udupimitra.in
  • July 28, 2026
  • Last Update July 28, 2026 5:48 pm
  • Brahmavara

ಬಾರಕೂರು ಭಂಡಾರಕೇರಿ ಮಠದ ಶ್ರೀ ಶ್ರೀ ವಿದ್ಯೇಶ ತೀರ್ಥ ಶ್ರೀ ಪಾದಂಗಳವರ 47ನೇ ಚಾತುರ್ಮಾಸ್ಯ , ಪುರಪ್ರವೇಶ

ಬಾರಕೂರು ಭಂಡಾರಕೇರಿ ಮಠದ ಶ್ರೀ ಶ್ರೀ ವಿದ್ಯೇಶ ತೀರ್ಥ ಶ್ರೀ ಪಾದಂಗಳವರ 47ನೇ ಚಾತುರ್ಮಾಸ್ಯ , ಪುರಪ್ರವೇಶ

ವರದಿ : ಚಿತ್ತೂರು ಪ್ರಭಾಕರ ಆಚಾರ್ಯ
ಉಡುಪಿಮಿತ್ರ ಪತ್ರಿಕೆ ಸುದ್ಧಿ :

ಬಾರಕೂರು, ಜು.28: ಶ್ರಾವಣದಿಂದ ಕಾರ್ತಿಕ ಮಾಸದವರೆಗಿನ ನಾಲ್ಕು ತಿಂಗಳ ಕಾಲ ಭಗವಂತ ಯೋಗ ನಿದ್ದೆಯಲ್ಲಿದ್ದು ಈ ನಾಲ್ಕು ತಿಂಗಳು ಭಗವಂತನಿಗೆ ಅತ್ಯಂತ ಪ್ರಿಯವಾದ ಮಾಸಗಳು. ಭಗವಂತ ಯೋಗ ನಿದ್ದೆಯಲ್ಲಿರುವ ಈ ಪುಣ್ಯಕಾಲದಲ್ಲಿ ಜಗತ್ತಿಗೆ ಒಳಿತಾಗಲಿದೆ. ಈ ನಾಲ್ಕು ತಿಂಗಳ ಕಾಲ ಭಾಗವತ ಶ್ರವಣ, ಭಜನೆ, ದಾನ, ವ್ರತ, ಯಜ್ಞ ಮಾಡುವುದರಿಂದ ಅನಂತ ಪುಣ್ಯ ಜನರಿಗೆ ಲಭಿಸಲಿದೆ. ಸರ್ವರೂ ಭಗವಂತನ ಸ್ಮರಣೆಯನ್ನು ಮಾಡಿದಾಗ ಮಳೆ ಬೆಳೆಯೊಂದಿಗೆ ಲೋಕಕ್ಕೆ ಒಳಿತಾಗಲಿದೆ. ಹಾಗಂತ ಈ ನಾಲ್ಕು ತಿಂಗಳಲ್ಲಿ ಮದುವೆ, ಉಪನಯನ, ಗೃಹಪ್ರವೇಶ ಕಾರ್ಯಕ್ರಮಗಳು ಮಾಡುವುದು ಒಳಿತಲ್ಲ. ಕಾರಣ ಭಗವಂತನ ದೃಷ್ಟಿ ಇರಲ್ಲ. ಈ ೪ ಮಾಸಗಳಲ್ಲಿ ಸನ್ಯಾಸಿಗಳು ಸಂಚಾರ ಮಾಡದೆ ಒಂದೆಡೆ ಕುಳಿತು ಕಠಿಣ ಪಾರಮಾರ್ಥಿಕ ಚಿಂತನೆ, ಕಠಿಣ ಅಧ್ಯಯನ ಮತ್ತು ಅನುಷ್ಠಾನದಲ್ಲಿ ತೊಡಗುತ್ತಾರೆ. ಈ ತಪೋ ಬಲದಿಂದಲೇ ತಮ್ಮ ಶಿಷ್ಯರನ್ನು ಹಾಗೂ ಲೋಕವನ್ನು ಅನುಗ್ರಹಿಸಲಿದ್ದಾರೆ ಎಂದು ಬಾರಕೂರು ಭಂಡಾರಕೇರಿ ಮಠದ ಶ್ರೀ ಶ್ರೀ ವಿದ್ಯೇಶ ತೀರ್ಥ ಶ್ರೀ ಪಾದಂಗಳವರು ತಮ್ಮ ಆಶೀರ್ವಚನದಲ್ಲಿ ನುಡಿದರು.

