• July 4, 2025
  • Last Update July 2, 2025 6:09 pm
  • Brahmavara

ಸಮೃದ್ಧ ಕೃಷಿ ಹಾಗೂ ಹೈನುಗಾರಿಕೆಯಲ್ಲಿ ಸಾಧನೆ ;ಸುಧಾಕರ ಕುಲಾಲ್ ಹಲುವಳ್ಳಿ

ಸಮೃದ್ಧ ಕೃಷಿ ಹಾಗೂ ಹೈನುಗಾರಿಕೆಯಲ್ಲಿ ಸಾಧನೆ ;ಸುಧಾಕರ ಕುಲಾಲ್ ಹಲುವಳ್ಳಿ

ಓರ್ವ ವ್ಯಕ್ತಿಗೆ ಕೆಲಸ ಮಾಡಲು ನಿಜವಾದ ಇಚ್ಚಾ ಶಕ್ತಿ ಇದ್ದರೆ ಅವನು ಯಾವುದೇ ಅಡಚಣೆ ಇಲ್ಲದೆ ತನ್ನ ಗುರಿಯನ್ನು ತಲುಪುತ್ತಾನೆ. ಹೋರಾಟ ಕೊಡುವವನು, ಛಲವುಳ್ಳವನು, ತಾನು ಹಿಡಿದಿರುವ ಕೆಲಸದಲ್ಲಿ ಖಂಡಿತವಾಗಿಯೂ ಯಶಸ್ಸು ಕಾಣುತ್ತಾನೆ ಎನ್ನುವುದಕ್ಕೆ ಬ್ರಹ್ಮಾವರ ತಾಲೂಕು ಕನ್ನಾರು, ಹಲುವಳ್ಳಿ, ಗಾಣದಬೆಟ್ಟು ಸುಧಾಕರ ಕುಲಾಲ್ ಸಾಕ್ಷಿಯಾಗಿದ್ದಾರೆ
‘ಕೃಷಿಯಲ್ಲಿ ಯಶಸ್ಸು ಕಂಡುಕೊಳ್ಳುತ್ತೇನೆ, ಆರ್ಥಿಕ ಸ್ವಾವಲಂಬನೆ ಸಾಧಿಸುತ್ತೇ’ ಎಂದು ಹೊರಟ ಅವರು ಇಂದು ಕೃಷಿಯ ಆದಾಯದಲ್ಲೇ ಬದುಕು ಕಟ್ಟಿಕೊಂಡಿದ್ದಾರೆ. ಒಂದಷ್ಟು ಕೃಷಿ ಭೂಮಿ ಇದ್ದರೆ ಆ ಭೂಮಿಗೆ ಸರಿಯಾದಂತಹ ನೀರಿನ ವ್ಯವಸ್ಥೆ ಮಾಡಿಕೊಂಡು ಮಿಶ್ರ (ಸಮೃದ್ಧ) ಕೃಷಿಯೊಂದಿಗೆ ನಾಲ್ಕಾರು ವರ್ಷಗಳ ಪರ್ಯಂತ ಕಠಿಣ ಪರಿಶ್ರಮ ಪಟ್ಟಲ್ಲಿ ಆರ್ಥಿಕ ಸ್ವಾವಲಂಬನೆ ಸಾಧಿಸ ಬಹುದೆಂಬುದನ್ನು ತೋರಿಸಿಕೊಟ್ಟಿದ್ದಾರೆ.


