ವರದಿ : ಚಿತ್ತೂರು ಪ್ರಭಾಕರ ಆಚಾರ್ಯ
ಉಡುಪಿಮಿತ್ರ ಪತ್ರಿಕೆ ಸುದ್ದಿ:
ಕುಂದಾಪುರ, ಅ.3: ಬೆಳಗಾವಿ ಅಧಿವೇಶನದ ಸಂದರ್ಭ ಚಿನ್ನಬೆಳ್ಳಿ ಕೆಲಸಗಾರರು ಸರಕಾರದ ಮುಂದೆ ಕೆಲವು ಬೇಡಿಕೆ ಇರಿಸಿದ್ದು ಆ ಬೇಡಿಕೆಗಳು ಇದುವರೆಗೂ ಈಡೇರಿಲ್ಲ. ಆ ಕುರಿತು ಸಂಘದ ವತಿಯಿಂದ ಮುಂದೆಯೂ ಹೋರಾಟ ನಡೆಸಬೇಕು. ಆ ಹೋರಾಟಕ್ಕೆ ನಮ್ಮ ಪೂರ್ಣ ಸಹಕಾರ ನೀಡುವುದಾಗಿ ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಕಿರಣ್ ಕುಮಾರ್ ಕೊಡ್ಗಿ ನುಡಿದರು. ಅವರು ಕುಂದಾಪುರ ವೆಸ್ಟ್ ಬ್ಲಾಕ್ ರಸ್ತೆಯಲ್ಲಿರುವ ವಿಶ್ವಬ್ರಾಹ್ಮಣ ಸಮಾಜ ಸೇವಾ ಸಂಘ (ರಿ.)ದ ಸಭಾಂಗಣದಲ್ಲಿ ನಡೆದ ಕುಂದಾಪುರ ತಾಲೂಕು ಚಿನ್ನ-ಬೆಳ್ಳಿ ಕೆಲಸಗಾರರ ಸಂಘ (ರಿ.)ದ 17ನೇ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಮೂಡಬಿದ್ರೆ ಎಸ್.ಕೆ.ಎಫ್. ಎಲಿಕ್ಸರ್ ಇಂಡಿಯಾ ಪ್ರೈ.ಲಿ. ಆಡಳಿತ ನಿರ್ದೇಶಕ ಡಾ.ಜಿ.ರಾಮಕೃಷ್ಣ ಆಚಾರ್ಯ ಮಾತನಾಡಿ ಎಸ್.ಎಸ್.ಎಲ್.ಸಿ., ಪಿಯುಸಿ, ಡಿಪ್ಲೋಮ ಮುಗಿಸಿದ ವಿದ್ಯಾರ್ಥಿಗಳು ಕೇಂದ್ರ ಸರ್ಕಾರದ ವಿವಿಧ ಸ್ಕೀಂಗಳಲ್ಲಿ ಸೌಲಭ್ಯಗಳನ್ನು ಪಡೆದು ಸ್ವಂತ ಉದ್ಯಮ ಸ್ಥಾಪಿಸಲು ಪ್ರಯತ್ನಿಸಬೇಕು. ಬೆಳಿಗ್ಗೆ 8.೦೦ ರಿಂದ ಸಂಜೆ 6.೦೦ರವರೆಗೆ ದುಡಿಮೆ ಮಾಡಿದರೆ ಖಂಡಿತಾ ಯಶಸ್ಸು ಗಳಿಸಬಹುದು. ಕೇವಲ1000ರೂ. ಬಂಡವಾಳದಿಂದ ಉದ್ಯಮ ಆರಂಭಿಸಿ ಇಂದು ೨೭ ದೇಶಗಳಿಗೆ ಯಂತ್ರಗಳನ್ನು ನಮ್ಮ ಎಸ್.ಕೆ.ಎಫ್. ಸಂಸ್ಥೆ ಮೂಲಕ ಕೊಡುತ್ತಾ ಇದ್ದೇವೆ. ಸರಿಯಾದ ತಾಂತ್ರಿಕತೆಯನ್ನು ಬಳಸಿಕೊಂಡು ಕಠಿಣ ಪರಿಶ್ರಮದಿಂದ ಈ ಸಾಧನೆ ಮಾಡಲು ನಮ್ಮಿಂದ ಸಾಧ್ಯವಾಗಿದೆ. ಯಾವುದೇ ಕೆಲಸ ಮಾಡುವುದಿದ್ದರೂ ಮುಂದಿನ ೧೦ ವರ್ಷಗಳ ಯೋಜನೆಯನ್ನು ಗಮನದಲ್ಲಿಟ್ಟುಕೊಂಡು ಆ ಕೆಲಸ ಮಾಡಬೇಕೆಂದು ನುಡಿದರು.

