ವರದಿ : ಚಿತ್ತೂರು ಪ್ರಭಾಕರ ಆಚಾರ್ಯ
ಉಡುಪಿಮಿತ್ರ ಪತ್ರಿಕೆ ಸುದ್ಧಿ :
ಉಡುಪಿ: ಬ್ಯಾಂಕ್ ಖಾತೆಗೆ ಸಂಬಮಧಿಸಿ ಕೆವೈಸಿ ಅಪ್‌ಡೇಟ್ ಮಾಡಲು ಇದೆ ಎಂದು ಡೆಬಿಟ್ ಕಾರ್ಡ್ ಸಂಖ್ಯೆ ಪಡೆದು ರೂ.5,19,000 ಹಣ ವ್ಯಕ್ತಿಯೊಬ್ಬ ತನ್ನ ಖಾತೆಗೆ ವರ್ಗಾಯಿಸಿಕೊಂಡ ಬಗ್ಗೆ ಸೆನ್ ಪೊಲೀಸ್ ಠಾನೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾರ್ಕಳ ತಾಲೂಕು ಸಾಣೂರು ಗ್ರಾಮದ ಪ್ರೇಮಲತಾ (58)ಹಣ ಕಳಕೊಂಡವರು. ಇವರು ಕೆ.ಎಮ್.ಸಿ ಆಸ್ಪತ್ರೆಯಲ್ಲಿ ನರ್ಸ್ ಆಗಿ ಕೆಲಸ ಮಾಡಿಕೊಂಡಿದ್ದು, ಕಳೆದ ಮೇ ತಿಂಗಳಲ್ಲಿ ನಿವೃತ್ತಿ ಹೊಂದಿ ಮನೆಯಲ್ಲಿದ್ದಾರೆ. ಇವರು ಯುನಿಯನ್ ಬ್ಯಾಂಕ್‌ನಲ್ಲಿ ಖಾತೆ ಹೊಂದಿದ್ದಾರೆ. ಜೂನ್೨೬ ರಂದು ಇವರು ಮುಂಬೈಗೆ ಟ್ರೈನ್‌ನಲ್ಲಿ ಹೋಗುತ್ತಿರುವಾಗ ಸಂಜೆ ೪:೩೦ ಗಂಟೆಗೆ 7076260938 ನಂಬರ್‌ನಿಂದ ಯಾರೋ ಅಪರಿಚಿತ ವ್ಯಕ್ತಿ ಕರೆ ಮಾಡಿ ತಾನು ಕಾರ್ಕಳ ಸಾಣೂರು ಬ್ರಾಂಚ್ ಯುನಿಯನ್ ಬ್ಯಾಂಕ್‌ನಿಂದ ಮಾತನಾಡುತ್ತಿರುವುದಾಗಿ ತಿಳಿಸಿ ನಿಮ್ಮ ಕೆವೈಸಿ ಅಪ್‌ಡೇಟ್ ಮಾಡಲು ಇದೆ ನಿಮ್ಮ ಅಕೌಂಟ್ ನಂಬ್ರ ಹೇಳಿ ಎಂದು ಕೇಳಿದ್ದ. ಆಗ ಪ್ರೇಮಲತಾ ಅವರು ತನಗೆ ಅಕೌಂಟ್ ನಂಬ್ರ ನೆನಪಿಲ್ಲ ಎಂದು ಹೇಳಿದಾಗ ಡೆಬಿಟ್ ಕಾರ್ಡ್ ನಂಬ್ರ ಹೇಳುವಂತೆ ತಿಳಿಸಿದ್ದ. ಪ್ರೇಮಲತಾ ಆ ವ್ಯಕ್ತಿ ಬ್ಯಾಂಕ್‌ನಿಂದ ಮಾತನಾಡುವುದೆಂದು ನಂಬಿ ತನ್ನ ಡೆಬಿಟ್ ಕಾರ್ಡ್ ನಂಬ್ರ ಹೇಳಿದ್ದರು. ನಂತರ ಪುನಃ ಅದೇ ನಂಬರ್‌ನಿಂದ ಅದೇ ವ್ಯಕ್ತಿ ಕರೆ ಮಾಡಿ ಕೆವೈಸಿ ಅಪ್‌ಡೇಟ್ ಆಗಿರುವುದಾಗಿ ತಿಳಿಸಿದ್ದು, ಜೂನ್26ರಂದು ರಾತ್ರಿ 8.18ಗಂಟೆಗೆ ಪ್ರೇಮಲತಾರವರ ಯುನಿಯನ್ ಬ್ಯಾಂಕ್ ಖಾತೆಯಿಂದ 2,25,000/- , 8.24 ಗಂಟೆಗೆ 2,25,000/- ಹಾಗೂ ರಾತ್ರಿ 9.00 ಗಂಟೆಗೆ 19,0000/- ಒಟ್ಟು 5,19,000/- ಹಣ ಕಡಿತಗೊಂಡಿತ್ತು. ಯಾರೋ ಅಪರಿಚಿತ ವ್ಯಕ್ತಿ ಯುನಿಯನ್ ಬ್ಯಾಂಕ್‌ನಿಂದ ಮಾತನಾಡುವುದಾಗಿ ನಂಬಿಸಿ ಪ್ರೇಮಲತಾರ ಡೆಬಿಟ್ ಕಾರ್ಡ್ ನಂಬ್ರ ಪಡೆದುಕೊಂಡು ಅವರ ಖಾತೆಯಿಂದ ಹಣವನ್ನು ವರ್ಗಾವಣೆ ಮಾಡಿಕೊಂಡು ವಂಚನೆ ಮಾಡಿದ್ದಾನೆ. ಈ ಬಗ್ಗೆ ಸೆನ್ ಪೊಲೀಸ್ ಠಾಣೆಯಲ್ಲಿ ಕಲಂ: ೬೬(ಸಿ), ೬೬(ಡಿ)ಐ.ಟಿ. ಆಕ್ಟ್ ಮತ್ತು ೩೧೮(೪)ಬಿಎನ್‌ಎಸ್ ರಂತೆ ಪ್ರಕರಣ ದಾಖಲಾಗಿದೆ.
ನಾವು ಬ್ಯಾಂಕ್‌ನಿಂದ ಮಾತನಾಡುವುದು, ನಿಮ್ಮ ಬ್ಯಾಂಕ್ ಖಾತೆಯ ಕೆವೈಸಿ ಅಪ್‌ಡೇಟ್ ಮಾಡಲಿಕ್ಕಿದೆ ಅಂತ ಫೋನ್ ಮಾಡಿದರೆ ಕಾಲ್ ಸ್ವೀಕರಿಸಿದವರು ಯಾವುದೇ ಕಾರಣಕ್ಕೂ ನಂಬಲು ಹೋಗಬೇಡಿ. ನಿಮ್ಮ ಖಾತೆಗೆ ಸಂಬಂಧಿಸಿದ ಯಾವುದೇ ವಿವಿರ ನೀಡಲು ಹೋಗಬೇಡಿ. ಬದಲಿಗೆ ತಕ್ಷಣ ನೇರವಾಗಿ ಬ್ಯಾಂಕ್‌ನ ಸಿಬ್ಬಂದಿಗಳನ್ನು ಮುಖತಃ ಸಂಪರ್ಕಿಸಿ ಕರೆಯ ಮಾಹಿತಿ ತಿಳಿಸಿ. ನಿಮ್ಮ ಖಾತೆಯಲ್ಲಿ ಅಗತ್ಯಕ್ಕಿಂತ ಜಾಸ್ತಿ ಹಣ ಇಡಲು ಹೋಗಬೇಡಿ. ಡ್ರಾ ಮಾಡಿ ಫಿಕ್ಸಡ್ ಡೆಪೋಸಿಟ್ ಮಾಡುವುದು ಸೂಕ್ತ. ಮಾಹಿತಿ ನೀಡಿದ್ದೇ ಹೌದಾದಲ್ಲಿ ಪ್ರೇಮಲತಾರಂತೆ ಹಣ ಕಳಕೊಳ್ಳಬೇಕಾಗುತ್ತದೆ.