udupimitra.in
  • July 3, 2026
  • Last Update July 3, 2026 4:10 pm
  • Brahmavara

ಜುಲೈ 6ರಂದು ವಿದ್ಯಾರಣ್ಯ ಶಾಲೆಯಲ್ಲಿ ಕುಂದಾಪ್ರ ಕನ್ನಡ ‘ವಾಲ್ಬೆಲ್ಲ’ ಕಾರ್ಯಕ್ರಮ

ಜುಲೈ 6ರಂದು ವಿದ್ಯಾರಣ್ಯ ಶಾಲೆಯಲ್ಲಿ ಕುಂದಾಪ್ರ ಕನ್ನಡ ‘ವಾಲ್ಬೆಲ್ಲ’ ಕಾರ್ಯಕ್ರಮ

ವರದಿ : ಚಿತ್ತೂರು ಪ್ರಭಾಕರ ಆಚಾರ್ಯ
ಉಡುಪಿ ಮಿತ್ರ ಪತ್ರಿಕೆ ಸುದ್ಧಿ :
ಕುಂದಾಪುರ, ಜೂ.೩: ಮಂಗಳೂರು ವಿಶ್ವವಿದ್ಯಾನಿಲಯದ ಕುಂದಾಪ್ರ ಕನ್ನಡ ಅಧ್ಯಯನ ಪೀಠ ಹಾಗೂ ಸುಜ್ಞಾನ ಪದವಿ ಪೂರ್ವ ಕಾಲೇಜು (ಯಡಾಡಿ-ಮತ್ಯಾಡಿ) ಇವುಗಳ ಜಂಟಿ ಆಶ್ರಯದಲ್ಲಿ, ಕುಂದಾಪ್ರ ನೆಲಮೂಲದ ಸಾಂಸ್ಕೃತಿಕ ಅನನ್ಯತೆಯ ರಂಗಾಭಿವ್ಯಕ್ತಿ ಹಾಗೂ ಚಿತ್ರಕಲಾ ಸ್ಪರ್ಧೆ ವಾಲ್ಬೆಲ್ಲ ಕಾರ್ಯಕ್ರಮವನ್ನು ಜುಲೈ 06 ಸೋಮವಾರ ಬೆಳಿಗ್ಗೆ 9.30 ಕ್ಕೆ ಯಡಾಡಿಯ ಮತ್ಯಾಡಿಯ ವಿದ್ಯಾರಣ್ಯ ಕ್ಯಾಂಪಸ್‌ನಲ್ಲಿ ಆಯೋಜಿಸಲಾಗಿದೆ ಎಂದು ಮಾಜಿ ಸಚಿವ, ಕುಂದಾಪ್ರ ಕನ್ನಡ ಅಧ್ಯಯನ ಪೀಠದ ಸದಸ್ಯರಾದ ಕೆ.ಜಯಪ್ರಕಾಶ್ ಹೆಗ್ಡೆ ತಿಳಿಸಿದರು. ಅವರು ಯಡಾಡಿ ಮತ್ಯಾಡಿಯ ಸುಜ್ಞಾನ ಪದವಿ ಪೂರ್ವ ಕಾಲೇಜಿನಲ್ಲಿ ಪತ್ರಿಕಾಗೋಷ್ಟಿ ನಡೆಸಿ ಮಾಹಿತಿ ನೀಡಿದರು.
ಕರ್ನಾಟಕ ಸರ್ಕಾರ ಮಂಗಳೂರು ವಿಶ್ವವಿದ್ಯಾಲಯದ ಅಧೀನದಲ್ಲಿ ಪೂರ್ಣ ಪ್ರಮಾಣದ ಕುಂದಾಪ್ರ ಕನ್ನಡ ಅಧ್ಯಯನ ಪೀಠವನ್ನು ಸ್ಥಾಪಿಸಿದೆ. ಈ ಪೀಠ ಸ್ಥಾಪನೆಯ ಬಳಿಕ ನಮ್ಮ ಕುಂದಾಪ್ರ ಕನ್ನಡದ ಅಭಿವೃದ್ಧಿಗೆ ಪೂರಕವಾಗಿ ಅಧ್ಯಯನ ಪೀಠದಿಂದ ಒಂದಷ್ಟು ಚಟುವಟಿಕೆಗಳನ್ನು ಹಮ್ಮಿಕೊಂಡಿದ್ದೇವೆ. ಇದೇ ಚಟುವಟಿಕೆಗಳಿಗೆ ಪೂರಕವಾಗಿ, ಸಾಂಪ್ರದಾಯಿಕ ಶಿಕ್ಷಣದ ಜೊತೆಗೆ ವಿದ್ಯಾರ್ಥಿಗಳಿಗೆ ಈ ನೆಲದ ಕಲೆ, ಸಂಗೀತ, ಸಾಹಿತ್ಯ ಮತ್ತು ಸಾಂಸ್ಕೃತಿಕ ಸೊಗಡನ್ನು ಪರಿಚಯಿಸುವ ಮಹತ್ತರ ಆಶಯದೊಂದಿಗೆ ಕಾರ್ಯಕ್ರಮ ನಡೆಸುತ್ತಿದ್ದೇವೆ. ಇತ್ತೀಚೆಗಿನ ದಿನಗಳಲ್ಲಿ ಮನೆಗಳಲ್ಲೇ ಕುಂದಾಪ್ರ ಕನ್ನಡ ಮಾತನಾಡುವುದು ಕಡಿಮೆಯಾಗುತ್ತಿದೆ. ಕೆಲವರು ತಮ್ಮ ಮಕ್ಕಳೊಂದಿಗೆ ಶುದ್ಧ ಕನ್ನಡದಲ್ಲಿ, ಇನ್ನು ಕೆಲವರು ಇಂಗ್ಲೀಷ್‌ನಲ್ಲೇ ಮಾತನಾಡುತ್ತಾರೆ. ಮುಂಬೈನಲ್ಲಿರುವವರು ಮನೆಗಳಲ್ಲಿ ಮರಾಠಿಯಲ್ಲೇ ಮಾತನಾಡುತ್ತಾರೆ. ಕುಂದಾಪ್ರ ಕನ್ನಡ ಉಳಿಸಿ ಬೆಳೆಸಿಕೊಂಡು ಹೋಗಬೇಕಾಗಿದೆ. ಮಕ್ಕಳಲ್ಲೂ ಕುಂದಾಪ್ರ ಕನ್ನಡದ ಅಭಿಮಾನ ಹೆಚ್ಚಿಸಬೇಕಾಗಿದೆ ಎಂದರು.