ಸುಧಾಕರ್ ಕುಲಾಲ್ ಬ್ರಹ್ಮಾವರದಲ್ಲಿ ೧೯೯೦ರಲ್ಲಿ ಹಣ್ಣಿನ ಅಂಗಡಿಯನ್ನು ತೆರೆದು ವ್ಯಾಪಾರ ಮಾಡುತ್ತಿದ್ದರು. ಇದರ ಜೊತೆಯಲ್ಲಿ ಕ್ಯಾಂಟೀನ್ ನಡೆಸಿಕೊಂಡಿದ್ದರು. ಇವರ ತಂದೆ ಶೀನ ಕುಲಾಲ್ ಮತ್ತು ತಾಯಿ ಗಂಗಾ ಕುಲಾಲ್ತಿಯವರು ಮನೆಯಲ್ಲಿ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿ ಕೊಂಡಿದ್ದರು. ಅವರ ಜೊತೆ ಸುಧಾಕರ ಕುಲಾಲ್ ಕೃಷಿ ಚಟುವಟಿಕೆಯಲ್ಲಿಯೂ ಭಾಗವಹಿಸುತ್ತಿದ್ದರು. ಸುಧಾಕರ ಕುಲಾಲರಿಗೆ ಕೃಷಿಯ ಬಗ್ಗೆ ಅಪಾರ ಆಸಕ್ತಿ. ಮೊದಲಿನಿಂದಲೂ ಕೃಷಿಯಲ್ಲಿಯೇ ನಾನು ಸಾಧನೆಯನ್ನು ಮಾಡಬೇಕೆಂಬ ಆಸೆ. ಆದ್ದರಿಂದಲೇ ಹಣ್ಣಿನ ವ್ಯಾಪಾರ ಮತ್ತು ಕ್ಯಾಂಟೀನ್ ಬಿಟ್ಟು ಪೂರ್ಣ ಪ್ರಮಾಣದಲ್ಲಿ ಕೃಷಿ ಚಟುವಟಿಕೆಯಲ್ಲಿ ಭಾಗವಹಿಸಲು ನಿರ್ಧರಿಸಿದರು. ಕೃಷಿಯಲ್ಲಿಯೂ ಲಾಭ ಪಡೆಯಬಹುದು ಎಂದು ತೋರಿಸಿದರು. ನೀರಿಗಾಗಿ ಬೋರ್ ಹಾಕಿಸಿ ತೋಟ ಮಾಡಲು ನಿರ್ಧರಿಸಿದರು. ತಮ್ಮ ತೋಟದಲ್ಲಿ ಅಡಿಕೆ, ತೆಂಗು, ಬಾಳೆ, ಪಪ್ಪಾಯಿ, ಜಾಯಿ ಕಾಯಿ, ಕೊಕ್ಕೊ, ರಬ್ಬರ್, ಕಾಳು ಮೆಣಸನ್ನು ಬೆಳೆಸಿದರು. ಇದರೊಂದಿಗೆ ೧೨ ದನಗಳನ್ನು ಸಾಕಿ ಹೈನುಗಾರಿಕೆಯಲ್ಲೂ ಯಶಸ್ಸು ಕಂಡರು. ಅವರ ಯಶಸ್ಸಿನ ಅನುಭವಕ್ಕಾಗಿ ಪತ್ರಿಕೆ ಅವರನ್ನು ಮಾತನಾಡಿಸಿದೆ.


?ಕೃಷಿ ಬಗ್ಗೆ ಹೇಗೆ ಮತ್ತು ಯಾಕೆ ಆಸಕ್ತಿ ಬಂತು?
ನಾನು ಮೊದಲು ಬ್ರಹ್ಮಾವರದಲ್ಲಿ ಕ್ಯಾಂಟೀನ್ ಹಾಗೂ ಹಣ್ಣಿನ ಅಂಗಡಿ ನಡೆಸಿಕೊಂಡಿದ್ದೆ. ವ್ಯಾಪಾರಕ್ಕಿಂತ ನನಗೆ ಕೃಷಿ ಬಗ್ಗೆ ಅಪಾರ ಆಸಕ್ತಿ. ಆದ್ದರಿಂದ ನನ್ನ ತಮ್ಮಂದಿರನ್ನು ಹಣ್ಣಿನ ಅಂಗಡಿ ನಡೆಸಲು ಬಿಟ್ಟೆ. ನಮ್ಮಲ್ಲಿ ಒಂದು ಎಕರೆ ಜಾಗ ಇದ್ದು ಅದರಲ್ಲಿ ತಂದೆಯವರು ಸ್ವಲ್ಪ ಮಟ್ಟಿಗಿನ ಕೃಷಿ ಮಾಡಿದ್ದರು. ನಮ್ಮ ಜಾಗದ ಸಮೀಪ ಬ್ಯಾಂಕ್ ಉದ್ಯೋಗಿಯೊಬ್ಬರು ಭೂಮಿ ಸೇಲ್‌ಗೆ ಇಟ್ಟಿದ್ದರು. ಅವರಿಗೂ ನನ್ನ ಕೃಷಿ ಆಸಕ್ತಿಯ ಬಗ್ಗೆ ಗೊತ್ತು. ಆದ್ದರಿಂದ ಅವರು ನನಗೆ ಮಾರಾಟ ಮಾಡಲು ನಿರ್ಧರಿಸಿ ನನಗೆ ಮಾರಿದರು. ಆ ಜಾಗದಲ್ಲಿ ಶ್ರದ್ಧೆಯಿಂದ ಕೃಷಿ ಕೆಲಸ ಆರಂಭಿಸಿದೆ.
? ಯಾವೆಲ್ಲ ಕೃಷಿ ಮಾಡಿದ್ದೀರಿ?
ಪಪ್ಪಾಯಿ, ಜಾಯಿಕಾಯಿ, ಅಡಿಕೆ, ತೆಂಗು, ಬಾಳೆ, ಕಾಳು ಮೆಣಸು, ರಬ್ಬರ್ ಹೀಗೆ ಎಲ್ಲಾ ರಿತಿಯ ಕೃಷಿಯನ್ನು ನಾನು ಮಾಡಿದೆ. ಒಂದು ಕೃಷಿಯನ್ನು ಮಾತ್ರ ಮಾಡಿಕೊಂಡರೆ ಆರ್ಥಿಕ ಸ್ವಾವಲಂಬನೆ ಅಸಾಧ್ಯ. ಆದ್ದರಿಂದ ಮಿಶ್ರ, ಸಮೃದ್ಧ ಕೃಷಿಯ ಬಗ್ಗೆ ಯೋಚಿಸಿ ಅದೇ ರೀತಿ ಮಾಡಿಕೊಂಡಿದ್ದೇನೆ.


