ವರದಿ : ಚಿತ್ತೂರು ಪ್ರಭಾಕರ ಆಚಾರ್ಯ
ಉಡುಪಿಮಿತ್ರ ಪತ್ರಿಕೆ ಸುದ್ಧಿ :
ಬ್ರಹ್ಮಾವರ, ಮೇ 15: ಇಂದಿನ ತಂತ್ರಜ್ಞಾನ ಯುಗದಲ್ಲಿ ವಿದ್ಯಾರ್ಥಿಗಳಿಗೆ ಅಗತ್ಯವಿರುವ ನವೀನ ಕೌಶಲ್ಯಗಳು, ಉನ್ನತ ಶಿಕ್ಷಣದ ಬದಲಾವಣೆಗಳು ಹಾಗೂ ಕೃತಕ ಬುದ್ದಿಮತ್ತೆಯ ಪರಿಣಾಮಗಳ ಬಗ್ಗೆ ಎಲ್ಲಾ ಕಾಲೇಜಿನಲ್ಲಿ ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಬೇಕೆಂದು ಮಾಜಿ ಸಚಿವ ಕೆ. ಜಯಪ್ರಕಾಶ್ ಹೆಗ್ಡೆ ನುಡಿದರು. ಅವರು ಬ್ರಹ್ಮಾವರ ಕ್ರಾಸ್‌ಲ್ಯಾಂಡ್ ಕಾಲೇಜಿನಲ್ಲಿ ನಡೆದ ಕೃತಕ ಬುದ್ದಿಮತ್ತೆಯ ಯುಗದಲ್ಲಿ ಭವಿಷ್ಯೋನ್ಮುಖ ಕೌಶಲ್ಯಗಳನ್ನು ಬೆಳೆಸುವ ಉನ್ನತ ಶಿಕ್ಷಣದ ಪುನರ್‌ಕಲ್ಪನೆ ಎಂಬ ವಿಷಯದ ಮೇಲಿನ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.

ಸಮ್ಮೇಳನದ ಅಧ್ಯಕ್ಷತೆಯನ್ನು ಡಾ| ರಾಬರ್ಟ್ ಕ್ಲೇವ್ ಜಿ. ವಹಿಸಿದ್ದರು.
ಮುಖ್ಯ ಅತಿಥಿಗಳಾದ ಬ್ರಹ್ಮಾವರ ಲಿಟ್ಲ್‌ರ‍್ಯಾಕ್ ಇಂಡಿಯನ್ ಸ್ಕೂಲಿನ ನಿರ್ದೇಶಕ ಮ್ಯಾಥ್ಯೂ ಸಿ.ನೈನಾನ್ ಮಾತನಾಡಿ ವಿದ್ಯಾರ್ಥಿಗಳು ಕೇವಲ ಪಾಠಪುಸ್ತಕಗಳ ಜ್ಞಾನಕ್ಕೆ ಸೀಮಿತವಾಗದೆ ತಾಂತ್ರಿಕ ಹಾಗೂ ಸೃಜನಾತ್ಮಕ ಕೌಶಲ್ಯಗಳನ್ನು ಬೆಳೆಸಿಕೊಳ್ಳಬೇಕು ಎಂದರು.
ಪ್ರಾಂಶುಪಾಲ ಬಿಜು ಜಾಕೊಬ್, ಕಾಲೇಜಿನ ಸಂಚಾಲಕ ಲಾಲಿ ಎ ಮ್ಯಾಥ್ಯೂ, ಸಮ್ಮೇಳನದ ಸಂಚಾಲಕರಾದ ಶ್ರೀಮತಿ ದೀಪಾ ರಾವ್ ಮತ್ತು ಶ್ರೀಮತಿ ಮೈಥಿಲಿ ಉಪಸ್ಥಿತರಿದ್ದರು. ಈ ಸಂದರ್ಭ ಮಾಜಿ ಸಚಿವ ಜಯಪ್ರಕಾಶ್ ಹೆಗ್ಡೆಯವರನ್ನು ಸನ್ಮಾನಿಸಲಾಯಿತು.

ಡಾ| ರಾಬರ್ಟ್ ಕ್ಲೇವ್ ಜಿ. ಸ್ವಾಗತಿಸಿದ್ದು ಶ್ರೀಮತಿ ಮೈಥಿಲಿ ಬಿ. ವಂದಿಸಿದರು. ವಿದ್ಯಾರ್ಥಿನಿ ಬನೀಸ್ ನಿರೂಪಿಸಿದರು.
ಸಮ್ಮೇಳನದಲ್ಲಿ ವಿವಿಧ ಕಾಲೇಜುಗಳ ಅಧ್ಯಾಪಕರು, ಸಂಶೋಧಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದು ಸಂಪನ್ಮೂಲ ವ್ಯಕ್ತಿಗಳು ಎಐ, ಡಿಜಿಟಲ್ ಶಿಕ್ಷಣ, ಸಂಶೋಧನಾ ಕೌಶಲ್ಯ, ಸಂವಹನ ಸಾಮರ್ಥ್ಯ ಮತ್ತು ಉದ್ಯೋಗಾವಕಾಶಗಳ ಕುರಿತು ಮಾಹಿತಿ ನೀಡಿದರು. ನಂತರ ಉನ್ನತ ಶಿಕ್ಷಣದಲ್ಲಿ ತಂತ್ರಜ್ಞಾನದ ಬಳಕೆ, ಆನ್‌ಲೈನ್ ಕಲಿಕೆ, ನವೀನ ಬೋಧನಾ ವಿಧಾನಗಳು ಮತ್ತು ಭವಿಷ್ಯದ ಉದ್ಯೋಗ ಕ್ಷೇತ್ರಗಳ ಕುರಿತು ಚರ್ಚೆ ನಡೆದವು.



