಮದ ಸಂಘಟಕರಲ್ಲಿ ಪ್ರಮುಖರಾದ ಸಂದೀಪ್ ಶೆಟ್ಟಿ ಶಿರಿಯಾರ ಮೇಲ್ಮನೆ ಪ್ರಾಸ್ತಾವಿಕ ಮಾತನಾಡಿ ಎಲ್ಲಾವರ್ಗದ ಜನರು ಸೇರಿ ನಾವೆಲ್ಲ ಒಂದೇ, ಒಂದೇ ಭಾರತ ಮಾತೆಯ ಸುಪುತ್ರರು ಎಂಬ ಒಗ್ಗಟ್ಟಿನ ಭರವಸೆ ನಮ್ಮಲ್ಲಿರಬೇಕು.ಶಿರಿಯಾರ ಮಂಡಲದ ೪ ಗ್ರಾಮದ ಸಮಸ್ತ ಹಿಂದೂ ಬಾಂಧವರು ಈ ಕಾರ್ಯಕ್ರಮಕ್ಕೆ ಸಹಕಾರ ನೀಡಿದ್ದಾರೆ. ಚಾವಡಿ ಸಭೆಗಳ ಮೂಲಕ ಪ್ರತೀ ಮನೆಯನ್ನು ತಲುಪಲು ಸಾಧ್ಯವಾಗಿರುವುದರಿಂದಲೇ ಇಂದು ಜನಸಾಗರವೇ ಸೇರುವಂತಾಗಿದೆ ಎಂದರು.
ಶಿಕ್ಷಕರಾದ ಕರುಣಾಕರ ಶೆಟ್ಟಿ ಸ್ವಾಗತಿಸಿ, ನರೇಂದ್ರ ಕುಮಾರ್ ಕೋಟ ಕಾರ್ಯಕ್ರಮ
ನಿರೂಪಿಸಿದರು. ಮಾಜಿ ಸೈನಿಕ ವಿಜಯ ಶೆಟ್ಟಿ ಪಡುಮುಂಡು ವಂದಿಸಿದರು. ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.