ಬಾರಕೂರು ಶ್ರೀ ಕಾಳಿಕಾಂಬಾ ದೇವಸ್ಥಾನದ ಆಡಳಿತ ಮೊಕ್ತೇಸರ ವಿ. ಶ್ರೀಧರ ಆಚರ್ಯ ವಡೇರಹೋಬಳಿ ಮಾತನಾಡಿ ವಿಶ್ವಕರ್ಮ ಸಮುದಾಯದಲ್ಲಿ ಹುಟ್ಟಿ ಬೆಳೆದವರು ನಮ್ಮ ಸಂಸ್ಕೃತಿಯನ್ನು ಉಳಿಸಲು ನಮ್ಮ ಪಂಚ ಕಸುಬುಗಳ ಬಗ್ಗೆ ಹೆಚ್ಚು ಗಮನ ನೀಡಬೇಕೆಂದು ನುಡಿದರು.
ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಬಿ.ಕುಶ ಕುಮಾರ್ ವಹಿಸಿ ಸಂಘದ ಅಭಿವೃದ್ಧಿಗೆ ಸಂಘದ ಸರ್ವ ಸದಸ್ಯರು ಸಹಕಾರ ಕೋರಿದರು.

ಅತಿಥಿಗಳಾಗಿ ಉಡುಪಿ ಜಿಲ್ಲಾ ಚಿನ್ನ-ಬೆಳ್ಳಿ ಕೆಲಸಗಾರರ ಸಂಘದ ಅಧ್ಯಕ್ಷ ರವಿಚಂದ್ರ ಆಚಾರ್ಯ ಮಾರಾಳಿ, ಕುಂದಾಪುರ ಜ್ಯುವೆಲ್ಲರಿ ಅಸೋಸಿಯೇಶ್ ಅಧ್ಯಕ್ಷ ಎಚ್.ಗಣೇಶ್ ಶೇಟ್, ಸುರೇಶ್ ಆಚಾರ್ಯ ಉಡುಪಿ ಭಾಗವಹಿಸಿದ್ದರು. ಚಿನ್ನ ಬೆಳ್ಳಿ ಕೆಲಸಗಾರರ ಸಂಘದ ಗೌರವಾಧ್ಯಕ್ಷ ರಾಜೇಶ್ ಆಚಾರ್ಯ ಮರವಂತೆ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಗಣಪತಿ ಆಚಾರ್ಯ ಕೋಟೇಶ್ವರ, ಚಂದ್ರಶೇಖರ ಆಚಾರ್ಯ ಅಂಪಾರು, ಮಂಜುನಾಥ ಶೇಟ್ ನಾವುಂದ ಹಾಗೂ ಶ್ರೀನಿವಾಸ ಶೇಟ್ ಕುಂದಾಪುರ ಹಾಗೂ ಸಂಘದ ಸದಸ್ಯರ ಸಾಧಕ ಮಕ್ಕಳನ್ನು ಗೌರವಿಸಲಾಯಿತು. ಸನ್ಮಾನ ಪತ್ರಗಳನ್ನು ಕೃಷ್ಣ ಆಚಾರ್ಯ ಸಾಲಿಗ್ರಾಮ, ರಾಜೇಶ್ ಆಚಾರ್ಯ ಮರವಂತೆ, ಶಶಿಧರ ಆಚಾರ್ಯ ಬಂಡಾಡಿ, ಹಾಗೂ ಸಂತೋಷ್ ಶೇಟ್ ವಾಚಿಸಿದರು. ಇದೇ ಸಂದರ್ಭ ಸಂಘದ ವತಿಯಿಂದ ಕುಂದಾಪುರ ವಿಶ್ವಕರ್ಮ ಸಮಾಜ ಸೇವಾ ಸಂಘಕ್ಕೆ ರೂ.೧ಲಕ್ಷ ರೂ.ಚೆಕ್ ಹಸ್ತಾಂತರಿಸಲಾಯಿತು.
ಕಾರ್ಯದರ್ಶಿ ಕಟ್ಟೆರೆ ಕೃಷ್ಣ ಆಚಾರ್ಯ ವರದಿ ವಾಚಿಸಿದರು. ಕೋಶಾಧಿಕಾರಿ ರಘುನಾಥ ಶೇಟ್ ಲೆಕ್ಕಪತ್ರ ಮಂಡಿಸಿದರು. ಪದ್ಮನಾಭ ಆಚಾರ್ಯ ಸ್ವಾಗತಿಸಿದರು. ಉಪಾಧ್ಯಕ್ಷ ಬಂಡಾಡಿ ಶಶಿಧರ ಆಚಾರ್ಯ ವಂದಿಸಿದರು. ಕರುಣಾಕರ ಆಚಾರ್ಯ ಮರವಂತೆ ಕಾರ್ಯಕ್ರಮ ನಿರೂಪಿಸಿದರು.
. ವಾರ್ಷಿಕೋತ್ಸವದ ಅಂಗವಾಗಿ ಸಂಘದ ಸದಸ್ಯರ ಮಕ್ಕಳಿಗೆ ಚಿತ್ರ ಬಿಡಿಸುವ ಸ್ಪರ್ಧೆ, ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಕೊನೆಯಲ್ಲಿ ಸಂಘದ ಸದಸ್ಯರಿಂದ ಯಕ್ಷಗಾನ ‘ಮಹಿಷಮರ್ಧಿನಿ’ ಪ್ರದರ್ಶನಗೊಂಡಿತು.




