udupimitra.in
  • July 6, 2026
  • Last Update July 6, 2026 5:55 pm
  • Brahmavara

ವಿದ್ಯಾರ್ಥಿಗಳು ಮಾದಕ ವ್ಯಸನ, ಹಾಗೂ ಬೆಟ್ಟಿಂಗ್‌ನಿಂದ ದೂರವಿರಬೇಕು -ಜಯಪ್ರಕಾಶ್ ಹೆಗ್ಡೆ

ವಿದ್ಯಾರ್ಥಿಗಳು ಮಾದಕ ವ್ಯಸನ, ಹಾಗೂ ಬೆಟ್ಟಿಂಗ್‌ನಿಂದ ದೂರವಿರಬೇಕು -ಜಯಪ್ರಕಾಶ್ ಹೆಗ್ಡೆ

ಉಡುಪಿಮಿತ್ರ ಪತ್ರಿಕೆ ಸುದ್ಧಿ :
ವರದಿ : ಚಿತ್ತೂರು ಪ್ರಭಾಕರ ಆಚಾರ್ಯ

ಕುಂದಾಪುರ, ಜು.೬:
ವಿದ್ಯಾರ್ಥಿಗಳು ತಮ್ಮ ಭವಿಷ್ಯವನ್ನು ತಾವೇ ರೂಪಿಸಿಕೊಳ್ಳಬೇಕು. ಮಾದಕ ವ್ಯಸನ ಹಾಗೂ ಬೆಟ್ಟಿಂಗ್‌ನಂತಹ ದುಶ್ಚಟಗಳಿಂದ ದೂರವಿರಬೇಕು. ಬೆಟ್ಟಿಂಗ್ ನಡೆಸುವವರಿಗೆ ನಷ್ಟವಾಗುವುದಿಲ್ಲ, ನಷ್ಟವಾಗುವುದೇ ಹೌದಾದಲ್ಲಿ ಅವರು ಬೆಟ್ಟಿಂಗ್ ಆರಂಭಿಸಲ್ಲ. ಪಾಲ್ಗೊಳ್ಳುವವರೇ ನಷ್ಟ ಅನುಭವಿಸುತ್ತಾರೆ ಎಂಬ ಸತ್ಯವನ್ನು ವಿದ್ಯಾರ್ಥಿಗಳು ತಿಳಿದುಕೊಳ್ಳಬೇಕು. ಮಕ್ಕಳು ತಂದೆ-ತಾಯಿಯನ್ನು ಗೌರವಿಸಬೇಕು, ಅವರನ್ನು ವೃದ್ಧಾಶ್ರಮಕ್ಕೆ ಸೇರಿಸುವಂತಹ ಮನೋಭಾವ ಬೆಳೆಸಿಕೊಳ್ಳಬಾರದು ಎಂದು ಕುಂದಾಪ್ರ ಕನ್ನಡ ಅಧ್ಯಯನ ಪೀಠದ ಸದಸ್ಯ ಹಾಗೂ ಮಾಜಿ ಸಚಿವ ಕೆ. ಜಯಪ್ರಕಾಶ್ ಹೆಗ್ಡೆ ಹೇಳಿದರು.
ಅವರು ಯಡಾಡಿ ಮತ್ಯಾಡಿಯ ಸುಜ್ಞಾನ ಪದವಿಪೂರ್ವ ಕಾಲೇಜು ಹಾಗೂ ಕುಂದಾಪ್ರ ಕನ್ನಡ ಅಧ್ಯಯನ ಪೀಠದ ಜಂಟಿ ಆಶ್ರಯದಲ್ಲಿ ವಿದ್ಯಾರಣ್ಯ ಶಾಲಾ ಆವರಣದಲ್ಲಿ ಕುಂದಾಪ್ರ ಕನ್ನಡ ಭಾಷಿಕ ಪ್ರದೇಶದ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ಸಾಂಸ್ಕೃತಿಕ ಹಾಗೂ ಚಿತ್ರಕಲಾ ಸ್ಪರ್ಧೆಗಳ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸುಜ್ಞಾನ ಎಜುಕೇಶನಲ್ ಟ್ರಸ್ಟ್ ಅಧ್ಯಕ್ಷ ಡಾ. ರಮೇಶ್ ಶೆಟ್ಟಿ ವಹಿಸಿ ಮಾತನಾಡಿ, ಸುಜ್ಞಾನ ಸಂಸ್ಥೆಯಲ್ಲಿ ಕಾರ್ಯಕ್ರಮ ಆಯೋಜಿಸಿದ್ದಕ್ಕಾಗಿ ಕೃತಜ್ಞತೆ ಸಲ್ಲಿಸಿದರು.

ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಂ ಶಂಕರ್ ಬಹುಮಾನ ವಿತರಿಸಿ ಮಾತನಾಡಿ, “ನನ್ನ ಮೂಲ ಊರು ಕೇರಳದ ತ್ರಿಶೂರ್ ಆದರೂ ಕುಂದಾಪುರದ ಜನರು ನನ್ನನ್ನು ತಮ್ಮವನಾಗಿ ಸ್ವೀಕರಿಸಿದ್ದಾರೆ. ಕೋವಿಡ್ ಸಂದರ್ಭದಲ್ಲಿ ಇಲ್ಲಿ ಸೇವೆ ಸಲ್ಲಿಸಿದ್ದಾಗ ಜನರ ಹೃದಯವಂತಿಕೆಯನ್ನು ಕಂಡಿದ್ದೇನೆ. ಕುಂದಾಪುರಕ್ಕೆ ಬರುವುದು ಸದಾ ಸಂತೋಷದ ವಿಚಾರ. ಪ್ರತಿಯೊಬ್ಬರೂ ತಮ್ಮ ಊರು ಮತ್ತು ಭಾಷೆಯ ಬಗ್ಗೆ ಹೆಮ್ಮೆ ಹೊಂದಬೇಕು ಎಂದು ಹೇಳಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಸಹಾಯಕ ಆಯುಕ್ತೆ ರಶ್ಮಿ ಎಸ್.ಆರ್. ಮಾತನಾಡಿ, ಕುಂದಾಪ್ರ ಕನ್ನಡದ ಸೊಗಸನ್ನು ಶ್ಲಾಘಿಸಿದರು. “ಕುಂದಾಪುರಕ್ಕೆ ಬರುವಾಗ ಕುಂದಾಪ್ರ ಕನ್ನಡ ಗೊತ್ತಿರಲಿಲ್ಲ. ಹಿಂದಿರುಗುವಷ್ಟರಲ್ಲಿ ಖಂಡಿತವಾಗಿ ಕಲಿತು ಹೋಗುತ್ತೇನೆ. ವಿದ್ಯಾರ್ಥಿಗಳು ಯಾವುದೇ ಉದ್ಯೋಗ ಆಯ್ಕೆ ಮಾಡಿಕೊಂಡರೂ ತಮ್ಮ ಆಸಕ್ತಿ ಇರುವ ಕ್ಷೇತ್ರವನ್ನೇ ಆರಿಸಿಕೊಳ್ಳಬೇಕು. ಮುಂದಿನ ಹಲವು ವರ್ಷಗಳ ಕಾಲ ಅದೇ ವೃತ್ತಿಯಲ್ಲಿ ಉತ್ಸಾಹದಿಂದ ಕೆಲಸ ಮಾಡುವಂತಾಗಲು ಆಸಕ್ತಿಯೇ ಮುಖ್ಯ ಎಂದು ಸಲಹೆ ನೀಡಿದರು.

