ವರದಿ : ಚಿತ್ತೂರು ಪ್ರಭಾಕರ ಆಚಾರ್ಯ
ಉಡುಪಿಮಿತ್ರ ಪತ್ರಿಕೆ ಸುದ್ಧಿ:
ಪೊಲೀಸರನ್ನು ಕಂಡರೆ ರೌಡಿಗಳಿಗೆ ಮಾತ್ರ ಹೆದರಿಕೆ ಇರಬೇಕು. ಸಾರ್ವಜನಿಕರಿಗೆ ಹಾಗೂ ದೂರು ಕೊಡಲು ಬರುವವರಿಗೆ ಪೋಲೀಸರನ್ನು ಕಂಡರೆ ಪ್ರೀತಿ ಬರುವಂತಹ, ಗೌರವ ಹೆಚ್ಚುವ ರೀತಿಯಲ್ಲಿ ನಮ್ಮ ಪೊಲೀಸರ ವರ್ತನೆ ಇರಬೇಕು ಎಂದು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಅವರು ಯಡಾಡಿ ಮತ್ಯಾಡಿಯ ಸುಜ್ಞಾನ ಪದವಿ ಪೂರ್ವ ಕಾಲೇಜು ಹಾಗೂ ವಿದ್ಯಾರಣ್ಯ ಇಂಗ್ಲಿಷ್ ಮಾಧ್ಯಮ ಶಾಲೆಯಲ್ಲಿ ನಡೆದ ವಿದ್ಯಾರ್ಥಿ ಸಂಸತ್ತು ಪದಗ್ರಹಣ ಹಾಗೂ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

. ವಿದ್ಯಾರ್ಥಿಗಳು ಜೀವನದಲ್ಲಿ ಯಾವುದಾದರೂ ಒಂದು ನಿರ್ಧಾರಕ್ಕೆ ಬಂದಾಗ ಎಷ್ಟೇ ಕಷ್ಟ ಬಂದರೂ ಅದೇ ನಿರ್ಧಾರದಲ್ಲಿ ಮುಂದುವರಿದು ಗುರಿ ತಲುಪಬೇಕು. ಈ ಪ್ರಯತ್ನದಲ್ಲಿ ಸುಮಾರು ಬಾರಿ ಫೇಲ್ ಆಗಬಹುದು. ಆದರೆ ಅದಕ್ಕೆ ದೃತಿಗೆಡದೆ ಮತ್ತೆ ಮತ್ತೆ ಪ್ರಯತ್ನಿಸಿದಾಗ ಒಂದಲ್ಲ ಒಂದು ದಿನ ನಿಮ್ಮ ಗುರಿ ತಲುಪುತ್ತೀರಿ ಮೊಬೈಲ್ ಫೋನ್ ಬಳಕೆಯ ಬಗ್ಗೆಯೂ ವಿದ್ಯಾರ್ಥಿಗಳು ಜಾಗೃತರಾಗಿರಬೇಕು. ಸಹಪಾಠಿಗಳೊಂದಿಗೆ ಬೇರೆ ಬೇರೆ ರೀತಿಯಲ್ಲಿ ವಿಡಿಯೋ ರೆಕಾರ್ಡಿಂಗ್ ಮಾಡಿಕೊಂಡು ಮುಂದೆ ಇದನ್ನು ‘ನಿನ್ನ ತಂದೆ ತಾಯಿಗೆ ತೋರಿಸುತ್ತೇವೆ, ನಿನ್ನ ಭವಿಷ್ಯ ಹಾಳು ಮಾಡುತ್ತೇವೆ’ ಎಂದು ಬ್ಲ್ಯಾಕ್‌ಮೇಲ್ ಮಾಡುವ ಘಟನೆಗಳು ಜರಗುತ್ತವೆ. ಅಂತಹ ಘಟನೆಗಳು ನಡೆದರೆ ವಿದ್ಯಾರ್ಥಿಗಳು ಹೆದರದೆ ನೇರವಾಗಿ ಪೊಲೀಸರ ಹತ್ತಿರ ಬರಬೇಕು. ಇದರಿಂದ ಯಾವುದೇ ಮರ್ಯಾದೆ ಹೋಗಲ್ಲ. ನಮ್ಮ ಪೊಲೀಸರು ಅದನ್ನು ಸರಿಪಡಿಸುತ್ತಾರೆ.