? ಇಷ್ಟೊಂದು ಬಾಳೆ ನೆಟ್ಟಿದ್ದೀರಲ್ಲ, ನಿಮಗೆ ಲಾಭ ತಂದುಕೊಟ್ಟಿದೆಯೇ?
ಬಾಳೆಯನ್ನು ನೆಡುವುದರಿಂದ ಅಡಿಕೆ ಮರದ ಬುಡದಲ್ಲಿ ಹುಲ್ಲು ಬೆಳೆಯುವುದು ಕಡಿಮೆಯಾಗುತ್ತದೆ. ಬಾಳೆಯನ್ನು ನಾವು ಚೆನ್ನಾಗಿ ಬೆಳೆಸಿದರೆ ನಮಗೆ ಅದು ನಿರಂತರವಾಗಿ ಆದಾಯ ಕೊಡುತ್ತದೆ. ನಾನು ಒಂದು ಗೊನೆಯಲ್ಲೇ ರೂ.೫೦೦/ ಸಂಪಾದನೆ ಮಾಡಿದ್ದುಂಟು. ಬಾಳೆಯ ಬುಡದಲ್ಲೇ ಪುನಃ ಪುನಃ ಗಿಡ ಹುಟ್ಟಿ ಬೆಳೆಯುವಂತಹ ಬೆಳೆ. ಆದರೆ ಬಾಳೆಯ ಬುಡದ ಗಡ್ಡೆಯಲ್ಲಿ ತುಂಬಾ ಗಿಡಗಳನ್ನು ಬಿಡಬಾರದು. ಒಂದೆರಡು ಗಿಡಗಳನ್ನು ಬಿಟ್ಟು ಉಳಿದವುಗಳನ್ನು ಅಲ್ಲಿಯೇ ನಾಶಪಡಿಸಬೇಕು. ರಾಶಿಯಾಗಿ ಬೆಳೆದಲ್ಲಿ ಉತ್ತಮ ಗೊನೆ ಬಿಡಲ್ಲ. ಬಾಳೆ ಗಿಡಗಳನ್ನು ಸರಿಯಾಗಿ ಬೆಳೆದರೆ ಅದರಲ್ಲೂ ನಿರಂತರ ಸಂಪಾದನೆ ಮಾಡಬಹುದು. ದಿನನಿತ್ಯದ ಖರ್ಚಿಗೆ ಬಾಳೆ ನೆಡುವುದು ಸೂಕ್ತ.


