ವರದಿ : ಚಿತ್ತೂರು ಪ್ರಭಾಕರ ಆಚಾರ್ಯ
ಉಡುಪಿಮಿತ್ರ ಪತ್ರಿಕೆ ಸುದ್ಧಿ :
ಬ್ರಹ್ಮಾವರ, ಅ.೧೫: ಸ್ವಾತಂತ್ರ್ಯೋತ್ಸವ ಅಂಗವಾಗಿ A 2 Z Scrap ಸಾಸ್ತಾನ ಹಾಗೂ ಸೌಹಾರ್ದ ಟ್ರಸ್ಟ್ ಇವರ ಸಹಭಾಗಿತ್ವದಲ್ಲಿ ಶಿವರಾಂ ಶೆಟ್ಟಿ ಆದರ್ಶ ಐಸ್ ಪ್ಲಾಂಟ್ ಕಾಂಪೌಂಡ್ ಸಾಸ್ತಾನ ಪಾಂಡೇಶ್ವರ ಇಲ್ಲಿ ಸೌಹಾರ್ದ ಅಂಬುಲೆನ್ಸ್‌ನ್ನು ಆಗಸ್ಟ್ ೧೫ ಸ್ವಾತಂತ್ರ್ಯೋತ್ಸವದ ಸಂದರ್ಭ ಲೋಕಾರ್ಪಣೆ ಗೊಳಿಸಲಾಯಿತು.

ಸಾಸ್ತಾನ ಗುಂಡ್ಮಿಯ ಜುಮ್ಮಾ ಮಸೀದಿಯ ಗೌರವಾಧ್ಯಕ್ಷ ಮೈದು ಕುಟ್ಟಿ, ಹಾಲುತ್ಪಾದಕರ ಸಂಘದ ಮಾಜಿ ಅಧ್ಯಕ್ಷ ಶ್ರೀ ಜಗದೀಶ್ ಕಾರಂತ , ನಿವೃತ್ತ ಸರ್ವೆ ಸೂಪರ್ ವೈಸರ್ ರಾಮಕೃಷ್ಣ ಚಡಗ, ನಿವೃತ್ತ ಪಿ.ಎಸ್.ಐ. ಬಿ.ಕೆ.ಬಿಜೂರು ಧ್ವಜಾರೋಹಣ ನೆರವೇರಿಸಿದರು.

ವಿದ್ವಾನ್ ವಿಜಯ ಮಂಜರ್, ಕೋಟೇಶ್ವರ ಧರ್ಮಗುರು ಅಸ್ಸಯ್ಯಿದ್ ಜಾಫರ್ ತಂಗಳ್, ಸಾಸ್ತಾನ ಸೈಂಟ್ ಅಂತೋನಿ ಚರ್ಚ್ ಧರ್ಮ ಗುರು ಫಾದರ್ ಸುನಿಲ್ ಡಿಸಿಲ್ವಾ ಅಂಬುಲೆನ್ಸ್ ಲೋಕಾರ್ಪಣೆಗೊಳಿಸಿದರು.
ದಿವಂಗತ ಮೋಸೆಸ್ ರಾಡ್ರಿಗಸ್ ವೇದಿಕೆಯಲ್ಲಿ ಸಭಾ ಕಾರ್ಯಕ್ರಮ ನೆರವೇರಿದ್ದು ಸಮಾರಂಭದ ಅಧ್ಯಕ್ಷತೆಯನ್ನು ಸತೀಶ್ ಶೆಟ್ಟಿಯವರು ವಹಿಸಿದ್ದರು.

ಚೇತನಾ ಪ್ರೌಢಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯರಾದ ಗಣೇಶ್ ಮಾಸ್ಟರ್ ಸಭಾ ಕಾರ್ಯಕ್ರಮದ ಉದ್ಘಾಟನೆಯ ಮಾತುಗಳನ್ನಾಡುತ್ತಾ ಎಲ್ಲಿ ಸೌಹಾರ್ದ ಇರುತ್ತದೋ ಅಲ್ಲಿ ಶಾಂತಿ ಇರುತ್ತದೆ. ಎಲ್ಲಿ ಶಾಂತಿ ಇರುತ್ತದೋ ಅಲ್ಲಿ ಅಭಿವೃದ್ಧಿ ಇರುತ್ತದೆ. ಪ್ರೀತಿ, ಮಮತೆ, ಸಹನೆ, ತಾಳ್ಮೆ, ಸಹಕಾರ, ಗೌರವಿಸುವ ಗುಣಗಳನ್ನು ಹೊಂದಿರುವ ಒಂದಷ್ಟು ಮಂದಿ ಒಟ್ಟುಗೂಡಿಕೊಂಡಲ್ಲಿ ಸಮಾಜದಲ್ಲಿ ಒಳ್ಳೆಯ ಕೆಲಸಗಳು ನಡೆಯಲಿದೆ. ಸಾಸ್ತಾನ ಸೌಹಾರ್ದ ಟ್ರಸ್ಟ್‌ನ ರಜಾಕ್ ಹಾಗೂ ಅಲ್ತಾಫ್ ಅವರು ಅಂತಹ ತಂಡ ಕಟ್ಟಿಕೊಂಡು ಸೌಹಾರ್ದ ಟ್ರಸ್ಟ್ ಮೂಲಕ ಒಳ್ಳೆಯ ಕೆಲಸ ಮಾಡುತ್ತಿದ್ದು ಇದೀಗ ಟ್ರಸ್ಟ್ ವತಿಯಿಂದ ಸಾಸ್ತಾನ ಸುತ್ತಮುತ್ತಲ ಜನರ ಸೇವೆಗಾಗಿ ಉಚಿತ ಅಂಬುಲೆನ್ಸ್ ಲೋಕಾರ್ಪಣೆಗೊಳಿಸುತ್ತಿರುವುದು ಶ್ಲಾಘನೀಯ ಕೆಲಸವಾಗಿದೆ ಎಂದು ನುಡಿದರು.

ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ ಸಿ.ಕುಂದರ್ ಮಾತನಾಡಿ ಮನುಷ್ಯ ತನ್ನ ಜೀವಿತ ಅವಧಿಯಲ್ಲಿ ಒಳಿತನ್ನು ಮಾಡಬೇಕು. ಯಾರು ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದರೋ ಅವರೆಲ್ಲರ ಹೆಸರು ಶಾಶ್ವತವಾಗಿ ಉಳಿದಿದೆ. ಅದೇ ರೀತಿಯಲ್ಲಿ ಸಮಾಜದಲ್ಲಿ ಯಾರು ಒಳ್ಳೆಯ ಕೆಲಸ ಮಾಡುತ್ತಾರೋ ಅವರ ಹೆಸರು ಶಾಶ್ವತವಾಗಿ ಉಳಿಯಲಿದೆ. ಯುವ ಜನತೆಯೇ ದೇಶದ ಶಕ್ತಿ. ಯುವ ಜನತೆ ಯಾವಾಗಲೂ ಒಳ್ಳೆಯ ಕೆಲಸ ಮಾಡಬೇಕು. ದೇಶವನ್ನು ಪ್ರೀತಿಸಬೇಕು ಎಂದರು.

ಜೋಸೆಫ್ ಇಲಿಯಸ್ ಮೆನೇಜಸ್ ಮಾತನಾಡಿ ಒಳ್ಳೆಯ ಯೋಚನೆ ಮಾಡಿ ಕನಿಕರದಿಂದ ತಮ್ಮ ದುಡಿಮೆಯ ಹಣದೊಂದಿಗೆ ದಾನಿಗಳ ಸಹಕಾರದಲ್ಲಿ ಜೀವ ಉಳಿಸುವ ಕೆಲಸವನ್ನು ಮಾಡಲೋಸುಗ ರಜಾಕ್ ಹಾಗೂ ಅಲ್ತಾಫ್ ಸಮಾಜಕ್ಕೆ ಉಚಿತ ಅಂಬುಲೆನ್ಸ್‌ನ್ನು ನೀಡಿದ್ದಾರೆ ಎಂದರು.
ಸಾಸ್ತಾನ ಸರಕಾರಿ ಆಸ್ಪತ್ರೆಯ ವೈದ್ಯ ರಾಘವೇಂದ್ರ ರಾವ್ ಮಾತನಾಡಿ ಸಾಸ್ತಾನ ಆಸುಪಾಸಿನಲ್ಲಿ ತುರ್ತು ಸಂದರ್ಭದಲ್ಲಿ ಜೀವ ಉಳಿಸಲು ಅಗತ್ಯವಾದ ಉಚಿತ ಅಂಬುಲೆನ್ಸ್ ಸಾಸ್ತಾನ ಪರಿಸರಕ್ಕೆ ನಿಜವಾಗಿ ವರದಾನ ಎಂದರು.

