udupimitra.in
  • August 2, 2026
  • Last Update August 2, 2026 5:33 pm
  • Brahmavara

ವಿಶ್ವಕರ್ಮರಿಗೆ ಗೆಲ್ಲುವ ಶಕ್ತಿ ಇಲ್ಲದಿದ್ದರೂ ಸೋಲಿಸುವ ಶಕ್ತಿಯಿದೆ: ಸುಜ್ಞಾನಮೂರ್ತಿ

ವಿಶ್ವಕರ್ಮರಿಗೆ ಗೆಲ್ಲುವ ಶಕ್ತಿ ಇಲ್ಲದಿದ್ದರೂ ಸೋಲಿಸುವ ಶಕ್ತಿಯಿದೆ: ಸುಜ್ಞಾನಮೂರ್ತಿ

ವರದಿ : ಚಿತ್ತೂರು ಪ್ರಭಾಕರ ಆಚಾರ್ಯ
ಉಡುಪಿ ಮಿತ್ರ ಪತ್ರಿಕೆ ಸುದ್ಧಿ :
ಕುಂದಾಪುರ್, ಅ.೨: ವಿಶ್ವಕರ್ಮ ಸಮುದಾಯವು ರಾಜಕೀಯ ಶಕ್ತಿಯನ್ನು ಪಡೆದುಕೊಳ್ಳುವುದು ಇಂದಿನ ತುರ್ತು ಅಗತ್ಯವಾಗಿದೆ. ನಮಗೆ ಆಳಿಸಿಕೊಂಡು ಸಾಕಾಗಿದೆ. ರಾಜಕೀಯವಾಗಿ ನಾವು ಸದೃಢರಾಗದೇ ಹೋದಲ್ಲಿ ಸರಕಾರದಿಂದ ಸಿಗಬೇಕಾದ ಸೌಲಭ್ಯಗಳನ್ನು ಪಡೆಯಲು ಸಾಧ್ಯವಿಲ್ಲ, ಎಂದು ರಾಜ್ಯ ವಿಶ್ವಕರ್ಮ ಸಮುದಾಯಗಳ ಸುಜ್ಞಾನಮೂರ್ತಿ ಅವರು ಕರೆ ನೀಡಿದರು.

ಅವರು ಕುಂದಾಪುರ ತಾಲೂಕು ಚಿನ್ನ ಬೆಳ್ಳಿ ಕೆಲಸಗಾರರ ಸಂಘದ 18ನೇ ವರ್ಷದ ವಾರ್ಷಿಕೋತ್ಸವ ಸಮಾರಂಭವನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.

ಸಭೆಯನ್ನುದ್ದೇಶಿಸಿ ಮಾತನಾಡಿದ ಸುಜ್ಞಾನಮೂರ್ತಿ ಅವರು, ಕರ್ನಾಟಕದ 78 ವರ್ಷಗಳ ಇತಿಹಾಸದಲ್ಲಿ ನಮ್ಮ ಸಮುದಾಯದ ಓರ್ವ ವ್ಯಕ್ತಿ ಮಾತ್ರ ಚುನಾವಣೆಯಲ್ಲಿ ಸ್ಪರ್ಧಿಸಿ ಶಾಸಕರಾಗಿ, ಸಚಿವರಾಗಿದ್ದಾರೆ. ವಿಶ್ವಕರ್ಮ ನಿಗಮ ಇರುವುದರಿಂದ ಇಂದು ಅಧ್ಯಕ್ಷ ಸ್ಥಾನ ನೀಡಿದ್ದಾರೆ. ವಿಶ್ವಕರ್ಮರಿಗೂ ರಾಜಕೀಯ ಮಾಡಲು ಗೊತ್ತಿದೆ, ಆದರೆ ಯಾರೂ ಮುಂದೆ ಬರುತ್ತಿಲ್ಲ. ವಿಶ್ವಕರ್ಮರಿಗೆ ಗೆಲ್ಲುವ ಶಕ್ತಿ ಇಲ್ಲದೇ ಹೋದರೂ ಸೋಲಿಸುವ ಶಕ್ತಿ ಇದೆ ಎಂಬುದನ್ನು ಎಲ್ಲಾ ರಾಜಕೀಯ ನಾಯಕರು ಅರ್ಥ ಮಾಡಿಕೊಳ್ಳಬೇಕು, ಎಂದರು.

ಕುಂದಾಪುರ ತಾಲೂಕು ಚಿನ್ನ ಬೆಳ್ಳಿ ಕೆಲಸಗಾರರ ಸಂಘದ ನೂತನ ಅಧ್ಯಕ್ಷ ಕೃಷ್ಣ ಆಚಾರ್ಯ ಮಾತನಾಡಿ ನಮ್ಮ ಕೆಲಸಗಾರರ ಸಮಸ್ಯೆ ಸಾಕಷ್ಟಿದ್ದು ಈ ಕುರಿತು ಈಗಾಗಲೆ ಸಾಕಷ್ಟು ಮನವಿ ನೀಡಿದ್ದರೂ ಜನಪ್ರತಿನಿಧಿಗಳು ಸ್ಪಂಧಿಸಿಲ್ಲ. ಸರಕಾರ ಗಮನ ಹರಿಸುವಂತಾಗಬೇಕು. ನಮ್ಮ ಕೆಲಸದಲ್ಲಿ ಕೆಡಿಎಂ ಹಾಗೂ ಜಿಂಕ್ ಬಳಕೆಯಿಂದ ಆರೋಗ್ಯದ ಮೇಲೂ ಪರಿಣಾಮ ಬೀರುತ್ತಿದೆ ಎಂದರು.

