udupimitra.in
  • August 21, 2026
  • Last Update August 21, 2026 3:41 pm
  • Brahmavara

ಪತ್ರಕರ್ತನಿಗೆ ಹಲ್ಲೆ ; ವೈದ್ಯಾಧಿಕಾರಿ ಮಹೇಂದ್ರ ಕುಮಾರ್ ಶೆಟ್ಟಿ ಸೇವೆಯಿಂದ ಅಮಾನತು

ಪತ್ರಕರ್ತನಿಗೆ ಹಲ್ಲೆ ; ವೈದ್ಯಾಧಿಕಾರಿ ಮಹೇಂದ್ರ ಕುಮಾರ್ ಶೆಟ್ಟಿ ಸೇವೆಯಿಂದ ಅಮಾನತು

ಉಡುಪಿ ಮಿತ್ರ ಪತ್ರಿಕೆ ಸುದ್ಧಿ :
ಕುಂದಾಪುರ, ಅ.೨೧: ಕುಂದಾಪುರದಲ್ಲಿ ಹೋಟೆಲ್‌ವೊಂದರಲ್ಲಿ ಉಪಹಾರ ಸೇವಿಸುತ್ತಿದ್ದ ಪತ್ರಕರ್ತ ಶ್ರೀಕಾಂತ್ ಹೆಮ್ಮಾಡಿ ಇವರ ಮೇಲೆ ಹಲ್ಲೆ ನಡೆಸಿದ ಸರಕಾರಿ ಆಸ್ಪತ್ರೆಯ ಶಸ್ತ್ರ ಚಿಕಿತ್ಸಕ ಡಾ.ಮಹೇಂದ್ರಕುಮಾರ್ ಶೆಟ್ಟಿಯವರನ್ನು ಸರ್ಕಾರಿ ಸೇವೆಯಿಂದ ಅಮಾನತುಗೊಳಿಸಲಾಗಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಯ ಶಿಸ್ತು ಪ್ರಾಧಿಕಾರಿ ಹಾಗೂ ಆಯುಕ್ತರಾದ ಗುರುದತ್ತ ಹೆಗಡೆ ಅವರು ಸರ್ಕಾರಿ ಸೇವೆಯಿಂದ ಅಮಾನತ್ತುಗೊಳಿಸಿ ಆದೇಶಿಸಿದ್ದಾರೆ. ಸರಕಾರಿ ಆಸ್ಪತ್ರೆಯ ಸರ್ಜನ್ ಮಹೇಂದ್ರ ಕುಮಾರ್ ಶೆಟ್ಟಿ ಇಂದು ಬೆಳಿಗ್ಗೆ ಕುಂದಾಪುರ ಹೋಟೆಲ್‌ನಲ್ಲಿ ಪತ್ರಕರ್ತ ಶ್ರೀಕಾಂತ್‌ಗೆ ಹಲ್ಲೆ ನಡೆಸಿದ್ದು ಈ ವೈದ್ಯನ ವಿರುದ್ಧ ಕುಂದಾಪುರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ವೈದ್ಯ ಮಹೇಂದ್ರ ಕುಮಾರ್ ಶೆಟ್ಟಿ ಸರ್ಕಾರದ ಅಧಿಕಾರಿಗೆ ತರವಲ್ಲದ ರೀತಿಯಲ್ಲಿ ವರ್ತಿಸಿದ್ದು ಕರ್ನಾಟಕ ನಾಗರಿಕಾ ಸೇವಾ(ನಡತೆ) ನಿಯಮ ಉಲ್ಲಂಘಿಸಿದ್ದು ಇವರ ವಿರುದ್ಧ ಕರ್ತವ್ಯಲೋಪ ಮತ್ತು ಬೇಜವಾಬ್ದಾರಿತನದ ಆರೋಪಗಳ ಕುರಿತು ಇಲಾಖಾ ವಿಚಾರಣೆ ಬಾಕಿ ಇರಿಸಿ ತಕ್ಷಣದಿಂದ ಜಾರಿಗೆ ಬರುವಂತೆ ಆಯುಕ್ತರು ಸೇವೆಯಿಂದ ಅಮಾನತುಗೊಳಿಸಿದ್ದಾರೆ.