ಅವರು ಬಾರಕೂರು ಶ್ರೀ ಪಟ್ಟಾಭಿರಾಮ ದೇವಸ್ಥಾನದಲ್ಲಿ ನಡೆದ ಅವರ 47ನೇ ಚಾತುರ್ಮಾಸ್ಯ ವ್ರತ ಪುರಪ್ರವೇಶ ಮತ್ತು ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.
ಬಾರಕೂರು ದೇವರ ಊರು. ಅಂತಹ ಊರಿನಲ್ಲಿರುವ ಭಂಡಾರಕೇರಿ ಮಠದಲ್ಲಿ ಈ ಬಾರಿ ನಡೆಯುವ ಚಾತುರ್ಮಾಸ್ಯದಲ್ಲಿ ಪ್ರತಿ ದಿನ ಸಂಜೆ ಪ್ರವಚನ ನಡೆಯಲಿದೆ. ಭಾಗವತ ಶ್ರವಣ ಕೂಡ ದೊಡ್ಡ ಯಜ್ಞ. ಎಲ್ಲರೂ ಸೇರಿದರೆ ಅದು ಯಶಸ್ಸು ಕಾಣಲಿದೆ. ಆದ್ದರಿಂದ ಪ್ರತೀ ದಿನ ಬಾರಕೂರು ಬಸ್‌ನಿಲ್ದಾಣದಿಂದ ಸಂಜೆ ಮಠಕ್ಕೆ ಬರುವವರಿಗೆ ವಾಹನದ ವ್ಯವಸ್ಥೆ ಮಾಡಿದ್ದು ಪ್ರವಚನದ ನಂತರ ಪುನಃ ಬಸ್‌ನಿಲ್ದಾಣಕ್ಕೆ ಬಿಡಲಾಗುವುದು ಎಂದರು.


ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಕಿರಣ್ ಕುಮಾರ್ ಕೊಡ್ಗಿಯವರು ಸಭಾಧ್ಯಕ್ಷತೆ ವಹಿಸಿಕೊಂಡು ಶ್ರೀಗಳ ಚಾತುರ್ಮಾಸ್ಯ ಕಾರ್ಯಕ್ರಮದಿಂದ ಊರಿಗೆ ಒಳಿತಾಗಲಿ ಎಂದು ಶುಭ ಹಾರೈಸಿದರು.
ಪುರಪ್ರವೇಶ ಸಮಿತಿಯ ಗೌರವಾಧ್ಯಕ್ಷ , ಕುಂಭಾಶಿ ಆನೆಗುಡ್ಡೆ ದೇವಸ್ಥಾನದ ಕೆ. ಶ್ರೀರಮಣ ಉಪಾಧ್ಯಾಯ ಮಾತನಾಡಿ ಯತಿಶ್ರೇಷ್ಟರಿಗೆ ಚಾತುರ್ಮಾಸ್ಯ ಎಂದರೆ ಕಠಿಣ ಆಧ್ಯಾತ್ಮಿಕ ಹಾಗೂ ಪಾರಮಾರ್ಥಿಕ ಅಧ್ಯಯನ ನಡೆಸಿ ಶಿಷ್ಯಕೋಟಿಗೆ ಧಾರೆಯೆರೆಯುವುದೇ ಚಾತುರ್ಮಾಸ್ಯ ವ್ರತ ಎಂದರು.


ಪಂಚಲೀಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಸುಗ್ಗಿ ಸುಧಾಕರ ಶೆಟ್ಟಿ ಮಾತನಾಡಿ ಯುವ ಪೀಳಿಗೆಗೆ ವಿದ್ಯಾಭ್ಯಾಸದ ಜೊತೆಯಲ್ಲಿ ಸಂಸ್ಕಾರ, ಸಂಸ್ಕೃತಿಯ ಅರಿವು ದೊರಕಬೇಕಾದಲ್ಲಿ ಗುರುಗಳ ಇಂತಹ ಕಾರ್ಯಕ್ರಮದಲ್ಲಿ ಯುವ ಜನತೆ ಭಾಗವಹಿಸಬೇಕು. ಪಂಚಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರದೊಂದಿಗೆ ಬಾರಕೂರಿನ ಸಮಗ್ರ ಅಭಿವೃದ್ಧಿಗೆ ಸರ್ವರೂ ಕೈಜೋಡಿಸಬೇಕು ಎಂದರು.

