ವರದಿ : ಚಿತ್ತೂರು ಪ್ರಭಾಕರ ಆಚಾರ್ಯ
ಉಡುಪಿ ಆಗಸ್ಟ್ ೦೮ : ಉಡುಪಿ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಧರ್ಮಸ್ಥಳ ಕ್ಷೇತ್ರದ ಹೆಸರು ಹಾಳುಗೆಡವಲು ವ್ಯವಸ್ಥಿತ ಸಂಚು ರೂಪಿಸಲಾಗುತ್ತಿದೆ. ಇಂತವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಆಗ್ರಹಿಸಿ ಶ್ರೀ ಧರ್ಮಸ್ಥಳ ಭಕ್ತಾಭಿಮಾನಿ ವೇದಿಕೆ ಸದಸ್ಯರು ಉಡುಪಿ ಜಿಲ್ಲಾಧಿಕಾರಿಯವರಿಗೆ ಇಂದು ಮನವಿ ಸಲ್ಲಿಸಿದ್ದಾರೆ.
ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಕಿರಣ್‌ಕುಮಾರ್ ಕೊಡ್ಗಿ ಮಾತನಾಡಿ ಹಿಂದೂ ಧಾರ್ಮಿಕ ಕೇಂದ್ರಗಳ ಮೇಲಿನ ಧಾಳಿ ಖಂಡನೀಯ. ಸುಳ್ಳು ಸುದ್ದಿ ಹರಡಿಸುವುದು ಸರಿಯಲ್ಲ. ಭಕ್ತರ ಭಾವನೆಗಳನ್ನು ಕೆಡಿಸುವ ಹುನ್ನಾರ ನಡೆಸುವವರ ವಿರುದ್ಧ ಸರಕಾರ ಕಠಿಣ ಕ್ರಮ ಜರುಸಬೇಕು ನುಡಿದರು.
ಉಡುಪಿ ಶಾಸಕ ಯಶಪಾಲ್ ಸುವರ್ಣ ಮಾತನಾಡಿ ಧರ್ಮಸ್ಥಳ ಕ್ಷೇತ್ರದ ಬಗ್ಗೆ ಅವಹೇಳನಕಾರಿ ಹೇಳಿಕೆ ಮೂಲಕ ತೇಜೋವಧೆ ಮಾಡತ್ತಿರುವ ಹಿಂದೂ ವಿರೋಧಿ ಶಕ್ತಿಗಳ ಬಗ್ಗೆ ಸೂಕ್ತ ತನಿಖೆ ನಡೆಸಬೇಕಾಗಿದೆ. ಕಮ್ಯನಿಸ್ಟ್ ಮನಸ್ಥಿತಿಯ ವ್ಯಕ್ತಿಗಳು ಹಿಂದೂಗಳ ಶ್ರದ್ಧಾ ಭಕ್ತಿಯ ಕೇಂದ್ರಗಳ ಮೇಲೆ ಆಧಾರ ರಹಿತ ಹೇಳಿಕೆಗಳನ್ನು ನೀಡುತ್ತಲೇ ಬಂದಿದ್ದಾರೆ. ಎಸ್‌ಐಟಿ ತನಿಖೆ ಪೂರ್ಣಗೊಳ್ಳುವ ಮೊದಲೇ ಸುಳ್ಳು ಸುದ್ದಿಗಳನ್ನು ಹರಡಿಸುವುದು ತನಿಖೆಯ ಮೇಲೂ ಪರೋಕ್ಷ ಪ್ರಭಾವ ಬೀರುವ ಸಾಧ್ಯತೆ ಇದೆ. ಹಿಂದೂ ಧಾರ್ಮಿಕ ಕೇಂದ್ರಗಳ ಮೇಲೆ ಭಕ್ತರಿಗೆ ಇರುವ ಭಾವನೆಗಳನ್ನು ಕೆಡಿಸುವ ಹುನ್ನಾರ ನಡೆಯುತ್ತಿದ್ದು ಸರ್ಕಾರ ಇಂತವರ ವಿರುದ್ಧ ಕ್ರಮ ಜರುಗಿಸಬೇಕಾಗಿದೆ ಎಂದರು.
ಮಾಜಿ ಶಾಸಕ ರಘುಪತಿಭಟ್ ಮಾತನಾಡಿ ವೀರೇಂದ್ರ ಹೆಗ್ಗಡೆಯವರು ಹಳ್ಳಿ ಹಳ್ಳಿಯಲ್ಲೂ ಇರುವ ದೈವಸ್ಥಾನಗಳೂ ಸೇರಿದಂತೆ ಎಲ್ಲಾ ದೇವಾಲಯಗಳ ಅಭಿವೃದ್ಧಿಗೆ ಸಾಕಷ್ಟು ಕೊಡುಗೆ ನೀಡಿದವರು. ಅನೇಕ ಯೋಜನೆಗಳ ಮೂಲಕ ಜನಜಾಗೃತಿ ಮೂಡಿಸುವಲ್ಲಿ ಅವರ ಪಾತ್ರ ಮಹತ್ತರವಾದದ್ದು. ಅಂತವರ ಮೇಲೂ ಲಘುವಾಗಿ ಮಾತನಾಡುತ್ತಿರುವುದು ಸರಿಯಲ್ಲ ಎಂದರು.

