ಉಡುಪಿಮಿತ್ರ ಪತ್ರಿಕೆ ಸುದ್ಧಿ :
ಕುಂದಾಪುರ, ಜೂ.6: ಬೈಂದೂರು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ, ನಿವೃತ್ತ ಉಪನ್ಯಾಸಕ ಮರವಂತೆಯ ಎಸ್.ಜನಾರ್ದನರವರು (೮೮) ಜೂ.6ರಂದು ಬೆಳಿಗ್ಗೆ ಕುಂದಾಪುರದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

ಇವರು ನಾವುಂದ ಜ್ಯೂನಿಯರ್ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದರು. ಸೇವಾ ನಿವೃತ್ತಿಯ ನಂತರ ಮರವಂತೆ ಗ್ರಾಮ ಪಂಚಾಯತ್ ಸದಸ್ಯರಾಗಿ, ನಂತರ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು. ಪಂಚಾಯತ್‌ರಾಜ್ ವ್ಯವಸ್ಥೆ ಹಾಗೂ ಕಾಯ್ದೆಯ ಬಗ್ಗೆ ಅಪಾರ ಜ್ಞಾನ ಹೊಂದಿರುವ ಇವರು ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಸಂಪನ್ಮೂಲ ವ್ಯಕ್ತಿಯಾಗಿ ಮಾಹಿತಿ ಒದಗಿಸುತ್ತಿದ್ದರು. ಪಂಚಾಯತ್ ರಾಜ್ ಕಾಯ್ದೆಯ ತಿದ್ದುಪಡಿಯ ಸಂದರ್ಭ ರಮೇಶ್ ಕುಮಾರ್ ಸಮಿತಿಯವರು ಇವರನ್ನು ಬೆಂಗಳೂರಿಗೆ ಕರೆಸಿಕೊಂಡು ಇವರಿಂದ ಮಾಹಿತಿ ಪಡಕೊಂಡಿದ್ದರು. ಇವರು ಪಂಚಾಯತ್ ರಾಜ್ ಕಾಯ್ದೆಯ ಮಾಹಿತಿಯ ನ್ನೊಳಗೊಂಡ ಜನಾಧಿಕಾರ ಎನ್ನುವ ಪುಸ್ತಕ ರಚಿಸಿದ್ದರು. 2000-2005ರವರೆಗೆ ಕುಂದಾಪುರ ತಾಲೂಕು ಪಂಚಾಯತ್‌ರಾಜ್ ಒಕ್ಕೂಟದ ಕಾರ್ಯದರ್ಶಿಯಾಗಿ, 2005ರಿಂದ 2010ವರೆಗೆ ಅಧ್ಯಕ್ಷರಾಗಿ, 2010 ರಿಂದ ಇಲ್ಲಿಯ ತನಕ ಗೌರವಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಮರವಂತೆಯ ಸಾಧನಾ ಸೇವಾ ಸಂಸ್ಥೆಯ ಸ್ಥಾಪಕರಾಗಿದ್ದು ಇಲ್ಲಿಯ ತನಕ ಸಂಸ್ಥೆಯನ್ನು ಮುಂದುವರಿಸಿಕೊಂಡು ಬಂದಿದ್ದರು. ಮರವಂತೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹಳೆ ವಿದ್ಯಾರ್ಥಿ ಸಂಘದ ಗೌರವಾಧ್ಯಕ್ಷರಾಗಿ, ಹಲವಾರು ಸಂಘ ಸಂಸ್ಥೆಗಳ ಮಾರ್ಗದರ್ಶಕರಾಗಿಯೂ ಸೇವೆ ಸಲ್ಲಿಸಿದ್ದರು. ನೇತಾಜಿ ಸುಭಾಶ್ಚಂದ್ರ ಬೋಸ್ ಸರಕಾರಿ ಪ್ರೌಢಶಾಲೆಯನ್ನು ಮರವಂತೆಗೆ ತರುವಲ್ಲಿ ಪ್ರಯತ್ನಿಸಿದ್ದಲ್ಲದೆ ಪ್ರೌಢಶಾಲೆಯನ್ನು ಕಟ್ಟಿ ಬೆಳೆಸುವಲ್ಲಿ ಅವಿರಥ ಶ್ರಮ ಹಾಕಿದ್ದರು. ಬೈಂದೂರು ಹಾಗೂ ಮರವಂತೆಯಲ್ಲಿ ಜರುಗಿದ ಕನ್ನಡ ಸಾಹಿತ್ಯ ಸಮ್ಮೇಳನದ ಯಶಸ್ಸಿಗೆ ಪ್ರಮುಖ ಪಾತ್ರ ವಹಿಸಿದ್ದರು. ಮೃತರು ಇಬ್ಬರು ಪುತ್ರರನ್ನು ಅಗಲಿದ್ದಾರೆ.
.



