ವರದಿ : ಚಿತ್ತೂರು ಪ್ರಭಾಕರ ಆಚಾರ್ಯ
ಉಡುಪಿ ಮಿತ್ರ ಪತ್ರಿಕೆ ಸುದ್ಧಿ:
ಚಿತ್ತೂರು, ಜು.೨೭: ಕುಂದಾಪುರ ತಾಲೂಕು ಆಲೂರು ಕಳಿಯ ಚಿತ್ರಕೂಟ ಆಯುರ್ವೇದ ಚಿಕಿತ್ಸಾಲಯದಲ್ಲಿ ‘ಚಿತ್ರಕೂಟ ವೈದ್ಯವಾಣಿ’ ಮಾಸಿಕ ಪತ್ರಿಕೆ ಜು.27ರಂದು ಬಿಡುಗಡೆಗೊಂಡಿತು.
ಜ್ಯೋತಿಷ್ಯರಾದ ದಿನಕರ ಉಡುಪ ಹರವರಿ ಅವರು ‘ವೈದ್ಯವಾಣಿ ಮಾಸಿಕ ಪತ್ರಿಕೆ ಬಿಡುಗಡೆಗೊಳಿಸಿ ‘ ನೈಸರ್ಗಿಕ ಗಿಡಮೂಲಿಕೆಗಳಿಂದ ತಯಾರಿಸುವ ಆಯುರ್ವೇದ ಔಷಧದ ಮೇಲೆ ನಂಬಿಕೆ ಹೆಚ್ಚುತ್ತಿರುವ ಕಾಲಘಟ್ಟದಲ್ಲಿ ನಿತ್ಯ ಜೀವನಕ್ಕೆ ಆರೋಗ್ಯ ಮಾಹಿತಿಯನ್ನು ಒದಗಿಸುವ ಮಾಸಿಕವನ್ನು ಡಾ.ರಾಜೇಶ್ ಬಾಯರಿ ಯವರು ಹೊರತರುತ್ತಿರುವುದು ಶ್ಲಾಘನೀಯ. ಆಯುರ್ವೇದ ವೈದ್ಯರು ಇಂದು ಆಧುನಿಕ ವೈದ್ಯ ಪದ್ದತಿ (ಇಂಗ್ಲೀಷ್ ಮೆಡಿಸಿನ್)ಯಲ್ಲೂ ಔಷಧ ನೀಡುತ್ತಿದ್ದಾರೆ. ಆದರೆ ಡಾ.ರಾಜೇಶ್ ಬಾಯರಿಯವರು ಕಳೆದ ೧೫ ವರ್ಷಗಳಿಂದ ಆಯುರ್ವೇದ ವೈದ್ಯಪದ್ದತಿಯಲ್ಲೇ ಚಿಕಿತ್ಸೆ ನೀಡುತ್ತಾ ಆಯುರ್ವೇದದಲ್ಲೂ ಅನೇಕ ರೀತಿಯ ಔಷಧಗಳಿವೆ ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ದೇಶ ವಿದೇಶಗಳಿಂದ ಆಗಮಿಸುವ ರೋಗಿಗಳಿಗೆ ಚಿಕಿತೆ ನೀಡಿ ಗುಣಪಡಿಸುತ್ತಿದ್ದಾರೆ. ಜನರಿಗೆ ಒಂದಷ್ಟು ಆರೋಗ್ಯ ಮಾಹಿತಿ ಒದಗಿಸಲು ಹೊರತರುತ್ತಿರುವ ಮಾಸಿಕ ಯಶಸ್ಸು ಕಾಣಲಿ ಎಂದು ಶುಭ ಹಾರೈಸಿದರು.
ಡಾ. ಪ್ರಸನ್ನರವರು ಮಾತನಾಡಿ ಆಯುರ್ವೇದದಲ್ಲಿ ಜನರಿಗೆ ನೀಡಬಹುದಾದ ಸಾಕಷ್ಟು ಮಾಹಿತಿ ಇದೆ. ಚಿಕಿತ್ಸೆಯಲ್ಲೂ ನಾನಾ ವಿಧಗಳಿವೆ. ವೈದ್ಯವಾಣಿ ಮಾಸಿಕದಲ್ಲಿ ಪ್ರತೀ ತಿಂಗಳು ಆ ಎಲ್ಲಾ ಮಾಹಿತಿ ಒದಗಿಸುವ ಪ್ರಯತ್ನ ಮಾಡಲಾಗುವುದು ಎಂದರು.
ಮುಖ್ಯ ಅತಿಥಿಯಾಗಿ ‘ಉಡುಪಿಮಿತ್ರ ಪತ್ರಿಕೆಯ ಸಂಪಾದಕ ಚಿತ್ತೂರು ಪ್ರಭಾಕರ ಆಚಾರ್ಯ, ಡಾ. ಸುಮಂತ್ ಗೋಯಲ್ ಭಾಗವಹಿಸಿ ಶುಭ ಹಾರೈಸಿದರು. ಶ್ರೀ ಮಹಾಬಲ ಬಾಯರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಚಿತ್ರಕೂಟದ ವೈದ್ಯಕೀಯ ನಿರ್ದೇಶಕ ಡಾ. ರಾಜೇಶ್ ಬಾಯರಿ ಪ್ರಾಸ್ತಾವಿಕವಾಗಿ ಮಾತನಾಡಿ ವೈದ್ಯವಾಣಿ ಮಾಸಿಕವನ್ನು ಆರೋಗ್ಯ ಮಾಹಿತಿಯ ಉದ್ದೇಶದಲ್ಲಿ ಖಾಸಗಿಯಾಗಿ ಇಂಗ್ಲೀಷ್‌ನಲ್ಲಿ ಹೊರತರುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಸಾರ್ವಜನಿಕರಿಗೂ ಸಿಗುವ ಉದ್ದೇಶದಲ್ಲಿ ‘ವೈದ್ಯವಾಣಿ’ಯಲ್ಲಿರುವ ಮಾಹಿತಿಯನ್ನು ಸಾಮಾಜಿಕ ಜಾಲತಾಣದಲ್ಲೂ ಪಸರಿಸಲಾಗುವುದು ಎಂದರು.
ಶ್ರೀಲತಾ ಪ್ರಾರ್ಥಿಸಿದ್ದು ಡಾ. ಅನುಲೇಖ ಬಾಯರಿ ವಂದಿಸಿದರು. ಆರಾಧ್ಯ ಬಾಯರಿ ನಿರೂಪಿಸಿದರು.




