ವರದಿ: ಚಿತ್ತೂರು ಪ್ರಭಾಕರ ಆಚಾರ್ಯ
ಚಿತ್ತೂರು, ಸೆ.೧೯: ಜೀವನದಲ್ಲಿ ನಮ್ಮ ಆಹಾರವೇ ನಮಗೆ ಔಷಧಿಯಾಬೇಕು. ಹಾಗಾದಾಗ ಮಾತ್ರ ಆರೋಗ್ಯಯುತ ಶರೀರ ಹೊಂದಲು ಸಾಧ್ಯ. ಆಗ ಮಾತ್ರ ಮನಸ್ಸು ಸದೃಢವಾಗಿರುತ್ತದೆ. ಮನಸ್ಸು ಸದೃಢವಾದಾಗ ಮಾತ್ರ ನಮ್ಮ ಎಲ್ಲಾ ಕೆಲಸ ಯಶಸ್ಸು ಕಾಣುತ್ತದೆ ಎಂದು ಹಟ್ಟಿಯಂಗಡಿ ಸಿದ್ದಿವಿನಾಯಕ ಇಂಗ್ಲೀಷ್ ಮೀಡಿಯಂ ಸ್ಕೂಲಿನ ಪ್ರಿನ್ಸಿಪಾಲ್ ಶರಣ್‌ಕುಮಾರ್ ನುಡಿದರು.
ಅವರು ಸೆ.೨೩ರಂದು ಕುಂದಾಪುರ ತಾಲೂಕು ಆಲೂರಿನ ಚಿತ್ರಕೂಟ ಆಯುರ್ವೇದ ಚಿಕಿತ್ಸಾಲಯದಲ್ಲಿ ರಾಷ್ಟ್ರೀಯ ಆಯುರ್ವೇದ ದಿನದ ಅಂಗವಾಗಿ ಏರ್ಪಡಿಸಿದ ಪ್ರಬಂಧ, ಭಾಷಣ, ಕವನ ಸ್ಪರ್ಧೆಯ ಕಾರ್ಯಕ್ರಮ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.

ಹಿರಿಯ ಕೃಷಿಕರಾದ ಮಹಾಬಲ ಬಾಯರಿ ಕಾರ್ಯಕ್ರಮ ಉದ್ಘಾಟಿಸಿದರು.
ಗ್ರಾಮ ಪಂಚಾಯತ್ ಅಧ್ಯಕ್ಷ ರಾಜೇಶ್ ದೇವಾಡಿಗ ಮಾತನಾಡಿ ಡಾ. ರಾಜೇಶ್ ಬಾಯರಿ ಹಾಗೂ ಡಾ. ಅನುಲೇಖ ಬಾಯರಿ ದಂಪತಿ ಚಿತ್ರಕೂಟ ಆಯುರ್ವೇದ ಚಿಕಿತ್ಸಾಲಯದ ಮೂಲಕ ಚಿಕಿತ್ಸೆ ನೀಡುತ್ತಾ ಜನರಿಗೆ ಆಯುರ್ವೇದದ ಮಹತ್ವಿಕೆ ತಿಳಿಸುತ್ತಾ ಬಂದಿದ್ದಾರೆ. ಅವರು ತಮ್ಮ ದುಡಿಮೆಯ ಒಂದು ಭಾಗವನ್ನು ಸಮಾಜಸೇವೆಗೆ ವಿನಿಯೋಗಿಸುತ್ತಿದ್ದಾರೆ ಎಂದರು.

ಸಂಘದ ಹಿರಿಯ ಪ್ರಚಾರಕ ಕೃಷ್ಣಮೂರ್ತಿ ಮಾತನಾಡಿ ೨೦ ದೇಶಗಳಿಂದ ಜನರು ಚಿತ್ರಕೂಟಕ್ಕೆ ಬಂದು ಚಿಕಿತ್ಸೆ ಪಡೆಯುತ್ತಿದ್ದು ಪ್ರಪಂಚವೇ ಗುರುತಿಸಿದ ಸಂಸ್ಥೆಯಾಗಿ ಚಿತ್ರಕೂಟ ಗುರುತಿಸಿಕೊಂಡಿದೆ ಎಂದರು.

