udupimitra.in
  • August 20, 2026
  • Last Update August 19, 2026 5:05 pm
  • Brahmavara

ಕಸ್ತೂರಿ ರಂಗನ್ ವರದಿ ಬಾಧಿತರ ಸಮಸ್ಯೆ: ವಿಧಾನಸಭಾ ಅಧಿವೇಶನದಲ್ಲಿ ಧ್ವನಿ ಎತ್ತಲು ಶಾಸಕ ಗಂಟಿಹೊಳೆ ನಿರ್ಧಾರ

ಕಸ್ತೂರಿ ರಂಗನ್ ವರದಿ ಬಾಧಿತರ ಸಮಸ್ಯೆ: ವಿಧಾನಸಭಾ ಅಧಿವೇಶನದಲ್ಲಿ ಧ್ವನಿ ಎತ್ತಲು  ಶಾಸಕ ಗಂಟಿಹೊಳೆ ನಿರ್ಧಾರ

ವರದಿ : ಚಿತ್ತೂರು ಪ್ರಭಾಕರ ಆಚಾರ್ಯ ಉಡುಪಿಮಿತ್ರ ಪತ್ರಿಕೆಯ ಸುದ್ಧಿ :

ವಂಡ್ಸೆ, ಅ.19 : ಕಸ್ತೂರಿ ರಂಗನ್ ಭಾದಿತ ಪ್ರದೇಶಗಳ ಜನರ ಸಮಸ್ಯೆ ಕುರಿತು ಗಮನ ಸೆಳೆಯಲು ಈ ಬಾರಿಯ ವಿಧಾನಸಭಾ ಅಧಿವೇಶನದಲ್ಲಿ ಪ್ರಶ್ನಿಸಲಾಗುವುದು. ಇದಕ್ಕೆ ಅಧ್ಯಕ್ಷರು ಮತ್ತು ಸಚಿವರ ಸಮಯಾವಕಾಶ ಕೋರಲಾಗಿದೆ ಎಂದು ಬೈಂದೂರು ಶಾಸಕ ಗುರುರಾಜಶೆಟ್ಟಿ ಗಂಟಿಹೊಳೆ ನುಡಿದರು.
ಅವರು ಚಿತ್ತೂರಿನ ಶ್ರೀನಿವಾಸ ಕನ್ವೆನ್ಷನ್ ಹಾಲ್ ನಲ್ಲಿ ಮಲೆನಾಡು ಜನ ಹಿತರಕ್ಷಣಾ ವೇದಿಕೆ ಮತ್ತು ಬೈಂದೂರು ಫೌಂಡೇಶನ್ ವತಿಯಿಂದ ನಡೆದ ಬೈಂದೂರು ಕ್ಷೇತ್ರದ ಪರಿಸರ ಸೂಕ್ಷ್ಮ ಪ್ರದೇಶ ಮತ್ತು ಪರಿಸರ ಸೂಕ್ಷ್ಮ ವಲಯದ ಬಾಧಿತ ಗ್ರಾಮಗಳ ಪ್ರಮುಖರ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.


ಬೈಂದೂರು ಫೌಂಡೇಶನ್ ಮೂಲಕ ಈಗಾಗಲೆ ಕಸ್ತೂರಿ ರಂಗನ್ ವರದಿಯ ಕನ್ನಡ ಅನುವಾದ ಮಾಡಲಾಗಿದೆ. ಕೇರಳದ ಪರಿಣಿತ ತಂಡದ ವರದಿಯನ್ನು ತರಿಸಿ ಅದನ್ನು ಕನ್ನಡಕ್ಕೆ ಅನುವಾದ ಮಾಡಲಾಗಿದ್ದು ಆಸಕ್ತರಿಗೆ ನೀಡಲಾಗುವುದು. ಸತ್ಯಶೋಧನಾ ಭೌತಿಕ ಸರ್ವೆಗೆ ಸರಕಾರವನ್ನು ಒತ್ತಾಯಿಸಲಾಗುವುದು. ಒಂದು ವೇಳೆ ಸರಕಾರ ಸಮೀಕ್ಷೆ ಮಾಡದೇ ಇದ್ದಲ್ಲಿ ನಮ್ಮ ಜಿಲ್ಲೆಯಲ್ಲಿ ಜಿಲ್ಲಾಧಿಕಾರಿ , ಅರಣ್ಯ ಇಲಾಖಾ ಅಧಿಕಾರಿಗಳನ್ನು
ಸೇರಿಸಿಕೊಂಡು ಸರ್ವೆ ಮಾಡಲಾಗುವುದು. ಇದರಿಂದ ವಾಸ್ತವ ಚಿತ್ರಣ ತಿಳಿದು ಬರಲಿದೆ ಎಂದು ಶಾಸಕರು ನುಡಿದರು.
ನ್ಯಾಯವಾದಿ ಟಿ. ಬಾಲಚಂದ್ರಶೆಟ್ಟಿ ಮಾತನಾಡಿ ಪರಿಸರ ಸೂಕ್ಷ್ಮ ಪ್ರದೇಶಕ್ಕಿಂತಲೂ ವಲಯ ಇನ್ನೂ ಕಠಿಣ ನಿಯಮ ಹೊಂದಿದ್ದು ಇದರಿಂದ ಜನ ಜೀವನ ಸಂಕಷ್ಟಕ್ಕೆ ಒಳಗಾಗಲಿದೆ. ಪ್ರತಿಯೊಂದಕ್ಕೂ ಅನುಮತಿ ತೆಗೆದುಕೊಳ್ಳಬೇಕಾಗುವುದರಿಂದ ನಾಗರಿಕರಿಗೆ ಓಡಾಟವೇ ಜನಜೀವನವಾಗಲಿದೆ ಎಂದರು.