ಅತಿಥಿಗಳಾಗಿ ಕೋಟ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ತಿಮ್ಮ ಪೂಜಾರಿ, ಬ್ರಹ್ಮಾವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಘವೇಂದ್ರ ಶೆಟ್ಟಿ, ಕೋಟ ಬ್ಲಾಕ್ ಕಾಂಗ್ರೆಸ್ ನಿಕಟಪೂರ್ವ ಅಧ್ಯಕ್ಷ ಶಂಕರ್ ಕುಂದರ್, ಬ್ರಹ್ಮಾವರ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಬಿರ್ತಿ ರಾಜೇಶ್ ಶೆಟ್ಟಿ, ದಾನಿಗಳಾದ ಆದಿಲ್ ಸಾಲಿಗ್ರಾಮ, ಮಹೇಶ್ ಆಸ್ಪತ್ರೆಯ ಡಾ. ರಾಕೇಶ್ ಅಡಿಗ, ಸಾಸ್ತಾನ ಹೆಲ್ತ್ ಕೇರ್ ಡಾ. ಹೇಮಂತ್ ಕುಮಾರ್, ಬ್ರಹ್ಮಾವರ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಕುಮಾರ್ ಹಾರಾಡಿ, ಸಾಸ್ತಾನ ಸರಕಾರಿ ಆಸ್ಪತ್ರೆಯ ವೈದ್ಯ ರಾಘವೇಂದ್ರ ರಾವ್, ಬಿಜೆಪಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಸುರೇಶ್ ಕುಂದರ್, ಸಾಸ್ತಾನ ವ್ಯವಸಾಯ ಸೇವಾ ಸಹಕಾರಿ ಸಂಘದ ನಿರ್ದೇಶಕಿ ಶ್ರೀಮತಿ ಲೀಲಾವತಿ ಗಂಗಾಧರ್, ನ್ಯಾಯವಾದಿಗಳಾದ ಶಾಬಾ , ಸುಹಾನ್‌ಹಾಗೂ ನೀಲ್ ಪಿರೇರಾ, ಗುಂಡ್ಮಿ ಜುಮ್ಮಾ ಮಸೀದಿ ಅಧ್ಯಕ್ಷ ಜಾಹಿರ್ ಮಹಮ್ಮದ್ ಆಲಿ, ಉಪಾಧ್ಯಕ್ಷ ಹಮೀದ್ ಬ್ಯಾರಿ, ಕಾರ್ಯದರ್ಶಿ ಇಸ್ಮಾಯಿಲ್ ಸಾಹೇಬ್, ಜೊತೆ ಕಾರ್ಯದರ್ಶಿ ಮಸೂದ್, ಮಾಜಿ ಕಾರ್ಯದರ್ಶಿ ರಹಮತುಲ್ ಸಾಹೇಬ್, ನಿವೃತ್ತ ಪಿ.ಎಸ್.ಐ ಶ್ರೀ ಲಕ್ಷ್ಮಿನಾರಾಯಣ, ಪಿಡಿಓ ಗಣೇಶ್ ಪಾಂಡೇಶ್ವರ, ಬಾಲಕೃಷ್ಣ ಪೂಜಾರಿ ಐರೋಡಿ, ಗುಂಡ್ಮಿ ಜುಮ್ಮಾ ಮಸೀದಿಯ ಖತೀಬರಾದ ಮಹಮ್ಮದ್ ಉನೈಸ್ ಸಖಾಫಿ ಹಾಗೂ ಎಂ.ಡಿ.ಜನ್ನತ್ ಹುಸೈನ್, ಜುಮ್ಮಾ ಮಸೀದಿಯ ಮಾಜಿ ಅಧ್ಯಕ್ಷರುಗಳಾದ ಜಿ.ಮೊಹಮ್ಮದ್ ಸಾಹೇಬ್, ಹಾಗೂ ಖಾಲಿದ್ ಸಾಹೇಬ್, ಖಾಸಿಂ ಬ್ಯಾರಿ ಸಾಸ್ತಾನ, ಶ್ರೀಮತಿ ಕುಸುಮ ಮನೋಜ್ ಸತೀಶ್ ಶೆಟ್ಟಿ ಉಪಸ್ಥಿತರಿದ್ದರು.

ಸಭೆಯಲ್ಲಿ ನಿವೃತ್ತ ಪಿ.ಎಸ್.ಐ. ಬಿ.ಕೆ.ಬಿಜೂರು ಹಾಗೂ ಸಮಾಜ ಸೇವಕ ನಿತ್ಯಾನಂದ ಒಳಕಾಡು ಇವರನ್ನು ಸನ್ಮಾನಿಸಲಾಯಿತು. ಟ್ರಸ್ಟ್ ಕಾರ್ಯದರ್ಶಿ ಸದಾನಂದರವರು ಸನ್ಮಾನಿತರನ್ನು ಪರಿಚಯಿಸಿದರು. ಟ್ರಸ್ಟ್‌ನ ಮುಖ್ಯಸ್ಥರಾದ ರಜಾಕ್ ಹಾಗೂ ಅಲ್ತಾಫ್ ಹಾಗೂ ಉಪಾಧ್ಯಕ್ಷ ರವಿ ಅತಿಥಿಗಳನ್ನು ಸ್ವಾಗತಿಸಿಕೊಂಡರು. ಕೇಶವ ಆಚಾರ್ಯ ಪ್ರಾರ್ಥಿಸಿದರು. ಟ್ರಸ್ಟ್ ಗೌರವಾಧ್ಯಕ್ಷ ರಜಾಕ್ ಮಾಸ್ಟರ್ ಪ್ರಾಸ್ತಾವಿಕ ಮಾತುಗಳನ್ನಾನಡಿದರು. ಶಿಕ್ಷಕ ಸದಾನಂದ ಬಾಳ್ಕುದ್ರು ಕಾರ್ಯಕ್ರಮ ನಿರೂಪಿಸಿದರು.