ಹೆಗ್ಗದ್ದೆ ಸ್ಟುಡಿಯೋ ಮಾಲಕ ಸಂದೀಪ್ ಶೆಟ್ಟಿ ಮಾತನಾಡಿ ಪ್ರಕೃತಿಯ ಜೊತೆಯಲ್ಲಿ ಬದುಕುವ ನಾವು ಪೃಕೃತಿಗೆ ಪೂರಕ ಕೆಲಸ ಮಾಡಬೇಕು ಎಂದರು.
ನ್ಯೂಟ್ರಿಮಿಕ್ಸ್ ಉತ್ಪನ್ನ ಬಿಡುಗಡೆ :
ಇದೇ ಸಂದರ್ಭ ಚಿತ್ರಕೂಟದ ಇನ್ನೊಂದು ಉತ್ಪನ್ನವನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಾಯಿತು.
ಡಾ. ರಾಜೇಶ್ ಬಾಯರಿ ಮಾತನಾಡಿ ಕೋವಿಡ್ ನಂತರದ ದಿನಗಳಲ್ಲಿ ನಾವು ಚಿತ್ರಕೂಟ ಆಯುರ್ವೇದ ಚಿಕಿತ್ಸಾಲಯದ ವತಿಯಿಂದ ಹಲವಾರು ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದೇವೆ.ಅವುಗಳೊಂದಿಗೆ ಇದೀಗ ನ್ಯೂಟ್ರಿಮಿಕ್ಸ್ ಎನ್ನುವ ಇನ್ನೊಂದು ಪ್ರಾಡಕ್ಟ್‌ನ್ನು ಬಿಡುಗಡೆ ಮಾಡುತ್ತಿದ್ದೇವೆ. ಈ ಪ್ರಾಡಕ್ಟ್‌ನಲ್ಲಿ ಹೆಸರು, ಬಾದಾಮಿ, ಗೇರು, ಬೀಟ್‌ರೂಟ್, ಕ್ಯಾರೆಟ್ ಇನ್ನಿತರ ಪೋಷಕಾಂಶಗಳ ಪೌಡರ್‌ಗಳನ್ನು ಮಿಶ್ರಣ ಮಾಡಿ ತಯಾರಿಸಲಾಗಿದೆ ಎಂದರು. ವೇದಿಕೆಯಲ್ಲಿ ಶ್ರೀಮತಿ ಕಲಾವತಿ ಬಾಯರಿ, ಡಾ. ಅನುಲೇಖ ಬಾಯರಿ ಉಪಸ್ಥಿತರಿದ್ದರು.
ಡಾ. ರಾಜೇಶ್ ಬಾಯರಿ ಸ್ವಾಗತಿಸಿದ್ದು ಶ್ರೀ ಲತಾ, ಭಾವನ, ಚೈತ್ರ ಪ್ರಾರ್ಥಿಸಿದರು. ಚಿತ್ರಕೂಟದ ಸಿಬ್ಬಂದಿ ಸಂಗೀತ ಕಾರ್ಯಕ್ರಮ ನಿರೂಪಿಸಿದ್ದು ಡಾ.ಅನುಲೇಖ ಬಾಯರಿ ವಂದಿಸಿದರು.
ಸಮಾರೋಪ ಸಮಾರಂಭ :
ವಿದ್ಯಾರ್ಥಿಗಳಲ್ಲೂ ಆಯುರ್ವೇದದ ಅರಿವು ಮೂಡಬೇಕು ಎಂಬ ಉದ್ದೇಶದಲ್ಲಿ ಡಾ. ರಾಜೇಶ್ ಬಾಯರಿಯವರು ಅವರ ಚಿಕಿತ್ಸಾಲಯದಲ್ಲಿ ಮಕ್ಕಳಿಗಾಗಿ ಒಳ್ಳೆಯ ಕಾರ್ಯಕ್ರಮ ಆಯೋಜಿಸಿದ್ದಾರೆ. ಅರಿವು ಅನುಭವಕ್ಕೆ ಬಂದಾಗ ಜ್ಞಾನವಾಗಿ ಪರಿಣಮಿಸುತ್ತದೆ. ಪ್ರಪಂಚದಲ್ಲಿ ಜ್ಞಾನಕ್ಕಿಂತ ಮಿಗಿಲಾದುದು ಯಾವುದೂ ಇಲ್ಲ ಎಂದು ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ಮಾಜಿ ಆಡಳಿತ ಧರ್ಮದರ್ಶಿ ಉದ್ಯಮಿ ಕೆರಾಡಿ ಚಂದ್ರಶೇಖರ ಶೆಟ್ಟಿ ನುಡಿದರು. ಅವರು ಸಮಾರೋಪ ಸಮಾರಂಭದ ಮುಖ್ಯ ಅತಿಥಿಯಾಗಿ ಮಾತನಾಡಿದರು.

ಅತಿಥಿಗಳಾಗಿ ಬೈಂದೂರು ಕ್ಷೇತ್ರ ಶಿಕ್ಷಣಾಧಿಕಾರಿ ನಾಗೇಶ್ ನಾಯ್ಕ್, ರೋಟರಿ ಅಧ್ಯಕ್ಷ ಸಚಿನ್ ನಕ್ಕತ್ತಾಯ, ಕರ್ನಾಟಕ ಬ್ಯಾಂಕ್‌ನ ಶ್ರೀ ವಾದಿರಾಜ್ ಭಟ್ ಭಾಗವಹಿಸಿದ್ದರು. ಹಿರಿಯ ಕೃಷಿಕರಾದ ಮಹಾಬಲ ಬಾಯರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ತೀರ್ಪುಗಾರರ ಪರವಾಗಿ ವಂಡ್ಸೆ ಗ್ರಾಮ ಪಂಚಾಯತ್ ಸದಸ್ಯ ಗೋವಧನ ಜೋಗಿ ಮಾತನಾಡಿದರು. ಪ್ರಬಂಧ, ಭಾಷಣ ಹಾಗೂ ಕವನ ಸ್ಪರ್ಧೆಯ ವಿಜೇತ ವಿದ್ಯಾರ್ಥಿಗಳಿಗೆ ಇದೇ ಸಂದರ್ಭ ಬಹುಮಾನ ವಿತರಿಸಲಾಯಿತು. ತೀರ್ಪುಗಾರರಾಗಿ ಭಾಗವಹಿಸಿದ ಎಲ್ಲಾ ಶಿಕ್ಷಕರನ್ನು ಡಾ. ರಾಜೇಶ್ ಬಾಯರಿ ಹಾಗೂ ಡಾ. ಅನುಲೇಖ ಬಾಯರಿ ಗುರುತಿಸಿ ಗೌರವಿಸಿದರು. ಕೊನೆಯಲ್ಲಿ ಡಾ.ರಾಜೇಶ್ ಬಾಯರಿ ವಂದಿಸಿದರು.



