• February 9, 2026
  • Last Update February 2, 2026 6:06 pm
  • Brahmavara

ಅ.11 ಹಾಗೂ ಅ.12ರಂದು ಬ್ರಹ್ಮಾವರದಲ್ಲಿ ಕೃಷಿ ಮೇಳ

ಅ.11 ಹಾಗೂ ಅ.12ರಂದು ಬ್ರಹ್ಮಾವರದಲ್ಲಿ ಕೃಷಿ ಮೇಳ

ವರದಿ : ಚಿತ್ತೂರು ಪ್ರಭಾಕರ ಆಚಾರ್ಯ
ಉಡುಪಿಮಿತ್ರ ಪತ್ರಿಕೆ ಸುದ್ಧಿ :
ಬ್ರಹ್ಮಾವರ, ಅ.8: ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾನಿಲಯ, ಶಿವಮೊಗ್ಗ ಇದರ ಅಂಗ ಸಂಸ್ಥೆಗಳಾದ ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರ, ಬ್ರಹ್ಮಾವರ, ಕೃಷಿ ವಿಜ್ಞಾನ ಕೇಂದ್ರ, ಬ್ರಹ್ಮಾವರ, ಡಿಪ್ಲೋಮಾ ಕೃಷಿ ಮಹಾವಿದ್ಯಾಲಯ, ಬ್ರಹ್ಮಾವರ, ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರ, ಉಳ್ಳಾಲ, ಹಾಗೂ ರಾಜ್ಯ ಸರಕಾರಿ ಇಲಾಖೆಗಳಾದ ಕೃಷಿ, ತೋಟಗಾರಿಕೆ, ಪಶು ಸಂಗೋಪನೆ, ಮೀನುಗಾರಿಕೆ ಮತ್ತು ಅರಣ್ಯ ಇಲಾಖೆ; ಉಡುಪಿ, ಜಿಲ್ಲಾ ಕೃಷಿಕ ಸಮಾಜ, ಉಡುಪಿ ಮತ್ತು ದಕ್ಷಿಣ ಕನ್ನಡ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ರಿ), ಉಡುಪಿ, ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಅಭಿಯಾನ – ಸಂಜೀವಿನಿ, ಬ್ಯಾಂಕ್ ಆಫ್ ಬರೋಡಾ, ಉಡುಪಿ. ಕೆನರಾ ಬ್ಯಾಂಕ್, ಬ್ರಹ್ಮಾವರ ಇವರ ಸಂಯುಕ್ತ ಆಶ್ರಯದಲ್ಲಿ ಅ.11 ಹಾಗೂ ಅ.12ರಂದು ಎರಡು ದಿನಗಳ “ಕೃಷಿ ಮೇಳ-೨೦೨೫ ಕಾರ್ಯಕ್ರಮವನ್ನು ಬ್ರಹ್ಮಾವರದ ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರದ ಆವರಣದಲ್ಲಿ ಆಯೋಜಿಸಲಾಗಿದೆ ಎಂದು ಹಿರಿಯ ವಿಜ್ಞಾನಿ ಕೆ.ವಿ.ಕೆ ಬ್ರಹ್ಮಾವರ ಇದರ ಸಹ ಸಂಶೋಧನಾ ನಿರ್ದೇಶಕ ಡಾ.ಧನಂಜಯ ಬಿ. ತಿಳಿಸಿದರು. ಅವರು ಬ್ರಹ್ಮಾವರ ಕೃಷಿ ಕೇಂದ್ರದಲ್ಲಿ ನಡೆಸಿದ ಪತ್ರಿಕಾಗೋಷ್ಟಿಯಲ್ಲಿ ಮಾಹಿತಿ ನೀಡಿದರು.
