ಉಡುಪಿಮಿತ್ರ ಪತ್ರಿಕೆ ಸುದ್ಧಿ :
ಚಿತ್ತೂರು, ಜೂ.೨೯: ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ ೬೦ ಸರಕಾರಿ ಶಾಲೆಗಳನ್ನು ದಾನಿಗಳು ಬೆಂಬಲಿಸುತ್ತಿದ್ದು ಈ ಎಲ್ಲಾ ದಾನಿಗಳಿಗೆ ಮಾರಣಕಟ್ಟೆ ಕೃಷ್ಣಮೂರ್ತಿ ಮಂಜರೆ ಪ್ರೇರಕರಾಗಿದ್ದಾರೆ. ಇವರೆಲ್ಲರಿಗೂ ಮಂಜರೇ ಮಾದರಿಯಾಗಿದ್ದು ಮಂಜರು ದತ್ತು ಸ್ವೀಕರಿಸಿದ ಎಲ್ಲಾ ಶಾಲೆಗಳು ಅತ್ಯುತ್ತಮವಾಗಿದ್ದು ಮಕ್ಕಳ ಸಂಖ್ಯೆ ಹೆಚ್ಚಾಗಿದೆ ಎಂದು ಬೈಂದೂರು ವಿಧಾನಸಭಾ ಕ್ಷೇತ್ರದ ಶಾಸಕ ಗುರುರಾಜ್ ಶೆಟ್ಟಿ ಗಂಟಿಹೊಳೆ ನುಡಿದರು. ಅವರು ಪಿಎಂಶ್ರೀ ಸರಕಾರಿ ಹಿ.ಪ್ರಾ.ಶಾಲೆ ಚಿತ್ತೂರು ಇಲ್ಲಿಗೆ ಮಾರಣಕಟ್ಟೆ ಸುಬ್ರಹ್ಮಣ್ಯ ಮಂಜ ಚಾರಿಟೇಬಲ್ ಟ್ರಸ್ಟ್ (ರಿ.) ವತಿಯಿಂದ ಕೊಡುಗೆಯಾಗಿ ನೀಡಿದ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದರು. ಬೈಂದೂರು ಕ್ಷೇತ್ರ ವ್ಯಾಪ್ತಿಯಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾಗಿರುವುದರಿಂದ ಸುಮಾರು ೫೦ ಶಾಲೆಗಳು ಮುಚ್ಚುವ ಭೀತಿ ಎದುರಿಸುತ್ತಿವೆ. ಇಂತಹ ಶಾಲೆಗಳು ಮಂಜರಂತಹ ವ್ಯಕ್ತಿಗಳಿಂದ ಬೆಳೆಯಬೇಕಾಗಿದೆ. ಮಂಜರ ಆದರ್ಶ ಎಲ್ಲಾ ಹಣವಂತರಿಗೆ ಬರುವಂತಾಗಬೇಕು. ಆಗ ಮಾತ್ರ ಸರಕಾರಿ ಶಾಲೆಗಳು ಉಳಿಯಲಿವೆ ಎಂದು ಶಾಸಕರು ನುಡಿದರು.

ನೂತನ ಶಾಲಾ ಕಟ್ಟಡವನ್ನು ಬೈಂದೂರು ಶಾಸಕ ಗುರುರಾಜ್ ಶೆಟ್ಟಿ ಗಂಟಿಹೊಳೆ ಹಾಗೂ ಹೈದರಬಾದ್ ಹೋಟೆಲ್ ಉದ್ಯಮಿ, ಕೊಡುಗೈ ದಾನಿ ಮಾರಣಕಟ್ಟೆ ಕೃಷ್ಣಮೂರ್ತಿ ಮಂಜರು ಉದ್ಘಾಟಿಸಿದರು.
ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ ಮಾತನಾಡಿ ಸರಕಾರಿ ಶಾಲೆಗಳಿಗೆ ಆರ್ಥಿಕ ಅಶಕ್ತ ಕುಟುಂಬದ ಮಕ್ಕಳೇ ಹೆಚ್ಚು ಬರುವುದರಿಂದ ಸರಕಾರಿ ಶಾಲೆಗಳಿಗೆ ಸಹಕಾರ ನೀಡಿದರೆ ಆ ಊರಿನ ಆರ್ಥಿಕ ಅಶಕ್ತರಿಗೆ ಸಹಾಯ ಮಾಡಿದಂತಾಗಲಿದೆ. ಶಿಕ್ಷಣಕ್ಕೆ ಸಹಕಾರ ನೀಡುವುದು ಪುಣ್ಯದ ಕೆಲಸ. ಮಾರಣಕಟ್ಟೆ ಕೃಷ್ಣಮೂರ್ತಿ ಮಂಜರು ಆ ಕೆಲಸ ಮಾಡುತ್ತಿದ್ದಾರೆ ಎಂದು ನುಡಿದರು.