? ಪಪ್ಪಾಯಿ ಲಾಭದಾಯಕವೇ?
ಪಪ್ಪಾಯಿಯನ್ನು ೫-೬ ವರ್ಷಗಳಿಂದ ಬೆಳೆಯುತ್ತಾ ಬಂದಿದ್ದೇನೆ. ಮಳೆಗಾಲದಲ್ಲಿ ಪಪ್ಪಾಯಿ ಇಲ್ಲಿಯ ವಾತಾವರಣಕ್ಕೆ ಸ್ವಲ್ಪ ಕಷ್ಟ ಅಂತ ಹೇಳಬಹುದು. ಪಪ್ಪಾಯಿ ಗಿಡ ನೆಟ್ಟು ನಾಲ್ಕಾರು ತಿಂಗಳಲ್ಲೇ ಕಾಯಿ ಬಿಡುತ್ತದೆ. ಈ ಕಾಯಿಗಳು ಬೆಳೆಯಲು ಮೂರ್‍ನಾಲ್ಕು ತಿಂಗಳು ಬೇಕಾಗುತ್ತದೆ. ನಂತರ ಪ್ರತೀ ವಾರ ನಿರಂತರವಾಗಿ ಕಾಯಿಗಳು ಲಭಿಸುತ್ತಾ ಹೋಗುತ್ತದೆ. ಮಳೆಗಾಲದಲ್ಲಿ ಕೆಲವೊಮ್ಮೆ ಗಾಳಿಗೆ ಗಿಡಗಳು ತುಂಡಾಗಿ ಬೀಳುತ್ತವೆ. ಆದರೂ ಇದು ಲಾಭದಾಯಕ ಕೃಷಿ. ಈ ಬಾರಿ ಎಪ್ರಿಲ್‌ನಲ್ಲಿ ದೊಡ್ಡ ಗಾಳಿ ಬಂದಾಗ ಒಂದಷ್ಟು ಗಿಡಗಳು ತುಂಡಾಗಿ ಹೋಗಿವೆ. ತುಂಡಾದ ಸ್ಥಳದಿಂದಲೇ ಮತ್ತೆ ಅದು ಬೆಳೆಯುವುದರಿಂದ ತುಂಡಾದ ಗಿಡಗಳನ್ನು ಕಿತ್ತು ಬಿಸಾಡಬೇಕಾದ ಅನಿವಾರ್ಯತೆ ಇಲ್ಲ. ನಾವು ಯಾವುದೇ ರಾಸಾಯನಿಕ ಪದಾರ್ಥ ಬಳಸದೇ ಇರುವುದರಿಂದ
ಊರಿನ ಪಪ್ಪಾಯಿ ಹಣ್ಣಗಳನ್ನು ಜನರು ಖರೀದಿಸುತ್ತಾರೆ. ನಾನು ಸುಮಾರು ೨೦೦ ಪಪ್ಪಾಯಿ ಗಿಡಗಳನ್ನು ಬೆಳೆಸಿದ್ದು ನನಗೆ ಇದರಿಂದ ಲಾಭ ತಂದಿದೆ ಹೊರತು ನಷ್ಟವಾಗಿಲ್ಲ

.

? ಅಡಿಕೆ ಬೆಳೆಯ ಬಗ್ಗೆ ಏನ್ ಹೇಳ್ತೀರಿ?
ಅಡಿಕೆ ನಿಜಕ್ಕೂ ಲಾಭದಾಯಕ. ಆದರೆ ಕೇವಲ ಕೆಲಸಗಾರರ ಮೇಲೆ ಬಿಟ್ಟು ಬಿಡುತ್ತೇನೆ. ತಿಂಗಳಿಗೊಮ್ಮೆ ತಲೆಬುಡ ನೋಡುತ್ತೇನೆ, ನೀರು ಬಿಡುತ್ತೇನೆ ಅಂದರೆ ಸಾಧ್ಯವಾಗಲ್ಲ. ನಿರಂತರವಾಗಿ ಅವುಗಳ ಆರೈಕೆಯನ್ನು ನಾವು ಮಾಡಬೇಕು. ಸರಿಯಾದ ಸಂದರ್ಭಕ್ಕೆ ಗೊಬ್ಬರ ಹಾಕಿ ಬುಡ ಮಾಡಬೇಕು. ಅಡಿಕೆ ಗೊನೆಗೆ ಔಷಧ ಹೊಡೆಯುವಾಗಲೂ ಜಾಗೃತೆ ಮಾಡಬೇಕು. ಸರಿಯಾದ ಸಮಯದಲ್ಲಿ ಹೊಡೆಯಬೇಕು. ಮರ ಬಿಟ್ಟು ಹೋಗದಂತೆ ನೋಡಿಕೊಳ್ಳಬೇಕು. ಗೊನೆ ಸರಿಯಾಗಿ ಒದ್ದೆಯಾಗಬೇಕು. ಒಂದು ವೇಳೆ ಬಿಟ್ಟು ಹೋದಲ್ಲಿ ಅದಕ್ಕೆ ಅಟ್ಯಾಕ್ ಆದ ಕಾಯಿಲೆ ಎಲ್ಲಾ ಅಡಿಕೆ ಮರಗಳ ಗೊನೆಗಳಿಗೂ ಬರುತ್ತದೆ. ಆದ್ದರಿಂದ ಜಾಗೃತೆ ಮಾಡಬೇಕು. ಸಾವಿರಾರು ಅಡಿಕೆ ಗಿಡಗಳನ್ನು ಬೆಳೆಸಿಕೊಂಡಲ್ಲಿ ಉತ್ತಮ ಆದಾಯ ಗಳಿಸಲು ಸಾಧ್ಯವಿದೆ.


