udupimitra.in
  • July 6, 2026
  • Last Update July 6, 2026 5:55 pm
  • Brahmavara

ವಿದ್ಯಾರಣ್ಯ ಆವರಣದಲ್ಲಿ ಕುಂದಾಪ್ರ ಕನ್ನಡ ‘ವಾಲ್ಬೆಲ್ಲ’ ಉದ್ಘಾಟನೆ ; ಮನೆಯಲ್ಲಿ ಕುಂದಾಪ್ರ ಕನ್ನಡ ಮಾತನಾಡುವಂತೆ ಕರೆ

ವಿದ್ಯಾರಣ್ಯ ಆವರಣದಲ್ಲಿ ಕುಂದಾಪ್ರ ಕನ್ನಡ ‘ವಾಲ್ಬೆಲ್ಲ’ ಉದ್ಘಾಟನೆ ; ಮನೆಯಲ್ಲಿ ಕುಂದಾಪ್ರ ಕನ್ನಡ ಮಾತನಾಡುವಂತೆ ಕರೆ

ಉಡುಪಿಮಿತ್ರ ಪತ್ರಿಕೆ ಸುದ್ಧಿ :
ವರದಿ : ಚಿತ್ತೂರು ಪ್ರಭಾಕರ ಆಚಾರ್ಯ
ಕುಂದಾಪುg ಜು.೬: ಕುಂದಾಪ್ರ ಕನ್ನಡ ಭಾಷೆಯ ಉಳಿವು ಮತ್ತು ಬೆಳವಣಿಗೆಗಾಗಿ ಪ್ರತಿಯೊಬ್ಬರೂ ತಮ್ಮ ಮನೆಯಲ್ಲಿ ಕುಂದಾಪ್ರ ಕನ್ನಡದಲ್ಲೇ ಮಾತನಾಡಬೇಕು. ಬೇರೆ ಊರಿಗೆ ಹೋಗಿ ಮುಂದಿನ ಪೀಳಿಗೆಗೆ ಈ ಭಾಷೆಯನ್ನು ಪರಿಚಯಿಸಿ ಉಳಿಸುವ ಜವಾಬ್ದಾರಿ ಎಲ್ಲರದ್ದಾಗಿದೆ ಎಂದು ವಿವಿಧ ಗಣ್ಯರು ಅಭಿಪ್ರಾಯಪಟ್ಟರು.

ಯಡಾಡಿ?ಮತ್ಯಾಡಿಯ ಸುಜ್ಞಾನ ಪದವಿಪೂರ್ವ ಕಾಲೇಜು ಹಾಗೂ ಕುಂದಾಪ್ರ ಕನ್ನಡ ಅಧ್ಯಯನ ಪೀಠದ ಜಂಟಿ ಆಶ್ರಯದಲ್ಲಿ ವಿದ್ಯಾರಣ್ಯ ಶಾಲಾ ಆವರಣದಲ್ಲಿ ಕುಂದಾಪ್ರ ಕನ್ನಡ ಭಾಷಿಕ ಪ್ರದೇಶದ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ಸಾಂಸ್ಕೃತಿಕ ಹಾಗೂ ಚಿತ್ರಕಲಾ ಸ್ಪರ್ಧೆಗಳ ಉದ್ಘಾಟನಾ ಸಮಾರಂಭದಲ್ಲಿ ಈ ಅಭಿಪ್ರಾಯ ವ್ಯಕ್ತವಾಯಿತು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಕುಂದಾಪ್ರ ಕನ್ನಡ ಅಧ್ಯಯನ ಪೀಠದ ಸದಸ್ಯ ಹಾಗೂ ಮಾಜಿ ಸಚಿವ ಕೆ. ಜಯಪ್ರಕಾಶ್ ಹೆಗ್ಡೆ ಮಾತನಾಡಿ, ಸರ್ಕಾರವು ಕುಂದಾಪ್ರ ಕನ್ನಡ ಅಧ್ಯಯನ ಪೀಠಕ್ಕೆ ರೂ ೫೦ ಲಕ್ಷ ಅನುದಾನ ಬಿಡುಗಡೆ ಮಾಡಿದೆ. ಅಧ್ಯಯನ ಪೀಠಕ್ಕೆ ೧೧ ಮಂದಿ ಖಾಯಂ ಆಹ್ವಾನಿತರನ್ನು ಆಯ್ಕೆ ಮಾಡಲಾಗಿದ್ದು, ಅವರ ಸಲಹೆಗಳನ್ನು ಸ್ವೀಕರಿಸಿ ಭಾಷೆಯ ಅಭಿವೃದ್ಧಿಗೆ ಯೋಜಿತ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗುವುದು ಎಂದರು.