ವಿಶೇಷವಾಗಿ ಹೆಣ್ಣುಮಕ್ಕಳು ಯಾವುದೇ ರೀತಿಯಲ್ಲೂ ಹೆದರಬೇಕಾಗಿಲ್ಲ. ತಪ್ಪುಗಳು ನಡೆದಿದ್ದರೆ ಅಥವಾ ಬ್ಲ್ಯಾಕ್‌ಮೇಲ್‌ಗೆ ಒಳಗಾಗಿದ್ದರೆ ಸರಿಪಡಿಸಲು ನಾವಿದ್ದೇವೆ. ನೇರವಾಗಿ ಪೊಲೀಸರ ಹತ್ತಿರ ಹೋಗಬೇಕು. ಚಿಕ್ಕ ವಯಸ್ಸಿನಲ್ಲಿ ಎಲ್ಲರೂ ತಪ್ಪು ಮಾಡುವುದು ಸಹಜ. ಟಿವಿಯಲ್ಲೋ, ಮೂವಿಯಲ್ಲೋ ನೋಡಿಕೊಂಡು ಕೆಲವೊಮ್ಮ ತಪ್ಪುಗಳನ್ನು ಮಾಡುತ್ತಾರೆ. ಇನ್ಸ್ಟಾಗ್ರಾಂ, ಫೇಸ್‌ಬುಕ್‌ನಲ್ಲಿ ತೋರಿಸುವ ಸುಳ್ಳು ಲೋಕ ಇದೆ. ಅದನ್ನು ವಿದ್ಯಾರ್ಥಿಗಳು ನಂಬಬಾರದು. ಕೆಲವು ಲಿಂಕ್‌ಗಳನ್ನು ಕ್ಲಿಕ್ ಮಾಡಿ ದುಡ್ಡು ಕಳಕೊಳ್ಳುವುದು, ಆನ್‌ಲೈನ್ ಲೋನ್ ಆಪ್‌ಗಳನ್ನು ನಂಬಿ ಲೋನ್ ಪಡಕೊಳ್ಳಲು ಹೋಗಬಾರದು ಎಂದು ನುಡಿದರು.

ಸುಜ್ಞಾನ್ ಎಜುಕೇಷನಲ್ ಟ್ರಸ್ಟ್ (ರಿ.) ನ ಅಧ್ಯಕ್ಷ ರಮೇಶ್ ಶೆಟ್ಟಿಯವರು ಮಾತನಾಡಿ ನಮ್ಮ ಶಾಲೆಯಲ್ಲಿ ಗುಣಮಟ್ಟದ ಶಿಕ್ಷಣ ನೀಡಲು ಎಲ್ಲಾ ರೀತಿಯಿಂದಲೂ ಪ್ರಯತ್ನ ನಡೆಸುತ್ತಿದ್ದೇವೆ. ಪ್ರತಿಯೊಬ್ಬ ವಿದ್ಯಾರ್ಥಿಯ ಬಗೆಗೂ ನಮ್ಮ ವಿದ್ಯಾಸಂಸ್ಥೆ ಕಾಳಜಿ ಹೊಂದಿದೆ, ವಿದ್ಯಾರ್ಥಿಗಳು ಕಾನೂನು ಅರಿವನ್ನು ಪಡೆದುಕೊಳ್ಳಬೇಕು. ಮಾದಕ ವಸ್ತುಗಳಿಂದ ಹಾಗೂ ಕೆಟ್ಟ ಹವ್ಯಾಸಗಳಿಂದ ದೂರ ಇರಬೇಕು. ಮೊಬೈಲ್ ಬ್ರಹ್ಮಾಂಡ ತೋರಿಸುತ್ತೆ. ಆದರೆ ಮೊಬೈಲ್‌ಗಳಲ್ಲಿ ಏನನ್ನು ಪಡೆದುಕೊಳ್ಳಬೇಕೊ ಅದನ್ನು ಮಾತ್ರ ಪಡೆದುಕೊಳ್ಳಬೇಕೆಂದರು.

ಪ್ರತಾಪ್ ಚಂದ್ರ ಶೆಟ್ಟಿ ಮಾತನಾಡಿ ವಿದ್ಯಾರ್ಥಿಗಳು ತಮಗೆ ದೊರಕಿರುವ ಅವಕಾಶಗಳನ್ನು ಸರಿಯಾಗಿ ಬಳಸಿಕೊಳ್ಳಬೇಕು. ಕಿರಿಯ ವಿದ್ಯಾರ್ಥಿಗಳಿಗೆ ಹಿರಿಯ ವಿದ್ಯಾರ್ಥಿಗಳು ಮಾದರಿಯಾಗಬೇಕು. ಸೋಶಿಯಲ್ ಮಿಡಿಯಾಗಳನ್ನು ಕಂಡು ಭಾವನೆಗಳನ್ನು ಕೆಡಿಸಿಕೊಳ್ಳುವುದು ಸರಿಯಲ್ಲ. ಒಳ್ಳೆಯ ಅಂಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡಲ್ಲಿ ಜೀವನದಲ್ಲಿ ನಮಗೆ ಒಳ್ಳೆಯದೇ ಆಗಲಿದೆ ಎಂದರು.