ಹಲ್ಲೆ ವಿಡಿಯೋ ವೈರಲ್ :
ಪತ್ರಕರ್ತ ಶ್ರೀಕಾಂತ್ ಹೆಮ್ಮಾಡಿ ತನ್ನ ಪತ್ನಿ ಹಾಗೂ ಇನ್ನೋರ್ವ ಪತ್ರಕರ್ತ ಯೋಗೀಶ್ ಅವರೊಂದಿಗೆ ಹೋಟೆಲ್‌ನಲ್ಲಿ ಉಪಹಾರ ಸೇವಿಸುತ್ತಿದ್ದರು. ಈ ಸಂದರ್ಭ ಆರೋಪಿ ಡಾ. ಮಹೇಂದ್ರ ಕುಮಾರ್ ಶೆಟ್ಟಿ ಆಗಮಿಸಿ ಪಕ್ಕದಲ್ಲೇ ಕುಳಿತುಕೊಳ್ಳುತ್ತಾರೆ. ಸ್ವಲ್ಪ ಹೊತ್ತಿನಲ್ಲೇ ಇನ್ನೋರ್ವ ವೈದ್ಯೆ ಅಲ್ಲಿಗಾಗಮಿಸಿ ಪತ್ರಕರ್ತ ಶ್ರೀಕಾಂತ್ ಅವರನ್ನು ಮಾತನಾಡಿಸುತ್ತಾರೆ. ನಂತರ ಮಹೇಂದ್ರ ಶೆಟ್ಟಿ ಅವರ ಟೇಬಲ್‌ನ ಎದುರಿನ ಕುರ್ಚಿಯಲ್ಲಿ ಕುಳಿತುಕೊಳ್ಳುತ್ತಾರೆ. ಅವರು ಕುಳಿತುಕೊಂಡ ಸ್ವಲ್ಪ ಹೊತ್ತಿನಲ್ಲೇ ಒಮ್ಮಿಂದೊಮ್ಮೆಲೆ ಮೇಲೆದ್ದ ಡಾ.ಮಹೇಂದ್ರ ಕುಮಾರ್ ಶೆಟ್ಟಿ ಶ್ರೀಕಾಂತ್ ಅವರ ಕೈ ಹಿಡಿದು ಎಳೆದು ಹಲ್ಲೆ ನಡೆಸುತ್ತಾರೆ. ಶ್ರೀಕಾಂತ್ ಅವರ ಪತ್ನಿ ಹಾಗೂ ಇನ್ನೋರ್ವ ಪತ್ರಕರ್ತ ಯೋಗೀಶ್ ಅವರು ತಡೆದರೂ ಅವರೆಲ್ಲರನ್ನೂ ದೂಡುತ್ತಾ ಮತ್ತೆ ಮತ್ತೆ ಶ್ರೀಕಾಂತ್ ಮೇಲೆ ಹಲ್ಲೆ ನಡೆಸಲು ಯತ್ನಿಸಿರುವ ವಿಡಿಯೋ ಚಿತ್ರಣ ಇದೀಗ ಎಲ್ಲೆಡೆ ವೈರಲ್ ಆಗಿದೆ.