ಸುಜ್ಞಾನ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ರಮೇಶ್ ಶೆಟ್ಟಿಯವರು ಮಾತನಾಡಿ ನಮ್ಮ ಕಾಲೇಜಿನಲ್ಲಿ ಕುಂದಾಪ್ರ ಕನ್ನಡ ಅಧ್ಯಯನ ಪೀಠದ ಸಹಕಾರದಲ್ಲಿ ಮಕ್ಕಳಿಗಾಗಿ ಕುಂದಾಪ್ರ ಕನ್ನಡ ಭಾಷಿಕ ವಲಯದ ಬೈಂದೂರು, ಕುಂದಾಪುರ, ಬ್ರಹ್ಮಾವರ ಹಾಗೂ ಹೆಬ್ರಿ ತಾಲೂಕಿನ ಪಿಯುಸಿ ಮತ್ತು ಹೈಸ್ಕೂಲು ವಿದ್ಯಾರ್ಥಿಗಳಿಗಾಗಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸಾಂಸ್ಕೃತಿಕ ಸ್ಪರ್ಧೆಯಲ್ಲಿ ವಿಜೇತರಾದ ಪದವಿ ಪೂರ್ವ ವಿಭಾಗದ ವಿದ್ಯಾರ್ಥಿಗಳಿಗೆ ಪ್ರಥಮ ಬಹುಮಾನ ರೂ.10,೦೦೦/-, ದ್ವಿತೀಯ ಬಹುಮಾನವಾಗಿ ರೂ.7,೦೦೦/-, ತೃತೀಯ ಬಹುಮಾನವಾಗಿ ರೂ.5,೦೦೦/- ಅದೇ ರೀತಿಯಲ್ಲಿ ಚಿತ್ರಕಲಾ ಸ್ಪರ್ಧೆಯಲ್ಲಿ ವಿಜೇತರಾದ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳಿಗೆ ಪ್ರಥಮ ರೂ.5೦೦೦/-, ದ್ವಿತೀಯ ರೂ.3,೦೦೦/- ಹಾಗೂ ತೃತೀಯ ಬಹುಮಾನ ರೂ.2,೦೦೦/- ಹಾಗೂ ಎಲ್ಲಾ ಸ್ಪರ್ಧಿಗಳಿಗೆ ಪ್ರಮಾಣ ಪತ್ರ ನೀಡಲಾಗುವುದು ಎಂದರು.