? ರಬ್ಬರ್‌ನಿಂದ ಲಾಭವಿಲ್ಲ ಅನ್ನುತ್ತಾರಲ್ಲ, ಆದರೆ ನೀವು ನೆಟ್ಟಿದ್ದೀರಲ್ಲ?
ರಬ್ಬರ್ ಬೆಲೆಯ ಏರಿಳಿತದಿಂದ ಮೊದಲಿನ ಆದಾಯ ಈಗ ಸಿಗುತ್ತಿಲ್ಲ. ನಾನು ಜಾಗ ಖರೀದಿಸುವಾಗ ಕೆ.ಜಿ.ಗೆ ೧೮೦ ರೂ. ಇತ್ತು. ನಂತರ ರೂ. ೧೩೫ಕ್ಕೆ ಕುಸಿತವಾಯಿತು. ೨೦೨೪ ಅಗಸ್ಟ್ ನಂತರ ರೂ. ೨೩೦ಕ್ಕೆ ಹೋಗಿದ್ದು ರೂ.೧೯೦ಕ್ಕೆ ಬಂದು ನಿಂತಿದೆ. ರೂ.೧೮೦ರ ಮೇಲಿದ್ದರೆ ಕೆಲಸಗಾರರ ಸಂಭಾವನೆ ಕಳೆದು ನಮಗೆ ಅಲ್ಪ ಸ್ವಲ್ಪ ಸಿಗಬಹುದು. ಸಾಲ ಮಾಡಿ ಜಾಗ ಖರೀದಿಸಿ ಕಂತು ಕಟ್ಟಿಕೊಂಡು ಹೋಗುವ ಸ್ಥಿತಿ ಇದ್ದರೆ ರಬ್ಬರ್ ಅಷ್ಟೊಂದು ಲಾಭ ಅಲ್ಲ ಅನಿಸುತ್ತಿದೆ.
? ಕಾಳು ಮೆಣಸಿನಿಂದ ನಿಮಗೆ ಲಾಭ ದೊರಕಿದೆಯೇ?
ಸು.ಕು.: ಕಾಳು ಮೆಣಸಿನ ಕೃಷಿ ಲಾಭದಾಯಕ ಕೃಷಿ. ಕಾಳು ಮೆಣಸಿನ ಗಿಡಗಳನ್ನು ಸಾಧ್ಯವಾದಷ್ಟು ಹಳೆ ಮರಗಳಿಗೆ ಹಾಕಿ ಕೊಂಡರೆ ಒಳ್ಳೆಯದು. ವರ್ಷದಲ್ಲಿ ಒಂದು ಬೆಳೆ. ಬೇರೆ ಗಿಡಗಳಿಗೆ ಬುಡ ಮಾಡುವ ಸಂದರ್ಭ ಇವುಗಳಿಗೂ ಗೊಬ್ಬರ ಹಾಕಿ, ನೀರುಣಸಿ ಪೋಷಣೆ ಮಾಡಿದರೆ ಸಾಕು. ಸಮೃದ್ಧ ಕೃಷಿಯಲ್ಲಿ ಇದನ್ನು ಕೂಡ ಬೆಳೆಸಿಕೊಂಡರೆ ಕೃಷಿಕರಿಗೆ ಒಂದಷ್ಟು ಆದಾಯ ಬರಲಿದೆ. ಇದರೊಂದಿಗೆ ಜಾಯಿಕಾಯಿ, ತರಕಾರಿ ಬೆಳೆಸಿ ಮಾರಾಟ ಮಾಡಿದಲ್ಲಿ ಖಂಡಿತವಾಗಿ ಕೃಷಿಯಲ್ಲಿ ಆರ್ಥಿಕ ಸ್ವಾವಲಂಬನೆ ಸಾಧ್ಯವಿದೆ.