ಪತ್ರಕರ್ತರ ಸಂಘದಿಂದ ಎಸ್‌ಪಿಗೆ ದೂರು :
ಹಲ್ಲೆ ನಡೆಸಿದ ಮಹೇಂದ್ರ ಶೆಟ್ಟಿ ವಿರುದ್ಧ ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಹರಿರಾಂ ಶಂಕರ್ ಅವರಿಗೆ ಇಂದು ದೂರು ಸಲ್ಲಿಸಲಾಗಿದೆ. ದೂರು ಸ್ವೀಕರಿಸಿದ ವರಿಷ್ಠಾಧಿಕಾರಿಯವರು ಮಾತನಾಡಿ ಈಗಾಗಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ವಿಡಿಯೋ ಚಿತ್ರಣದಲ್ಲೂ ಆರೋಪಿಯ ವರ್ತನೆಯನ್ನು ಗಮನಿಸಿದ್ದೇನೆ. ಇದು ಸರಿಯಾದ ನಡೆಯಲ್ಲ. ಹಲ್ಲೆ ನಡೆಸಿದ ವೈದ್ಯರ ವಿರುದ್ಧ ಕಠಿಣ ಕ್ರಮ ಕೈಗೊಂಡು ತ್ವರಿತ ನ್ಯಾಯಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಸಲಾಗುವುದು ಎಂದರು.


ಜಿಲ್ಲಾ ಆರೋಗ್ಯ ಅಧಿಕಾರಿಗೆ ದೂರು :
ಹಲ್ಲೆ ನಡೆಸಿದ ವೈದ್ಯ ಮಹೇಂದ್ರ ಶೆಟ್ಟಿ ವಿರುದ್ಧ ಜಿಲ್ಲಾ ಆರೋಗ್ಯ ಅಧಿಕಾರಿಗೂ ಸಲ್ಲಿಸಿ ಆರೋಪಿಯ ವಿರುದ್ಧ ಕ್ರಮ ಜರುಗಿಸುವಂತೆ ಹಾಗೂ ಅಮಾನತುಗೊಳಿಸುವಂತೆ ಸಂಘ ಒತ್ತಾಯಿಸಿದೆ.


ಹಲ್ಲೆಯ ವಿರುದ್ಧ ಕಠಿಣ ಕ್ರಮ – ಸಚಿವ ಯುಟಿ ಖಾದರ್
ಆರೋಗ್ಯ ಸಚಿವ ಯುಟಿ ಖಾದರ್ ಬೆಂಗಳೂರಿನಲ್ಲಿ ಮಾತನಾಡಿದ್ದು ಕುಂದಾಪುರದಲ್ಲಿ ಪತ್ರಕರ್ತರ ಮೇಲೆ ವೈದ್ಯಾಧಿಕಾರಿ ಹಲ್ಲೆ ನಡೆಸಿರುವುದು ಗಮನಕ್ಕೆ ಬಂದಿದೆ. ವೈದ್ಯಾಧಿಕಾರಿ ಹಲ್ಲೆ ಮಾಡಿರುವುದು ಸರಿಯಲ್ಲ. ಹಲ್ಲೆ ನಡೆಸಿದವರ ಮೇಲೆ ಕಠಿಣ ಕ್ರಮ ಜರುಗಿಸಲಾಗುವುದು ಎಂದು ನುಡಿದಿದ್ದಾರೆ.
ಪತ್ರಕರ್ತ ಶ್ರೀಕಾಂತ್ ಅವರು ಇತ್ತೀಚೆಗೆ ಸರಕಾರಿ ಆಸ್ಪತ್ರೆಯಲ್ಲಿನ ಭೃಷ್ಟಚಾರದ ಬಗ್ಗೆ ವರದಿ ಮಾಡಿದ್ದರು. ಅದೇ ಕಾರಣಕ್ಕೆ ಈ ಮಹೇಂದ್ರ ಕುಮಾರ್ ಶೆಟ್ಟಿ ಹಲ್ಲೆ ನಡೆಸಿದ್ದಾನೆಂದು ಶ್ರೀಕಾಂತ್ ತಿಳಿಸಿದ್ದಾರೆ.

administrator

Related Articles

Leave a Reply

Your email address will not be published. Required fields are marked *

You cannot copy content of this page