ನೀರೆ ಕೃಷ್ಣ ಶೆಟ್ಟಿಯವರು ಮಾತನಾಡಿ ಧಾರ್ಮಿಕ ಕ್ಷೇತ್ರಗಳ ಮೇಲೆ ಪದೇ ಪದೇ ಯೂಟ್ಯೂಬ್‌ಗಳ ಮೂಲಕ ಜನರ ಭಾವನೆ ಕೆಡಿಸುವ ಪ್ರಯತ್ನ ಮಾಡಿದಲ್ಲಿ ಮುಂದಿನ ದಿನಗಳಲ್ಲಿ ಪ್ರತೀ ತಾಲೂಕು ಮಟ್ಟದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದರು.
ಪುಣ್ಯಕ್ಷೇತ್ರ ಸಂರಕ್ಷಣಾ ಸಮಿತಿ ಸಂಚಾಲಕ ವಸಂತ್ ಗಿಳಿಯಾರ್ ಮಾತನಾಡಿ ದೇಶದಲ್ಲಿ ತಿರುಪತಿ,ಶಬರಿಮಲೆ, ಶನಿ ಸಿಂಗಾಪುರ, ಇಶಾ ಫೌಂಡೇಶನ್ ಮೇಲೂ ಧಾಳಿ ಮಾಡಿದ್ದಾರೆ. ದಕ್ಷಿಣ ಭಾರತದಲ್ಲಿ ಇವರ ಕಣ್ಣು ಧರ್ಮಸ್ಥಳದ ಮೇಲೆ ಬಿದ್ದಿದ್ದು ಇದೀಗ ಅಲ್ಲಿಯೂ ಇವರ ಧಾಳಿ ಷಡ್ಯಂತರ ನಡೆಯುತ್ತಿದೆ. ಸೌಜನ್ಯ ಪ್ರಕರಣ ನೆಪ ಮಾತ್ರ. ಸೌಜನ್ಯಳಿಗೆ ನ್ಯಾಯ ಕೊಡಿಸಬೇಕು ಅನ್ನುವಂತಿದ್ದರೆ ಇವರು ನ್ಯಾಯಾಲಯದಲ್ಲಿ ಹೋರಾಟ ಮಾಡುತ್ತಿದ್ದರು. ಬೀದಿಯಲ್ಲಿ ದೊಂಬರಾಟ ಮಾಡುತ್ತಿರಲಿಲ್ಲ. ಈ ದೇಶದಲ್ಲಿ ಅತ್ಯಾಚಾರ ಪ್ರಕರಣಕ್ಕೆ ನ್ಯಾಯ ಸಿಗಬೇಕಾದಲ್ಲಿ ನಾವು ಕೋರ್ಟಿನಲ್ಲಿ ಹೋರಾಟ ಮಾಡಬೇಕು. ಇವರು ಸೌಜನ್ಯ ಹೋರಾಟ ನೆಪವಾಗಿಟ್ಟುಕೊಂಡು ಧರ್ಮಸ್ಥಳ ಕ್ಷೇತ್ರದ ಮೇಲೆ ಹಾಗೂ ಭಕ್ತರ ಭಾವನೆಗಳ ಮೇಲೆ ದಾಳಿ ಮಾಡುತ್ತಿದ್ದಾರೆ. ಎನ್.ಐ.ಎ. ತನಿಖೆಯ ವರದಿಯಲ್ಲಿ ಕುಕ್ಕರ್ ಬಾಂಬ್ ಧಾಳಿಗೆ ಧರ್ಮಸ್ಥಳ ಟಾರ್ಗೆಟ್ ಆಗಿತ್ತು ಎನ್ನುವ ಸತ್ಯ ಹೊರ ಬಂದಿದೆ. ಸರಕಾರ ಮೊದಲು ಎಸ್‌ಐಟಿ ರಚಿಸಲು ನಿರಾಕರಿಸಿತ್ತು. ಸಿದ್ದರಾಮಯ್ಯ ನಮ್ಮ ಪೊಲೀಸರು ಸಮರ್ಥದ್ದಾರೆ ಎಂದು ಹೇಳಿ ಮರುದಿನ ಎಸ್.ಐ.ಟಿ ರಚನೆ ಮಾಡಿದ್ದಾರೆ ಎಂದರೆ ಅವರ ಮೇಲೂ ಯಾವುದೋ ಬಾಹ್ಯ ಶಕ್ತಿ ಪ್ರಬಲವಾದ ಒತ್ತಡ ಹೇರಿದೆ. ಕ್ಷೇತ್ರದ ಮೇಲೆ ಅತ್ಯಂತ ಕೆಟ್ಟ ರೀತಿಯಲ್ಲಿ ಯೂಟ್ಯೂಬ್ ಮೂಲಕ ಅವಹೇಳನ ಮಾಡಿದವರ ಮೇಲೆ ಕ್ಷೇತ್ರದ ಭಕ್ತರು ಹಲ್ಲೆ ನಡೆಸಿದಾಗ ಆಸ್ಪತ್ರೆಗೆ ದಾಖಲಾದವರನ್ನು ಎಸ್.ಡಿ.ಪಿ.ಐ ಯವರು ಮಾತನಾಡಿಸಲು ಬಂದಿದ್ದಾರೆ. ನಮಗೆ ಈಗ ಕ್ಷೇತ್ರದ ಮೇಲಿನ ಧಾಳಿಯ ಹಿಂದೆ ಯಾರ್‍ಯಾರು ಇದ್ದಾರೆ ಎಂಬುದು ಅರ್ಥವಾಗುತ್ತಿದೆ. ಮುಸುಕುಧಾರಿ ಅನಾಮಿಕ ವ್ಯಕ್ತಿ ಸುಪ್ರಿಂ ಕೋರ್ಟಿನ ವಕೀಲರ ಹತ್ತಿರ ನೇರವಾಗಿ ಹೋಗುತ್ತಾನೆ. ಇದು ಹೇಗೆ ಎಂಬುದು ಅರ್ಥವಾಗಲ್ಲ. ಇವರ ಹೋರಾಟಕ್ಕೆ ಕೋಟಿಗಟ್ಟಲೆ ಹಣವನ್ನು ತೊಡಗಿಸುತ್ತಾ ಇರುವವರು ಯಾರು? ಎಂಬುದು ಕೂಡ ಪ್ರಶ್ನೆಯಾಗಿದೆ ಎಂದು ನುಡಿದರು.
ಪ್ರತಿಭಟನೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ ಮಾತನಾಡಿ ಧರ್ಮಕ್ಷೇತ್ರಗಳ ಮೇಲೆ ಈ ರೀತಿ ಅವ ಹೇಳನ ಸರಿಯಲ್ಲ. ಇದನ್ನು ಮುಂದುವರಿಸಿದಲ್ಲಿ ಪಕ್ಷದ ವತಿಯಿಂದ ಮುಂದಿನ ದಿನಗಳಲ್ಲಿ ಜಿಲ್ಲೆಯಾದ್ಯಂತ ಹೋರಾಟ ಕೈಗೆತ್ತಿಕೊಳ್ಳಲಾಗುವುದು ಎಂದರು.
ಶಾಂತಾರಾಮ ಶೆಟ್ಟಿ ಬಾರಕೂರು, ಸುಪ್ರಸಾದ್ ಶೆಟ್ಟಿ ಬೈಕಾಡಿ, ಡಾ.ಅತುಲ್‌ಕುಮಾರ್ ಶೆಟ್ಟಿ ಚಿತ್ತೂರು, ನವೀನ್‌ಚಂದ್ರ ಶೆಟ್ಟಿ ರಟ್ಟಾಡಿ, ಉದಯಕುಮಾರ್ ಶೆಟ್ಟಿ ಇನ್ನಾ, ವಾದಿರಾಜ ಶೆಟ್ಟಿ ಚಾರ ಹೆಬ್ರಿ, ರವೀಂದ್ರ ಶೆಟ್ಟಿ ಬಜಗೋಳಿ, ಸುಲತಾ ಹೆಗ್ಡೆ ಸಾಲಿಗ್ರಾಮ, ಪ್ರಸಾದ್ ಹೆಗ್ಡೆ ನಾಲ್ಕೂರು, ಉಡುಪಿ ಜಿಲ್ಲಾ ಸಾಹಿತ್ಯ ಪರಿಷತ್ ಕಾರ್ಯದರ್ಶಿ ಸುಬ್ರಹ್ಮಣ್ಯ ಶೆಟ್ಟಿ, ದಯಾನಂದ ಶಂಕರನಾರಾಯಣ, ಸತೀಶ್ ಹೆಗ್ಡೆ ರಟ್ಟಾಡಿ, ವೆಂಕಟೇಶ್ ಶೆಟ್ಟಿ ತೆಂಕೊಡಿಗೆ ವಂಡ್ಸೆ, ವಿ.ಕೆ.ಶಿವರಾಮ ಶೆಟ್ಟಿ ವಂಡ್ಸೆ, ಬಾಲಕೃಷ್ಣ ಶೆಟ್ಟಿ ಇಡೂರು ಇನ್ನಿತರರಿದ್ದರು. ಉಡುಪಿ ಜಿಲ್ಲೆಯಾದ್ಯಂತ ಸಾವಿರಾರು ಸಂಖ್ಯೆಯ ಭಕ್ತರು ಭಾಗವಹಿಸಿದ್ದರು.



