ಉಡುಪಿಮಿತ್ರ ಪತ್ರಿಕೆ ಸುದ್ಧಿ :
ಬ್ರಹ್ಮಾವರ: ಅಧಿಕ ಬಡ್ಡಿ ದರದಲ್ಲಿ ಸಾಲ ನೀಡಿ, ಕಿರುಕುಳ ಹಾಗೂ ಹಲ್ಲೆ ನಡೆಸಿದ ಮಂಗಳೂರಿನ ಸಾನಿಧ್ಯ ಫೈನಾನ್ಸ್‌ನ ಮೂವರು ಆರೋಪಿಗಳನ್ನು ಬ್ರಹ್ಮಾವರ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಮಂಗಳೂರು ಮೂಲದ ಸಂದೀಪ್ ಶೆಟ್ಟಿ (ಕುಳಾಯಿ), ವಿಜಿತ್ ಶೆಟ್ಟಿ (ಕಾವೂರು) ಮತ್ತು ಸಂಪತ್ (ಬಜ್ಪೆ, ಮಳವೂರು) ಎಂದು ಗುರುತಿಸಲಾಗಿದೆ.

ಘಟನೆಯ ಹಿನ್ನೆಲೆ: ಬ್ರಹ್ಮಾವರ ಪೊಲೀಸ್ ಠಾಣಾ ವ್ಯಾಪ್ತಿಯ ಕುಂಜಾಲು ಪರಿಸರದಲ್ಲಿ ಸಾನಿಧ್ಯ ಫೈನಾನ್ಸ್‌ನವರು ಅಧಿಕ ಬಡ್ಡಿ ದರದಲ್ಲಿ ಲೋನ್ ನೀಡಿ, ಕಂತು ಪಾವತಿ ಬಾಕಿ ಇದ್ದಲ್ಲಿ ಸಾರ್ವಜನಿಕರಿಗೆ ತೀವ್ರ ಪೀಡನೆ ನೀಡುತ್ತಿದ್ದರು. ಈ ನಡುವೆ ಕುಂಜಾಲಿನ ಗಣೇಶ್ ಗಾಣಿಗ ಎಂಬವರ ಏಂ೦೩ಊಈ೮೨೫೩ ನೋಂದಣಿ ಸಂಖ್ಯೆಯ ಮೋಟಾರ್ ಸೈಕಲನ್ನು ಬಲವಂತವಾಗಿ ಕಸಿದುಕೊಂಡು ಹೋಗಿದ್ದಲ್ಲದೆ, ಇದಕ್ಕೆ ಸಂಬಂಧಿಸಿದಂತೆ ಜಾಮೀನುದಾರರಾಗಿದ್ದ ರಾಜೇಶ್ ನಾಯ್ಕ್ ಅವರ ಮೇಲೆ ಆರೋಪಿಗಳು ಹಲ್ಲೆ ನಡೆಸಿದ್ದರು.
ಈ ಕುರಿತು ರಾಜೇಶ್ ನಾಯ್ಕ್ ನೀಡಿದ ದೂರಿನನ್ವಯ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಕರ್ನಾಟಕ ಅತಿಯಾದ ಬಡ್ಡಿ ವಿಧಿಸುವಿಕೆ ನಿಷೇಧ ಕಾಯ್ದೆ ೨೦೦೪ ರ ಅಡಿಯಲಿಯೂ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು.
ಉಡುಪಿ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕ ಬೆಳ್ಳಿಯಪ್ಪ ಹಾಗೂ ಬ್ರಹ್ಮಾವರ ವೃತ್ತ ನಿರೀಕ್ಷಕ ಗೋಪಿಕೃಷ್ಣ ಅವರ ಮಾರ್ಗದರ್ಶನದಲ್ಲಿ, ತನಿಖಾಧಿಕಾರಿ ಬ್ರಹ್ಮಾವರ ಪಿಎಸ್‌ಐ ಅಶೋಕ ಮಾಳಬಗಿ ಹಾಗೂ ಕ್ರೈಂ ಸಿಬ್ಬಂದಿಗಳಾದ ಕಿರಣ್ ಮತ್ತು ಸಿದ್ದಪ್ಪ ಅವರನ್ನೊಳಗೊಂಡ ತಂಡ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಬಂಧಿತರಿಂದ ಬಲವಂತವಾಗಿ ಕಸಿದುಕೊಂಡಿದ್ದ ಮೋಟಾರ್ ಸೈಕಲ್ ಹಾಗೂ ಕೃತ್ಯಕ್ಕೆ ಬಳಸಿದ್ದ ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದು, ತನಿಖೆ ಮುಂದುವರಿದಿದೆ.