ಉಡುಪಿ ಜಿಲ್ಲಾ ರೈತ ಸಂಘದ ವಂಡ್ಸೆ ವಲಯ ಅಧ್ಯಕ್ಷ ಉದಯಕುಮಾರ್ ಶೆಟ್ಟಿ ಅಡಿಕೆ ಕೊಡ್ಲು ಮಾತನಾಡಿ ಪರಿಸರ ಸೂಕ್ಷ್ಮ ಪ್ರದೇಶ ನಿಗದಿಪಡಿಸುವಲ್ಲಿ ಆಗಿರುವ ಮಾನದಂಡಗಳ ಲೋಪವನ್ನು ಸಭೆಯ ಗಮನಕ್ಕೆ ತಂದರು.
ಮಲೆನಾಡು ಜನ ಹಿತರಕ್ಷಣ ಸಮಿತಿ ಅಧ್ಯಕ್ಷ ಡಾ.ಅತುಲ್ ಕುಮಾರ್ ಶೆಟ್ಟಿ ಮಾತನಾಡಿ ಪ್ರತಿ ಗ್ರಾಮದಲ್ಲಿ ಗ್ರಾಮ ಹಿತರಕ್ಷಣ ಸಮಿತಿ ರಚನೆ, ಒಂದು ವಾರದ ಒಳಗೆ ಗ್ರಾಮ ಸಭೆಗಳ ಮೂಲಕ ಆಕ್ಷೇಪಣೆ ಸಲ್ಲಿಸಿ ವಿವಿಧ ಜನಪ್ರತಿನಿಧಿಗಳೊಂದಿಗೆ ಸ್ಥಳೀಯ ನಿಯೋಗದ ಮೂಲಕ ಅರಣ್ಯ ಸಚಿವರನ್ನು ಭೇಟಿ ಮಾಡಲಾಗುವುದು ಎಂದರು.

ವೇದಿಕೆಯಲ್ಲಿ ತಾಲೂಕು ಪಂಚಾಯತ್ ಮಾಜಿ ಸದಸ್ಯ ಉದಯ ಜಿ.ಪೂಜಾರಿ, ಭಾರತೀಯ ಕಿಸಾನ್ ಸಂಘದ ಕುಂದಾಪುರ ತಾಲೂಕು ಅಧ್ಯಕ್ಷ ಸಬ್ಲಾಡಿ ನಾರಾಯಣ ಶೆಟ್ಟಿ, ನಿವೃತ್ತ ಕೃಷಿ ಅಧಿಕಾರಿ ರಘುರಾಮ ಶೆಟ್ಟಿ ಚಿತ್ತೂರು, ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರುಗಳಾದ ರವೀಂದ್ರ ಶೆಟ್ಟಿ ಚಿತ್ತೂರು, ಸುದರ್ಶನ ಶೆಟ್ಟಿ ಕೆರಾಡಿ, ಸುಬ್ಬಣ್ಣ ಶೆಟ್ಟಿ ಆಲೂರು, ಅಮೀನ್ ಶೆಟ್ಟಿ ಇಡೂರು, ಪ್ರಾಣೇಶ್ ಯಡಿಯಾಳ ಹಳ್ಳಿಹೊಳೆ, ರಾಘವೇಂದ್ರ ಕೊಠಾರಿ ಕೆರಾಡಿ ಉಪಸ್ಥಿತರಿದ್ದರು.
ಕೆರಾಡಿ , ಕೊಲ್ಲೂರು, ವಂಡ್ಸೆ, ಚಿತ್ತೂರು, ಇಡೂರು ಕುಂಜ್ಞಾಡಿ, ಆಲೂರು, ಗೋಳಿಹೊಳೆ, ಯಡಮೊಗೆ, ಹೊಸಂಗಡಿ, ಆಜ್ರಿ, ಹಳ್ಳಿಹೊಳೆ, ಮಚ್ಚಟ್ಟು ಗ್ರಾಮಗಳ ಪ್ರಮುಖರು ಭಾಗವಹಿಸಿದ್ದರು.

administrator

Related Articles

Leave a Reply

Your email address will not be published. Required fields are marked *

You cannot copy content of this page