udupimitra.in
  • July 24, 2026
  • Last Update July 24, 2026 6:55 pm
  • Brahmavara

ಬೈಂದೂರು ಚಾತುರ್ಮಾಸ್ಯದಲ್ಲಿ ಭಾಗಿಯಾಗುವಂತೆ ಮಾಜಿ, ಹಾಲಿ ಶಾಸಕರ ಮನವಿ

ಬೈಂದೂರು ಚಾತುರ್ಮಾಸ್ಯದಲ್ಲಿ ಭಾಗಿಯಾಗುವಂತೆ ಮಾಜಿ, ಹಾಲಿ ಶಾಸಕರ ಮನವಿ

ವರದಿ : ಚಿತ್ತೂರು ಪ್ರಭಾಕರ ಆಚಾರ್ಯ
ಉಡುಪಿಮಿತ್ರ ಪತ್ರಿಕೆ ಸುದ್ಧಿ :
ಕುಂದಾಪುರ , ಜು.೨೪: ಬೈಂದೂರು ತಾಲೂಕಿನ ಗೋಳಿಹೊಳೆ ಗ್ರಾಮದ ಶ್ರೀ ಬಿಳಿನೆಲೆ ವಿನಾಯಕ ದೇವಸ್ಥಾನದಲ್ಲಿ ಶ್ರೀ ರಾಮಕ್ಷೇತ್ರ ಮಹಾ ಸಂಸ್ಥಾನದ ಜಗದ್ಗುರು ಪೀಠದ ಪೀಠಾಧೀಶರಾದ ಮಹಾ ಮಂಡಲೇಶ್ವರ ೧೦೦೮ ಸದ್ಗುರು ಶ್ರೀ ಶ್ರೀ ಶ್ರೀ ಬ್ರಹ್ಮಾನಂದ ಸರಸ್ವತಿಜೀ ಮಹಾರಾಜರವರ ಚಾತುರ್ಮಾಸ್ಯ ವ್ರತಾಚರಣೆ ಜುಲೈ 29 ರಿಂದ ಆರಂಭಗೊಳ್ಳಲಿದೆ. ೪೮ ದಿನಗಳ ಕಾಲ ಚಾತುರ್ಮಾಸ್ಯ ನಡೆಯಲಿದ್ದು ಉಡುಪಿ ಜಿಲ್ಲೆಯ ಸಮಸ್ತರು ಗುರುಗಳ ಈ ಚಾತುರ್ಮಾಸ್ಯದಲ್ಲಿ ಭಾಗವಹಿಸುವಂತೆ ಬೈಂದೂರು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ, ಚಾತುರ್ಮಾಸ್ಯ ಸಮಿತಿಯ ಗೌರವಾಧ್ಯಕ್ಷ ಕೆ.ಗೋಪಾಲ ಪೂಜಾರಿ ವಿನಂತಿಸಿದರು.
ಅವರು ಜು.24ರಂದು ಕುಂದಾಪುರದ ಹೋಟೆಲ್ ಶರೋನ್‌ನಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದರು.
ಜುಲೈ 29ರ ಗುರು ಪೂರ್ಣಿಮೆಯಂದು ಬೆಳಿಗ್ಗೆ 7.೦೦ರಿಂದ 9.೦೦ರವರೆಗೆ ಚಾತುರ್ಮಾಸ್ಯ ವ್ರತ ಸಂಕಲ್ಪ, ರಾಮ ತಾರಕ ಯಜ್ಞ ಹಾಗೂ ವೈದಿಕ ವಿಧಿ-ವಿಧಾನಗಳೊಂದಿಗೆ ಚಾತುರ್ಮಾಸ್ಯ ಆರಂಭಗೊಳ್ಳಲಿದೆ. ಬೆಳಿಗ್ಗೆ ಗಂಟೆ 10.00ರ ಸುಮುಹೂರ್ತದಲ್ಲಿ ಬೈಂದುರು ಶ್ರೀ ಸೇನೇಶ್ವರ ದೇವಸ್ಥಾನದಲ್ಲಿ ದೇವರಿಗೆ ಪೂಜೆ ಸಲ್ಲಿಸಿ ಗುರುಗಳ ಪುರಪ್ರವೇಶದ ಭವ್ಯ ಮೆರವಣಿಗೆ ಪ್ರಾರಂಭವಾಗಲಿದೆ. ನಂತರ ಶ್ರೀ ಬಿಳಿಶಿಲೆ ವಿನಾಯಕ ದೇವರಿಗೆ ಶ್ರೀಗಳವರಿಂದ ವಿಶೇಷ ಪೂಜೆ, ಶ್ರೀಗಳವರ ವ್ಯಾಸಪೀಠದ ಪೀಠಾರೋಹಣ, ನಂತರ ಗುರುಪಾದುಕಾ ಪೂಜೆ, ಶ್ರೀಗಳ ಆಶೀರ್ವಚನ, ಮಂತ್ರಾಕ್ಷತೆ ಅನುಗ್ರಹ, ಪ್ರಸಾದ ವಿತರಣೆ, ಅನ್ನ ಸಂತರ್ಪಣೆ ನಡೆಯಲಿದೆ ಎಂದರು.


