ಉಡುಪಿಮಿತ್ರ ಪತ್ರಿಕೆ ಸುದ್ಧಿ :
ವರದಿ : ಚಿತ್ತೂರು ಪ್ರಭಾಕರ ಆಚಾರ್ಯ
ಕುಂದಾಪುರ, ಮೇ 21: ಸಮಾಜದ ಕಟ್ಟಕಡೆಯ ಮಗು ವಿದ್ಯಾವಂತನಾದಲ್ಲಿ ಸಮಾಜ ಅಭಿವೃದ್ಧಿಯಾಗಲಿದೆ. ನಮ್ಮ ಸಮಾಜದಲ್ಲಿರುವ ಕಡುಬಡತನದಲ್ಲಿರುವವರನ್ನು ಮೇಲೆ ಎತ್ತಿದವರನ್ನು ದೇವರು ಮೆಚ್ಚಲಿದ್ದಾನೆ ಎಂದು ಮಾಜಿ ಶಾಸಕ ಬಿ.ಎಂ.ಸುಕುಮಾರ್ ಶೆಟ್ಟಿ ನುಡಿದರು. ಅವರು ಕೋಟೇಶ್ವರದಲ್ಲಿ ನೂತನವಾಗಿ ಆರಂಭಗೊಂಡ ಚಿರಂತನ ವಿದ್ಯಾಸಂಸ್ಥೆಯನ್ನು ಉದ್ಘಾಟಿಸಿ ಮಾತನಾಡಿದರು.

ಚಿರಂತನ ಶಿಕ್ಷಣ ಸಂಸ್ಥೆಯ ಸಂಸ್ಥಾಪಕಿ ಡಾ. ಚಿಂತನಾ ಅವರು ಮಕ್ಕಳ ಶಿಕ್ಷಣದ ಬಗ್ಗೆ ವಿಶೇಷ ಕಾಳಜಿ ಹೊಂದಿದ್ದು, ಜೀವನದಲ್ಲಿ ಏನಾದರೂ ಸಾಧಿಸಬೇಕೆಂಬ ಉದ್ದೇಶದಿಂದ ಸಂಸ್ಥೆ ಆರಂಭಿಸಿದ್ದಾರೆ ಎಂದರು.
ಸಭೆಯ ಅಧ್ಯಕ್ಷತೆಯನ್ನು ಸುಲೋಚನಾ ಸರ್ವೋತ್ತಮ ಶೆಟ್ಟಿ ವಹಿಸಿದ್ದರು.
ಕುಂದಾಪುರ ಶ್ರೀ ಮಾತಾ ಆಸ್ಪತ್ರೆಯ ಮಾನಸಿಕ ತಜ್ಞ ಹಾಗೂ ಆಡಳಿತ ನಿರ್ದೇಶಕ ಡಾ. ಪ್ರಕಾಶ್ ತೊಳಾರ್ ಮಾತನಾಡಿ, “ನರ್ಸರಿಯಿಂದ ಪಿಯುವರೆಗೂ ಮಕ್ಕಳಿಗೆ ಉತ್ತಮ ತರಬೇತಿ ಅಗತ್ಯ. ಮಕ್ಕಳಲ್ಲಿ ಇರುವ ಕಲಿಕಾ ತೊಂದರೆಗಳ ಕಾರಣವನ್ನು ಶಿಕ್ಷಕರು ಗುರುತಿಸಬೇಕು. ಮಕ್ಕಳ ಆಸಕ್ತಿಗೆ ತಕ್ಕಂತೆ ಶಿಕ್ಷಣ ನೀಡಬೇಕು. ಪೋಷಕರು ತಮ್ಮ ಆಸಕ್ತಿಯನ್ನು ಮಕ್ಕಳ ಮೇಲೆ ಹೇರಬಾರದು ಎಂದರು.

“ಮಕ್ಕಳನ್ನು ಚಿಕ್ಕ ವಯಸ್ಸಿನಲ್ಲೇ ಸರಿಯಾಗಿ ಮಾರ್ಗದರ್ಶನ ಮಾಡುವುದು ಮುಖ್ಯ. ಐದು ವರ್ಷದ ಮಕ್ಕಳ ಹಠವನ್ನು ಗಂಭೀರವಾಗಿ ತೆಗೆದುಕೊಳ್ಳಬಾರದು. ಮಕ್ಕಳ ಬಗ್ಗೆ ಪೋಷಕರ ಅತಿಯಾದ ಆತಂಕ ಸರಿಯಲ್ಲ. ಪೋಷಕರು ತಿನ್ನುವ ಆಹಾರದ ಅರ್ಧದಷ್ಟು ಮಕ್ಕಳಿಗೂ ತಿನ್ನಿಸಲೇಬೇಕು ಎನ್ನುವ ಮನೋಭಾವ ಸರಿಯಲ್ಲ ಎಂದು ಹೇಳಿದರು.
ಅವರು ಮುಂದುವರೆದು, “ಐನ್‌ಸ್ಟೀನ್ ಅವರನ್ನು ಶಿಕ್ಷಕರು ಹಿಂದೆ ತಳ್ಳಿದರೂ, ತಾಯಿ ಪ್ರೋತ್ಸಾಹ ನೀಡಿದ ಕಾರಣ ಅವರು ಖ್ಯಾತ ವಿಜ್ಞಾನಿಯಾಗಿದರು. ಪ್ರತಿಯೊಬ್ಬ ಮಕ್ಕಳಲ್ಲಿಯೂ ಪ್ರತಿಭೆ ಇರುತ್ತದೆ. ಅದನ್ನು ಗುರುತಿಸುವ ಜವಾಬ್ದಾರಿ ಶಿಕ್ಷಕರದು ಎಂದರು.