?? ಕೃಷಿಯೊಂದಿಗೆ ಹೈನುಗಾರಿಕೆಯಲ್ಲೂ ತೊಡಗಿಸಿ ಕೊಂಡಿದ್ದೀರಲ್ಲ?
ಹೌದು, ೧೨ ದನಗಳನ್ನು ಸಾಕುತ್ತಿದ್ದೇನೆ. ಪ್ರತಿ ದಿನ ಹಾಲನ್ನು ಡೈರಿಗೆ ಕೊಡುತ್ತಾ ಬಂದಿದ್ದೇನೆ. ನಮ್ಮ ತೋಟದಲ್ಲಿಯೇ ಸಾಕಷ್ಟು ಹುಲ್ಲುಗಳು ನಮಗೆ ಸಿಗುತ್ತವೆ. ದನಗಳ ಹಾಲಿನಿಂದ ಪ್ರತೀ ತಿಂಗಳು ಒಂದಷ್ಟು ಆದಾಯ ನನಗೆ ಲಭಿಸುತ್ತಿದೆ.
ಯಾವುದೇ ಕೃಷಿಕರಲ್ಲಿ ಒಂದಷ್ಟು ಭೂಮಿ ಇದ್ದಲ್ಲಿ ಅವರಿಗೆ ಉತ್ತಮ ನೀರಿನ ವ್ಯವಸ್ಥೆ ಮಾಡಿಕೊಳ್ಳಲು ಸಾಧ್ಯವಾದಲ್ಲಿ ಸಮೃದ್ಧ ಕೃಷಿಯ ಮೂಲಕ ಆರ್ಥಿಕ ಸ್ವಾವಲಂಬನೆ ಸಾಧಿಸಲು ಸಾಧ್ಯವಿದೆ ಎಂಬುದನ್ನು ಸುಧಾಕರ ಕುಲಾಲ್ ತೋರಿಸಿಕೊಟ್ಟಿದ್ದಾರೆ. ಇವರ ಕೃಷಿ ಚಟುವಟಿಕೆಯಲ್ಲಿ ಮಡದಿ ಶಾಂತಾ, ಮಕ್ಕಳು ಮಧುಶ್ರೀ, ಸುಶ್ಮಿತಾ, ವಿಘ್ನೇಶ್ ಸಹಕಾರ ನೀಡುತ್ತಿದ್ದಾರೆ.
ಕೃಷಿಯೊಂದಿಗೆ ಪೆರ್ಡೂರು ಕುಂಬಾರರ ಗುಡಿ ಕೈಗಾರಿಕಾ ಸಹಕಾರ ಸಂಘದ ನಿರ್ದೇಶಕರಾಗಿ, ಬ್ರಹ್ಮಾವರ ಕುಲಾಲ ಸಮಾಜ ಸೇವಾ ಸಂಘದ ನಿಕಟಪೂರ್ವ ಅಧ್ಯಕ್ಷರಾಗಿ ಈಗ ಗೌರವಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸುಧಾಕರ ಕುಲಾಲರ ಕೃಷಿ ಸಾಧನೆ ಇತರರಿಗೆ ಮಾದರಿಯಾಗಿದೆ. ಇವರು ಈ ಕ್ಷೇತ್ರದಲ್ಲಿ ಇನ್ನಷ್ಟು ಸಾಧನೆ ಮಾಡುವಂತಾಗಲಿ ಎಂಬುದು ಆಶಯವಾಗಿದೆ..

administrator

Related Articles

Leave a Reply

Your email address will not be published. Required fields are marked *