ಪದವಿಪೂರ್ವ ಶಿಕ್ಷಣ ಇಲಾಖೆಯ ವಿಶ್ರಾಂತ ಉಪನಿರ್ದೇಶಕ ಮಾರುತಿ ಎಲ್. ಮಾತನಾಡಿ, ಇಂತಹ ಕಾರ್ಯಕ್ರಮಗಳು ಕುಂದಾಪ್ರ ಕನ್ನಡದ ಬಗ್ಗೆ ಅಭಿಮಾನ ಮೂಡಿಸುತ್ತವೆ. ಪ್ರತಿಯೊಬ್ಬರು ನಮ್ಮ ಊರು ಮತ್ತು ಭಾಷೆಯ ಬಗ್ಗೆ ಹೆಮ್ಮೆ ಹೊಂದಬೇಕು. ವಿದ್ಯಾರ್ಥಿಗಳು ಉತ್ತಮ ವ್ಯಕ್ತಿಗಳನ್ನು ಮಾದರಿಯಾಗಿ ತೆಗೆದುಕೊಂಡು ಜೀವನದಲ್ಲಿ ಮುನ್ನಡೆಯಬೇಕು ಎಂದು ಹೇಳಿದರು.

ವೇದಿಕೆಯಲ್ಲಿ ಗಿಳಿಯಾರು ಕುಶಲ ಹೆಗ್ಡೆ ಚಾರಿಟೇಬಲ್ ಟ್ರಸ್ಟ್ (ರಿ.) ಅಧ್ಯಕ್ಷ ಉದಯ ಹೆಗ್ಡೆ, ಕುಂದಾಪ್ರ ಕನ್ನಡ ಅಧ್ಯಯನ ಪೀಠದ ಸಂಯೋಜಕ ನಾಗಪ್ಪ ಗೌಡ, ಸದಸ್ಯರಾದ ಕೆ.ಸಿ. ರಾಜೇಶ್, ಉದಯ ಶೆಟ್ಟಿ ಪಡುಕೆರೆ, ಡಾ. ರೇಖಾ ಬನ್ನಾಡಿ, ಪಂಜು ಗಂಗೊಳ್ಳಿ, ಸುಜ್ಞಾನ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ರಂಜನ್ ಬಿ. ಶೆಟ್ಟಿ, ಸುಜ್ಞಾನ ಎಜುಕೇಶನಲ್ ಟ್ರಸ್ಟ್ (ರಿ.)ನ ಪ್ರದೀಪ್ ಕೆ. ಹಾಗೂ ಅನಿತಾ ಕುಮಾರಿ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಗಿಳಿಯಾರು ಕುಶಲ ಹೆಗ್ಡೆ ಚಾರಿಟೇಬಲ್ ಟ್ರಸ್ಟ್ (ರಿ.) ಅಧ್ಯಕ್ಷ ಉದಯ ಹೆಗ್ಡೆ ಅವರನ್ನು ಸನ್ಮಾನಿಸಲಾಯಿತು. ಸುಮಾ ಸಂಗ್ರಾಮ್ ಶೆಟ್ಟಿ ಸನ್ಮಾನ ಪತ್ರ ವಾಚಿಸಿದರು. ಪ್ರಣೂತ್ ಆರ್. ಗಾಣಿಗ ಬಹುಮಾನ ವಿಜೇತರ ಪಟ್ಟಿಯನ್ನು ಪ್ರಕಟಿಸಿದರು. ತೀರ್ಪುಗಾರರ ಪರವಾಗಿ ಮನು ಹಂದಾಡಿ ಮಾತನಾಡಿದರು.

ಸುಜ್ಞಾನ ಎಜುಕೇಶನಲ್ ಟ್ರಸ್ಟ್ (ರಿ.) ಕೋಶಾಧಿಕಾರಿ ಭರತ್ ಶೆಟ್ಟಿ ಸ್ವಾಗತಿಸಿದರು. ಪ್ರದೀಪ್ ಶೆಟ್ಟಿ ವಂದಿಸಿದರು. ಕಾರ್ಯಕ್ರಮವನ್ನು ಪತ್ರಕರ್ತ ಕೆ.ಸಿ. ರಾಜೇಶ್ ನಿರೂಪಿಸಿದರು

administrator

Related Articles

Leave a Reply

Your email address will not be published. Required fields are marked *

You cannot copy content of this page