“ಮಕ್ಕಳ ಮುಂದೆ ಪೋಷಕರು ದಿನವಿಡೀ ಮೊಬೈಲ್ ಬಳಕೆ ಮಾಡುವುದು ಸರಿಯಲ್ಲ. ಮನೆಯಲ್ಲಿಯೇ ಮೊಬೈಲ್‌ರಹಿತ ಸಮಯ ಇರಬೇಕು. ಕುಂದಾಪುರದಲ್ಲಿ ಮಾದಕ ವ್ಯಸನದ ಪ್ರಮಾಣ ಹೆಚ್ಚುತ್ತಿದೆ. ಮಕ್ಕಳಿಗೆ ಹಣ ಕೊಟ್ಟಾಗ ಅದನ್ನು ಯಾವ ಉದ್ದೇಶಕ್ಕೆ ಬಳಸುತ್ತಾರೆ ಎಂಬುದನ್ನು ಗಮನಿಸಬೇಕು ಎಂದು ಸಲಹೆ ನೀಡಿದರು.
ಶಿಕ್ಷಕರ ತರಬೇತಿ ಕೇಂದ್ರವನ್ನು ಕ್ಲಾಸ್-೧ ಕಂಟ್ರಾಕ್ಟರ್ ಮೊಳಹಳ್ಳಿ ಕಮಲಕಿಶೋರ್ ಹೆಗ್ಡೆ ಉದ್ಘಾಟಿಸಿದರು.
ಸಂಸ್ಥೆಯ ಸಂಸ್ಥಾಪಕಿ ಡಾ. ಚಿಂತನಾ ರಾಜೇಶ್ ಮಾತನಾಡಿ, “ನಮ್ಮ ಕುಟುಂಬದ ಸಹಕಾರ ಮತ್ತು ತಂಡದ ಪ್ರಯತ್ನದಿಂದ ಚಿರಂತನ ಶಿಕ್ಷಣ ಸಂಸ್ಥೆ ಆರಂಭವಾಗಿದೆ. ನಮ್ಮ ಕುಟುಂಬದವರು ಶಿಕ್ಷಕರಾಗಿಯೂ, ಶಿಕ್ಷಣಾಭಿಮಾನಿಗಳಾಗಿಯೂ ಸೇವೆ ಸಲ್ಲಿಸಿದ್ದಾರೆ. ಗುಣಮಟ್ಟದ ಶಿಕ್ಷಣ, ಸೇವೆ ಹಾಗೂ ಅರ್ಥಪೂರ್ಣ ಪ್ರಯತ್ನ ನಮ್ಮ ಧ್ಯೇಯ ಎಂದು ಹೇಳಿದರು. “ಸಂಸ್ಥೆಯಲ್ಲಿ ಮಕ್ಕಳಿಗೆ ವಿಶೇಷ ಕ್ಯಾಂಪಸ್ ವ್ಯವಸ್ಥೆ ಕಲ್ಪಿಸಲಾಗಿದೆ. ಶಿಕ್ಷಕರಿಗೂ ತರಬೇತಿ ನೀಡಲಾಗುತ್ತಿದೆ. ಈಗಾಗಲೇ ಎರಡು ಬ್ಯಾಚ್‌ಗಳು ಪೂರ್ಣಗೊಂಡಿದ್ದು, ತರಬೇತಿ ಪಡೆದವರು ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ ಎಂದು ತಿಳಿಸಿದರು.

“ಶಿಕ್ಷಕರ ಕೌಶಲ್ಯಾಭಿವೃದ್ಧಿ ಕೇಂದ್ರದ ಜೊತೆಗೆ ಮಕ್ಕಳ ಹಾಗೂ ಹದಿಹರೆಯದವರ ಮಾರ್ಗದರ್ಶನ ಕೇಂದ್ರವನ್ನಾಗಿಸುವ ಉದ್ದೇಶವೂ ಇದೆ. ಶಿಕ್ಷಣವನ್ನು ಮಧ್ಯದಲ್ಲೇ ನಿಲ್ಲಿಸಿರುವ ವಿದ್ಯಾರ್ಥಿಗಳಿಗೂ ಮುಂದುವರಿಯಲು ಅವಕಾಶ ಕಲ್ಪಿಸಲಾಗುತ್ತದೆ ಎಂದು ಹೇಳಿದರು.
ಚಿರಾ ಶೆಟ್ಟಿ ಸ್ವಾಗತಿಸಿದರು. ಪ್ರಾಂಶುಪಾಲರಾದ ವಿನುತಾ ಶೆಟ್ಟಿ ವಂದಿಸಿದರು. ನಿವೃತ್ತ ಶಿಕ್ಷಕ ದಿನಕರ ಶೆಟ್ಟಿ ಬಸ್ರೂರು ಕಾರ್ಯಕ್ರಮ ನಿರೂಪಿಸಿದರು.





