ವರದಿ : ಚಿತ್ತೂರು ಪ್ರಭಾಕರ ಆಚಾರ್ಯ
ಉಡುಪಿ ಮಿತ್ರ ಪತ್ರಿಕೆ ಸುದ್ಧಿ:
ಕುಂದಾಪುರ, ಮೇ22: ಸಂಸ್ಥೆಯನ್ನು ಆರಂಭಿಸುವುದು ಸುಲಭ. ಆದರೆ ಅದನ್ನು ಲಾಭದಾಯಕವಾಗಿ ಮುಂದುವರಿಸಿಕೊಂಡು ಹೋಗುವುದು ಸವಾಲಿನ ಕೆಲಸ. ಬಡಗುಬೆಟ್ಟು ಸೊಸೈಟಿಯ ಅಧ್ಯಕ್ಷ ಜಯಕರ ಶೆಟ್ಟಿ ಅವರ ನೇತೃತ್ವದಲ್ಲಿ ನಿರ್ದೇಶಕರು ಹಾಗೂ ಸಿಬ್ಬಂದಿಯ ತಂಡ ಸಂಸ್ಥೆಯನ್ನು ಯಶಸ್ವಿಯಾಗಿ ಮುನ್ನಡೆಸುತ್ತಿದೆ ಎಂದು ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಮತ್ತು ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳದ ಅಧ್ಯಕ್ಷ ಡಾ. ಎಂ.ಎನ್. ರಾಜೇಂದ್ರ ಕುಮಾರ್ ಹೇಳಿದರು.

ಅವರು ಕುಂದಾಪುರದಲ್ಲಿ ಬಡಗಬೆಟ್ಟು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಲಿಮಿಟೆಡ್ನ ನೂತನ ಕುಂದಾಪುರ ಶಾಖೆಯನ್ನು ಉದ್ಘಾಟಿಸಿ ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಬಡಗಬೆಟ್ಟು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಅಧ್ಯಕ್ಷ ಹಾಗೂ ಸಹಕಾರ ರತ್ನ ಜಯಕರ ಶೆಟ್ಟಿ ಇಂದ್ರಾಳಿ ಮಾತನಾಡಿ, ಬ್ರಿಟಿಷರ ಕಾಲದಲ್ಲಿ ಆರಂಭವಾದ ಈ ಸಂಸ್ಥೆ ಕಳೆದ 107 ವರ್ಷಗಳಿಂದ ಸಹಕಾರ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿದೆ ಎಂದರು.
ಪ್ರಸ್ತುತ ಸಂಸ್ಥೆಯಲ್ಲಿ 23,000 ಸದಸ್ಯರಿದ್ದು, ರೂ. 662ಕೋಟಿ ಠೇವಣಿ ಹಾಗೂ ರೂ. 528 ಕೋಟಿ ಸಾಲ ವಹಿವಾಟು ಇದೆ. ಸಂಸ್ಥೆ ರೂ. 113.24 ಕೋಟಿ ನಿಧಿ ಮತ್ತು ರೂ. 284.07 ಕೋಟಿ ಹೂಡಿಕೆ ಹೊಂದಿದೆ. ಒಟ್ಟು ರೂ. 795 ಕೋಟಿ ದುಡಿಯುವ ಬಂಡವಾಳದೊಂದಿಗೆ 2025-26ನೇ ಸಾಲಿನಲ್ಲಿ ರೂ.4062 ಕೋಟಿ ವಾರ್ಷಿಕ ವಹಿವಾಟು ನಡೆಸಿ ರೂ.28.13 ಕೋಟಿ ಲಾಭ ಗಳಿಸಿದೆ ಎಂದು ತಿಳಿಸಿದರು.
ಕುಂದಾಪುರದಲ್ಲಿ 12ನೇ ಶಾಖೆಯನ್ನು ಆರಂಭಿಸಿರುವುದಾಗಿ ತಿಳಿಸಿ, ಗ್ರಾಹಕರು ಸಹಕರಿಸಬೇಕೆಂದು ಮನವಿ ಮಾಡಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಸಂಸದ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಸಹಕಾರಿ ಸಂಘವನ್ನು ಹೇಗೆ ಅಭಿವೃದ್ಧಿಪಡಿಸಬಹುದು ಎಂಬುದಕ್ಕೆ ಬಡಗುಬೆಟ್ಟು ಸೊಸೈಟಿ ಮಾದರಿಯಾಗಿದೆ ಎಂದರು. ಜಯಕರ ಶೆಟ್ಟಿ ಅವರ ನೇತೃತ್ವದಲ್ಲಿ ಸಂಸ್ಥೆ ಆಧುನಿಕ ಹಾಗೂ ಜನಪರ ಸೇವೆ ನೀಡುತ್ತಿದ್ದು, ಇನ್ನಷ್ಟು ಶಾಖೆಗಳು ಆರಂಭವಾಗಿ ಉದ್ಯೋಗಾವಕಾಶಗಳು ಹೆಚ್ಚಳವಾಗಲಿ ಎಂದು ಹಾರೈಸಿದರು.

ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಕಿರಣ್ ಕುಮಾರ್ ಕೊಡ್ಗಿ ಮಾತನಾಡಿ, ಗ್ರಾಮೀಣ ಜನರ ಅಗತ್ಯಗಳಿಗೆ ತ್ವರಿತವಾಗಿ ಸ್ಪಂದಿಸುವ ಸಂಸ್ಥೆಯಾಗಿ ಇದು ಬೆಳೆಯುತ್ತಿದೆ ಎಂದರು.