ಈ ವರ್ಷದ ಕೃಷಿಮೇಳದಲ್ಲಿ ಕೃಷಿಕರಿಗಾಗಿ ನಮ್ಮ ಕೇಂದ್ರದಿಂದ ಇತ್ತೀಚಿನ ವರ್ಷಗಳಲ್ಲಿ ಬಿಡುಗಡೆ ಮಾಡಲಾಗಿರುವ ಭತ್ತದ ತಳಿಗಳಾದ ಸಹ್ಯಾದ್ರಿ ಬ್ರಹ್ಮ, ಸಹ್ಯಾದ್ರಿ ಪಂಚಮುಖಿ, ಸಹ್ಯಾದ್ರಿ ಸಪ್ತಮಿ, ಕಜೆ ೨೫-೯ ಹಾಗೂ ಕೇಂದ್ರದಲ್ಲಿ ಪ್ರಸ್ತುತ ಪ್ರಯೋಗಗಳಲ್ಲಿ ತೊಡಗಿಸಲಾಗಿರುವ ಇತರ ಭತ್ತದ ತಳಿಗಳನ್ನು ಪರಿಚಯಿಸುವುದು ನಮ್ಮ ಮುಖ್ಯ ಉದ್ದೇಶವಾಗಿರುತ್ತದೆ. ಇದೇ ಸಂದರ್ಭದಲ್ಲಿ ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರ, ಬ್ರಹ್ಮಾವರದಿಂದ ಬಿಡುಗಡೆ ಮಾಡಿರುವಂತಹ ಕೃಷಿ ಯಂತ್ರೋಪಕರಣಗಳಾದ ಸುಧಾರಿತ ಕೊನೋ ವೀಡರ್, ಭತ್ತದಲ್ಲಿ ಕಳೆ ತೆಗೆಯುವ ಯಂತ್ರ, ಪವರ್ ಟಿಲ್ಲರ್ ಚಾಲಿತ ಮಣ್ಣು ದಬ್ಬುವ ಯಂತ್ರ ಹಾಗೂ ಕಾಡು ಪ್ರಾಣಿಗಳ ಹಾವಳಿ ಕುರಿತು ಮಾಲಿಕರನ್ನು ಎಚ್ಚರಿಸುವ ಸ್ವಯಂ ಚಾಲಿತ ವ್ಯವಸ್ಥೆ ಮುಂತಾದ ಕೃಷಿ ಯಂತ್ರೋಪಕರಣಗಳನ್ನು ರೈತರಿಗೆ ಪರಿಚಯ ಮಾಡಿಕೊಡಲಾಗುವುದು, ಈ ಕೃಷಿಮೇಳದ ವಿಶೇಷ ಆಕರ್ಷಣೆಗಳೆಂದರೆ ಕೃಷಿಯಲ್ಲಿ ಡ್ರೋನ್ ಬಳಕೆಯ ಪ್ರಾತ್ಯಕ್ಷಿಕೆ, ಸಿಓ-೪, ೫ ಮತ್ತು ಸಿಓಎಫ್‌ಎಸ್.-೨೯, ೩೧ ಹಾಗೂ ಸೂಪರ್ ನೇಪಿಯರ್ ಮೇವಿನ ಬೆಳೆಗಳ ಪ್ರಾತ್ಯಕ್ಷಿಕೆ, ತೆಂಗಿನಲ್ಲಿ ಬಹುಬೆಳೆ ಯೋಜನೆ ಮತ್ತು ಪೋಷಕಾಂಶಗಳ ನಿರ್ವಹಣೆ, ತೋಟಗಾರಿಕೆ ಬೆಳೆಗಳಲ್ಲಿ ಕಸಿಕಟ್ಟುವಿಕೆ, ಸಾವಯವ ಗೊಬ್ಬರ, ಕಾಂಪೋಸ್ಟ್, ಎರಗೊಬ್ಬರ, ಅಜೋಲ್ಲಾ ಗೊಬ್ಬರ ತಯಾರಿಕೆಯ ಪ್ರಾತ್ಯಕ್ಷಿಕೆ, ಹೈನುಗಾರಿಕೆ, ಮೀನುಗಾರಿಕೆ, ಆಡು, ಕೋಳಿ ಮತ್ತು ಬಾತುಕೋಳಿ ಸಾಕಾಣಿಕೆಗಳ ಪ್ರಾತ್ಯಕ್ಷಿಕೆ, ಮೌಲ್ಯಾಧಾರಿತ ಆಹಾರ ಉತ್ಪನ್ನಗಳು ಮತ್ತು ಪ್ರಾತ್ಯಕ್ಷಿಕೆ, ಜೈವಿಕ ಅನಿಲ ಉತ್ಪಾದನಾ ಘಟಕಗಳು, ಅಲಂಕಾರಿಕ ಮತ್ತು ಹೂವಿನ ಗಿಡಗಳ ಪ್ರದರ್ಶನ ಮತ್ತು ಮಾರಾಟ, ಚಿಟ್ಟೆ ಪಾರ್ಕ್, ಕೃಷಿ ಪ್ರವಾಸೋಧ್ಯಮ, ಜೇನು ಕೃಷಿ ಮತ್ತು ಆಕರ್ಷಕ ಕೃಷಿ ವಸ್ತು ಪ್ರದರ್ಶನಗಳೂ ಇರುತ್ತವೆ ಎಂದು ಡಿಪ್ಲೋಮಾ ಕೃಷಿ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಕೆ.ವಿ.ಸುಧೀರ್ ಕಾಮತ್ ತಿಳಿಸಿದರು.


ಕೃಷಿಮೇಳದ ಉದ್ಘಾಟನೆಯನ್ನು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀಮತಿ ಲಕ್ಷ್ಮೀ ಆರ್. ಹೆಬ್ಬಾಳಕರ್‌ರವರು ನೆರವೇರಿಸಲಿದ್ದು, ಕೃಷಿ ಸಚಿವರಾದ ಎನ್. ಚೆಲುವರಾಯಸ್ವಾಮಿ ಭಾಗವಹಿಸಲಿದ್ದಾರೆ. ಕೃಷಿ ವಸ್ತು ಪ್ರದರ್ಶನದ ಉದ್ಘಾಟನೆಯನ್ನು ಸಂಸದ ಕೋಟ ಶ್ರೀನಿವಾಸ ಪೂಜಾರಿ ನೆರವೇರಿಸಲಿದ್ದಾರೆ. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉಡುಪಿಯ ಶಾಸಕ ಯಶಪಾಲ್ ಎ. ಸುವರ್ಣ ವಹಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಶಿವಮೊಗ್ಗದ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ.ಆರ್.ಸಿ. ಜಗದೀಶ, ಸಂಶೋಧನಾ ನಿರ್ದೇಶಕ ಡಾ. ಬಿ. ಎಂ. ದುಷ್ಯಂತ ಕುಮಾರ್ ಮತ್ತು ಕೃಷಿ ವಿಸ್ತರಣಾ ನಿರ್ದೇಶಕ ಡಾ. ಜಿ.ಕೆ. ಗಿರಿಜೇಶ್ ಭಾಗವಹಿಸಲಿದ್ದಾರೆ. ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ, ಶಾಸಕ ವಿ. ಸುನಿಲ್ ಕುಮಾರ್, ವಿಧಾನಪರಿಷತ್ ಸದಸ್ಯ ಎಸ್. ಎಲ್. ಭೋಜೇಗೌಡ, ಬೈಂದೂರು ಶಾಸಕ ಗುರುರಾಜ ಶೆಟ್ಟಿ, ಗಂಟಿಹೊಳೆ, ಕುಂದಾಪುರ ಶಾಸಕ ಎ. ಕಿರಣ ಕುಮಾರ ಕೊಡ್ಗಿ, ಕಾಪು ಶಾಸಕ ಗುರ್ಮೆ ಸುರೇಶ ಶೆಟ್ಟಿ, ವಿಧಾನ ಪರಿಷತ್ ಸದಸ್ಯರಾದ ಮಂಜುನಾಥ ಭಂಡಾರಿ, ಡಾ. ಧನಂಜಯ ಸರ್ಜಿ, ಕಿಶೋರ್ ಕುಮಾರ್ ಪುತ್ತೂರು, ಚಾಂತಾರು ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಪ್ರೇಮ ಆರ್. ಶೆಟ್ಟಿ, ಜಿಲ್ಲಾ ಗ್ಯಾರೆಂಟಿ ಅನುಷ್ಟಾನ ಸಮಿತಿ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಬ್ರಹ್ಮಾವರ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷೆ ಡಾ. ಸುನೀತಾ ಶೆಟ್ಟಿ, ಸರ್ಕಾರದ ಕಾರ್ಮಿಕ ಇಲಾಖೆಯ ಕಾರ್ಯದರ್ಶಿಶ್ರೀಮತಿ ರೋಹಿಣಿ ಸಿಂಧೂರಿ ದಾಸರಿ, ಜಿಲ್ಲಾಧಿಕಾರಿ ಶ್ರೀಮತಿ ಸ್ವರೂಪ ಟಿ.ಕೆ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್, ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್, ಯೋಜನಾ ನಿರ್ದೇಶಕರು, ಓಖಐಒ – ಸಂಜೀವಿನಿವಿಜಯಕುಮಾರ್, ಜಂಟಿ ಕೃಷಿ ನಿರ್ದೇಶಕರಾದ ಶ್ರೀಮತಿ ಪೂರ್ಣಿಮ ಜಿ. ಸಿ., ಮೀನುಗಾರಿಕಾ ಇಲಾಖಾ ಜಂಟಿ ನಿರ್ದೇಶಕರಾದ ವಿವೇಕ್ ಆರ್., ತೋಟಗಾರಿಕಾ ಇಲಾಖಾ ಉಪ ನಿರ್ದೇಶಕ ರಾಜು ಎಂ. ಎಸ್., ಪಶು ಸಂಗೋಪನೆ ಇಲಾಖೆ, ಉಡುಪಿ ಜಿಲ್ಲೆ ಜಂಟಿ ನಿರ್ದೇಶಕ ಡಾ. ಎಂ ಸಿ. ರೆಡ್ಡಪ್ಪ, ಉಪ ಅರಣ್ಯ ಸಂರಕ್ಷಣಾಧಿಕಾರಿಗಳು, ರವೀಂದ್ರ ಕುಮಾರ್ ಡಿ. ಎನ್., ಕೃಷಿ ಇಲಾಖೆ ಉಪನಿರ್ದೇಶಕ ಚಂದ್ರಶೇಖರ ನಾಯ್ಕ್ ಇವರು ಭಾಗವಹಿಸಲಿದ್ದಾರೆ.

ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಶಿವಮೊಗ್ಗದ ಗೌರವಾನ್ವಿತ ವ್ಯವಸ್ಥಾಪನಾ ಮಂಡಳಿ ಸದಸ್ಯರು ಆಯ್ದ ಪ್ರಗತಿಪರ ಕೃಷಿಕರಿಗೆ ಸನ್ಮಾನಿಸಲಿದ್ದಾರೆ. ಈ ಸಂದರ್ಭದಲ್ಲಿ ಕೃಷಿ ತಾಂತ್ರಿಕ ಕೈಪಿಡಿಗಳನ್ನು ಡಾ. ಕೆ. ಗಂಗಾಧರ್, ಹಿರಿಯ ವಿಜ್ಞಾನಿಗಳು, ಕೃಷಿ ತಂತ್ರ್ರಜ್ಞಾನ ಅಳವಡಿಕಾ ಸಂಶೋಧನಾ ಸಂಸ್ಥೆ, ಬೆಂಗಳೂರು, ಅಲ್ಲದೇ, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾ ಕೃಷಿ ಸಮಾಜದ ಅಧ್ಯಕ್ಷರಾದ ಶ್ರೀ ಅಶೋಕ ಕುಮಾರ್ ಕೊಡ್ಗಿ ಮತ್ತು ಶ್ರೀ ವಿಜಯಕುಮಾರ್ ರೈ, ಶ್ರೀ ಮಹಾಮಾಯ ಪ್ರಸಾದ್ ರಾಯ್, ಉಪ ಮಹಾ ಪ್ರಬಂಧಕರು, ಕೆನರಾ ಬ್ಯಾಂಕ್, ಉಡುಪಿ, ಶಬೀಲ ಬೀವಿ ಜೆ., ಪ್ರಾದೇಶಿಕ ಪ್ರಬಂಧಕರು, ಬ್ಯಾಂಕ್ ಆಫ್ ಬರೋಡಾ, ಶ್ರೀ ಅರ್ಚನಾ ಎನ್. ಪ್ರಾದೇಶಿಕ ನಿರ್ದೇಶಕರು, ಕೆನರಾ ಬ್ಯಾಂಕ್ ಉಡುಪಿ, ಶ್ರೀ ಆನಂದ ಸುವರ್ಣ, ಪ್ರಾದೇಶಿಕ ನಿರ್ದೇಶಕರು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಪ್ರಾದೇಶಿಕ ಕಛೇರಿ, ಉಡುಪಿ ಇವರು ಬಿಡುಗಡೆ ಮಾಡಲಿದ್ದಾರೆ. ಹಾಗೂ ಶ್ರೀ ಅಮಿತಾಬ್ ಶಂಕರ್, ಮುಖ್ಯ ಪ್ರಬಂಧಕರು, ಕೆನರಾ ಬ್ಯಾಂಕ್, ವಾರಂಬಳ್ಳಿ, ಬ್ರಹ್ಮಾವರ ಹಾಗೂ ಶ್ರೀ ಪಿ. ವೈಕುಂಠ ಹೇರ್ಳೆ, ಅಧ್ಯಕ್ಷರು, ತಾಲೂಕು ಕೃಷಿಕ ಸಮಾಜ, ಬ್ರಹ್ಮಾವರ ಇವರ ಉಪಸ್ಥಿತಿಯರಾಗಿರುತ್ತಾರೆ.
ಮೇಳದಲ್ಲಿ ಮೊದಲನೇ ದಿನ ಕೃಷಿಮೇಳದ ಉದ್ಘಾಟನಾ ಸಮಾರಂಭ ಅಲ್ಲದೇ, ಕೃಷಿ ವಸ್ತುಪ್ರದರ್ಶನ ಮಳಿಗೆಗಳ ಮತ್ತು ಸಮಗ್ರ ಕೃಷಿ ಘಟಕಗಳ ಕ್ಷೇತ್ರ ಭೇಟಿಯನ್ನು ಆಯೋಜಿಸಲಾಗಿದ್ದು, ಅಪರಾಹ್ನ “ತೋಟಗಾರಿಕೆ ಬೆಳೆಗಳ ಲಾಭದಾಯಕ ನಿರ್ವಹಣೆ ವಿಚಾರ ಸಂಕಿರಣವನ್ನು ಏರ್ಪಡಿಸಲಾಗಿದೆ. ಎರಡನೇ ದಿನದ ಕಾರ್ಯಕ್ರಮದಲ್ಲಿ “ಗೇರು ಬೆಳೆ ವಿಚಾರ ಸಂಕಿರಣ ಮತ್ತು “ಕರಾವಳಿಗೆ ಭವಿಷ್ಯದ ಬೆಳೆಗಳು ಮತ್ತು ತಾಂತ್ರಿಕತೆಗಳು ಮತ್ತು “ಕರಾವಳಿಯಲ್ಲಿ ಸುಸ್ಥಿರ ಭತ್ತದ ಕೃಷಿ ಮತ್ತು ಕೃಷಿ ಪೂರಕ ಚಟುವಟಿಕೆಗಳು ವಿಚಾರ ಸಂಕಿರಣಗಳನ್ನು ಏರ್ಪಡಿಸಲಾಗಿದೆ. ಈ ಮೂರು ವಿಚಾರ ಸಂಕಿರಣಗಳಲ್ಲಿ ಇಲಾಖಾ ಮುಖ್ಯಸ್ಥರು, ಹಿರಿಯ ವಿಜ್ಞಾನಿಗಳು ಮತ್ತು ರಾಷ್ಟ್ರೀಯ ಸಂಶೋಧನಾ ಕೇಂದ್ರಗಳ ವಿಜ್ಞಾನಿಗಳು, ಭಾಗವಹಿಸಿ ಕೃಷಿಕರಿಗೆ ಅಗತ್ಯ ಮಾಹಿತಿಯನ್ನು ನೀಡಲಿದ್ದಾರೆ. ಇದೇ ಸಂದರ್ಭದಲ್ಲಿ ರೈತರು ಮತ್ತು ವಿಜ್ಞಾನಿಗಳ ಮುಕ್ತ ಮುಖಾಮುಖಿ ಚರ್ಚೆಯನ್ನು ಆಯೋಜಿಸಲಾಗಿದ್ದು ಹಾಗೂ ಪ್ರಗತಿಪರ ರೈತರು ಕೃಷಿಯ ಕುರಿತಾಗಿ ತಮ್ಮ ಅನುಭವಗಳನ್ನು ಮಂಡಿಸಲೂ ಏರ್ಪಾಡು ಮಾಡಲಾಗಿರುತ್ತದೆ. ಆದ್ದರಿಂದ ರೈತಾಪಿ ಜನರು ಈ ಕಾರ್ಯಕ್ರಮದಲ್ಲಿ ಭಾಗವಹಿಸಬೇಕೆಂದು ವಿನಂತಿಸಿದರು.
ಕೃಷಿಮೇಳದಲ್ಲಿ ಈ ವರ್ಷ ಸುಮಾರು ೨೦೦ ಕ್ಕೂ ಅಧಿಕ ಮಳಿಗೆಗಳಲ್ಲಿ ವಿವಿಧ ಇಲಾಖೆ, ಸರಕಾರಿ ಮತ್ತು ಖಾಸಗಿ ಸಂಸ್ಥೆಗಳಿಂದ ಅಭಿವೃದ್ಧಿ ಪಡಿಸಿರುವ ಕೃಷಿ ತಂತ್ರಜ್ಞಾನಗಳ ಮತ್ತು ಕೃಷಿ ಪರಿಕರಗಳ ವಸ್ತು ಪ್ರದರ್ಶನಕ್ಕೆ ಏರ್ಪಾಡು ಮಾಡಲಾಗಿದೆ. ಈ ಕೃಷಿಮೇಳದಲ್ಲಿ ಕರಾವಳಿ ಮತ್ತು ಇತರೇ ಜಿಲ್ಲೆಗಳಿಂದ ಸುಮಾರು ರೈತರು ಹಾಗೂ ಸಾರ್ವಜನಿಕರು ಭಾಗವಹಿಸುವ ನಿರೀಕ್ಷೆ ಇದ್ದು, ಕೃಷಿಯಲ್ಲಿ ತೊಡಗಿಸಿರುವ ರೈತರು, ವಿಸ್ತರಣಾ ಕಾರ್ಯಕರ್ತರು, ಉದ್ದಿಮೆದಾರರು, ಸ್ವ ಸಹಾಯ ಸಂಘಗಳ ಸದಸ್ಯರು ಮತ್ತು ಕೃಷಿ ಆಸಕ್ತರು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಅತ್ಯಧಿಕ ಸಂಖ್ಯೆಯಲ್ಲಿ ಭಾಗವಹಿಸಿ ಕೃಷಿ ಮೇಳದ ಪ್ರಯೋಜನ ಪಡೆಯಲು ಕೋರಿಕೊಂಡಿದ್ದಾರೆ. ಹಿರಿಯ ಕ್ಷೇತ್ರಾಧ್ಯಕ್ಷ ಡಾ.ಶಂಕರ್ ಎಂ. ಪತ್ರಿಕಾಗೋಷ್ಟಿಯಲ್ಲಿದ್ದರು.

administrator

Related Articles

Leave a Reply

Your email address will not be published. Required fields are marked *