ಕುಂದಾಪುರ ತಾಲೂಕು ಚಿನ್ನ ಬೆಳ್ಳಿ ಕೆಲಸಗಾರರ ಸಂಘದ ಅಧ್ಯಕ್ಷ ಬಿ. ಕುಶ ಕುಮಾರ್ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ ಜಿಲ್ಲಾ ಸಂಘ ಹಮ್ಮಿಕೊಂಡಿರುವ ರಾಜ್ಯ ಮಟ್ಟದ ಸಮಾವೇಶವನ್ನು ಯಶಸ್ವಿಗೊಳಿಸಲು ಸಹಕಾರ ನೀಡಬೇಕು. ಅಲ್ಲಿ ನಮ್ಮ ಸಮಸ್ಯೆಗೆ ಸರಕಾರ ಗಮಹರಿಸುವಂತಾಗಬೇಕು ಎಂದರು.

ಉಡುಪಿ ಜಿಲ್ಲಾ ಚಿನ್ನ ಬೆಳ್ಳಿ ಕೆಲಸಗಾರರ ಸಂಘದ‌ ಅಧ್ಯಕ್ಷ ರವಿಚಂದ್ರ ಮಾರಾಳಿ ಮಾತನಾಡಿ, ಬೆಲೆ ಹಾಗೂ ಕಾರ್ಫೋರೇಟ್ ಹಾವಳಿಯಿಂದ ಕುಲಕಸುಬಿಗೆ ತೊಂದರೆಯಾಗಿದೆ ಎಂದರು.

ಹಿರಿಯ ಕೆಲಸಗಾರರಾದ ಮೋಹನದಾಸ್ ಆಚಾರ್ಯ ಕೋಟ , ದೇವಿದಾಸ್ ಶೇಟ್ ಬಡಾಕೆರೆ, ಜನಾರ್ದನ ಆಚಾರ್ಯ ಚೇಂಪಿ, ಚಂದ್ರಶೇಖರ ಶೇಟ್ ಕೋಟೇಶ್ವರ
ಇವರನ್ನು ಸನ್ಮಾನಿಸಲಾಯಿತು.

ಶಶಿಧರ ಅಚಾರ್ಯ ಬಂಡಾಡಿ, ಸುಬ್ರಹ್ಮಣ್ಯ ಆಚಾರ್ಯ ಕಟ್ ಬೆಲ್ತೂರು, ಶ್ರೀಧರ ಆಚಾರ್ಯ (ಬಳೆ ಕಟ್ಟಿಂಗ್), ಸಂತೋಷ ಶೇಟ್ ಸನ್ಮಾನ ಪತ್ರಗಳನ್ನು ವಾಚಿಸಿದರು.
ಎಸ್.ಎಸ್.ಎಲ್.ಸಿ. ಹಾಗೂ ಪಿ.ಯು.ಸಿ. ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳನ್ನು ಪಡೆದಿರುವ ಸಂಘದ ಸದಸ್ಯರ ಮಕ್ಕಳನ್ನು ಗುರುತಿಸಿ ಗೌರವಿಸಲಾಯಿತು.
ಈ ಸಂದರ್ಭ ಬಾರಕೂರು ದೇವಸ್ಥಾನದಲ್ಲಿ ನಿರ್ಮಾಣವಾಗುತ್ತಿರುವ ಬೆಳ್ಳಿ ರಥಕ್ಕೆ 2 ಕೆಜಿ 150 ಗ್ರಾಂ ಬೆಳ್ಳಿಯನ್ನು ದೇವಸ್ಥಾನದ ಆಡಳಿತ ಮೊಕ್ತೇಸರ ಶ್ರೀಧರ ಆಚಾರ್ಯರಿಗೆ ಸಂಘದ ವತಿಯಿಂದ ಹಸ್ತಾಂತರಿಸಲಾಯಿತು.

ಸಂಘದ ಯಶಸ್ವಿ ಸಂಘಟನೆ ಹಾಗೂ ವಿಭಿನ್ನ ಯೋಜನೆಗಳನ್ನು ಅಳಡಿಸಿದ ಸಂಘದ ಗೌರವಾಧ್ಯಕ್ಷ ರಾಜೇಶ್ ಆಚಾರ್ಯ ಮರವಂತೆ ಇವರನ್ನು ಸನ್ಮಾನಿಲಾಯಿತು.
ಕಾರ್ಯದರ್ಶಿ ಕೃಷ್ಣ ಆಚಾರ್ಯ ಕಟ್ಕೆರೆ ವರದಿ ವಾಚಿಸಿದರು.

ಲಕ್ಷ್ಮೀನಾರಾಯಣ ಆಚಾರ್ಯ ಪ್ರಾರ್ಥಿಸಿದರು. ಪದ್ಮನಾಭ ಆಚಾರ್ಯ ಬನ್ನಾಡಿ ಸ್ವಾಗತಿಸಿದರು. ಸಂಘದ ಗೌರವಾಧ್ಯಕ್ಷ ರಾಜೇಶ್ ಆಚಾರ್ಯ ಮರವಂತೆ ಪ್ರಾಸ್ತಾವಿಕ ಮಾತುಗಳನ್ನಾಡಿದರು.
ಕೋಶಾಧಿಕಾರಿ ರಘುನಾಥ ಶೇಟ್ ಲೆಕ್ಕ ಪತ್ರ ಮಂಡಿಸಿ ಕೊನೆಯಲ್ಲಿ ವಂದಿಸಿದರು. ಕರುಣಾಕರ ಆಚಾರ್ಯ ಮರವಂತೆ ಹಾಗೂ ಸ್ಮೃತಿಕಾ ಕುಂಭಾಶಿ ನಿರೂಪಿಸಿದರು.

administrator

Related Articles

Leave a Reply

Your email address will not be published. Required fields are marked *

You cannot copy content of this page