ಚಿತ್ರನಟಿ ಅಶ್ವಿನಿ ಗೌಡ ಮಾತನಾಡಿ, ಜೀವನದಲ್ಲಿ ದೊಡ್ಡ ಗುರಿ ಇರಬೇಕು. ಬದುಕಿನಲ್ಲಿ ಮದುವೆ ಮತ್ತು ಸಂಸಾರದ ಬಗ್ಗೆ ಮಾತ್ರ ಯೋಚನೆ ಮಾಡುವುದಲ್ಲ. ಸಮಾಜಮುಖಿ ಸಾಧನೆಯೂ ಇರಬೇಕು. ವಯಸ್ಸು ಕೇವಲ ಒಂದು ಸಂಖ್ಯೆಯಾಗಿದ್ದು, ಸಾಧನೆಗೆ ಅದು ಅಡ್ಡಿಯಾಗಬಾರದು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಸುಜ್ಞಾನ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ಡಾ. ರಮೇಶ್ ಶೆಟ್ಟಿ ಮಾತನಾಡಿ, ಕುಂದಾಪ್ರ ಕನ್ನಡ ಉಳಿಸುವ ನಿಟ್ಟಿನಲ್ಲಿ ಅಧ್ಯಯನ ಪೀಠ ಉತ್ತಮ ಕಾರ್ಯ ಮಾಡುತ್ತಿದೆ. ಪ್ರತಿ ೨೦-೩೦ ಕಿ.ಮೀ. ಅಂತರದಲ್ಲಿ ಭಾಷೆಯಲ್ಲಿ ವ್ಯತ್ಯಾಸ ಕಂಡರೂ ಕುಂದಾಪ್ರ ಕನ್ನಡದ ವ್ಯಾಪ್ತಿ ಬಹಳ ದೊಡ್ಡದಾಗಿದೆ. ನಮ್ಮ ಶಿಕ್ಷಣ ಸಂಸ್ಥೆಯೂ ಸ್ಥಳೀಯ ಸಂಸ್ಕೃತಿ ಮತ್ತು ಭಾಷೆಯನ್ನು ವಿದ್ಯಾರ್ಥಿಗಳಿಗೆ ಪರಿಚಯಿಸುವ ಕಾರ್ಯ ಮಾಡುತ್ತಿದೆ ಎಂದರು.

ಉದ್ಯಮಿ ದಿನೇಶ್ ಹೆಗ್ಡೆ ಮಾತನಾಡಿ, ಮಕ್ಕಳು ಇಂಗ್ಲಿಷ್ ಮಾಧ್ಯಮದಲ್ಲಿ ಓದುತ್ತಾರೆ ಎಂಬ ಕಾರಣಕ್ಕೆ ಮನೆಯಲ್ಲಿ ಶುದ್ಧ ಕನ್ನಡ ಅಥವಾ ಬೇರೆ ಭಾಷೆಯಲ್ಲಿ ಮಾತನಾಡುವುದು ಸರಿಯಲ್ಲ. ಮನೆಯಲ್ಲಿ ಕುಂದಾಪ್ರ ಕನ್ನಡ ಮಾತನಾಡಿದರೆ ಮಾತ್ರ ಭಾಷೆ ಉಳಿಯುತ್ತದೆ. ಈ ಜವಾಬ್ದಾರಿ ಪ್ರತಿಯೊಬ್ಬರದ್ದಾಗಿದೆ ಎಂದು ಹೇಳಿದರು.

ಸನ್ಮಾನ ಸ್ವೀಕರಿಸಿದ ಮಂಗಳೂರು ವಿಶ್ವವಿದ್ಯಾನಿಲಯದ ನಿವೃತ್ತ ಕುಲಪತಿ ರಾಜು ಮೊಗವೀರ ಮಾತನಾಡಿ, ಕುಂದಾಪ್ರ ಕನ್ನಡ ವಿಭಿನ್ನತೆಯನ್ನು ಅಧ್ಯಯನ ಮಾಡಲು ಈ ಅಧ್ಯಯನ ಪೀಠ ಸ್ಥಾಪಿಸಲಾಗಿದೆ. ಪುಸ್ತಕದ ಕನ್ನಡವೇ ಶುದ್ಧ ಕನ್ನಡ ಎಂಬ ಕಲ್ಪನೆ ಸರಿಯಲ್ಲ. ಪ್ರಾದೇಶಿಕವಾಗಿ ಕನ್ನಡ ಹಲವು ರೂಪಗಳಲ್ಲಿ ಬಳಕೆಯಲ್ಲಿದೆ. ಭಾಷೆ ಎನ್ನುವುದು ಬದುಕಿನ ಪ್ರತಿಬಿಂಬವಾಗಿದ್ದು, ನಮ್ಮ ಭಾಷೆಯ ಬಗ್ಗೆ ಹೆಮ್ಮೆ ಇರಬೇಕು. ಇಂದಿನ ಕಾಲದಲ್ಲಿ ಅನೇಕ ಸ್ಥಳೀಯ ಪದಗಳು ಬಳಕೆಯಿಂದ ಮರೆಯಾಗುತ್ತಿರುವುದು ಆತಂಕಕಾರಿ ಎಂದರು.