ಪ್ರಿನ್ಸಿಪಾಲ್ ರಂಜನ್ ಶೆಟ್ಟಿ, ವಿದ್ಯಾರಣ್ಯ ಆಂಗ್ಲ ಮಾದ್ಯಮ ಶಾಲೆಯ ಮುಖ್ಯ ಶಿಕ್ಷಕ ಪ್ರದೀಪ ಕೆ. ವೇದಿಕೆಯಲ್ಲಿ ಉಪಸ್ಥಿತರಿದ್ದರು.
ವಿದ್ಯಾರ್ಥಿ ನಾಯಕಿ ಕುಮಾರಿ ಪ್ರಕೃತಿ ಪಿ. ಶೆಟ್ಟಿ ನೇತೃತ್ವದಲ್ಲಿ ಪಥಸಂಚಲನ ನಡೆಯಿತು. ವಿದ್ಯಾರ್ಥಿ ಸಂಸತ್ತಿನ ಸಮರ್ಥ್ ಶೆಟ್ಟಿ, ಪ್ರತೀಕ್ಷಾ ಮಡಿವಾಳ, ದಶಮಿ ಯು.ಶೆಟ್ಟಿ, ಸಂಜನಾ ಉಮೇಶ್, ಬ್ರಾಹ್ಮಿ ಆರ್.ಶೆಟ್ಟಿ, ಶ್ರಾವಣಿ ಜಿ.ಭಟ್, ತೇಜಸ್ವಿನಿ ಶೆಟ್ಟಿ, ಕೌಶಿಕ್ ಸೇರಿದಂತೆ ಎಲ್ಲಾ ವಿವಿಧ ವಿದ್ಯಾರ್ಥಿ ನಾಯಕರಿಗೆ ಪೊಲೀಸ್ ವರಿಷ್ಠಾಧಿಕಾರಿ ಬ್ಯಾಡ್ಜ್ ತೊಡಿಸಿದರು.
ವಿದ್ಯಾರಣ್ಯ ಆಂಗ್ಲ ಮಾದ್ಯಮ ಶಾಲೆಯ ಮುಖ್ಯ ಶಿಕ್ಷಕ ಪ್ರದೀಪ ಶೆಟ್ಟಿ ವಿದ್ಯಾರ್ಥಿಗಳಿಗೆ ಪ್ರಮಾಣ ವಚನ ಬೋಧಿಸಿದರು.
ಸಂಸ್ಥೆಯ ಖಜಾಂಚಿ ಭರತ್ ಶೆಟ್ಟಿಯವರು ಪ್ರಾಸ್ತಾವಿಕ ಮಾತುಗಳನ್ನಾಡುತ್ತಾ ಮಕ್ಕಳಿಗೆ ಪ್ರೇರಣೆಯಾಗಲಿ ಎಂದು ನಮ್ಮ ಶಾಲೆಗೆ ಯಾವಾಗಲೂ ರೋಲ್ ಮಾಡೆಲ್ ವ್ಯಕ್ತಿಗಳನ್ನು ಕರೆಸಿ ಕಾರ್ಯಕ್ರಮ ಮಾಡುತ್ತಿದ್ದು ಈ ಬಾರಿ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಯವರನ್ನು ಕರೆಸಿದ್ದೇವೆ. ವಿದ್ಯಾರ್ಥಿಗಳು ರೀಲ್ಸ್ ನೋಡುತ್ತಾ ಕುಳಿತುಕೊಳ್ಳದೆ ತ್ಯಾಗ ಹಾಗೂ ಪರಿಶ್ರಮದಿಂದ ಸಾಧನೆ ಮಾಡಬೇಕು. ಪ್ರತಿಯೊಬ್ಬರ ಬಗ್ಗೆಯೂ ಗೌರವ ಹೊಂದಬೇಕು. ವಿದ್ಯಾರ್ಥಿಗಳು ಶಿಸ್ತನ್ನು ಅಳವಡಿಸಿಕೊಳ್ಳಬೇಕು ಎಂದು ನುಡಿದರು.
ವಿನಯ ಕುಮಾರ್ ಕೆ. ನಿರೂಪಿಸಿದರು.