ಒಂದೇ ಜಾತಿ, ಒಂದೇ ಧರ್ಮ, ಒಂದೇ ದೇವರು ಎಂಬ ನಾರಾಯಣ ಗುರುಗಳ ಸಂದೇಶದಂತೆ ಈ ಚಾತುರ್ಮಾಸ್ಯ ನಡೆಯಲಿದೆ. ಚಾತುರ್ಮಾಸ್ಯಕ್ಕೆ ಪೂರ್ವಭಾವಿ ತಯಾರಿಯನ್ನು ನಡೆಸಿ ಸಕಲ ಸಿದ್ದತೆ ಮಾಡಿಕೊಳ್ಳಲಾಗಿದೆ. ಗುರುಗಳು ಬಿಲ್ಲವ ಸಮಾಜದ ಸ್ವಾಮೀಜಿಯಾದರೂ ಎಲ್ಲಾ ವರ್ಗದ ಜನರನ್ನು ಅವರ ತತ್ವ ಸಿದ್ದಾಂತಗಳು ಆಕರ್ಷಿಸುತ್ತಿವೆ. ಚಾತುರ್ಮಾಸ್ಯದ ಯಶಸ್ಸಿಗೆ ಎಲ್ಲಾ ಗ್ರಾಮಗಳಲ್ಲೂ ಎಲ್ಲರನ್ನೂ ಸೇರಿಸಿಕೊಂಡು ಗ್ರಾಮ ಸಮಿತಿಗಳನ್ನು ರಚಿಸಲಾಗಿದೆ. ಪ್ರತಿ ದಿನ ಒಂದೊಂದು ಗ್ರಾಮ ಸಮಿತಿಯವರು ಚಾತುರ್ಮಾಸ್ಯ ವ್ರತಾಚರಣೆಯ ಸೇವಾ ಕೈಂಕರ್ಯದಲ್ಲಿ ತೊಡಗಿಸಿಕೊಳ್ಳಲಿದ್ದಾರೆ. ಪ್ರತಿ ದಿನ ಪಾದುಕಾ ಪೂಜೆಗೆ ಅವಕಾಶ ಕಲ್ಪಿಸಲಾಗಿದೆ. ಉಡುಪಿ ಜಿಲ್ಲೆಯಲ್ಲಿ ಗುರುಗಳು ಪ್ರಥಮವಾಗಿ ಚಾತುರ್ಮಾಸ್ಯ ಆಚರಿಸುತ್ತಿದ್ದು ಉಡುಪಿ ಜಿಲ್ಲೆಯ ಸಮಸ್ತ ಹಿಂದುಳಿದ ವರ್ಗದವರು ಭಾಗವಹಿಸಬೇಕು. ಬೆಂಗಳೂರು, ಮೈಸೂರು ಭಾಗದಲ್ಲೂ ಶಾಸಕ ಗುರುರಾಜ್ ಶೆಟ್ಟಿಯವರ ನೇತೃತ್ವದಲ್ಲಿ ಸಭೆ ನಡೆಸಲಾಗಿದ್ದು ಆ ಭಾಗದಿಂದಲೂ ಸಹಕಾರ ದೊರಕಲಿದೆ. ಆದ್ದರಿಂದ ಚಾತುರ್ಮಾಸ್ಯಕ್ಕೆ ಜಾತಿ ಬೇಧವಿಲ್ಲದೆ ಪ್ರತಿಯೊಬ್ಬರು ಭಾಗವಹಿಸಿ ಗುರುಗಳ ಕೃಪೆಗೆ ಪಾತ್ರರಾಗುವಂತೆ ಕೆ. ಗೋಪಾಲ ಪೂಜಾರಿಯವರು ವಿನಂತಿಸಿದರು.
ಬೈಂದೂರು ವಿಧಾನಸಭಾ ಕ್ಷೇತ್ರದ ಶಾಸಕ ಚಾತುರ್ಮಾಸ್ಯ ಸಮಿತಿಯ ಅಧ್ಯಕ್ಷ ಗುರುರಾಜ್ ಶೆಟ್ಟಿ ಗಂಟಿಹೊಳೆ ಮಾತನಾಡಿ ಇದೊಂದು ನಮ್ಮ ಪಾಲಿನ ಯೋಗ. ಎಲ್ಲಾ ಸಮಾಜದವರು, ಎಲ್ಲಾ ಗ್ರಾಮದವರು ಒಟ್ಟಾಗಿ ಈ ಚಾತುರ್ಮಾಸ್ಯ ಮಾಡುತ್ತಿದ್ದೇವೆ. ಇದು ಇಡೀ ಕ್ಷೇತ್ರವನ್ನು ಒಟ್ಟು ಮಾಡುವ ಕೆಲಸವಾಗಿದೆ. ಕ್ಷೇತ್ರದ ಹಿರಿಯ ರಾಜಕಾರಣಿ ಕೆ.