ಸುಜ್ಞಾನ ಎಜುಕೇಶನ್ ಟ್ರಸ್ಟಿನ ಕೋಶಾಧಿಕಾರಿ ಭರತ್ ಕುಮಾರ್ ಶೆಟ್ಟಿ ಮಾತನಾಡಿ ವಿವಿಧ ಕ್ಷೇತ್ರಗಳಲ್ಲಿ ಸಮಾಜದ ಅಭಿವೃದ್ಧಿಗೆ ಕೊಡುಗೆ ನೀಡಿರುವ ಸಾಧಕರು/ಸಂಸ್ಥೆಗಳನ್ನು ಗುರುತಿಸಿ ಸುಜ್ಞಾನ ಎಜುಕೇಶನ್ ಟ್ರಸ್ಟ್ ವತಿಯಿಂದ ಪ್ರತಿಷ್ಠಿತ ವಿದ್ಯಾರಣ್ಯ ಪುರಸ್ಕಾರ ನೀಡಲಾಗುವುದು. ಈ ಬಾರಿ ಮಂಗಳೂರು ವಿಶ್ವವಿದ್ಯಾಲಯದ ನಿವೃತ್ತ ಕುಲಪತಿ ರಾಜು ಮೊಗವೀರ ಹಾಗೂ ಕುಂದಾಪ್ರ ಕನ್ನಡ ಅಧ್ಯಯನ ಪೀಠದ ಸಂಯೋಜಕ ಪ್ರೊ. ನಾಗಪ್ಪಗೌಡರನ್ನು ಬೆಳಗ್ಗಿನ ಉದ್ಘಾಟನಾ ಸಮಾರಂಭದಲ್ಲಿ ಪುರಸ್ಕಾರದೊಂದಿಗೆ ಗೌರವಿಸಲಾಗುವುದು. ಸಾಂಸ್ಕ್ರತಿಕ ಸ್ಪರ್ಧೆ ಹಾಗೂ ಚಿತ್ರಕಲಾ ಸ್ಪರ್ಧೆ ನಡೆಯಲಿದ್ದು ಸಂಜೆ ಗಂಟೆ 4.೦೦ಕ್ಕೆ ಬಹುಮಾನ ವಿತರಣೆ ಹಾಗೂ ಸಮಾರೋಪ ಜರುಗಲಿದ್ದು ಈ ಕಾರ್ಯಕ್ರಮಗಳಿಗೆ ವಿವಿಧ ಶಾಲಾ ವಿದ್ಯಾರ್ಥಿಗಳಿಗೆ ಹಾಗೂ ಆಸಕ್ತರಿಗೆ ಭಾಗವಹಿಸಲು ಅವಕಾಶ ನೀಡಿದ್ದು ಕೋಟೇಶ್ವರ, ಶಿರಿಯಾರ, ಬಿದ್ಕಲ್‌ಕಟ್ಟೆಯಿಂದ ಆಗಮಿಸುವವರು ನಮ್ಮ ಸಂಸ್ಥೆಯ ಬಸ್ಸುಗಳಲ್ಲೇ ಬರಬಹುದಾಗಿದೆ ಎಂದರು.
ಪತ್ರಿಕಾಗೋಷ್ಟಿಯಲ್ಲಿ ಕುಂದಾಪ್ರ ಕನ್ನಡ ಅಧ್ಯಯನ ಪೀಠದ ಸಲಹ ಸಮಿತಿಯ ಸದಸ್ಯರುಗಳಾದ ಪಂಜು ಗಂಗೊಳ್ಳಿ, ಉದಯ ಶೆಟ್ಟಿ ಪಡುಕೆರೆ ಉಪಸ್ಥಿತರಿದ್ದರು. ಕುಂದಾಪ್ರ ಕನ್ನಡ ಅಧ್ಯಯನ ಪೀಠದ ಸಲಹ ಸಮಿತಿಯ ಸದಸ್ಯ ಹಾಗೂ ಪತ್ರಕರ್ತರಾದ ಕೆ.ಸಿ.ರಾಜೇಶ್ ಸ್ವಾಗತಿಸಿ ವಂದಿಸಿದರು.

administrator

Related Articles

Leave a Reply

Your email address will not be published. Required fields are marked *

You cannot copy content of this page