ಉಡುಪಿ ಶಾಸಕ ಯಶಪಾಲ್ ಸುವರ್ಣ ಮಾತನಾಡಿ, ಬಡಗುಬೆಟ್ಟು ಸಹಕಾರಿ ಸಂಸ್ಥೆ ಜನರ ವಿಶ್ವಾಸ ಗಳಿಸಿ ಆಧುನಿಕ ರೀತಿಯಲ್ಲಿ ಅಭಿವೃದ್ಧಿಯತ್ತ ಸಾಗುತ್ತಿದೆ ಎಂದು ಹೇಳಿದರು.
ಮಾಜಿ ಸಚಿವ ಜಯಪ್ರಕಾಶ್ ಹೆಗ್ಡೆ ಮಾತನಾಡಿ, ಸಹಕಾರಿ ಸಂಘಗಳು ಇನ್ನಷ್ಟು ಬಲವಾಗಬೇಕಾದರೆ ಸರ್ಕಾರದ ನಿಯಮಗಳಲ್ಲಿ ಸರಳೀಕರಣ ಅಗತ್ಯವಿದೆ ಎಂದರು. ವಿವಿಧ ಜಿಲ್ಲೆಗಳ ಸಹಕಾರಿ ಬ್ಯಾಂಕ್ಗಳನ್ನು ವಿಲೀನಗೊಳಿಸುವ ಪ್ರಕ್ರಿಯೆಯಿಂದ ಸ್ಥಳೀಯ ಉದ್ಯೋಗ ಹಾಗೂ ವ್ಯವಸ್ಥೆಗಳ ಮೇಲೆ ಪರಿಣಾಮ ಉಂಟಾಗಬಹುದು ಎಂದು ಆತಂಕ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಭದ್ರತಾ ಕೋಠಡಿಯನ್ನು ಮೋಹನಹಳ್ಳಿ ಮಹೇಶ್ ಹೆಗ್ಡೆ, ಗಣಕಯಂತ್ರವನ್ನು ಶ್ರೀಮತಿ ಲಾವಣ್ಯ ಹಾಗೂ ಸೇಫ್ ಲಾಕರ್ ವಿಭಾಗವನ್ನು ಶಾಸಕ ಕಿರಣ್ ಕುಮಾರ್ ಕೊಡ್ಗಿ ಉದ್ಘಾಟಿಸಿದರು.
ಮುಖ್ಯ ಅತಿಥಿಗಳಾಗಿ ಸಹಕಾರ ಸಂಘಗಳ ಸಹಾಯಕ ನಿಬಂಧಕ ಸುಧೀರ್ ಕುಮಾರ್ ಜೆ. ಭಾಗವಹಿಸಿದ್ದರು.

ವೇದಿಕೆಯಲ್ಲಿ ಆಡಳಿತ ಮಂಡಳಿಯ ಉಪಾಧ್ಯಕ್ಷ ಜಾರ್ಜ್ ಸಾಮುವೇಲ್, ನಿರ್ದೇಶಕರಾದ ಸಂಜೀವ ಕಾಂಚನ್, ಪುರುಷೋತ್ತಮ ಪಿ. ಶೆಟ್ಟಿ, ಎಲ್. ಉಮಾನಾಥ್, ಸಾಧು ಸಾಲ್ಯಾನ್, ಪದ್ಮನಾಭ ಕೆ. ನಾಯಕ್, ಹಾಜಿ ಸಯ್ಯದ್ ಅಬ್ದುಲ್ ರಜಾಕ್, ವಿನಯ್ ಕುಮಾರ್ ಟಿ.ಎ., ಸದಾಶಿವ ನಾಯಕ್, ಶ್ರೀಮತಿ ಜಯ ಶೆಟ್ಟಿ, ಶ್ರೀಮತಿ ಗಾಯತ್ರಿ ಎಸ್. ಭಟ್ ಹಾಗೂ ಪ್ರಧಾನ ವ್ಯವಸ್ಥಾಪಕ ರಾಜೇಶ್ ವಿ. ಶೇರಿಗಾರ್ ಉಪಸ್ಥಿತರಿದ್ದರು.
ಒಳಾಂಗಣ ವಿನ್ಯಾಸ ರೂಪಿಸಿದ ಇಂಜಿನಿಯರ್ ಕಡೆಯಾರು ಮುರಳೀಧರ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ಸಭೆಯಲ್ಲಿ ಪಾಸ್ ಪುಸ್ತಕ ಮತ್ತು ಠೇವಣಿ ಪತ್ರಗಳನ್ನು ವಿತರಿಸಲಾಯಿತು.
ಅಧ್ಯಕ್ಷ ಜಯಕರ ಶೆಟ್ಟಿ ಸ್ವಾಗತಿಸಿದರು. ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ನ ನಿರ್ದೇಶಕ ಶ್ರೀಧರ್ ಪಿ.ಎಸ್. ಹಾಗೂ ಮಲ್ಪೆ ಶಾಖಾ ವ್ಯವಸ್ಥಾಪಕ ನವೀನ್ ಕೆ. ಕಾರ್ಯಕ್ರಮ ನಿರೂಪಿಸಿದರು