ಗೋಪಾಲ ಪೂಜಾರಿಯವರು ಗೌರವಾಧ್ಯಕ್ಷರಾಗಿ ಸಿಕ್ಕಿರುವುದರಿಂದ ಅವರು ತಮ್ಮ ಎಲ್ಲಾ ಅನುಯಾಯಿಗಳಿಗೆ ಚಾತುರ್ಮಾಸ್ಯದಲ್ಲಿ ತೊಡಗಿಸಿಕೊಳ್ಳಿ ಎಂದು ಕರೆ ಕೊಟ್ಟ ಪರಿಣಾಮ ವ್ಯಾಪಕ ಬೆಂಬಲ ದೊರಕಿದೆ. ಕಾರ್ಯಕ್ರಮದ ಯಶಸ್ಸಿಗಾಗಿ ೪೮ ಕಡೆಗಳಿಂದ ೪೮ ಸಮಿತಿಗಳನ್ನು ಮಾಡಿದ್ದೇವೆ. ಮೈಸೂರು ಹಾಗೂ ಬೆಂಗಳೂರಿನಲ್ಲೂ ಗುರುಗಳ ಅನುಯಾಯಿಗಳು ಉತ್ತಮ ರೀತಿಯಲ್ಲಿ ಸಭೆಯನ್ನು ನಡೆಸಿಕೊಟ್ಟಿದ್ದಾರೆ. ಬೆಂಗಳೂರು, ಮುಂಬೈ, ಮೈಸೂರು, ಹುಬ್ಬಳ್ಳಿಯಲ್ಲೂ ಸಭೆ ನಡೆದಿದ್ದು ಅಲ್ಲಿಂದಲೂ ಹೊರೆ ಕಾಣಿಕೆ ಬರಲಿದೆ. ಉದ್ಘಾಟನೆಗೆ ಗುರುಗಳು ಎಲ್ಲಾ ಗಣ್ಯರನ್ನು ಸಂಪರ್ಕಿಸಿದ್ದು ಎಲ್ಲಾ ಗಣ್ಯರು ಧರ್ಮಸಭೆಯಲ್ಲಿ ಭಾಗವಹಿಸಲಿದ್ದಾರೆ. ಪ್ರತಿ ದಿನ ಪಾದುಕಾ ಪೂಜೆ, ಭಜನೆ, ಧಾರ್ಮಿಕ ಕಾರ್ಯಕ್ರಮದ ಜೊತೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಇಡೀ ಜಿಲ್ಲೆಯ ಎಲ್ಲಾ ಶಾಸಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಗುರುಗಳ ಕಾರ್ಯಕ್ರಮ ಚೆನ್ನಾಗಿ ನಡೆಯಲು ಎಲ್ಲರೂ ಸಹಕಾರ ನೀಡಬೇಕೆಂದು ಶಾಸಕರು ಕೋರಿಕೊಂಡರು.
ಪತ್ರಿಕಾಗೋಷ್ಟಿಯಲ್ಲಿ ವಂಡ್ಸೆ ತಾಲೂಕು ಪಂಚಾಯತ್ ಮಾಜಿ ಸದಸ್ಯ ಉದಯ ಜಿ.ಪೂಜಾರಿ ಉಪಸ್ಥಿತರಿದ್ದರು. ಸಮಿತಿಯ ಪ್ರಧಾನ ಕಾರ್ಯದರ್ಶಿ ಅಶೋಕ್ ಪೂಜಾರಿ ಬೀಜಾಡಿ ಸ್ವಾಗತಿಸಿ ವಂದಿಸಿದರು.

administrator

Related Articles

Leave a Reply

Your email address will not be published. Required fields are marked *

You cannot copy content of this page