ಡಯಟ್ ಪ್ರಾಂಶುಪಾಲ ಅಶೋಕ್ ಕಾಮತ್ ಮಾತನಾಡಿ ಮಕ್ಕಳು ಮೊಬೈಲ್ ಹಿಡಿದಲ್ಲಿ ಅವರು ಕೆಳಗಿಡಲ್ಲ. ಇಂತಹ ಮೊಬೈಲ್ನ್ನು ಬದಿಗಿಡುವ ಬಗ್ಗೆ ಸ್ವತಃ ವಿದ್ಯಾರ್ಥಿಯೇ ನಿರ್ಧಾರ ಮಾಡುವಂತಹ ಮನಸ್ಥಿತಿಯನ್ನು ಶಿಕ್ಷಕರು ಹಾಗೂ ಪೋಷಕರು ಬೆಳೆಸಬೇಕು. ಮೊಬೈಲ್ ಅಡಿಕ್ಷನ್ ಒಳಿತಲ್ಲ, ಮೊಬೈಲ್ ಕೆಡುಕುಗಳ ಬಗ್ಗೆ ತಿಳಿಹೇಳಿ ಒಳ್ಳೆಯ ವಿದ್ಯಾರ್ಥಿ ಒಳ್ಳೆಯ ನಾಗರಿಕರನ್ನಾಗಿ ರೂಪಿಸಬೇಕೆಂದರು.

ಮಾರಣಕಟ್ಟೆ ಕೃಷ್ಣಮೂರ್ತಿ ಮಂಜರು ಮಾತನಾಡಿ ಊರಿನ ಎಲ್ಲರಿಗೂ ಶಿಕ್ಷಣ ನೀಡಿದ ಸರಕಾರಿ ಶಾಲೆಗಳನ್ನು ಮುಚ್ಚುವುದು ಸರಿಯಲ್ಲ. ಯಾವಾಗಲೂ ಊರಿನಲ್ಲಿ ಶಾಲೆ ಮತ್ತು ದೇವಸ್ಥಾನಗಳನ್ನು ಎಲ್ಲರೂ ಸೇರಿ ಅಭಿವೃದ್ಧಿ ಮಾಡಬೇಕು ಎಂದರು.
ಮಾರಣಕಟ್ಟೆ ಬ್ರಹ್ಮಲಿಂಗೇಶ್ವರ ದೇವಸ್ಥಾನದ ಅರ್ಚಕ ನಾಗರಾಜ ಮಂಜ ವಾಚನಾಲಯ ಉದ್ಘಾಟಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ನಾಗೇಶ್ ನಾಯ್ಕ್, ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ಮಾಜಿ ವ್ಯವಸ್ಥಾಪನ ಸದಸ್ಯ ಡಾ.ಅತುಲ್ ಕುಮಾರ್ ಶೆಟ್ಟಿ, ವಂಡ್ಸೆ ನಿರಾಮಯ ಸೊಸೈಟಿ ಅಧ್ಯಕ್ಷ ಉದಯಕುಮಾರ್ ಶೆಟ್ಟಿ, ದುರ್ಗಾಪರಮೇಶ್ವರಿ ದೇವಸ್ಥಾನ ತೆಂಕೂರು ಇದರ ಮೊಕ್ತೇಸರ ವಂಡಬಳ್ಳಿ ಜಯರಾಮ ಶೆಟ್ಟಿ, ಚಿತ್ತೂರು ಪ್ರೌಢಶಾಲಾ ಮುಖ್ಯೋಪಾಧ್ಯಾಯ ಸದಾನಂದ ಶೆಟ್ಟಿ, ನಿವೃತ್ತ ಕೃಷಿ ಅಧಿಕಾರಿ ರಘುರಾಮ ಶೆಟ್ಟಿ, ಚಿತ್ತೂರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ರವೀಂದ್ರ ಶೆಟ್ಟಿ, ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ದಿವಾಕರ ಆಚಾರ್ಯ, ಶಾಲಾಭಿವೃದ್ಧಿ ಮತ್ತು ಶಾಲಾ ಮೇಲುಸ್ತುವಾರಿ ಸಮನ್ವಯ ವೇದಿಕೆ ಜಿಲ್ಲಾಧ್ಯಕ್ಷ ಎಂ.ಅಬ್ದುಲ್ ಸಲಾಂ ಚಿತ್ತೂರು ಭಾಗವಹಿಸಿದ್ದರು. ಮುಖ್ಯೋಪಾಧ್ಯಾಯ ಜಟ್ಟಪ್ಪ ಬಿ. ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕಟ್ಟಡ ನಿರ್ಮಿಸಿಕೊಟ್ಟ ಉದ್ಯಮಿ ಮಾರಣಕಟ್ಟೆ ಕೃಷ್ಣಮೂರ್ತಿ ಮಂಜರನ್ನು ಹಾಗೂ ಜಿಲ್ಲಾ ಸಮನ್ವಯ ವೇದಿಕೆಯಿಂದ ಅತ್ಯುತ್ತಮ ಶಿಕ್ಷಕ ಗೌರವ ಪ್ರಶಸ್ತಿ ಸ್ವೀಕರಿಸಿದ ದೈಹಿಕ ಶಿಕ್ಷಣ ಶಿಕ್ಷಕ ಬಾಲಕೃಷ್ಣ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.
ಶಾಲಾಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಡಾ.ರಾಜೇಶ್ ಬಾಯರಿ ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು. ಶಾಲಾ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಶಿಕ್ಷಕಿ ಶ್ರೀಮತಿ ರಾಜೇಶ್ವರಿ ವಂದಿಸಿದ್ದು ಶಿಕ್ಷಕಿಯರಾದ ಶ್ರೀಮತಿ ನಿರ್ಮಲ ಬಿ.ಶೆಟ್ಟಿ ಹಾಗೂ ಶ್ರೀಮತಿ ದೀಪಾ ನಿರೂಪಿಸಿದರು.