ಮುಖ್ಯ ಅತಿಥಿಗಳಾಗಿ ಪಂಚಲಿಂಗೇಶ್ವರ ದೇವಸ್ಥಾನದ ನಿಕಟಪೂರ್ವ ಮೊಕ್ತೇಸರ ಮಂಜುನಾಥರಾವ್, ಪಟ್ಟಭಿರಾಮ ದೇವಸ್ಥಾನದ ಆಡಳಿತ ಮೊಕ್ತೇಸರ ಸುರೇಶ್ ಪೈ,
ಕಲ್ಕೂರ ಪ್ರತಿಷ್ಠಾನದ ಪ್ರದೀಪ್ ಕುಮಾರ್ ಕಲ್ಕೂರ, ಕರ್ನಾಟಕ ಬ್ಯಾಂಕ್ ಎ ಜಿ ಎಮ್ ರಮೇಶ್ ವೈದ್ಯ, ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಬಾರಕೂರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಬಾರಕೂರು ಶಾಂತಾರಾಮ ಶೆಟ್ಟಿಯವರು ಭಂಡಾರಕೇರಿ ಮಠ ಜಗತ್ಪ್ರಸಿದ್ಧವಾಗಿದ್ದು ಆ ಮಠ ಬಾರಕೂರಿನಲ್ಲಿದೆ ಎಂಬುದು ಹೆಮ್ಮೆಯ ಸಂಗತಿ ಎಂದು ನುಡಿದು ಸರ್ವರನ್ನು ಸ್ವಾಗತಿಸಿದರು.


ಸಭೆಯಲ್ಲಿ ಭಾಗವತ ಬಿಂದುಸರ ಕೃತಿಯನ್ನು ಶ್ರೀಗಳವರು ಬಿಡುಗಡೆ ಮಾಡಿದರು. ವಿಜಯ ಕಡೇಕಾರ್ ಪ್ರಾರ್ಥಿಸಿದರು. ಡಾ.ಶ್ರೀನಿಧಿ ವಸಿಷ್ಟ ಪ್ರಾಸ್ತಾವಿಕ ಮಾತುಗಳನ್ನಾಡಿದರು. ವೆಂಕಟರಮಣ ಭಂಡಾರ್ಕರ್ ವಂದಿಸಿದರು. ಜಯರಾಮ ಆಚಾರ್ಯ ನಿರೂಪಿಸಿದರು. ಸಮಿತಿಯ ಪದಾಧಿಕಾರಿಗಳಾದ ಯು.ಬಿ.ಶ್ರೀನಿವಾಸ, ವಿಷ್ಣುಪ್ರಸಾದ್ ಪಾಡಿಗಾರ್, ನಾಗರಾಜ ಕೆದ್ಲಾಯ, ರಾಜೇಶ್ ಉಪಾಧ್ಯ, ಚಂದ್ರಶೇಖರ ಹಾಗೂ ಪುರಪ್ರವೇಶ ಸಮಿತಿ ಕಾರ್ಯದರ್ಶಿ ಪ್ರಸನ್ನ ಅಡಿಗ ಸಹಕರಿಸಿದರು.


ಸಭಾ ಕಾರ್ಯಕ್ರಮದ ಮೊದಲು ಸ್ವಾಮೀಜಿಯವರು ಬಟ್ಟೆ ವಿನಾಯಕ ದೇವಸ್ಥಾನ ಮತ್ತು ಪಂಚಲಿಂಗೇಶ್ವರ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದರು. ನಂತರ ಪಂಚಲಿಂಗೇಶ್ವರ ದೇವಸ್ಥಾನದಿಂದ ಶ್ರೀ ರಾಮ ಪಟ್ಟಾಭಿರಾಮಚಂದ್ರ ದೇವಸ್ಥಾನದವರೆಗೆ ಭವ್ಯ ಪುರಪ್ರವೇಶ ಮೆರವಣಿಗೆ ನಡೆದಿದ್ದು ಶಾಸಕ ಕಿರಣ್ ಕುಮಾರ್ ಕೊಡ್ಗಿ ಚಾಲನೆ ನೀಡಿದರು. ಮೆರವಣಿಗೆಯಲ್ಲಿ ಭಜನಾ ತಂಡಗಳು, ವಾದ್ಯ, ವೇದಘೋಷಗಳು ಗಮನಸೆಳೆದವು.

administrator

Related Articles

Leave a Reply

Your email address will not be published. Required fields are marked *

You cannot copy content of this page