ಅಧ್ಯಯನ ಪೀಠದ ಸಂಯೋಜಕ ಪ್ರೊ. ನಾಗಪ್ಪಗೌಡ ಆರ್. ಮಾತನಾಡಿ, ಕುಂದಾಪ್ರ ಕನ್ನಡ ಅಧ್ಯಯನ ಪೀಠ ಸ್ಥಾಪನೆಗಾಗಿ ಹಲವು ವರ್ಷಗಳಿಂದ ಸರ್ಕಾರದೊಂದಿಗೆ ಪತ್ರ ವ್ಯವಹಾರ ನಡೆದಿತ್ತು. ಜಯಪ್ರಕಾಶ್ ಹೆಗ್ಡೆಯವರ ಪ್ರಯತ್ನದಿಂದ ಅದು ಸಾಧ್ಯವಾಗಿದೆ. ಪೀಠದ ಸಲಹಾ ಸಮಿತಿಗೆ ಅನುಭವಿ ಸದಸ್ಯರನ್ನು ಸೇರಿಸಲಾಗಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ನಿವೃತ್ತ ಕುಲಪತಿ ರಾಜು ಮೊಗವೀರ ಹಾಗೂ ಕುಂದಾಪ್ರ ಕನ್ನಡ ಅಧ್ಯಯನ ಪೀಠದ ಸಂಯೋಜಕ ಪ್ರೊ. ನಾಗಪ್ಪಗೌಡ ಆರ್. ಅವರನ್ನು ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಪಿಡಬ್ಲ್ಯುಡಿ ಗುತ್ತಿಗೆದಾರ ಅರುಣ್ ಕುಮಾರ್ ಹೆಗ್ಡೆ, ವಂಡ್ಸೆ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಸಬ್ಲಾಡಿ ಮಂಜಯ್ಯ ಶೆಟ್ಟಿ, ಕುಂದಾಪುರ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ವಿಕಾಸ್ ಹೆಗ್ಡೆ, ಮೊಳಹಳ್ಳಿ ವ್ಯವಸಾಯ ಸೇವಾ ಸಹಕಾರಿ ಸಂಘದ ಉಪಾಧ್ಯಕ್ಷ ಚಿಟ್ಟೆಬೈಲು ಜಗನ್ನಾಥ ಶೆಟ್ಟಿ, ಕುಂದಾಪ್ರ ಕನ್ನಡ ಅಧ್ಯಯನ ಪೀಠದ ಸದಸ್ಯರಾದ ಪತ್ರಕರ್ತ ಕೆ.ಸಿ. ರಾಜೇಶ್, ಪಡುಕೆರೆ ಉದಯಕುಮಾರ್ ಶೆಟ್ಟಿ, ಜುಡಿತ್ ಮೆಂಡೋನ್ಸಾ, ಡಾ. ರೇಖಾ ಬನ್ನಾಡಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಸ್ಪರ್ಧೆಗಳ ತೀರ್ಪುಗಾರರಾದ ರಾಮ್ ಶೆಟ್ಟಿ ಹಾರಾಡಿ, ಮನು ಹಂದಾಡಿ, ನಾಗರತ್ನ ಹೇರ್ಳೆ, ಡಾ. ಚೇತನ್ ಶೆಟ್ಟಿ ಬನ್ನಾಡಿ, ಜಯಪ್ರಸಾದ್ ಆಚಾರ್ಯ, ರೂಪಾ ವಸುಂದರ ಆಚಾರ್ಯ, ಪೂರ್ಣ ಜಿ. ಬಸ್ರೂರು, ವಿಜೇತ ಗಂಗೊಳ್ಳಿ ಹಾಗೂ ಅಶ್ವಿನಿ ಬನ್ನಾಡಿ ಅವರಿಗೆ ಸ್ಪರ್ಧಾ ಸಾಮಗ್ರಿಗಳನ್ನು ವಿತರಿಸಲಾಯಿತು.

ಸುಜ್ಞಾನ ಎಜುಕೇಶನ್ ಟ್ರಸ್ಟ್‌ನ ಖಜಾಂಚಿ ಭರತ್ ಕುಮಾರ್ ಶೆಟ್ಟಿ ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿದರು.
ಪ್ರೀತಿ ಹಾಗೂ ರಜತ್ ಶೆಟ್ಟಿ ಸನ್ಮಾನ ಪತ್ರ ವಾಚಿಸಿದರು. ಪ್ರಾಂಶುಪಾಲ ರಂಜನ್ ಶೆಟ್ಟಿ ವಂದಿಸಿದರು. ಪ್ರಕಾಶ್ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.

administrator

Related Articles

Leave a Reply

Your email address will not be published. Required fields are marked *

You cannot copy content of this page